Jos Buttler: ವಿಶೇಷ ದಾಖಲೆ ಬರೆದ ಜೋಸ್ ಬಟ್ಲರ್

Jos Buttler Records: 203 ರನ್​ಗಳ ಸುಲಭ ಗುರಿಯನ್ನು ಬೆನ್ನತ್ತಿದ ಇಂಗ್ಲೆಂಡ್ ಪರ ಆರಂಭಿಕ ಆಟಗಾರ ವಿಲ್ ಜಾಕ್ಸ್​ (73) ಅರ್ಧಶತಕ ಬಾರಿಸಿ ಮಿಂಚಿದರು. ಆ ಬಳಿಕ ಬಂದ ಹ್ಯಾರಿ ಬ್ರೂಕ್ 43 ರನ್ ಬಾರಿಸಿದರೆ, ನಾಯಕ ಜೋಸ್ ಬಟ್ಲರ್ ಅಜೇಯ 58 ರನ್​ ಸಿಡಿಸಿದರು.

Jos Buttler: ವಿಶೇಷ ದಾಖಲೆ ಬರೆದ ಜೋಸ್ ಬಟ್ಲರ್
Jos Buttler Complete 5,000 ODI runs
Follow us
TV9 Web
| Updated By: ಝಾಹಿರ್ ಯೂಸುಫ್

Updated on: Dec 07, 2023 | 7:14 PM

ಅಂಟಿಗುವಾದಲ್ಲಿ ನಡೆದ ವೆಸ್ಟ್ ಇಂಡೀಸ್​ ವಿರುದ್ಧದ 2ನೇ ಏಕದಿನ ಪಂದ್ಯದಲ್ಲಿ ಆಕರ್ಷಕ ಅರ್ಧಶತಕ ಬಾರಿಸುವ ಮೂಲಕ ಇಂಗ್ಲೆಂಡ್ ತಂಡದ ನಾಯಕ ಜೋಸ್ ಬಟ್ಲರ್ (Jos Buttler) ವಿಶೇಷ ದಾಖಲೆ ಬರೆದಿದ್ದಾರೆ. ಈ ಮೂಲಕ ಈ ಸಾಧನೆ ಮಾಡಿದ ಇಂಗ್ಲೆಂಡ್​ನ 5ನೇ ಬ್ಯಾಟರ್ ಎನಿಸಿಕೊಂಡಿದ್ದಾರೆ. ಈ ಪಂದ್ಯದಲ್ಲಿ ಟಾಸ್ ಗೆದ್ದ ಇಂಗ್ಲೆಂಡ್ ತಂಡವು ವೆಸ್ಟ್ ಇಂಡೀಸ್ ಅನ್ನು ಮೊದಲು ಬ್ಯಾಟಿಂಗ್​ಗೆ ಆಹ್ವಾನಿಸಿತು. ಅದರಂತೆ ಮೊದಲು ಬ್ಯಾಟ್ ಮಾಡಿದ ವೆಸ್ಟ್ ಇಂಡೀಸ್ ತಂಡವು ಉತ್ತಮ ಆರಂಭ ಪಡೆದಿರಲಿಲ್ಲ.

ಕೇವಲ 23 ರನ್​ಗಳಿಸುವಷ್ಟರಲ್ಲಿ ಅಗ್ರ ಕ್ರಮಾಂಕದ ನಾಲ್ವರು ಬ್ಯಾಟರ್​ಗಳು ಪೆವಿಲಿಯನ್​ ಸೇರಿದ್ದರು. ಈ ಹಂತದಲ್ಲಿ ಕಣಕ್ಕಿಳಿದ ನಾಯಕ ಶಾಯ್ ಹೋಪ್ ಎಚ್ಚರಿಕೆಯ ಬ್ಯಾಟಿಂಗ್ ಪ್ರದರ್ಶಿಸಿದರು. 68 ಎಸೆತಗಳಲ್ಲಿ 68 ರನ್ ಬಾರಿಸುವ ಮೂಲಕ ತಂಡವನ್ನು ಆರಂಭಿಕ ಆಘಾತದಿಂದ ಪಾರು ಮಾಡಿದರು.

ಇನ್ನು ನಾಯಕನಿಗೆ ಉತ್ತಮ ಸಾಥ್ ನೀಡಿದ ಎಡಗೈ ದಾಂಡಿಗ ಶಾರ್ಫೆನ್ ರುದರ್​ಫೋರ್ಡ್​ 80 ಎಸೆತಗಳಲ್ಲಿ 63 ರನ್​ಗಳ ಕೊಡುಗೆ ನೀಡಿದರು. ಆದರೆ ಶಾಯ್ ಹೋಪ್ ಹಾಗೂ ರುದರ್​ಫೋರ್ಡ್ ಔಟಾಗುತ್ತಿದ್ದಂತೆ ಮತ್ತೆ ಕುಸಿತಕ್ಕೊಳಗಾದ ವೆಸ್ಟ್ ಇಂಡೀಸ್ ತಂಡವು 39.4 ಓವರ್​ಗಳಲ್ಲಿ 202 ರನ್​ಗಳಿಸಿ ಆಲೌಟ್ ಆಯಿತು.

203 ರನ್​ಗಳ ಸುಲಭ ಗುರಿಯನ್ನು ಬೆನ್ನತ್ತಿದ ಇಂಗ್ಲೆಂಡ್ ಪರ ಆರಂಭಿಕ ಆಟಗಾರ ವಿಲ್ ಜಾಕ್ಸ್​ (73) ಅರ್ಧಶತಕ ಬಾರಿಸಿ ಮಿಂಚಿದರು. ಆ ಬಳಿಕ ಬಂದ ಹ್ಯಾರಿ ಬ್ರೂಕ್ 43 ರನ್ ಬಾರಿಸಿದರೆ, ನಾಯಕ ಜೋಸ್ ಬಟ್ಲರ್ ಅಜೇಯ 58 ರನ್​ ಸಿಡಿಸಿದರು. ಈ ಮೂಲಕ 32.5 ಓವರ್​ಗಳಲ್ಲಿ 4 ವಿಕೆಟ್ ಕಳೆದುಕೊಂಡು 206 ರನ್​ಗಳಿಸಿ ಇಂಗ್ಲೆಂಡ್ ಜಯಭೇರಿ ಬಾರಿಸಿತು.

ವಿಶೇಷ ಎಂದರೆ ಈ ಪಂದ್ಯದಲ್ಲಿ ಅರ್ಧಶತಕ ಬಾರಿಸುವುದರೊಂದಿಗೆ ಜೋಸ್ ಬಟ್ಲರ್ ಏಕದಿನ ಕ್ರಿಕೆಟ್​ನಲ್ಲಿ 5000 ರನ್ ಪೂರೈಸಿದ್ದಾರೆ. ಈ ಮೂಲಕ ಈ ಸಾಧನೆ ಮಾಡಿದ ಇಂಗ್ಲೆಂಡ್​ನ ಐದನೇ ಬ್ಯಾಟರ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ಇಂಗ್ಲೆಂಡ್ ತಂಡದ ರನ್ ಸರದಾರರು:

ಇಂಗ್ಲೆಂಡ್ ಪರ ಏಕದಿನ ಕ್ರಿಕೆಟ್​ನಲ್ಲಿ ಅತ್ಯಧಿಕ ರನ್​ ಬಾರಿಸಿದ ಬ್ಯಾಟರ್​ಗಳ ಪಟ್ಟಿಯಲ್ಲಿ ಇಯಾನ್ ಮೊರ್ಗನ್ ಅಗ್ರಸ್ಥಾನದಲ್ಲಿದ್ದಾರೆ. ಮೋರ್ಗನ್ 6957 ರನ್ ಬಾರಿಸಿ ಅಗ್ರಸ್ಥಾನದಲ್ಲಿದ್ದರೆ, ಜೋ ರೂಟ್ (6522), ಇಯಾನ್ ಬೆಲ್ (5416), ಪಾಲ್ ಕಾಲಿಂಗ್‌ವುಡ್ (5092) ನಂತರದ ಸ್ಥಾನಗಳಲ್ಲಿದ್ದಾರೆ. ಇದೀಗ ಈ ಪಟ್ಟಿಗೆ ಐದನೇ ಬ್ಯಾಟರ್​ ಆಗಿ ಜೋಸ್ ಬಟ್ಲರ್ (5022) ಎಂಟ್ರಿ ಕೊಟ್ಟಿದ್ದಾರೆ.

ಮತ್ತೆ ಫಾರ್ಮ್​​ಗೆ ಬಟ್ಲರ್:

ಈ ಬಾರಿಯ ವಿಶ್ವಕಪ್​ನಲ್ಲಿ ಜೋಸ್ ಬಟ್ಲರ್​ ಕಳಪೆ ಫಾರ್ಮ್​​ನಿಂದ ಬಳಲಿದ್ದರು. 9 ಪಂದ್ಯಗಳಲ್ಲಿ ಬ್ಯಾಟ್ ಬೀಸಿದ್ದ ಬಟ್ಲರ್ ಕಲೆಹಾಕಿದ ಗರಿಷ್ಠ ಸ್ಕೋರ್ 43 ರನ್​ಗಳು. ಅಂದರೆ 8 ಪಂದ್ಯಗಳಲ್ಲಿ 30ರ ಗಡಿದಾಟಲು ಕೂಡ ಸಾಧ್ಯವಾಗಿರಲಿಲ್ಲ.

ಇದನ್ನೂ ಓದಿ: IPL 2024: 3 ತಂಡಗಳಿಗೆ ಹೊಸ ನಾಯಕ..!

ಏಕದಿನ ವಿಶ್ವಕಪ್​ ಪಂದ್ಯಾವಳಿಯಲ್ಲಿ ಜೋಸ್ ಬಟ್ಲರ್​ ಅವರ ಸ್ಕೋರ್‌ಗಳು ಹೀಗಿವೆ- 43(42), 20(10), 9(18), 15(7), 8(6), 10(23), 1(7), 5(11), ಮತ್ತು 27 (18). ಇದೀಗ ವೆಸ್ಟ್ ಇಂಡೀಸ್ ವಿರುದ್ಧ ಅರ್ಧಶತಕ ಬಾರಿಸುವ ಮೂಲಕ ಮತ್ತೆ ಫಾರ್ಮ್​ಗೆ ಮರಳುವ ಸೂಚನೆ ನೀಡಿದ್ದಾರೆ.