IPL 2024: ಊಟಕ್ಕೆ ಕರೆದು ಮನಸ್ತಾಪ ಶಮನ ಮಾಡಿದ ಸಂಜೀವ್ ಗೋಯೆಂಕಾ! ಫೋಟೋ ನೋಡಿ

|

Updated on: May 14, 2024 | 5:34 PM

IPL 2024: ಲಕ್ನೋ ಸೂಪರ್‌ಜೈಂಟ್ಸ್ ತಂಡ ಇಂದು ಮಾಡು ಇಲ್ಲವೇ ಮಡಿ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಎದುರಿಸಲಿದೆ. ಈ ಪಂದ್ಯಕ್ಕೂ ಮುನ್ನ ಸದ್ಯ ಎದ್ದಿರುವ ವದಂತಿಗೆ ತೆರೆ ಎಳೆಯುವ ಕೆಲಸ ಮಾಡಿರುವ ಲಕ್ನೋ ತಂಡದ ಮಾಲೀಕ ಸಂಜೀವ್ ಗೋಯೆಂಕಾ, ತಂಡದ ನಾಯಕ ಕೆಎಲ್ ರಾಹುಲ್​ರನ್ನು ತಮ್ಮ ಮನೆಗೆ ಆಹ್ವಾನಿಸಿ ಜೊತೆಗೆ ಭೋಜನ ಸವಿದಿದ್ದಾರೆ.

IPL 2024: ಊಟಕ್ಕೆ ಕರೆದು ಮನಸ್ತಾಪ ಶಮನ ಮಾಡಿದ ಸಂಜೀವ್ ಗೋಯೆಂಕಾ! ಫೋಟೋ ನೋಡಿ
ಸಂಜೀವ್ ಗೋಯೆಂಕಾ, ಕೆಎಲ್ ರಾಹುಲ್
Follow us on

ವಾರದ ಹಿಂದೆ ನಡೆದಿದ್ದ ಲಕ್ನೋ ಸೂಪರ್‌ಜೈಂಟ್ಸ್ (Lucknow Super Giants) ಫ್ರಾಂಚೈಸಿಯ ಮಾಲೀಕ ಸಂಜೀವ್ ಗೋಯೆಂಕಾ (Sanjiv Goenka) ಹಾಗೂ ತಂಡದ ನಾಯಕ ಕೆಎಲ್ ರಾಹುಲ್ (KL Rahul) ನಡುವಿನ ಬಹಿರಂಗ ವಾಕ್ಸಮರದ ವಿವಾದ ಕೊನೆಗೂ ಅಂತ್ಯಗೊಂಡಿದೆ ಕಾಣುತ್ತಿದೆ. ವಾರದಿಂದ ಈ ವಿಚಾರದ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಸಾಕಷ್ಟು ಊಹಾಪೋಹಗಳು ಎದ್ದಿದ್ದವು. ಇದೀಗ ಆ ಎಲ್ಲಾ ಊಹಾಪೋಹಗಳಿಗೆ ಈ ಇಬ್ಬರು ಪರಸ್ಪರ ಅಪ್ಪಿಕೊಳ್ಳುವ ಮೂಲಕ ತೆರೆ ಎಳೆದಿದ್ದಾರೆ. ವಾಸ್ತವವಾಗಿ ಲಕ್ನೋ ಸೂಪರ್‌ಜೈಂಟ್ಸ್ ತಂಡ ಇಂದು ಮಾಡು ಇಲ್ಲವೇ ಮಡಿ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ (Delhi Capitals vs Lucknow Super Giants) ತಂಡವನ್ನು ಎದುರಿಸಲಿದೆ. ಈ ಪಂದ್ಯಕ್ಕೂ ಮುನ್ನ ಸದ್ಯ ಎದ್ದಿರುವ ವದಂತಿಗೆ ತೆರೆ ಎಳೆಯುವ ಕೆಲಸ ಮಾಡಿರುವ ಲಕ್ನೋ ತಂಡದ ಮಾಲೀಕ ಸಂಜೀವ್ ಗೋಯೆಂಕಾ, ತಂಡದ ನಾಯಕ ಕೆಎಲ್ ರಾಹುಲ್​ರನ್ನು ತಮ್ಮ ಮನೆಗೆ ಆಹ್ವಾನಿಸಿ ಜೊತೆಗೆ ಭೋಜನ ಸವಿದಿದ್ದಾರೆ. ಜೊತೆಗೆ ಇಬ್ಬರು ಪರಸ್ಪರ ಅಪ್ಪಿಕೊಳ್ಳುವ ಮೂಲಕ ನಮ್ಮಿಬ್ಬರ ಯಾವ ಮನಸ್ತಾಪವೂ ಇಲ್ಲ ಎಂಬುದನ್ನು ಜಗಜ್ಜಾಹೀರು ಮಾಡಿದ್ದಾರೆ.

ಊಟಕ್ಕೆ ಆಹ್ವಾನ

ಸೋಶಿಯಲ್ ಮೀಡಿಯಾದಲ್ಲಿ ಸಂಜೀವ್ ಗೋಯೆಂಕಾ ಹಾಗೂ ಕೆಎಲ್ ರಾಹುಲ್ ಅವರ ಫೋಟೋವೊಂದು ಸಖತ್ ವೈರಲ್ ಆಗುತ್ತಿದ್ದು, ಈ ಫೋಟೋದಲ್ಲಿ ಸಂಜೀವ್ ಗೋಯೆಂಕಾ, ಕೆಎಲ್ ರಾಹುಲ್ ಅವರನ್ನು ಅಪ್ಪಿಕೊಂಡಿರುವುದನ್ನು ಸ್ಪಷ್ಟವಾಗಿ ಕಾಣಬಹುದಾಗಿದೆ. ಲಕ್ನೋ ಫ್ರಾಂಚೈಸಿಯ ಮಾಲೀಕ ಸಂಜೀವ್, ಕ್ಯಾಪ್ಟನ್ ರಾಹುಲ್ ಅವರನ್ನು ತಮ್ಮ ಮನೆಗೆ ಊಟಕ್ಕೆ ಆಹ್ವಾನಿಸಿದ ಸಂದರ್ಭದಲ್ಲಿ ಈ ಇಬ್ಬರು ಅಪ್ಪಿಕೊಂಡಿರುವ ಫೋಟೋವನ್ನು ಕ್ಲಿಕ್ಕಿಸಲಾಗಿದೆ. ಕೆಎಲ್ ರಾಹುಲ್ ಮನೆಗೆ ಬಂದ ತಕ್ಷಣ ಸಂಜೀವ್ ಗೋಯೆಂಕಾ ಅವರನ್ನು ಅಪ್ಪಿಕೊಂಡು ಸ್ವಾಗತಿಸಿದರು ಎಂಬುದನ್ನು ಫೋಟೋ ನೋಡಿ ಅಥೈಸಿಕೊಳ್ಳಬಹುದಾಗಿದೆ.

ವಾಸ್ತವವಾಗಿ ಕಳೆದ ವಾರ ನಡೆದ ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧದ ಪಂದ್ಯದ ನಂತರ ಲಕ್ನೋ ಸೂಪರ್ ಜೈಂಟ್ಸ್‌ ತಂಡದಲ್ಲಿ ಅಸಮಾಧಾನ ಬುಗಿಲೆದ್ದಿತ್ತು. ಹೈದರಾಬಾದ್‌ ವಿರುದ್ಧ ಲಕ್ನೋ ತಂಡ ಅನುಭವಿಸಿದ ಹೀನಾಯ ಸೋಲಿನ ನಂತರ ಸಂಜೀವ್ ಗೋಯೆಂಕಾ, ಕೆಎಲ್ ರಾಹುಲ್ ವಿರುದ್ಧ ಬಹಿರಂಗವಾಗಿಯೇ ಆಕ್ರೋಶ ಹೊರಹಾಕಿದ್ದರು. ಆ ನಂತರ ಲಕ್ನೋ ತಂಡದಲ್ಲಿ ಎಲ್ಲವೂ ಸರಿ ಇಲ್ಲ ಎಂಬ ವದಂತಿ ಹುಟ್ಟಿಕೊಂಡಿತ್ತು.

ಸಮಸ್ಯೆ ಇತ್ಯರ್ಥ

ಸಂಜೀವ್ ಗೋಯೆಂಕಾ ಮತ್ತು ಕೆಎಲ್ ರಾಹುಲ್ ನಡುವಿನ ಈ ಘಟನೆ ನಡೆದ ಬಳಿಕ ಕ್ರಿಕೆಟ್​ ವಲಯದಲ್ಲಿ ಸಾಕಷ್ಟು ಚರ್ಚೆ ಹುಟ್ಟಿಕೊಂಡಿತ್ತು. ಕೆಎಲ್ ರಾಹುಲ್ ತಂಡವನ್ನು ತೊರೆಯಲ್ಲಿದ್ದಾರೆ ಎಂಬ ವದಂತಿ ಮೊದಲು ಹುಟ್ಟಿಕೊಂಡಿತ್ತು. ಆ ಬಳಿಕ ಮಾಲೀಕ ಸಂಜೀವ್ ಗೋಯೆಂಕಾ ಅವರೇ ಕೆಎಲ್ ರಾಹುಲ್ ಅವರನ್ನು ನಾಯಕತ್ವದಿಂದ ಕೆಳಗಿಳಿಸಿ ತಂಡದಿಂದ ಹೊರಹಾಕುತ್ತಾರೆ ಎಂದು ಹೇಳಲಾಗುತ್ತಿತ್ತು. ಆದರೆ ಇಷ್ಟೆಲ್ಲಾ ಆದ ಮೇಲೆ ಈಗ ಬಂದಿರುವ ಫೋಟೋ ನೋಡಿದರೆ ಲಕ್ನೋ ತಂಡದಲ್ಲಿನ ಎಲ್ಲಾ ಸಮಸ್ಯೆಗಳು ಬಗೆಹರಿದಿವೆ ಎಂಬುದು ಸದ್ಯದ ಸುದ್ದಿಯಾಗಿದೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 5:31 pm, Tue, 14 May 24