BBL 2023: ಸಹ ಆಟಗಾರನ ಹ್ಯಾಟ್ರಿಕ್ ಫೋರ್: 1 ರನ್​ನಿಂದ ಶತಕ ವಂಚಿತನಾದ ಮನ್ರೊ

Brisbane Heat vs Melbourne Stars: ಈ ಪಂದ್ಯದಲ್ಲಿ 61 ಎಸೆತಗಳಲ್ಲಿ 5 ಭರ್ಜರಿ ಸಿಕ್ಸ್ ಹಾಗೂ 9 ಫೋರ್​ಗಳೊಂದಿಗೆ ಕಾಲಿನ್ ಮನ್ರೊ ಅಜೇಯ 99 ರನ್ ಬಾರಿಸಿದರು. ಈ ಅರ್ಧಶತಕದ ನೆರವಿನಿಂದ ಬ್ರಿಸ್ಬೇನ್ ಹೀಟ್ ತಂಡವು 20 ಓವರ್​ಗಳಲ್ಲಿ 3 ವಿಕೆಟ್ ಕಳೆದುಕೊಂಡು 214 ರನ್​ ಕಲೆಹಾಕಿತು.

BBL 2023: ಸಹ ಆಟಗಾರನ ಹ್ಯಾಟ್ರಿಕ್ ಫೋರ್: 1 ರನ್​ನಿಂದ ಶತಕ ವಂಚಿತನಾದ ಮನ್ರೊ
Colin Munro
Follow us
TV9 Web
| Updated By: ಝಾಹಿರ್ ಯೂಸುಫ್

Updated on: Dec 07, 2023 | 5:50 PM

BBL 2023-24: ಬಿಗ್ ಬ್ಯಾಷ್ ಲೀಗ್​ನ 13ನೇ ಸೀಸನ್ ಶುರುವಾಗಿದೆ. ಆಸ್ಟ್ರೇಲಿಯಾದಲ್ಲಿ ನಡೆಯುತ್ತಿರುವ ಈ ಲೀಗ್​ನ ಮೊದಲ ಪಂದ್ಯದಲ್ಲಿ ಬ್ರಿಸ್ಬೇನ್ ಹೀಟ್ ಹಾಗೂ ಮೆಲ್ಬೋರ್ನ್​ ಸ್ಟಾರ್ಸ್​ ತಂಡಗಳು ಮುಖಾಮುಖಿಯಾಗಿತ್ತು. ದಿ ಗಾಬಾ ಮೈದಾನದಲ್ಲಿ ನಡೆದ ಈ ಪಂದ್ಯದಲ್ಲಿ ಟಾಸ್ ಗೆದ್ದ ಮೆಲ್ಬೋರ್ನ್ ಸ್ಟಾರ್ಸ್ ತಂಡದ ನಾಯಕ ಗ್ಲೆನ್ ಮ್ಯಾಕ್ಸ್​ವೆಲ್ ಬೌಲಿಂಗ್ ಆಯ್ದುಕೊಂಡಿದ್ದರು. ಅದರಂತೆ ಇನಿಂಗ್ಸ್​ ಆರಂಭಿಸಿದ ಬ್ರಿಸ್ಬೇನ್ ಸ್ಟಾರ್ಸ್ ತಂಡಕ್ಕೆ ಉಸ್ಮಾನ್ ಖ್ವಾಜಾ (28) ಹಾಗೂ ಕಾಲಿನ್ ಮನ್ರೊ ಉತ್ತಮ ಆರಂಭ ಒದಗಿಸಿದ್ದರು.

ಮೊದಲ ವಿಕೆಟ್​ಗೆ 66 ಪೇರಿಸಿ ಉಸ್ಮಾನ್ ಖ್ವಾಜಾ ಔಟಾದರು. ಇದಾಗ್ಯೂ ಮತ್ತೊಂದೆಡೆ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿದ ಎಡಗೈ ದಾಂಡಿಗ ಕಾಲಿನ್ ಮನ್ರೊ ಮೆಲ್ಬೋರ್ನ್​ ಸ್ಟಾರ್ಸ್​ ಬೌಲರ್​ಗಳ ಬೆಂಡೆತ್ತಿದರು. ಮನ್ರೊಗೆ ಉತ್ತಮ ಸಾಥ್ ನೀಡಿದ ಮಾರ್ನಸ್ ಲಾಬುಶೇನ್ 30 ರನ್​ಗಳ ಕೊಡುಗೆ ನೀಡಿದರು. ಇನ್ನು ಸ್ಯಾಮ್ ಬಿಲ್ಲಿಂಗ್ಸ್​ 18 ರನ್​ ಬಾರಿಸಿ ವಿಕೆಟ್ ಒಪ್ಪಿಸಿದರು. ಅಂತಿಮ ಓವರ್​ಗಳ ವೇಳೆ ಜೊತೆಯಾದ ಕಾಲಿನ್ ಮನ್ರೊ ಹಾಗೂ ಮ್ಯಾಕ್ಸ್ ಬ್ರ್ಯಾಂಟ್ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿದರು.

ಪರಿಣಾಮ ಅಂತಿಮ ಓವರ್​ನಲ್ಲಿ ಶತಕ ಪೂರೈಸಲು ಕಾಲಿನ್ ಮನ್ರೊಗೆ ಕೇವಲ 3 ರನ್​ಗಳ ಅವಶ್ಯಕತೆಯಿತ್ತು. ಕೊನೆಯ ಓವರ್​ನ ಮೊದಲ ಎಸೆತದಲ್ಲಿ ಮನ್ರೊ ಒಂದು ರನ್ ಓಡಿದರು. ಇನ್ನು 2ನೇ ಎಸೆತದಲ್ಲಿ ಮ್ಯಾಕ್ಸ್​ ಕೂಡ 1 ರನ್ ಬಾರಿಸಿದರು. 3ನೇ ಎಸೆತದಲ್ಲಿ ಮನ್ರೊ ಬ್ಯಾಟ್​ನಿಂದ ಮತ್ತೊಂದು ರನ್.

ಇತ್ತ ಕೊನೆಯ ಮೂರು ಎಸೆತಗಳನ್ನು ಎದುರಿಸಿದ ಮ್ಯಾಕ್ಸ್​ ಬ್ರ್ಯಾಂಟ್ ಹ್ಯಾಟ್ರಿಕ್ ಫೋರ್ ಬಾರಿಸಿದರು. ಇದರಿಂದ ನಾನ್ ಸ್ಟ್ರೈಕ್​ನಲ್ಲಿದ್ದ ಕಾಲಿನ್ ಮನ್ರೊ 1 ರನ್​ಗಳಿಂದ ಶತಕ ವಂಚಿತರಾಗಿ ಅಜೇಯರಾಗಿ ಉಳಿದರು.

ಇನ್ನು ಈ ಪಂದ್ಯದಲ್ಲಿ 61 ಎಸೆತಗಳಲ್ಲಿ 5 ಭರ್ಜರಿ ಸಿಕ್ಸ್ ಹಾಗೂ 9 ಫೋರ್​ಗಳೊಂದಿಗೆ ಕಾಲಿನ್ ಮನ್ರೊ ಅಜೇಯ 99 ರನ್ ಬಾರಿಸಿದರು. ಈ ಅರ್ಧಶತಕದ ನೆರವಿನಿಂದ ಬ್ರಿಸ್ಬೇನ್ ಹೀಟ್ ತಂಡವು 20 ಓವರ್​ಗಳಲ್ಲಿ 3 ವಿಕೆಟ್ ಕಳೆದುಕೊಂಡು 214 ರನ್​ ಕಲೆಹಾಕಿತು.

215 ರನ್​ಗಳ ಕಠಿಣ ಗುರಿ ಬೆನ್ನತ್ತಿದ ಮೆಲ್ಬೋರ್ನ್ ಸ್ಟಾರ್ಸ್​ ಪರ ನಾಯಕ ಗ್ಲೆನ್ ಮ್ಯಾಕ್ಸ್​ವೆಲ್ 23 ರನ್ ಬಾರಿಸಿದರೆ, ಹಿಲ್ಟನ್ ಕಾರ್ಟ್‌ರೈಟ್ 33 ರನ್ ಸಿಡಿಸಿದರು. ಇದರ ಹೊರತಾಗಿ ಉಳಿದ ಬ್ಯಾಟರ್​ಗಳಿಂದ ನಿರೀಕ್ಷಿತ ಪ್ರದರ್ಶನ ಮೂಡಿಬಂದಿರಲಿಲ್ಲ. ಪರಿಣಾಮ 15.1 ಓವರ್​ಗಳಲ್ಲಿ 111 ರನ್​ಗಳಿಗೆ ಮೆಲ್ಬೋರ್ನ್ ಸ್ಟಾರ್ಸ್ ತಂಡವು ಆಲೌಟ್ ಆಯಿತು.

ಈ ಮೂಲಕ ಬಿಗ್ ಬ್ಯಾಷ್ ಲೀಗ್​ ಸೀಸನ್ 13 ರ ಮೊದಲ ಪಂದ್ಯದಲ್ಲೇ ಬ್ರಿಸ್ಬೇನ್ ಹೀಟ್ ತಂಡವು 103 ರನ್​ಗಳ ಅಮೋಘ ಗೆಲುವು ದಾಖಲಿಸಿದೆ.

ಬ್ರಿಸ್ಬೇನ್ ಹೀಟ್ ಪ್ಲೇಯಿಂಗ್ ಇಲೆವೆನ್: ಕಾಲಿನ್ ಮನ್ರೊ , ಉಸ್ಮಾನ್ ಖ್ವಾಜಾ (ನಾಯಕ) , ಮಾರ್ನಸ್ ಲಾಬುಶೇನ್, ಸ್ಯಾಮ್ ಬಿಲ್ಲಿಂಗ್ಸ್ (ವಿಕೆಟ್ ಕೀಪರ್) , ಮ್ಯಾಕ್ಸ್ ಬ್ರ್ಯಾಂಟ್ , ಪಾಲ್ ವಾಲ್ಟರ್ , ಮೈಕೆಲ್ ನೆಸರ್ , ಕ್ಸೇವಿಯರ್ ಬಾರ್ಟ್ಲೆಟ್ , ಸ್ಪೆನ್ಸರ್ ಜಾನ್ಸನ್ , ಮಿಚೆಲ್ ಸ್ವೆಪ್ಸನ್ , ಮ್ಯಾಥ್ಯೂ ಕುಹ್ನೆಮನ್.

ಇದನ್ನೂ ಓದಿ: IPL 2024: ಐಪಿಎಲ್​ ಹರಾಜಿಗೆ ಶಾರ್ಟ್​ ಲೀಸ್ಟ್​ ಮಾಡುವುದು ಹೇಗೆ?

ಮೆಲ್ಬೋರ್ನ್ ಸ್ಟಾರ್ಸ್ ಪ್ಲೇಯಿಂಗ್ ಇಲೆವೆನ್: ಥಾಮಸ್ ರೋಜರ್ಸ್ , ಸ್ಯಾಮ್ ಹಾರ್ಪರ್ (ವಿಕೆಟ್ ಕೀಪರ್) , ಜೋ ಬರ್ನ್ಸ್ , ಗ್ಲೆನ್ ಮ್ಯಾಕ್ಸ್‌ವೆಲ್ (ನಾಯಕ) , ಮಾರ್ಕಸ್ ಸ್ಟೊಯಿನಿಸ್ , ಹಿಲ್ಟನ್ ಕಾರ್ಟ್‌ರೈಟ್ , ಲಿಯಾಮ್ ಡಾಸನ್ , ಉಸಾಮಾ ಮಿರ್ , ಜೋಯಲ್ ಪ್ಯಾರಿಸ್ , ನಾಥನ್ ಕೌಲ್ಟರ್-ನೈಲ್ , ಓಲಿ ಸ್ಟೋನ್.