IPL 2024: ಗುಜರಾತ್ ಟೈಟಾನ್ಸ್​ಗೆ ಸೋಲುಣಿಸಿದ CSK

| Updated By: ಝಾಹಿರ್ ಯೂಸುಫ್

Updated on: Mar 26, 2024 | 11:33 PM

IPL 2024: ಇಂಡಿಯನ್ ಪ್ರೀಮಿಯರ್ ಲೀಗ್​ನ (ಐಪಿಎಲ್​) ತನ್ನ 2ನೇ ಪಂದ್ಯದಲ್ಲೂ ಚೆನ್ನೈ ಸೂಪರ್ ಕಿಂಗ್ಸ್ ಜಯ ಸಾಧಿಸಿದೆ. ಉದ್ಘಾಟನಾ ಪಂದ್ಯದಲ್ಲಿ ಆರ್​ಸಿಬಿ ವಿರುದ್ಧ ಭರ್ಜರಿ ಜಯ ಸಾಧಿಸಿ ಶುಭಾರಂಭ ಮಾಡಿದ್ದ ಸಿಎಸ್​​ಕೆ ತಂಡವು ಇದೀಗ ಗುಜರಾತ್ ಟೈಟಾನ್ಸ್ ವಿರುದ್ಧ ಗೆಲುವು ದಾಖಲಿಸಿದೆ. ಈ ಮೂಲಕ ಬ್ಯಾಕ್ ಟು ಬ್ಯಾಕ್ ಎರಡು ಪಂದ್ಯಗಳನ್ನು ಗೆದ್ದುಕೊಂಡಿದೆ.

IPL 2024: ಗುಜರಾತ್ ಟೈಟಾನ್ಸ್​ಗೆ ಸೋಲುಣಿಸಿದ CSK
CSK vs GT
Follow us on

ಚೆನ್ನೈನ ಎಂಎ ಚಿದಂಬರಂ ಸ್ಟೇಡಿಯಂನಲ್ಲಿ ನಡೆದ ಗುಜರಾತ್ ಟೈಟಾನ್ಸ್ ವಿರುದ್ಧದ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ (CSK) ತಂಡ ಭರ್ಜರಿ ಜಯ ಸಾಧಿಸಿದೆ. ಈ ಪಂದ್ಯದಲ್ಲಿ ಟಾಸ್ ಗೆದ್ದ ಗುಜರಾತ್ ಟೈಟಾನ್ಸ್ ತಂಡದ ನಾಯಕ ಶುಭ್​ಮನ್ ಗಿಲ್ ಬೌಲಿಂಗ್ ಆಯ್ದುಕೊಂಡಿದ್ದರು. ಅದರಂತೆ ಮೊದಲು ಬ್ಯಾಟ್ ಮಾಡಿದ ಸಿಎಸ್​ಕೆ ತಂಡಕ್ಕೆ ರಚಿನ್ ರವೀಂದ್ರ ಹಾಗೂ ರುತುರಾಜ್ ಗಾಯಕ್ವಾಡ್ ಭರ್ಜರಿ ಆರಂಭ ಒದಗಿಸಿದ್ದರು. ಮೊದಲ ವಿಕೆಟ್​ಗೆ 62 ರನ್ ಪೇರಿಸಿದ ಬಳಿಕ ರಚಿನ್ (46 ರನ್ಸ್, 20ಎಸೆತ) ವಿಕೆಟ್ ಒಪ್ಪಿಸಿದರು. ಇದರ ಬೆನ್ನಲ್ಲೇ ಅಜಿಂಕ್ಯ ರಹಾನೆ (12) ಕೂಡ ಔಟಾದರು.

ಈ ಹಂತದಲ್ಲಿ ಶಿವಂ ದುಬೆ ಸಿಡಿಲಬ್ಬರದ ಬ್ಯಾಟಿಂಗ್ ಪ್ರದರ್ಶಿಸಿದರು. ಕೇವಲ 23 ಎಸೆತಗಳಲ್ಲಿ 5 ಸಿಕ್ಸ್ ಹಾಗೂ 2 ಫೋರ್​ಗಳೊಂದಿಗೆ 51 ರನ್ ಚಚ್ಚಿದರು. ಮತ್ತೊಂದೆಡೆ ರುತುರಾಜ್ ಗಾಯಕ್ವಾಡ್ 46 ರನ್​ಗಳ ಕೊಡುಗೆ ನೀಡಿದರು. ಈ ಭರ್ಜರಿ ಬ್ಯಾಟಿಂಗ್​​ ನೆರವಿನಿಂದ ಸಿಎಸ್​ಕೆ ತಂಡವು 20 ಓವರ್​ಗಳಲ್ಲಿ 6 ವಿಕೆಟ್ ಕಳೆದುಕೊಂಡು 206 ರನ್​ ಕಲೆಹಾಕಿತು.

207 ರನ್​ಗಳ ಕಠಿಣ ಗುರಿಯನ್ನು ಬೆನ್ನತ್ತಿದ ಗುಜರಾತ್ ಟೈಟಾನ್ಸ್ ತಂಡವು ಉತ್ತಮ ಆರಂಭ ಪಡೆದಿರಲಿಲ್ಲ. ನಾಯಕ ಶುಭ್​​ಮನ್ ಗಿಲ್ ಕೇವಲ 8 ರನ್​ಗಳಿಸಿ ಔಟಾದರೆ, ವೃದ್ದಿಮಾನ್ ಸಾಹ 21 ರನ್​ಗಳಿಸಿ ವಿಕೆಟ್ ಒಪ್ಪಿಸಿದರು.

ಇನ್ನು ವಿಜಯ್ ಶಂಕರ್ 12 ರನ್​ಗಳಿಸಿ ನಿರ್ಗಮಿಸಿದರೆ, ಡೇವಿಡ್ ಮಿಲ್ಲರ್ 21 ರನ್​ಗಳಿಸಿ ಹೊರ ನಡೆದರು. ಪರಿಣಾಮ ಕೊನೆಯ 6 ಓವರ್​ಗಳಲ್ಲಿ ಗುಜರಾತ್ ಟೈಟಾನ್ಸ್ ತಂಡಕ್ಕೆ 97 ರನ್​ಗಳ ಅವಶ್ಯಕತೆಯಿತ್ತು.

ಈ ಹಂತದಲ್ಲಿ ಸಾಯಿ ಸುದರ್ಶನ್ (31) ಹಾಗೂ ಒಮರ್​ಝಾಹಿ (11) ವಿಕೆಟ್ ಒಪ್ಪಿಸಿದರು. ಆ ಬಳಿಕ ಬಂದ ರಶೀದ್ ಖಾನ್ 1 ರನ್​ಗಳಿಸಿ ಬಂದ ವೇಗದಲ್ಲೇ ಪೆವಿಲಿಯನ್​ಗೆ ಹಿಂತಿರುಗಿದರು.

ಅಂತಿಮವಾಗಿ ಗುಜರಾತ್ ಟೈಟಾನ್ಸ್ ತಂಡವು 20 ಓವರ್​ಗಳಲ್ಲಿ 8 ವಿಕೆಟ್ ಕಳೆದುಕೊಂಡು​ 143 ರನ್​ ಕಲೆಹಾಕಲಷ್ಟೇ ಶಕ್ತರಾದರು. ಈ ಮೂಲಕ ಚೆನ್ನೈ ಸೂಪರ್ ಕಿಂಗ್ಸ್ ತಂಡವು 63 ರನ್​ಗಳ ಭರ್ಜರಿ ಜಯ ಸಾಧಿಸಿತು. ಸಿಎಸ್​ಕೆ ಪರ ತುಷಾರ್ ದೇಶಪಾಂಡೆ, ಮುಸ್ತಫಿಜುರ್ ರೆಹಮಾನ್ ಹಾಗೂ ದೀಪಕ್ ಚಹರ್ ತಲಾ 2 ವಿಕೆಟ್ ಕಬಳಿಸಿ ಮಿಂಚಿದರು.

  • ಗುಜರಾತ್ ಟೈಟಾನ್ಸ್ ಪ್ಲೇಯಿಂಗ್ 11: ಶುಭ್​ಮನ್ ಗಿಲ್ (ನಾಯಕ), ವೃದ್ಧಿಮಾನ್ ಸಾಹ (ವಿಕೆಟ್ ಕೀಪರ್), ಅಜ್ಮತುಲ್ಲಾ ಒಮರ್ಜಾಯ್, ಡೇವಿಡ್ ಮಿಲ್ಲರ್, ವಿಜಯ್ ಶಂಕರ್, ರಾಹುಲ್ ತೆವಾಟಿಯಾ, ರಶೀದ್ ಖಾನ್, ಸಾಯಿ ಕಿಶೋರ್, ಉಮೇಶ್ ಯಾದವ್, ಮೋಹಿತ್ ಶರ್ಮಾ, ಸ್ಪೆನ್ಸರ್ ಜಾನ್ಸನ್.

ಇದನ್ನೂ ಓದಿ: Virat Kohli: ಕಿಂಗ್ ಕೊಹ್ಲಿ ಸಿಡಿಲಬ್ಬರಕ್ಕೆ ಕ್ರಿಸ್ ಗೇಲ್ ದಾಖಲೆ ಧೂಳೀಪಟ

  • ಚೆನ್ನೈ ಸೂಪರ್ ಕಿಂಗ್ಸ್ ಪ್ಲೇಯಿಂಗ್ 11: ರುತುರಾಜ್ ಗಾಯಕ್ವಾಡ್ (ನಾಯಕ), ರಚಿನ್ ರವೀಂದ್ರ, ಅಜಿಂಕ್ಯ ರಹಾನೆ, ಡೇರಿಲ್ ಮಿಚೆಲ್, ಶಿವಂ ದುಬೆ, ರವೀಂದ್ರ ಜಡೇಜಾ, ಸಮೀರ್ ರಿಝ್ವಿ, ಎಂಎಸ್ ಧೋನಿ (ವಿಕೆಟ್ ಕೀಪರ್), ದೀಪಕ್ ಚಹರ್, ತುಷಾರ್ ದೇಶಪಾಂಡೆ, ಮುಸ್ತಾಫಿಜುರ್ ರೆಹಮಾನ್. ಮತೀಶ ಪತಿರಾಣ (ಇಂಪ್ಯಾಕ್ಟ್​ ಪ್ಲೇಯರ್).

 

 

Published On - 11:28 pm, Tue, 26 March 24