- Kannada News Photo gallery Cricket photos IPL 2024: Hardik Pandya Orders Rohit Sharma To Field In Boundary
Hardik Pandya: ಹೋಗಿ ಬೌಂಡರಿ ಲೈನ್ನಲ್ಲಿ ನಿಲ್ಲು: ನಾನಾ? ಹೌದು, ನೀನೇ..!
IPL 2024: ಇಂಡಿಯನ್ ಪ್ರೀಮಿಯರ್ ಲೀಗ್ನ (ಐಪಿಎಲ್ 2024) ಐದನೇ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ತಂಡಕ್ಕೆ ಸೋಲುಣಿಸಿ ಗುಜರಾತ್ ಟೈಟಾನ್ಸ್ ತಂಡ ಶುಭಾರಂಭ ಮಾಡಿದೆ. ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಗುಜರಾತ್ ಟೈಟಾನ್ಸ್ ತಂಡ 168 ರನ್ ಕಲೆಹಾಕಿತು. ಈ ಗುರಿಯನ್ನು ಬೆನ್ನತ್ತಿದ ಮುಂಬೈ ಇಂಡಿಯನ್ಸ್ 162 ರನ್ಗಳಿಸಲಷ್ಟೇ ಶಕ್ತರಾದರು. ಈ ಮೂಲಕ ಗುಜರಾತ್ ಟೈಟಾನ್ಸ್ ತಂಡವು 6 ರನ್ಗಳ ಜಯ ಸಾಧಿಸಿದೆ.
Updated on: Mar 25, 2024 | 6:55 AM

ಅಹಮದಾಬಾದ್ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆದ ಐಪಿಎಲ್ನ 5ನೇ ಪಂದ್ಯದ ಮೂಲಕ ಹಾರ್ದಿಕ್ ಪಾಂಡ್ಯ (Hardik Pandya) ಮುಂಬೈ ಇಂಡಿಯನ್ಸ್ ತಂಡದ ನಾಯಕರಾಗಿ ಪಾದಾರ್ಪಣೆ ಮಾಡಿದ್ದಾರೆ. ಈ ಪಂದ್ಯದಲ್ಲಿ ಟಾಸ್ ಗೆದ್ದ ಪಾಂಡ್ಯ ಮೊದಲು ಬೌಲಿಂಗ್ ಮಾಡುವ ನಿರ್ಧಾರ ತೆಗೆದುಕೊಂಡಿದ್ದರು.

ಅದರಂತೆ ಚೆಂಡನ್ನು ಕೈಗೆತ್ತಿಕೊಂಡ ಹಾರ್ದಿಕ್ ಪಾಂಡ್ಯ ಮೊದಲ ಓವರ್ ಎಸೆಯುವ ಮೂಲಕ ಗಮನ ಸೆಳೆದರು. ಅಷ್ಟೇ ಅಲ್ಲದೆ ಬೌಲಿಂಗ್ ಲೈನಪ್ ಮತ್ತು ಫೀಲ್ಡಿಂಗ್ನಲ್ಲೂ ಹಲವು ಪ್ರಯೋಗಗಳನ್ನು ಮಾಡಿದರು. ಈ ಪ್ರಯೋಗಗಳ ಮೂಲಕ ರೋಹಿತ್ ಶರ್ಮಾರನ್ನು ಬೌಂಡರಿ ಲೈನ್ಗೆ ಕಳುಹಿಸಿದರು.

ಹೌದು, ಪವರ್ಪ್ಲೇ ಮುಕ್ತಾಯದ ಬೆನ್ನಲ್ಲೇ ರೋಹಿತ್ ಶರ್ಮಾ ಅವರನ್ನು ಹಾರ್ದಿಕ್ ಪಾಂಡ್ಯ ಬೌಂಡರಿ ಲೈನ್ನತ್ತ ಕಳುಹಿಸಿದರು. ಸಾಮಾನ್ಯವಾಗಿ ಹಿಟ್ಮ್ಯಾನ್ ಸ್ಲಿಪ್ ಹಾಗೂ ಫ್ರಂಟ್ ಫೀಲ್ಡಿಂಗ್ನಲ್ಲಿ ಮಾತ್ರ ಕಾಣಿಸಿಕೊಳ್ಳುತ್ತಾರೆ. ಆದರೆ ಪಾಂಡ್ಯ ಮಾತ್ರ ರೋಹಿತ್ರನ್ನು ಲಾಂಗ್ ಆನ್ನತ್ತ ನಿಲ್ಲಿಸಿ ಅಚ್ಚರಿ ಮೂಡಿಸಿದರು.

ಇದಾದ ಬಳಿಕ ಕೂಡ ಹಲವು ಬಾರಿ ರೋಹಿತ್ ಶರ್ಮಾ ಅವರ ಫೀಲ್ಡಿಂಗ್ ಬದಲಿಸಿದರು. ಒಮ್ಮೆ ಸ್ಲಿಪ್, ಮತ್ತೊಮ್ಮೆ ಲಾಂಗ್ ಆನ್, ಇನ್ನೊಮ್ಮೆ ಲೆಗ್ ಸೈಡ್, ಮಗದೊಮ್ಮೆ ಮಿಡ್ ವಿಕೆಟ್ನತ್ತ ನಿಲ್ಲಿಸಿದರು. ಹೀಗೆ ರೋಹಿತ್ ಶರ್ಮಾ ಅವರನ್ನು ಮೈದಾನದ ಮೂಲೆ ಮೂಲೆಯಲ್ಲಿ ನಿಲ್ಲುವಂತೆ ಮಾಡಿದರು.

ಅದರಲ್ಲೂ ಅಂತಿಮ ಓವರ್ಗಳ ವೇಳೆ 30 ಯಾರ್ಡ್ ಸರ್ಕಲ್ನಿಂದ ಮತ್ತೊಮ್ಮೆ ಮುಂಬೈ ತಂಡದ ಮಾಜಿ ನಾಯಕನನ್ನು ಲಾಂಗ್ ಆನ್ನತ್ತ ಕಳುಹಿಸಿದರು. ಲಾಂಗ್ ಆನ್ನತ್ತ ತೆರಳುವಂತೆ ರೋಹಿತ್ ಶರ್ಮಾಗೆ ಸೂಚಿಸಿದಾಗ, ಗೊಂದಲದಿಂದ ನಾನಾ ಎಂದು ಕೇಳುತ್ತಿರುವುದು ಕೂಡ ಕಂಡು ಬಂತು. ಹೌದು ನೀನೇ, ಬೌಂಡರಿ ಲೈನ್ನತ್ತ ಹೋಗು ಎಂದು ಹಾರ್ದಿಕ್ ಪಾಂಡ್ಯ ಕೈಸನ್ನೆ ಮಾಡಿದರು.

ಸಾಮಾನ್ಯವಾಗಿ ರೋಹಿತ್ ಶರ್ಮಾ ಮುಂಭಾಗದಲ್ಲಿ ಫೀಲ್ಡಿಂಗ್ ಮಾಡುವುದು ವಾಡಿಕೆ. ಅದರಲ್ಲೂ ಹಿರಿಯ ಆಟಗಾರನಾಗಿರುವ ಕಾರಣ ಬೌಂಡರಿ ಲೈನ್ನಲ್ಲಿ ಚುರುಕಾಗಿ ಫೀಲ್ಡಿಂಗ್ ಮಾಡುವುದು ಕಷ್ಟ. ಇದಾಗ್ಯೂ ಹಾರ್ದಿಕ್ ಪಾಂಡ್ಯ, ಯುವ ಆಟಗಾರರನ್ನು ಫ್ರಂಟ್ ಫೀಲ್ಡಿಂಗ್ನಲ್ಲಿ ನಿಲ್ಲಿಸಿ ರೋಹಿತ್ ಶರ್ಮಾ ಅವರನ್ನೇ ಬೌಂಡರಿ ಲೈನ್ಗೆ ಕಳುಹಿಸಿ ಅಚ್ಚರಿ ಮೂಡಿಸಿದರು.
