IPL 2024: ಮುಂಬೈ ವಿರುದ್ಧ ಟಾಸ್ ವಿಚಾರದಲ್ಲೂ ಆರ್​ಸಿಬಿಗೆ ಮೋಸ? ವಿಡಿಯೋ ವೈರಲ್

|

Updated on: Apr 13, 2024 | 5:49 PM

IPL 2024 MI vs RCB: ಈ ಹೈವೋಲ್ಟೇಜ್ ಪಂದ್ಯ ಸಾಕಷ್ಟು ವಿವಾದಗಳ ಸುಳಿಯಲ್ಲಿ ಸಿಕ್ಕಿಹಾಕಿಕೊಂಡಿದೆ. 2 ದಿನಗಳ ಹಿಂದೆ ಪಂದ್ಯ ನಡೆದಿದ್ದು, ವಿವಾದ ಇನ್ನೂ ಮುಂದುವರಿದಿದೆ. ಈ ಪಂದ್ಯದಲ್ಲಿ ಅಂಪೈರ್‌ಗಳು ಮಾಡಿದ ತಪ್ಪು ಪ್ರಮುಖ ಹೈಲೇಟ್ ಆಗಿತ್ತು.

IPL 2024: ಮುಂಬೈ ವಿರುದ್ಧ ಟಾಸ್ ವಿಚಾರದಲ್ಲೂ ಆರ್​ಸಿಬಿಗೆ ಮೋಸ? ವಿಡಿಯೋ ವೈರಲ್
ಆರ್​ಸಿಬಿ- ಮುಂಬೈ
Follow us on

ಏಪ್ರಿಲ್ 11 ರಂದು ನಡೆದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಮುಂಬೈ ಇಂಡಿಯನ್ಸ್ (RCB vs MI ) ನಡುವಿನ ಐಪಿಎಲ್ 2024 (IPL 2024) ರ 25 ನೇ ಪಂದ್ಯ ಆಟದ ಹೊರತಾಗಿ ಇತರೆ ಕಾರಣಗಳಿಂದಲೇ ಹೆಚ್ಚು ಸುದ್ದಿಯಾಗುತ್ತಿದೆ. ಈ ಪಂದ್ಯದಲ್ಲಿ ಉಭಯ ತಂಡಗಳ ಬ್ಯಾಟಿಂಗ್ ವಿಭಾಗ ಅದ್ಭುತ ಪ್ರದರ್ಶನ ನೀಡಿತ್ತು. ಎರಡೂ ತಂಡಗಳು 200 ರ ಹತ್ತಿರ ರನ್ ಕಲೆಹಾಕಿದ್ದವು. ಆರ್​ಸಿಬಿ ಪರ ಈ ಪಂದ್ಯದಲ್ಲಿ ಮೂವರು ಬ್ಯಾಟರ್​ಗಳು ಅರ್ಧಶತಕ ಸಿಡಿಸಿ ದಾಖಲೆ ಬರೆದಿದ್ದರೆ, ಇನ್ನೊಂದೆಡೆ ಮುಂಬೈ ತಂಡ ಕೇವಲ 15.3 ಓವರ್​ಗಳಲ್ಲಿ ಗುರಿ ಬೆನ್ನಟ್ಟಿ ಇನ್ನೊಂದು ದಾಖಲೆ ಬರೆದಿತ್ತು. ಇದರ ಹೊರತಾಗಿಯೂ ಈ ಪಂದ್ಯ ಕೆಲವು ವಿವಾದಗಳಿಂದ ಈಗಲೂ ಸುದ್ದಿಯಲ್ಲಿದೆ. ಇದೆಲ್ಲದರ ನಡುವೆ ಇದೀಗ ಹೊಸ ವಿಡಿಯೋವೊಂದು ವೈರಲ್ ಆಗುತ್ತಿದ್ದು, ಪಂದ್ಯದಲ್ಲಿ ಮಾತ್ರವಲ್ಲದೆ ಆರ್​ಸಿಬಿಗೆ ಟಾಸ್ ಸಮಯದಲ್ಲೂ ಮೋಸ ಆಗಿದೆ ಎಂದು ನೆಟ್ಟಿಗರು ದೂರುತ್ತಿದ್ದಾರೆ.

ಅಂಪೈರ್ ವಿರುದ್ಧ ಗಂಭೀರ ಆರೋಪ

ಮೇಲೆ ಹೇಳಿದಂತೆ ಈ ಹೈವೋಲ್ಟೇಜ್ ಪಂದ್ಯ ಸಾಕಷ್ಟು ವಿವಾದಗಳ ಸುಳಿಯಲ್ಲಿ ಸಿಕ್ಕಿಹಾಕಿಕೊಂಡಿದೆ. 2 ದಿನಗಳ ಹಿಂದೆ ಪಂದ್ಯ ನಡೆದಿದ್ದು, ವಿವಾದ ಇನ್ನೂ ಮುಂದುವರಿದಿದೆ. ಈ ಪಂದ್ಯದಲ್ಲಿ ಅಂಪೈರ್‌ಗಳು ಮಾಡಿದ ತಪ್ಪು ಪ್ರಮುಖ ಹೈಲೇಟ್ ಆಗಿತ್ತು. ಪಂದ್ಯದಲ್ಲಿ, ಆನ್-ಫೀಲ್ಡ್ ಅಂಪೈರ್ ನಿತಿನ್ ಮೆನನ್ ಆರ್​ಸಿಬಿ ವಿರುದ್ಧ ಒಂದಲ್ಲ, ಎರಡಲ್ಲ, ಬರೋಬ್ಬರಿ 4 ತಪ್ಪು ನಿರ್ಧಾರಗಳನ್ನು ನೀಡಿ ಆರ್​ಸಿಬಿ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿದ್ದರು.

ಈ ಪಂದ್ಯದ ಬಳಿಕ ಅಂಪೈರ್‌ ನಿತಿನ್​ಗೆ ನಿಷೇಧ ಹೇರಬೇಕೆಂಬ ಆಗ್ರಹವೂ ಇದೆ. ಈಗ ಹೊಸ ವಿವಾದ ಹುಟ್ಟಿಕೊಂಡಿದ್ದು, ಟಾಸ್ ವೇಳೆ ಸ್ಥಳದಲ್ಲಿದ್ದ ಮ್ಯಾಚ್ ರೆಫರಿ ಜಾವಗಲ್ ಶ್ರೀನಾಥ್ ಟಾಸ್ ಟ್ಯಾಂಪರಿಂಗ್ ಮಾಡಿದ್ದಾರೆ ಎಂಬ ಆರೋಪ ಕೇಳಿ ಬರುತ್ತಿದೆ. ಅಂದರೆ ಟಾಸ್ ಮುಗಿದ ಬಳಿಕ ಯಾವ ತಂಡದ ಪರ ಟಾಸ್ ಬಿದ್ದಿದೆ ಎಂಬುದನ್ನು ಪರಿಶೀಲಿಸಿದ ಮ್ಯಾಚ್ ರೆಫರಿ, ಟಾಸ್ ಆರ್​ಸಿಬಿ ಪರ ಬಿದ್ದಿದ್ದರೂ, ಮುಂಬೈ ಪರ ಟಾಸ್ ಬಿದ್ದಿದೆ ಎಂದು ಸುಳ್ಳು ಹೇಳಿದ್ದಾರೆ ಎಂದು ಆರೋಪಿಸಲಾಗುತ್ತಿದೆ.

ಆರ್​ಸಿಬಿ ಅಭಿಮಾನಿಗಳ ಆಕ್ರೋಶ

ಈ ವೈರಲ್ ವೀಡಿಯೋದಲ್ಲಿರುವಂತೆ ಮ್ಯಾಚ್ ರೆಫರಿ ಜಾವಗಲ್ ಶ್ರೀನಾಥ್ ನಾಣ್ಯ ಟಾಸ್ ರಿವರ್ಸ್ ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ. ಈ ಘಟನೆಯೂ ಸಹ ಕ್ಯಾಮರಾದಲ್ಲಿ ಸೆರೆಯಾಗಿದೆ. ಆದರೆ ಚಿತ್ರವು ಮಸುಕಾಗಿರುವ ಕಾರಣ, ಅವರು ನಾಣ್ಯವನ್ನು ತಿರುಗಿಸಿದ್ದಾರೆಯೇ ಅಥವಾ ಇಲ್ಲವೇ ಎಂದು ಸ್ಪಷ್ಟವಾಗಿ ಹೇಳಲಾಗುವುದಿಲ್ಲ. ಆದರೆ ಈ ವೈರಲ್ ವೀಡಿಯೊವನ್ನು ನೋಡಿದ ನಂತರ, ಖಂಡಿತವಾಗಿಯೂ ಪ್ರಶ್ನೆಗಳು ಉದ್ಭವಿಸಲು ಪ್ರಾರಂಭಿಸಿವೆ. ಮುಂಬೈ ಇಂಡಿಯನ್ಸ್ ವಿರುದ್ಧದ ಈ ಪಂದ್ಯದಲ್ಲಿ ಆರ್‌ಸಿಬಿಗೆ ಒಂದಲ್ಲ ಹಲವು ಬಾರಿ ಮೋಸ ಆಗಿದೆ ಎಂದು ಸಾಮಾಜಿಕ ಜಾಲತಾಣದ ಅಭಿಮಾನಿಗಳು ಈ ವಿಡಿಯೋವನ್ನು ಆಧರಿಸಿ ಹೇಳುತ್ತಿದ್ದಾರೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 5:47 pm, Sat, 13 April 24