ಚೆನ್ನೈನ ಎಂ ಚಿದಂಬರಂ ಮೈದಾನದಲ್ಲಿ ನಡೆದ 17ನೇ ಆವೃತ್ತಿಯ ಐಪಿಎಲ್ (IPL 2024) ಉದ್ಘಾಟನಾ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು 6 ವಿಕೆಟ್ಗಳಿಂದ ಮಣಿಸಿದ ಆತಿಥೇಯ ಚೆನ್ನೈ ಸೂಪರ್ ಕಿಂಗ್ಸ್ ತಂಡ (Chennai Super Kings vs Royal Challengers Bengaluru) ಲೀಗ್ನಲ್ಲಿ ಗೆಲುವಿನ ಶುಭಾರಂಭ ಮಾಡಿದೆ. ಇತ್ತ ಚೆಪಾಕ್ ಮೈದಾನದಲ್ಲಿ ಆರ್ಸಿಬಿಯ ಸೋಲಿನ ಸರಣಿ ಮುಂದುವರೆದಿದೆ. ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಆರ್ಸಿಬಿ ತಂಡ ಅನುಜ್ ರಾವತ್ (Anuj Rawat) ಹಾಗೂ ದಿನೇಶ್ ಕಾರ್ತಿಕ್ (Dinesh Karthik) ಅವರ ಅಮೋಘ ಜೊತೆಯಾಟದ ನೆರವಿನಿಂದಾಗಿ ನಿಗದಿತ 20 ಓವರ್ಗಳಲ್ಲಿ 6 ವಿಕೆಟ್ ಕಳೆದುಕೊಂಡು 173 ರನ್ ಕಲೆಹಾಕಿತು. ಈ ಗುರಿ ಬೆನ್ನಟ್ಟಿದ ಸಿಎಸ್ಕೆ ತಂಡ 18.4 ಓವರ್ಗಳಲ್ಲಿ 4 ವಿಕೆಟ್ ಕಳೆದುಕೊಂಡು ಗೆಲುವಿನ ದಡ ಸೇರಿತು.
ಆರ್ಸಿಬಿ ನೀಡಿದ 174 ರನ್‌ಗಳ ಗುರಿ ಬೆನ್ನತ್ತಿದ ಚೆನ್ನೈ ಸೂಪರ್ ಕಿಂಗ್ಸ್ ಕೂಡ ಸರಾಸರಿ ಆರಂಭ ಪಡೆಯಿತು. ಆರಂಭಿಕರಾದ ರುತುರಾಜ್ ಗಾಯಕ್ವಾಡ್ ಮತ್ತು ರಚಿನ್ ರವೀಂದ್ರ ಮೊದಲ ವಿಕೆಟ್‌ಗೆ 38 ರನ್ ಸೇರಿಸಿದರು. ನಾಲ್ಕನೇ ಓವರ್‌ನ ಕೊನೆಯ ಎಸೆತದಲ್ಲಿ ಯಶ್ ದಯಾಳ್ ಈ ಜೊತೆಯಾಟವನ್ನು ಮುರಿದರು. ರುತುರಾಜ್ ಫಸ್ಟ್ ಸ್ಲಿಪ್ನಲ್ಲಿ ನಿಂತಿದ್ದ ಕ್ಯಾಮರೂನ್ ಗ್ರೀನ್ಗೆ ಕ್ಯಾಚಿತ್ತು ಔಟಾದರು. ರುತುರಾಜ್ 15 ಎಸೆತಗಳಲ್ಲಿ 4 ಬೌಂಡರಿಗಳ ನೆರವಿನಿಂದ 15 ರನ್ ಗಳಿಸಿದರು. ಆ ನಂತರ 7ನೇ ಓವರ್‌ನ ಕೊನೆಯ ಎಸೆತದಲ್ಲಿ ಚೆನ್ನೈನ ಎರಡನೇ ವಿಕೆಟ್ ಪತನವಾಯಿತು. ಈ ಬಾರಿ ಕರ್ಣ್ ಶರ್ಮಾ 15 ಎಸೆತಗಳಲ್ಲಿ 37 ರನ್ ಬಾರಿಸಿದ್ದ ರಚಿನ್ ರವೀಂದ್ರರನ್ನು ಬೇಟೆಯಾಡಿದರು.
ಬಳಿಕ 99 ರನ್ ಗಳಿಸಿದ್ದಾಗ ಚೆನ್ನೈ ಸೂಪರ್ ಕಿಂಗ್ಸ್ ಮೂರನೇ ವಿಕೆಟ್ ಪತನವಾಯಿತು. ಕ್ಯಾಮರೂನ್ ಗ್ರೀನ್ ಎಸೆತದಲ್ಲಿ ಅಜಿಂಕ್ಯ ರಹಾನೆ 19 ಎಸೆತಗಳಲ್ಲಿ 27 ರನ್ ಬಾರಿಸಿ ಗ್ಲೆನ್ ಮ್ಯಾಕ್ಸ್ವೆಲ್ಗೆ ಕ್ಯಾಚ್ ನೀಡಿ ವಿಕೆಟ್ ಒಪ್ಪಿಸಿದರು. ನಂತರ 13ನೇ ಓವರ್‌ನಲ್ಲಿ ಕ್ಯಾಮರೂನ್ ಗ್ರೀನ್ ಡ್ಯಾರಿಲ್ ಮಿಚೆಲ್ ವಿಕೆಟ್ ಪಡೆಯುವ ಮೂಲಕ ಸಿಎಸ್ಕೆ ತಂಡದ 4ನೇ ವಿಕೆಟ್ ಕಬಳಿಸಿದರು. ಆದರೆ ಇಲ್ಲಿಂದ ಜೊತೆಯಾದ ರವೀಂದ್ರ ಜಡೇಜಾ ಹಾಗೂ ಶಿವಂ ದುಬೆ ಅಜೇಯ 64 ರನ್‌ಗಳ ಜೊತೆಯಾಟವನ್ನಾಡಿ ತಂಡವನ್ನು ಗೆಲುವಿನ ದಡ ಸೇರಿಸಿದರು. ಅಲ್ಲದೆ ಇಬ್ಬರು ತಲಾ 25 ಹಾಗೂ 34 ರನ್ ಸಿಡಿಸಿದರು.
ಇದಕ್ಕೂ ಮುನ್ನ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆರಂಭಿಸಿದ ಆರ್ಸಿಬಿ ಪರ ನಾಯಕ ಫಾಫ್ ಡುಪ್ಲೆಸಿಸ್ ಹಾಗೂ ವಿರಾಟ್ ಕೊಹ್ಲಿ ಉತ್ತಮ ಆರಂಭವನ್ನೇ ನೀಡಿದರು. ಈ ಇಬ್ಬರು ಮೊದಲ ವಿಕೆಟ್‌ಗೆ 41 ರನ್‌ಗಳ ಜೊತೆಯಾಟ ಹಂಚಿಕೊಂಡರು. ಆದರೆ ಈ ವೇಳೆ ಸ್ಫೋಟಕ ಬ್ಯಾಟಿಂಗ್ ನಡೆಸುತ್ತಿದ್ದ ನಾಯಕ ಡುಪ್ಲೆಸಿಸ್, ಮುಸ್ತಫಿಜುರ್ ಬೌಲಿಂಗ್ನಲ್ಲಿ 35 ರನ್ಗಳಿಗೆ ತಮ್ಮ ಇನ್ನಿಂಗ್ಸ್ ಮುಗಿಸಿದರು. ಆ ನಂತರ ಬಂದ ರಜತ್ ಪಾಟಿದರ್, ಐಪಿಎಲ್ನಲ್ಲೂ ತಮ್ಮ ಕಳಪೆ ಫಾರ್ಮ್ ಮುಂದುವರೆಸಿ ಶೂನ್ಯಕ್ಕೆ ವಿಕೆಟ್ ಒಪ್ಪಿಸಿದರು.
ಮೂರನೇ ಕ್ರಮಾಂಕದಲ್ಲಿ ಬಂದ ಭರವಸೆಯ ಬ್ಯಾಟರ್ ಗ್ಲೆನ್ ಮ್ಯಾಕ್ಸ್‌ವೆಲ್ ಕೂಡ ಯಾವುದೇ ಪರಿಣಾಮ ಬೀರದೆ ಮೊದಲ ಎಸೆತದಲ್ಲೇ ವಿಕೆಟ್ ಕೀಪರ್ಗೆ ಕ್ಯಾಚಿತ್ತು ಶೂನ್ಯಕ್ಕೆ ವಿಕೆಟ್ ಒಪ್ಪಿಸಿದರು. ಹೀಗಾಗಿ ಉತ್ತಮ ಆರಂಭದ ಹೊರತಾಗಿಯೂ ವಿಕೆಟ್ಗಳ ದಿಢೀರ್ ಪತನದಿಂದಾಗಿ ಸಂಕಷ್ಟಕ್ಕೆ ಸಿಲುಕಿತು. ಈ ವೇಳೆ ಜೊತೆಯಾದ ವಿರಾಟ್ ಕೊಹ್ಲಿ ಹಾಗೂ ಕ್ಯಾಮರಾನ್ ಗ್ರೀನ್ ತಂಡದ ಇನ್ನಿಂಗ್ಸ್ ನಿಭಾಯಿಸಿದರು. ಆದರೆ ರಹಾನೆ ಹಿಡಿದ ಅದ್ಭುತ ಕ್ಯಾಚ್ನಿಂದಾಗಿ ವಿರಾಟ್ ಕೊಹ್ಲಿ ಇನ್ನಿಂಗ್ಸ್ 21 ರನ್ಗಳಿಗೆ ಅಂತ್ಯವಾಯಿತು.
ಕೊಹ್ಲಿ ವಿಕೆಟ್ ಬಳಿಕ ಗ್ರೀನ್ ಕೂಡ ಹೆಚ್ಚು ಹೊತ್ತು ಮೈದಾನದಲ್ಲಿ ನಿಲ್ಲಲಿಲ್ಲ. ಅವರು ಕೂಡ 18 ರನ್ಗಳಿಗೆ ತಮ್ಮ ಇನ್ನಿಂಗ್ಸ್ ಮುಗಿಸಿದರು. ಹೀಗಾಗಿ ತಂಡ ಕೇವಲ 78 ರನ್ಗಳಿಗೆ ಪ್ರಮುಖ 5 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. ಇಲ್ಲಿಂದ ಜೊತೆಯಾದ ದಿನೇಶ್ ಕಾರ್ತಿಕ್ ಹಾಗೂ ಅನುಜ್ ರಾವತ್ ತಂಡದ ಇನ್ನಿಂಗ್ಸ್ ನಿಭಾಯಿಸಿದರು. ಈ ಇಬ್ಬರು 95 ರನ್‌ಗಳ ಜೊತೆಯಾಟದ ಜೊತೆಗೆ ತಂಡವನ್ನು 170 ರನ್‌ಗಳ ಗಡಿ ದಾಟಿಸಿದರು.
ಅಂತಿಮವಾಗಿ ಅನುಜ್ ರಾವತ್ 25 ಎಸೆತಗಳಲ್ಲಿ 4 ಬೌಂಡರಿ ಹಾಗೂ 3 ಸಿಕ್ಸರ್ ಸಹಿತ 48 ರನ್ ಕಲೆಹಾಕಿದರೆ, ದಿನೇಶ್ ಕಾರ್ತಿಕ್ 26 ಎಸೆತಗಳಲ್ಲಿ 3 ಬೌಂಡರಿ ಹಾಗೂ 2 ಸಿಕ್ಸರ್ ಸಹಿತ ಅಜೇಯ 38 ರನ್ ಸಿಡಿಸಿದರು. ಇನ್ನು ಸಿಎಸ್ಕೆ ಪರ ಅದ್ಭುತವಾಗಿ ಬೌಲಿಂಗ್ ಮಾಡಿದ ಮುಸ್ತಫಿಜುರ್ ರೆಹಮಾನ್ 4 ಓವರ್ಗಳಲ್ಲಿ 29 ರನ್ ನೀಡಿ 4 ವಿಕೆಟ್ ಪಡೆದರೆ, ದೀಪಕ್ ಚಹಾರ್ 1 ವಿಕೆಟ್ ಪಡೆದರು.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 11:55 pm, Fri, 22 March 24