IPL 2024: ಮುಂಬರುವ ಐಪಿಎಲ್​ಗೆ ನೂತನ ಜೆರ್ಸಿ ಬಿಡುಗಡೆಗೊಳಿಸಿದ ಮುಂಬೈ ಇಂಡಿಯನ್ಸ್

IPL 2024, Mumbai Indians: ಮುಂಬೈ ಇಂಡಿಯನ್ಸ್ ಫ್ರಾಂಚೈಸಿ ತಮ್ಮ ಹೊಸ ಕಿಟ್ ತಯಾರಕರಾದ ಸ್ಕೆಚರ್ಸ್‌ನ ಸಹಯೋಗದೊಂದಿಗೆ ಮುಂಬರುವ ಐಪಿಎಲ್​ಗೆ ತಮ್ಮ ಹೊಸ ಜೆರ್ಸಿಯನ್ನು ಬಿಡುಗಡೆ ಮಾಡಿದೆ. ಖ್ಯಾತ ವಿನ್ಯಾಸಕಿ ಮೋನಿಶಾ ಜೈಸಿಂಗ್ ಅವರು ಅಂಭಾನಿ ತಂಡದ ನೂತನ ಜೆರ್ಸಿಯನ್ನು ವಿನ್ಯಾಸಗೊಳಿಸಿರುವುದು ವಿಶೇಷವಾಗಿದೆ.

IPL 2024: ಮುಂಬರುವ ಐಪಿಎಲ್​ಗೆ ನೂತನ ಜೆರ್ಸಿ ಬಿಡುಗಡೆಗೊಳಿಸಿದ ಮುಂಬೈ ಇಂಡಿಯನ್ಸ್
ಮುಂಬೈ ಇಂಡಿಯನ್ಸ್ ಜೆರ್ಸಿ
Edited By:

Updated on: Mar 07, 2024 | 7:52 PM

17ನೇ ಆವೃತ್ತಿಯ ಐಪಿಎಲ್​ಗೆ (IPL 2024) ದಿನಗಣನೆ ಶುರುವಾಗಿದೆ. ಹೀಗಾಗಿ ಎಲ್ಲಾ ತಂಡಗಳು ಅಂತಿಮ ಸಿದ್ಧತೆಯತ್ತ ದೃಷ್ಟಿ ನೆಟ್ಟಿವೆ. ಈ ನಡುವೆ ಲೀಗ್​​ನ ಅತ್ಯಂತ ಯಶಸ್ವಿ ತಂಡ ಮುಂಬೈ ಇಂಡಿಯನ್ಸ್ (Mumbai Indians)​ ಮುಂಬರುವ ಲೀಗ್​ಗೆ ಹೊಸ ಜೆರ್ಸಿಯನ್ನು (New Jersey) ಅನಾವರಣಗೊಳಿಸಿದೆ. ವಾಸ್ತವವಾಗಿ ಟೂರ್ನಿ ಆರಂಭಕ್ಕೂ ಮುನ್ನವೆ ಸಾಕಷ್ಟು ವದಂತಿಗಳಿಂದ ಐಪಿಎಲ್​ ಲೋಕದಲ್ಲಿ ಸುದ್ದಿಯಾಗಿರುವ ಮುಂಬೈ ಫ್ರಾಂಚೈಸಿ, ತನ್ನ ತಂಡದ ಅತ್ಯಂತ ಯಶಸ್ವಿ ನಾಯಕ ರೋಹಿತ್ ಶರ್ಮಾರನ್ನು (Rohit Sharma) ನಾಯಕತ್ವದಿಂದ ಕೆಳಗಿಳಿಸಿ ತಂಡದ ಮಾಜಿ ಆಟಗಾರ ಹಾರ್ದಿಕ್ ಪಾಂಡ್ಯಗೆ (Hardik Pandya) ಈ ಅಧಿಕಾರ ನೀಡಿತ್ತು. ಆ ಬಳಿಕ ರೋಹಿತ್ ಶರ್ಮಾ ಹಾಗೂ ಮುಂಬೈ ನಡುವೆ ಸಂಬಂಧ ಅಳಸಿದೆ ಎಂಬ ಮಾತು ಕೇಳಿಬಂದಿತ್ತು. ಅದಕ್ಕೆಲ್ಲ ಸೊಪ್ಪು ಹಾಕದ ಫ್ರಾಂಚೈಸಿ ಇದೀಗ ಉಳಿದ ತಂಡಗಳಿಗೂ ಮೊದಲು ತನ್ನ ತಂಡದ ಹೊಸ ಜೆರ್ಸಿಯನ್ನು ಬಿಡುಗಡೆಗೊಳಿಸಿದೆ.

ಹೊಸ ಜೆರ್ಸಿಯಲ್ಲಿ ಏನಿದೆ?

ಮುಂಬೈ ಇಂಡಿಯನ್ಸ್ ಫ್ರಾಂಚೈಸಿ ತಮ್ಮ ಹೊಸ ಕಿಟ್ ತಯಾರಕರಾದ ಸ್ಕೆಚರ್ಸ್‌ನ ಸಹಯೋಗದೊಂದಿಗೆ ಮುಂಬರುವ ಐಪಿಎಲ್​ಗೆ ತಮ್ಮ ಹೊಸ ಜೆರ್ಸಿಯನ್ನು ಬಿಡುಗಡೆ ಮಾಡಿದೆ. ಖ್ಯಾತ ವಿನ್ಯಾಸಕಿ ಮೋನಿಶಾ ಜೈಸಿಂಗ್ ಅವರು ಅಂಭಾನಿ ತಂಡದ ನೂತನ ಜೆರ್ಸಿಯನ್ನು ವಿನ್ಯಾಸಗೊಳಿಸಿರುವುದು ವಿಶೇಷವಾಗಿದೆ. ಹಳೆಯ ಜೆರ್ಸಿಗೂ ಹಾಗೂ ಈಗ ಬಿಡುಗಡೆಯಾಗಿರುವ ಹೊಸ ಜೆರ್ಸಿಗು ಹೆಚ್ಚು ವ್ಯತ್ಯಾಸಗಳಿಲ್ಲ. ನೂತನ ಜೆರ್ಸಿಯ ಮಧ್ಯ ಭಾಗದಲ್ಲಿ ಸಾಮಾನ್ಯ ರಾಯಲ್ ನೀಲಿ ಬಣ್ಣವನ್ನು ಹೊಂದಿದ್ದು, ಭುಜ ಮತ್ತು ಶರ್ಟ್‌ನ ಬದಿಗಳಲ್ಲಿ ಚಿನ್ನದ ಪಟ್ಟೆಗಳನ್ನು ಹೊಂದಿದೆ. ಹಾಗೆಯೇ ಜೆರ್ಸಿಯ ತುಂಬ ಎಮ್ ಅಕ್ಷರವನ್ನು ಕಾಣಬಹುದಾಗಿದೆ. ಉಳಿದಂತೆ ಜೆರ್ಸಿಯಲ್ಲಿ ಅಂತಹ ದೊಡ್ಡ ಬದಲಾವಣೆಗಳಾಗಿಲ್ಲ.

ಇನ್ನು ನೂತನ ಜೆರ್ಸಿಯನ್ನು ಬಿಡುಗಡೆಗೊಳಿಸಿ ಮಾತನಾಡಿದ ಮುಂಬೈ ಫ್ರಾಂಚೈಸಿಯ ವಕ್ತಾರರು, ನಮ್ಮ ಆಟಗಾರರು ಐಕಾನಿಕ್ ನೀಲಿ ಮತ್ತು ಚಿನ್ನದ ಬಣ್ಣದ ಜೆರ್ಸಿಯನ್ನು ಧರಿಸುವುದರಿಂದ ನಮ್ಮ ತಂಡದ ಭರವಸೆ ಮತ್ತು ಕನಸುಗಳನ್ನು ತಮ್ಮೊಂದಿಗೆ ಕೊಂಡೊಯ್ಯುತ್ತಾರೆ. ಇದು ‘ಮುಂಬೈ ಮೇರಿ ಜಾನ್’ ಸ್ಫೂರ್ತಿಯಿಂದ ಉತ್ತೇಜಿಸಲ್ಪಟ್ಟಿದೆ. ಜರ್ಸಿಯು ಗೌರವದ ಬ್ಯಾಡ್ಜ್ ಆಗಿದೆ, ಅದನ್ನು ಧರಿಸುವ ಎಲ್ಲರಿಗೂ ಹೆಮ್ಮೆಯ ಸಂಕೇತವಾಗಿದೆ ಎಂದಿದ್ದಾರೆ.

ಗುಜರಾತ್ ವಿರುದ್ಧ ಮೊದಲ ಪಂದ್ಯ

ಮೇಲೆ ಹೇಳಿದಂತೆ ಈ ಆವೃತ್ತಿಯಿಂದ ಮುಂಬೈ ಇಂಡಿಯನ್ಸ್ ತಂಡದ ನಾಯಕನಾಗಿ ಹಾರ್ದಿಕ್ ಪಾಂಡ್ಯ ಕಾಣಿಸಿಕೊಳ್ಳಲಿದ್ದಾರೆ. ಹಾಗೆಯೇ ಮಾರ್ಚ್ 24 ರ ಭಾನುವಾರದಂದು ಅಹಮದಾಬಾದ್‌ನಲ್ಲಿ ನಡೆಯಲ್ಲಿರುವ ತಮ್ಮ ಮೊದಲ ಪಂದ್ಯದಲ್ಲಿ ಕಳೆದ ಬಾರಿಯ ಹಾಗೂ ಹಾರ್ದಿಕ್ ಪಾಂಡ್ಯ ಮುನ್ನಡೆಸಿದ್ದ ಮಾಜಿ ತಂಡವಾದ ಗುಜರಾತ್ ಟೈಟಾನ್ಸ್ ತಂಡವನ್ನು ಎದುರಿಸುವುದರಿಂದ ಈ ಲೀಗ್ ಆರಂಭಿಸಲಿದೆ.

ಮುಂಬೈ ಇಂಡಿಯನ್ಸ್ ತಂಡ: ರೋಹಿತ್ ಶರ್ಮಾ, ಸೂರ್ಯಕುಮಾರ್ ಯಾದವ್, ಇಶಾನ್ ಕಿಶನ್, ಎನ್ ತಿಲಕ್ ವರ್ಮಾ, ಹಾರ್ದಿಕ್ ಪಾಂಡ್ಯ (ನಾಯಕ), ಅರ್ಜುನ್ ತೆಂಡೂಲ್ಕರ್, ಕುಮಾರ್ ಕಾರ್ತಿಕೇಯ, ಆಕಾಶ್ ಮಧ್ವಾಲ್, ನೆಹಾಲ್ ವಧೇರಾ, ಶಮ್ಸ್ ಮುಲಾನಿ, ವಿಷ್ಣು ವಿನೋದ್, ಪಿಯೂಷ್ ಚಾವ್ಲಾ, ಡೆವಾಲ್ಡ್ ಬ್ರೆವಿಸ್, ಜೇಸನ್ ಬೆಹ್ರೆಂಡಾರ್ಫ್, ರೊಮಾರಿಯೋ ಶೆಫರ್ಡ್, ಜೆರಾಲ್ಡ್ ಕೋಟ್ಜಿ, ದಿಲ್ಶನ್ ಮಧುಶಂಕ, ಶ್ರೇಯಸ್ ಗೋಪಾಲ್, ನುವಾನ್ ತುಷಾರ, ಅನ್ಶುಲ್ ಕಾಂಬೋಜ್, ನಮನ್ ಧೀರ್, ಮೊಹಮ್ಮದ್ ನಬಿ, ಶಿವಾಲಿಕ್ ಶರ್ಮಾ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ