IPL 2024: RCB ತಂಡದ 18ರ ಲೆಕ್ಕಾಚಾರ: ಈ ಸಲ ಗೆಲುವು ನಮ್ದೆ
IPL 2024 RCB vs CSK: ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ (ಐಪಿಎಲ್) RCB ಮತ್ತು CSK ತಂಡಗಳು ಈವರೆಗೆ 32 ಪಂದ್ಯಗಳಲ್ಲಿ ಮುಖಾಮುಖಿಯಾಗಿವೆ. ಈ ವೇಳೆ ಆರ್ಸಿಬಿ ತಂಡ 10 ಪಂದ್ಯಗಳಲ್ಲಿ ಜಯ ಸಾಧಿಸಿದರೆ, ಸಿಎಸ್ಕೆ 21 ಮ್ಯಾಚ್ಗಳನ್ನು ಗೆದ್ದುಕೊಂಡಿದೆ. ಇನ್ನು ಒಂದು ಪಂದ್ಯವು ಕಾರಣಾಂತರಗಳಿಂದ ರದ್ದಾಗಿತ್ತು. ವಿಶೇಷ ಎಂದರೆ ಈ 32 ಪಂದ್ಯಗಳಲ್ಲಿ ಮೇ 18 ರಂದು 2 ಮ್ಯಾಚ್ಗಳು ನಡೆದಿದೆ. ಈ ಎರಡೂ ಪಂದ್ಯಗಳಲ್ಲೂ ಆರ್ಸಿಬಿ ಜಯಭೇರಿ ಬಾರಿಸಿದೆ.
Updated on:May 15, 2024 | 2:49 PM

ಐಪಿಎಲ್ನ (IPL 2024) 68ನೇ ಪಂದ್ಯದಲ್ಲಿ ಆರ್ಸಿಬಿ (RCB) ಮತ್ತು ಸಿಎಸ್ಕೆ (CSK) ತಂಡಗಳು ಮುಖಾಮುಖಿಯಾಗಲಿದೆ. ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಮೇ 18 ರಂದು ನಡೆಯಲಿರುವ ಈ ಪಂದ್ಯವು ಉಭಯ ತಂಡಗಳ ಪಾಲಿಗೆ ನಿರ್ಣಾಯಕ. ಅಂದರೆ ಪ್ಲೇಆಫ್ ರೇಸ್ನಲ್ಲಿ ಉಳಿಯಬೇಕಿದ್ದರೆ ಈ ಪಂದ್ಯದಲ್ಲಿ ಗೆಲ್ಲಲೇಬೇಕು. ಹೀಗಾಗಿಯೇ ಉಭಯ ತಂಡಗಳ ಅಭಿಮಾನಿಗಳು ನಾನಾ ಲೆಕ್ಕಾಚಾರಗಳಲ್ಲಿ ತೊಡಗಿಸಿಕೊಂಡಿದ್ದಾರೆ.

ಈ ಲೆಕ್ಕಾಚಾರಗಳ ನಡುವೆ ಈ ಸಲ ಗೆಲುವು ಆರ್ಸಿಬಿ ತಂಡದ್ದೇ ಎಂಬ ವಾದವನ್ನು ಮುಂದಿಡಲಾಗುತ್ತಿದೆ. ಇದಕ್ಕೆ ಕಾರಣ ಪಂದ್ಯ ನಡೆಯುತ್ತಿರುವುದು ಮೇ 18 ರಂದು. ಅಂದರೆ ಮೇ 18 ರಂದು ಆರ್ಸಿಬಿ ಈವರೆಗೆ 4 ಪಂದ್ಯಗಳನ್ನಾಡಿದೆ.

2013 ರ ಮೇ 18 ರಂದು ಸಿಎಸ್ಕೆ ವಿರುದ್ಧ ಆರ್ಸಿಬಿ ಜಯ ಸಾಧಿಸಿತ್ತು. ಇದಾದ ಬಳಿಕ 2014 ರಲ್ಲೂ ಮೇ 18 ರಂದು ಸಿಎಸ್ಕೆ ತಂಡಕ್ಕೆ ಸೋಲುಣಿಸುವಲ್ಲಿ ಆರ್ಸಿಬಿ ಯಶಸ್ವಿಯಾಗಿತ್ತು. ಇನ್ನು 2016 ರ ಮೇ 18 ರಂದು ಪಂಜಾಬ್ ಕಿಂಗ್ಸ್ ವಿರುದ್ಧ ಆರ್ಸಿಬಿ ಜಯ ಸಾಧಿಸಿತ್ತು. 2023 ರ ಮೇ 18 ರಂದು ಎಸ್ಆರ್ಹೆಚ್ ವಿರುದ್ಧ ಆರ್ಸಿಬಿ ಗೆದ್ದು ಬೀಗಿತ್ತು.

ಇದೀಗ ಮೇ 18ರಂದೇ ಆರ್ಸಿಬಿ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಎದುರಿಸುತ್ತಿದೆ. ಈ ಹಿಂದೆ ಇದೇ ದಿನಾಂಕದಂದು ಸಿಎಸ್ಕೆಗೆ ಆರ್ಸಿಬಿ ಎರಡು ಬಾರಿ ಸೋಲುಣಿಸಿತ್ತು. ಹೀಗಾಗಿ ಈ ಬಾರಿ ಕೂಡ ಗೆಲುವು ಆರ್ಸಿಬಿ ತಂಡದ್ದೇ ಎಂಬ ವಾದವನ್ನು ಅಭಿಮಾನಿಗಳು ಮುಂದಿಡುತ್ತಿದ್ದಾರೆ.

ಇನ್ನು ಮೇ 18 ರಂದು ವಿರಾಟ್ ಕೊಹ್ಲಿ ಕೂಡ ಭರ್ಜರಿ ಪ್ರದರ್ಶನ ನೀಡಿದ ಇತಿಹಾಸವಿದೆ. ಐಪಿಎಲ್ನಲ್ಲಿ ಕಿಂಗ್ ಕೊಹ್ಲಿ ಮೇ 18 ರಂದು 4 ಪಂದ್ಯಗಳನ್ನಾಡಿದ್ದಾರೆ. ಈ ವೇಳೆ ಸಿಎಸ್ಕೆ ವಿರುದ್ಧ 56* (29), 27 (29) ರನ್ ಕಲೆಹಾಕಿದರೆ, ಪಂಜಾಬ್ ಕಿಂಗ್ಸ್ ವಿರುದ್ಧ 113 (50) ರನ್ ಬಾರಿಸಿದ್ದರು. ಹಾಗೆಯೇ ಕಳೆದ ಸೀಸನ್ನಲ್ಲಿ ಎಸ್ಆರ್ಹೆಚ್ 100 (63) ರನ್ ಬಾರಿಸಿ ಅಬ್ಬರಿಸಿದ್ದರು. ಹೀಗಾಗಿ ಮೇ 18 ರಂದು ಮತ್ತೊಮ್ಮೆ ಕಿಂಗ್ ಕೊಹ್ಲಿ ಬ್ಯಾಟ್ನಿಂದ ಭರ್ಜರಿ ಪ್ರದರ್ಶನವನ್ನು ನಿರೀಕ್ಷಿಸಬಹುದು.

ಇಲ್ಲಿ ಮತ್ತೊಂದು ಇಂಟ್ರೆಸ್ಟಿಂಗ್ ವಿಷಯ ಎಂದರೆ, ಈ ಪಂದ್ಯದಲ್ಲಿ ಆರ್ಸಿಬಿ ಕನಿಷ್ಠ 18 ರನ್ಗಳ ಅಂತರದಿಂದ ಗೆದ್ದರೆ ಸಿಎಸ್ಕೆ ತಂಡದ ನೆಟ್ ರನ್ ರೇಟ್ ಅನ್ನು ಹಿಂದಿಕ್ಕಬಹುದು. ಒಂದು ವೇಳೆ ಆರ್ಸಿಬಿ ಚೇಸ್ ಮಾಡಿದರೆ 18.1 ಓವರ್ಗಳಲ್ಲಿ ಗುರಿ ಮುಟ್ಟುವ ಮೂಲಕ ಸಿಎಸ್ಕೆ ತಂಡವನ್ನು ಅಂಕ ಪಟ್ಟಿಯಲ್ಲಿ ಹಿಂದಿಕ್ಕಬಹುದು. ಕಾಕತಾಳೀಯ ಎಂಬಂತೆ ಇಲ್ಲೂ ಕೂಡ 18ರ ಲೆಕ್ಕಾಚಾರ ಕಾಣಿಸಿಕೊಂಡಿದೆ.

ಈ ಎಲ್ಲಾ ಕಾರಣಗಳಿಂದಾಗಿ ಇದೀಗ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧದ ನಿರ್ಣಾಯಕ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಗೆಲ್ಲುವ ನಿರೀಕ್ಷೆಯನ್ನು ಅಭಿಮಾನಿಗಳು ವ್ಯಕ್ತಪಡಿಸುತ್ತಿದ್ದಾರೆ. ಈ ನಿರೀಕ್ಷೆಯೊಂದಿಗೆ ಆರ್ಸಿಬಿ ಈ ಬಾರಿ ಪ್ಲೇಆಫ್ಗೆ ಎಂಟ್ರಿ ಕೊಡಲಿದೆಯಾ ಕಾದು ನೋಡಬೇಕಿದೆ.
Published On - 1:07 pm, Tue, 14 May 24
