Babar Azam: ಟಿ20 ಕ್ರಿಕೆಟ್ನಲ್ಲಿ ವಿಶ್ವ ದಾಖಲೆ ಬರೆದ ಬಾಬರ್ ಆಝಂ
Ireland vs Pakistan: ಪಾಕಿಸ್ತಾನ್ ವಿರುದ್ಧದ ಮೂರು ಪಂದ್ಯಗಳ ಟಿ20 ಸರಣಿಯ ಮೊದಲ ಪಂದ್ಯದಲ್ಲಿ ಐರ್ಲೆಂಡ್ ತಂಡ ಜಯ ಸಾಧಿಸಿದೆ. ಇನ್ನು 2ನೇ ಪಂದ್ಯದಲ್ಲಿ ಪಾಕಿಸ್ತಾನ್ ಗೆಲುವು ದಾಖಲಿಸಿದೆ. ಇದೀಗ 3ನೇ ಪಂದ್ಯದಲ್ಲಿ ಗೆಲ್ಲುವ ತಂಡ ಸರಣಿ ಜಯಿಸಲಿದ್ದು, ಈ ಮೂಲಕ ಐರ್ಲೆಂಡ್ ಹೊಸ ಇತಿಹಾಸ ಬರೆಯಲಿದೆಯಾ ಕಾದು ನೋಡಬೇಕಿದೆ.
Updated on:May 16, 2024 | 12:33 PM

ಐರ್ಲೆಂಡ್ ವಿರುದ್ಧದ ಮೂರು ಪಂದ್ಯಗಳ ಟಿ20 ಸರಣಿಯ 2ನೇ ಪಂದ್ಯದಲ್ಲಿ ಪಾಕಿಸ್ತಾನ್ ತಂಡ ಜಯ ಸಾಧಿಸಿದೆ. ಡಬ್ಲಿನ್ನಲ್ಲಿ ನಡೆದ ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಐರ್ಲೆಂಡ್ ತಂಡವು 20 ಓವರ್ಗಳಲ್ಲಿ 7 ವಿಕೆಟ್ ಕಳೆದುಕೊಂಡು 193 ರನ್ ಕಲೆಹಾಕಿತು.

ಈ 194 ರನ್ಗಳ ಟಾರ್ಗೆಟ್ ಬೆನ್ನತ್ತಿದ ಪಾಕಿಸ್ತಾನ್ ತಂಡವು 16.5 ಓವರ್ಗಳಲ್ಲಿ ಗುರಿ ಮುಟ್ಟುವ ಮೂಲಕ 7 ವಿಕೆಟ್ಗಳ ಭರ್ಜರಿ ಜಯ ಸಾಧಿಸಿದೆ. ಈ ಗೆಲುವಿನೊಂದಿಗೆ ಟಿ20 ಕ್ರಿಕೆಟ್ನಲ್ಲಿ ಅತ್ಯಧಿಕ ಪಂದ್ಯಗಳನ್ನು ಗೆದ್ದ ಕ್ಯಾಪ್ಟನ್ ಎಂಬ ವಿಶ್ವ ದಾಖಲೆ ಬಾಬರ್ ಆಝಂ ಪಾಲಾಗಿದೆ.

ಇದಕ್ಕೂ ಮುನ್ನ ಈ ವರ್ಲ್ಡ್ ರೆಕಾರ್ಡ್ ಉಗಾಂಡಾ ತಂಡದ ನಾಯಕ ಬ್ರಿಯಾನ್ ಮಸಾಬಾ ಹೆಸರಿನಲ್ಲಿತ್ತು. 56 ಪಂದ್ಯಗಳಲ್ಲಿ ಉಗಾಂಡಾ ತಂಡವನ್ನು ಮುನ್ನಡೆಸಿರುವ ಮಸಾಬಾ 44 ಮ್ಯಾಚ್ಗಳಲ್ಲಿ ಗೆಲುವಿನ ರುಚಿ ನೋಡಿದ್ದರು. ಇದೀಗ ಈ ದಾಖಲೆಯನ್ನು ಮುರಿಯುವಲ್ಲಿ ಬಾಬರ್ ಯಶಸ್ವಿಯಾಗಿದ್ದಾರೆ.

ಪಾಕಿಸ್ತಾನ್ ತಂಡವನ್ನು ಈವರೆಗೆ 78 ಪಂದ್ಯಗಳಲ್ಲಿ ಮುನ್ನಡೆಸಿರುವ ಬಾಬರ್ ಆಝಂ ಒಟ್ಟು 45 ಗೆಲುವು ಸಾಧಿಸಿದ್ದಾರೆ. ಈ ಮೂಲಕ ಟಿ20 ಕ್ರಿಕೆಟ್ನ ಅತ್ಯಂತ ಯಶಸ್ವಿ ನಾಯಕರಾಗಿ ಹೊರಹೊಮ್ಮಿದ್ದಾರೆ. ಇನ್ನು ಬಾಬರ್ ಹೆಸರಿಗೆ ಸೇರ್ಪಡೆಯಾಗಿರುವ ಈ ವಿಶ್ವ ದಾಖಲೆಯನ್ನು ಮುರಿಯುವ ಅವಕಾಶ ರೋಹಿತ್ ಶರ್ಮಾ ಮುಂದಿದೆ.

ಅಂದರೆ ಮುಂಬರುವ ಟಿ20 ವಿಶ್ವಕಪ್ನಲ್ಲಿ ಭಾರತ ತಂಡವು ಸತತ ಗೆಲುವು ಸಾಧಿಸಿದರೆ ರೋಹಿತ್ ಶರ್ಮಾ ಟಿ20 ಕ್ರಿಕೆಟ್ನ ಅತ್ಯಂತ ಯಶಸ್ವಿ ನಾಯಕರೆನಿಸಿಕೊಳ್ಳಲಿದ್ದಾರೆ. ಭಾರತ ತಂಡವು 54 ಟಿ20 ಪಂದ್ಯಗಳಲ್ಲಿ ರೋಹಿತ್ ಶರ್ಮಾ ಸಾರಥ್ಯದಲ್ಲಿ ಕಣಕ್ಕಿಳಿದಿದ್ದು, ಈ ವೇಳೆ ಟೀಮ್ ಇಂಡಿಯಾ 42 ಮ್ಯಾಚ್ಗಳಲ್ಲಿ ಜಯ ಸಾಧಿಸಿದೆ.

ಇನ್ನು ರೋಹಿತ್ ಶರ್ಮಾ ನಾಯಕತ್ವದಲ್ಲಿ ಭಾರತ ತಂಡವು 4 ಪಂದ್ಯಗಳಲ್ಲಿ ಜಯ ಸಾಧಿಸಿದರೆ ಬಾಬರ್ ಆಝಂ ಅವರನ್ನು ಹಿಂದಿಕ್ಕಿ ಹಿಟ್ಮ್ಯಾನ್ ಟಿ20 ಕ್ರಿಕೆಟ್ನ ಅತ್ಯಂತ ಯಶಸ್ವಿ ಕಪ್ತಾನನಾಗಿ ಹೊರಹೊಮ್ಮಲಿದ್ದಾರೆ. ಹೀಗಾಗಿ ಇಂತಹದೊಂದು ವಿಶ್ವ ದಾಖಲೆಯನ್ನು ಈ ಬಾರಿಯ ಟಿ20 ವಿಶ್ವಕಪ್ನಲ್ಲಿ ನಿರೀಕ್ಷಿಸಬಹುದು.
Published On - 2:33 pm, Tue, 14 May 24
