- Kannada News Photo gallery Cricket photos IPL 2024: Jasprit Bumrah Record: Most 3+ Wickets Haul In IPL
IPL 2024: ಬೂಮ್ ಬೂಮ್… ಭರ್ಜರಿ ದಾಖಲೆ ಬರೆದ ಬುಮ್ರಾ
IPL 2024: ಇಂಡಿಯನ್ ಪ್ರೀಮಿಯರ್ ಲೀಗ್ನ (ಐಪಿಎಲ್) ಐದನೇ ಪಂದ್ಯದಲ್ಲಿ ಮಿಂಚಿನ ದಾಳಿ ಸಂಘಟಿಸುವ ಮೂಲಕ ಯಾರ್ಕರ್ ಸ್ಪೆಷಲಿಸ್ಟ್ ಜಸ್ಪ್ರೀತ್ ಬುಮ್ರಾ ವಿಶೇಷ ದಾಖಲೆ ಬರೆದಿದ್ದಾರೆ. ಅದು ಕೂಡ ಮುಂಬೈ ಇಂಡಿಯನ್ಸ್ ಬೌಲಿಂಗ್ ಕೋಚ್ ಲಸಿತ್ ಮಾಲಿಂಗ ಅವರ ಹೆಸರಿನಲ್ಲಿದ್ದ ವಿಶೇಷ ದಾಖಲೆಯನ್ನು ಮುರಿಯುವ ಮೂಲಕ ಎಂಬುದು ವಿಶೇಷ.
Updated on: Mar 25, 2024 | 6:28 AM

IPL 2024: ಇಂಡಿಯನ್ ಪ್ರೀಮಿಯರ್ ಲೀಗ್ನ 5ನೇ ಪಂದ್ಯದ ಮೂಲಕ ಮುಂಬೈ ಇಂಡಿಯನ್ಸ್ ವೇಗಿ ಜಸ್ಪ್ರೀತ್ ಬುಮ್ರಾ (Jasprit Bumrah) ಭರ್ಜರಿ ದಾಖಲೆ ಬರೆದಿದ್ದಾರೆ. ಅಹಮದಾಬಾದ್ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆದ ಗುಜರಾತ್ ಟೈಟಾನ್ಸ್ ವಿರುದ್ಧದ ಈ ಪಂದ್ಯದಲ್ಲಿ ಬುಮ್ರಾ 4 ಓವರ್ಗಳಲ್ಲಿ ಕೇವಲ 14 ರನ್ ನೀಡಿ 3 ವಿಕೆಟ್ ಕಬಳಿಸಿದ್ದರು.

ಈ ಮೂರು ವಿಕೆಟ್ಗಳೊಂದಿಗೆ ಐಪಿಎಲ್ ಇತಿಹಾಸದಲ್ಲೇ ಅತೀ ಹೆಚ್ಚು ಬಾರಿ 3+ ವಿಕೆಟ್ ಪಡೆದ ಬೌಲರ್ ಎಂಬ ದಾಖಲೆಯನ್ನು ಬುಮ್ರಾ ತಮ್ಮದಾಗಿಸಿಕೊಂಡರು. ಇದಕ್ಕೂ ಮುನ್ನ ಈ ವಿಶೇಷ ದಾಖಲೆ ಯಾರ್ಕರ್ ಮಾಂತ್ರಿಕ ಲಸಿತ್ ಮಾಲಿಂಗ ಅವರ ಹೆಸರಿನಲ್ಲಿತ್ತು.

ಮುಂಬೈ ಇಂಡಿಯನ್ಸ್ ಪರ 122 ಇನಿಂಗ್ಸ್ಗಳಲ್ಲಿ ಬೌಲಿಂಗ್ ಮಾಡಿರುವ ಲಸಿತ್ ಮಾಲಿಂಗ ಒಟ್ಟು 19 ಬಾರಿ 3+ ವಿಕೆಟ್ ಕಬಳಿಸಿ ಈ ದಾಖಲೆ ಬರೆದಿದ್ದರು. ಇದೀಗ ಈ ದಾಖಲೆಯನ್ನು ಅಳಿಸಿ ಹಾಕುವಲ್ಲಿ ಬುಮ್ರಾ ಯಶಸ್ವಿಯಾಗಿದ್ದಾರೆ.

ಐಪಿಎಲ್ನಲ್ಲಿ ಇದುವರೆಗೆ 121 ಇನಿಂಗ್ಸ್ ಆಡಿರುವ ಬೂಮ್ ಬೂಮ್ ಬುಮ್ರಾ ಒಟ್ಟು 20 ಬಾರಿ 3+ ವಿಕೆಟ್ ಕಬಳಿಸಿದ್ದಾರೆ. ಈ ಮೂಲಕ ಇಂಡಿಯನ್ ಪ್ರೀಮಿಯರ್ ಲೀಗ್ ಇತಿಹಾಸದಲ್ಲೇ ಅತ್ಯಧಿಕ ಮೂರು ಅಥವಾ ಮೂರಕ್ಕಿಂತ ಹೆಚ್ಚು ವಿಕೆಟ್ ಪಡೆದ ಬೌಲರ್ ಎನಿಸಿಕೊಂಡಿದ್ದಾರೆ.

ಇನ್ನು ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಗುಜರಾತ್ ಟೈಟಾನ್ಸ್ ತಂಡವು 20 ಓವರ್ಗಳಲ್ಲಿ 6 ವಿಕೆಟ್ ನಷ್ಟದೊಂದಿಗೆ 168 ರನ್ ಕಲೆಹಾಕಿತು. ಈ ಸ್ಪರ್ಧಾತ್ಮಕ ಗುರಿಯನ್ನು ಬೆನ್ನತ್ತಿದ ಮುಂಬೈ ಇಂಡಿಯನ್ಸ್ ತಂಡವು 20 ಓವರ್ಗಳಲ್ಲಿ 9 ವಿಕೆಟ್ ಕಳೆದುಕೊಂಡು 162 ರನ್ಗಳಿಸಲಷ್ಟೇ ಶಕ್ತರಾದರು. ಈ ಮೂಲಕ ಗುಜರಾತ್ ಟೈಟಾನ್ಸ್ ತಂಡವು 6 ವಿಕೆಟ್ಗಳ ಜಯ ಸಾಧಿಸಿ ಶುಭಾರಂಭ ಮಾಡಿದೆ.
