IPL 2024: 4 6 6 6 4 6…! ಒಂದೇ ಓವರ್​ನಲ್ಲಿ 32 ರನ್ ಚಚ್ಚಿದ ವಿಂಡೀಸ್ ವೇಗಿ

IPL 2024: 18ನೇ ಓವರ್​ನಲ್ಲಿ ಹಾರ್ದಿಕ್ ಪಾಂಡ್ಯ ಔಟಾದ ಬಳಿಕ ಬಂದ ಶೆಫರ್ಡ್ 20ನೇ ಓವರ್​ನಲ್ಲಿ ಸಿಕ್ಸರ್ ಹಾಗೂ ಬೌಂಡರಿಗಳ ಸುರಿಮಳೆಗೈಯುವ ಮೂಲಕ ಸಂಚಲನ ಮೂಡಿಸಿದರು.

IPL 2024: 4 6 6 6 4 6...! ಒಂದೇ ಓವರ್​ನಲ್ಲಿ 32 ರನ್ ಚಚ್ಚಿದ ವಿಂಡೀಸ್ ವೇಗಿ
ರೊಮಾರಿಯೊ ಶೆಫರ್ಡ್

Updated on: Apr 07, 2024 | 10:03 PM

ಟಿ20 ಕ್ರಿಕೆಟ್‌ನಲ್ಲಿ ಕೆಲವೇ ಎಸೆತಗಳಲ್ಲಿ ಆಟಗಾರರ ಭವಿಷ್ಯ ಬದಲಾಗುವುದನ್ನು ನಾವು ಹಿಂದೆ ಸಾಕಷ್ಟು ಬಾರಿ ನೋಡಿದ್ದೇವೆ. ಇದರಲ್ಲಿ ಕೆಲವರ ಅದೃಷ್ಟ ಬೆಳಗಿದರೆ ಕೆಲವರ ಅದೃಷ್ಟ ಕೆಡುತ್ತದೆ. ರಾಹುಲ್ ತೆವಾಟಿಯಾ ಒಂದೇ ಓವರ್‌ನಲ್ಲಿ 5 ಸಿಕ್ಸರ್‌ಗಳನ್ನು ಬಾರಿಸುವ ಮೂಲಕ ತಮ್ಮ ವೃತ್ತಿಜೀವನಕ್ಕೆ ಹೊಸ ಆಯಾಮ ನೀಡಿದ್ದರು. ಇದೀಗ ವೆಸ್ಟ್ ಇಂಡೀಸ್ ಆಲ್ ರೌಂಡರ್ ರೊಮಾರಿಯೊ ಶೆಫರ್ಡ್ (Romario Shepherd) ಕೂಡ ಒಂದೇ ಒಂದು ಓವರ್​ನಲ್ಲಿ ತಮ್ಮ ಸ್ಫೋಟಕ ಬ್ಯಾಟಿಂಗ್ ಮೂಲಕ ಐಪಿಎಲ್ 2024ರಲ್ಲಿ (IPL 2024) ಸಖತ್ ಸದ್ದು ಮಾಡುತ್ತಿದ್ದಾರೆ. ಸತತ ಮೂರು ಸೀಸನ್‌ಗಳಲ್ಲಿ ಮೂರನೇ ತಂಡದ ಭಾಗವಾದ ಶೆಫರ್ಡ್, ಮುಂಬೈ ಇಂಡಿಯನ್ಸ್‌ (Mumbai Indians) ಪರ ಆಡಿದ ಇಂದಿನ ಪಂದ್ಯದಲ್ಲಿ ಒಂದೇ ಓವರ್‌ನಲ್ಲಿ 32 ರನ್‌ ಬಾರಿಸುವ ಮೂಲಕ ದಾಖಲೆ ನಿರ್ಮಿಸಿದ್ದಾರೆ.

ಈ ಸೀಸನ್​ನ ಮೊದಲ ಗೆಲುವು ದಾಖಲಿಸಿರುವ ಮುಂಬೈ ಇಂಡಿಯನ್ಸ್ ತಂಡದ ಬ್ಯಾಟಿಂಗ್ ಬಗ್ಗೆ ನಿರಂತರವಾಗಿ ಪ್ರಶ್ನೆಗಳು ಎದ್ದಿದ್ದವು. ಈ ಹಿಂದೆ ನಡೆದಿದ್ದ ಗುಜರಾತ್ ಟೈಟಾನ್ಸ್ ಮತ್ತು ರಾಜಸ್ಥಾನ್ ರಾಯಲ್ಸ್ ವಿರುದ್ಧದ ಪಂದ್ಯದಲ್ಲಿ ಮುಂಬೈ ತಂಡದ ಬ್ಯಾಟಿಂಗ್ ಹಳ್ಳ ಹಿಡಿದಿತ್ತು. ಆದರೆ, ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧದ ಪಂದ್ಯದಲ್ಲಿ 278 ರನ್‌ಗಳ ಗುರಿಯನ್ನು ಬೆನ್ನಟ್ಟಿದ್ದ ಮುಂಬೈ ಪರ ಅಬ್ಬರಿಸಿದ್ದ ಬ್ಯಾಟರ್​ಗಳು 246 ರನ್ ಕಲೆಹಾಕುವ ಮೂಲಕ ತಮ್ಮ ಬ್ಯಾಟಿಂಗ್ ಬಲವನ್ನು ತೋರಿಸಿದ್ದರು. ಇದೀಗ ಅದೇ ಬಲವನ್ನು ದೆಹಲಿ ಕ್ಯಾಪಿಟಲ್ಸ್ ವಿರುದ್ಧ ವಾಂಖೆಡೆ ಸ್ಟೇಡಿಯಂನಲ್ಲಿ ತೋರಿಸಿದ್ದಾರೆ.

ಕೊನೆಯ ಓವರ್‌ನಲ್ಲಿ ಶೆಫರ್ಡ್ ಅಬ್ಬರ

ಹೈದರಾಬಾದ್ ವಿರುದ್ಧದ ಪಂದ್ಯದಲ್ಲಿ ಕೇವಲ 6 ಎಸೆತಗಳಲ್ಲಿ 15 ರನ್ ಬಾರಿಸುವ ಮೂಲಕ ತಮ್ಮ ಸಾಮರ್ಥ್ಯ ಸಾಭೀತುಪಡಿಸಿದ್ದ ಶೆಫರ್ಡ್​, ಡೆಲ್ಲಿ ವಿರುದ್ಧ ಸಿಡಿಲಬ್ಬರದ ಬ್ಯಾಟಿಂಗ್ ನಡೆಸಿದರು. 18ನೇ ಓವರ್​ನಲ್ಲಿ ಹಾರ್ದಿಕ್ ಪಾಂಡ್ಯ ಔಟಾದ ಬಳಿಕ ಬಂದ ಶೆಫರ್ಡ್ 20ನೇ ಓವರ್​ನಲ್ಲಿ ಸಿಕ್ಸರ್ ಹಾಗೂ ಬೌಂಡರಿಗಳ ಸುರಿಮಳೆಗೈಯುವ ಮೂಲಕ ಸಂಚಲನ ಮೂಡಿಸಿದರು. ವೇಗದ ಬೌಲರ್ ಎನ್ರಿಕ್ ನೋಕಿಯಾ ಅವರ ಈ ಓವರ್‌ನಲ್ಲಿ 4 ಪ್ರಚಂಡ ಸಿಕ್ಸರ್‌ಗಳ ಹೊರತಾಗಿ, ಶೆಫರ್ಡ್ 2 ಬೌಂಡರಿಗಳನ್ನು ಬಾರಿಸಿ ಒಟ್ಟು 32 ರನ್ ಕಲೆಹಾಕಿದರು. ಈ ಮೂಲಕ ಈ ಬಾರಿಯ ಐಪಿಎಲ್‌ನ ಅತ್ಯಂತ ದುಬಾರಿ ಓವರ್ ಎಂಬ ದಾಖಲೆ ಸೃಷ್ಟಿಸಿದರು.

3 ಸೀಸನ್​ಗಳಲ್ಲಿ ಮೂರನೇ ಫ್ರಾಂಚೈಸಿ

ರೊಮಾರಿಯೊ ಶೆಫರ್ಡ್ ಈ ಪಂದ್ಯದಲ್ಲಿ ಕೇವಲ 10 ಎಸೆತಗಳಲ್ಲಿ 39 ರನ್‌ಗಳ ವಿಧ್ವಂಸಕ ಇನ್ನಿಂಗ್ಸ್ ಆಡಿದರು. ಇದು ಮುಂಬೈ 20 ಓವರ್‌ಗಳಲ್ಲಿ 234 ರನ್‌ಗಳ ಪರ್ವತದಂತಹ ಸ್ಕೋರ್ ತಲುಪಲು ಸಹಾಯ ಮಾಡಿತು. ಮುಂಬೈ ಪರ ಮ್ಯಾಚ್ ವಿನ್ನಿಂಗ್ ಪ್ರದರ್ಶನ ನೀಡಿದ ಶೆಫರ್ಡ್ ಅವರನ್ನು ಮಿನಿ ಹರಾಜಿಗೂ ಮುನ್ನ ಲಕ್ನೋ ತಂಡದಿಂದ 50 ಲಕ್ಷ ರೂಪಾಯಿಗೆ ಟ್ರೇಡಿಂಗ್ ಮಾಡಿತ್ತು. ಅದಕ್ಕೂ ಮುನ್ನ ಸನ್‌ರೈಸರ್ಸ್ ಹೈದರಾಬಾದ್‌ ಪರ ಆಡಿದ್ದ ಅವರನ್ನು 7.75 ಕೋಟಿಗೆ ಖರೀದಿಸಿತ್ತು.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 9:50 pm, Sun, 7 April 24