ಐಪಿಎಲ್ 2024 (IPL 2024)ರ ಐದನೇ ಪಂದ್ಯದಲ್ಲಿ ನಡೆದ ಗುಜರಾತ್ ಟೈಟಾನ್ಸ್ ಮತ್ತು ಮುಂಬೈ ಇಂಡಿಯನ್ಸ್ (Gujarat Titans vs Mumbai Indians) ನಡುವಿನ ಹೈವೋಲ್ಟೇಜ್ ಕದನದಲ್ಲಿ ಆತಿಥೇಯ ಗುಜರಾತ್ ತಂಡ ಬಲಿಷ್ಠ ಮುಂಬೈ ತಂಡಕ್ಕೆ 6 ರನ್‌ಗಳ ಸೋಲುಣಿಸಿದೆ. ತೀವ್ರ ರೋಚಕತೆಯಿಂದ ಕೂಡಿದ ಈ ಪಂದ್ಯದಲ್ಲಿ ಕೊನೆಯ ಹಂತದವರೆಗೂ ಗೆಲುವಿನ ಫೇವರೆಟ್ ಎನಿಸಿಕೊಂಡಿದ್ದ ಮುಂಬೈ, ಗೆಲ್ಲುವ ಪಂದ್ಯವನ್ನು ಕೈಚೆಲ್ಲಿತು. ಇತ್ತ ಮೊದಲ ಪಂದ್ಯದ ನಾಯಕತ್ವದಲ್ಲೇ ಶುಭ್‌ಮನ್ ಗಿಲ್ (Shubman Gill) ತಮ್ಮ ಚಾಣಕ್ಷತೆಯಿಂದಾಗಿ ಕೈಜಾರುತ್ತಿದ್ದ ಪಂದ್ಯವನ್ನು ತಮ್ಮತ್ತ ವಾಲುವಂತೆ ಮಾಡಿಕೊಂಡರು. ಇದರಲ್ಲಿ ಗುಜರಾತ್ ಬೌಲರ್ಗಳ ಪ್ರಭಾವವೂ ಹೆಚ್ಚಿತ್ತು. ಅಂತಿಮವಾಗಿ ತಂಡವನ್ನು ತೊರೆದು ಮುಂಬೈ ಇಂಡಿಯನ್ಸ್ ತಂಡವನ್ನು ಸೇರಿಕೊಂಡಿದ್ದ ತಂಡದ ಮಾಜಿ ನಾಯಕ ಹಾರ್ದಿಕ್ ಪಾಂಡ್ಯಗೆ (Hardik Pandya) ಸೋಲಿನ ಶಾಕ್ ನೀಡುವ ಮೂಲಕ ಗುಜರಾತ್ ತಂಡ, ಯಶಸ್ಸು ಎಂಬುದು ಕೇವಲ ಒಬ್ಬನಿಂದ ಮಾತ್ರ ಸಿಗುವುದಿಲ್ಲ ಎಂಬದನ್ನು ಮತ್ತೊಮ್ಮೆ ಜಗಜ್ಜಾಹೀರು ಮಾಡಿದೆ.
ಈ ಪಂದ್ಯದ ಸೋಲಿನೊಂದಿಗೆ ಕಳೆದ 11 ವರ್ಷಗಳ ಸಂಪ್ರದಾಯವನ್ನು ಮುಂದುವರಿಸಿರುವ ಮುಂಬೈ ಇಂಡಿಯನ್ಸ್ ಐಪಿಎಲ್ ಸೀಸನ್ನ ಮೊದಲ ಪಂದ್ಯದಲ್ಲಿ ಸೋಲುವ ತನ್ನ ಚಾಳಿಯನ್ನು ಈಗಲೂ ಮುಂದುವರೆಸಿದೆ. ಈ ಪಂದ್ಯದಲ್ಲಿ ಟಾಸ್ ಗೆದ್ದ ಹಾರ್ದಿಕ್ ಮೊದಲು ಬೌಲಿಂಗ್ ಮಾಡಲು ನಿರ್ಧರಿಸಿದ್ದರು. ಅದರಂತೆ ಮೊದಲು ಬ್ಯಾಟ್ ಮಾಡಿದ ಗುಜರಾತ್ 20 ಓವರ್‌ಗಳಲ್ಲಿ 168 ರನ್ ಗಳಿಸಿತು. ಈ ಗುರಿ ಬೆನ್ನಟ್ಟಿದ ಮುಂಬೈ ಇಂಡಿಯನ್ಸ್ ತಂಡ 20 ಓವರ್‌ಗಳಲ್ಲಿ 9 ವಿಕೆಟ್ ಕಳೆದುಕೊಂಡು 162 ರನ್ ಗಳಿಸಲಷ್ಟೇ ಶಕ್ತವಾಗಿ 6 ರನ್ಗಳಿಂದ ಸೋಲೊಪ್ಪಿಕೊಂಡಿತು. ಗುಜರಾತ್ ಗೆಲುವಿನೊಂದಿಗೆ ಶುಭ್‌ಮನ್ ಗಿಲ್ ನಾಯಕನಾಗಿ ಗೆಲುವಿನ ಆರಂಭ ಮಾಡಿದ್ದಾರೆ.
IPL 2024: ಬೆಂಗಳೂರಿನಲ್ಲಿ ಆರ್ಸಿಬಿ- ಪಂಜಾಬ್ ಫೈಟ್; ಉಭಯರಲ್ಲಿ ಯಾರದ್ದು ಮೇಲುಗೈ?
ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಗುಜರಾತ್ ಟೈಟಾನ್ಸ್ 20 ಓವರ್‌ಗಳಲ್ಲಿ 6 ವಿಕೆಟ್ ಕಳೆದುಕೊಂಡು 168 ರನ್ ಗಳಿಸಿತು. ಗುಜರಾತ್ ಪರ ಬ್ಯಾಟಿಂಗ್ ಮಾಡಿದ ಸಾಯಿ ಸುದರ್ಶನ್ 45 ರನ್‌ಗಳ ಗರಿಷ್ಠ ಇನ್ನಿಂಗ್ಸ್ ಆಡಿದರು. ಇವರಲ್ಲದೇ ನಾಯಕ ಶುಭ್‌ಮನ್ ಗಿಲ್ 31 ರನ್ ಮತ್ತು ರಾಹುಲ್ ತೆವಾಟಿಯಾ 22 ರನ್‌ಗಳ ಕೊಡುಗೆ ನೀಡಿದರು. ಮುಂಬೈ ಪರ ಜಸ್ಪ್ರೀತ್ ಬುಮ್ರಾ 3 ವಿಕೆಟ್ ಪಡೆದರು. ಜೆರಾಲ್ಡ್ ಕೊಯೆಟ್ಜಿ ಎರಡು ವಿಕೆಟ್ ಪಡೆದರು. ಪಿಯೂಷ್ ಚಾವ್ಲಾ 1 ವಿಕೆಟ್ ಪಡೆದರು.
ಗುಜರಾತ್ ನೀಡಿದ 168 ರನ್‌ಗಳ ಗುರಿ ಬೆನ್ನಟ್ಟಿದ ಮುಂಬೈ ತಂಡಕ್ಕೆ ಉತ್ತಮ ಆರಂಭ ಸಿಗಲಿಲ್ಲ. ಆರಂಭಿಕ ಇಶಾನ್ ಕಿಶನ್ ಶೂನ್ಯಕ್ಕೆ ಔಟಾದರೆ, ನಂತರ ಬಂದ ನಮನ್ ಕೂಡ ಆಕ್ರಮಣಕಾರಿ ಆಟಕ್ಕೆ ಮುಂದಾಗಿ ಬೇಗನೆ ಪೆವಿಲಿಯನ್ ಸೇರಿಕೊಂಡರು. ಈ ವೇಳೆ ಇಂಪ್ಯಾಕ್ಟ್ ಪ್ಲೇಯರ್ ಆಗಿ ಕಣಕ್ಕಿಳಿದ ಡೆವಾಲ್ಡ್ ಬ್ರೆವಿಸ್ 3 ಸಿಕ್ಸರ್ ಮತ್ತು 2 ಬೌಂಡರಿಗಳ ಸಹಿತ ಮುಂಬೈ ಪರ ಅತ್ಯಧಿಕ 46 ರನ್ ಗಳಿಸಿದರೆ ಮಾಜಿ ನಾಯಕ ರೋಹಿತ್ ಶರ್ಮಾ 29 ಎಸೆತಗಳಲ್ಲಿ 43 ರನ್ ಕೊಡುಗೆ ನೀಡಿದರು. ನಂತರ ಬಂದ ತಿಲಕ್ ವರ್ಮಾ 25 ರನ್ಗಳಿಗೆ ಇನ್ನಿಂಗ್ಸ್ ಮುಗಿಸಿದರು. ಈ ಪಂದ್ಯದಲ್ಲಿ 7ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ಗೆ ಬಂದ ಹಾರ್ದಿಕ್ ಪಾಂಡ್ಯ 4 ಎಸೆತಗಳಲ್ಲಿ 1 ಬೌಂಡರಿ ಹಾಗೂ 1 ಸಿಕ್ಸರ್ ಸಿಡಿಸಿ 11 ರನ್ ಬಾರಿಸಿದರಾದರೂ ತಂಡವನ್ನು ಗೆಲುವಿನ ದಡ ಸೇರಿಸಲು ಸಾಧ್ಯವಾಗಲಿಲ್ಲ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 11:29 pm, Sun, 24 March 24