ಐಪಿಎಲ್ 2024 (IPL 2024) ರಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡದ ಪ್ರಯಾಣ ಪ್ಲೇಆಫ್ ಹಂತದಲ್ಲಿ ಕೊನೆಗೊಂಡಿದೆ. ಎಲಿಮಿನೇಟರ್ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ (RR) ತಂಡದ ವಿರುದ್ಧ 4 ವಿಕೆಟ್ಗಳಿಂದ ಸೋತ ಆರ್‌ಸಿಬಿ ಮತ್ತೊಮ್ಮೆ ಬರಿಗೈಯಲ್ಲಿ ಐಪಿಎಲ್ನಿಂದ ಹೊರಬಿದ್ದಿದೆ. ಇದೀಗ ಲೀಗ್ನಿಂದ ಹೊರಬಿದ್ದ ಬಳಿಕ ಆರ್‌ಸಿಬಿ ಅಭಿಮಾನಿಗಳಿಗೆ ವಿರಾಟ್ ಕೊಹ್ಲಿ (Virat Kohli) ವಿಶೇಷ ಸಂದೇಶವನ್ನು ನೀಡಿದ್ದಾರೆ. ವಾಸ್ತವವಾಗಿ ಕೊಹ್ಲಿ 2008 ರಿಂದ ಐಪಿಎಲ್‌ನಲ್ಲಿ ಆಡುತ್ತಿದ್ದಾರೆ. ಅವರು ಆರ್‌ಸಿಬಿ ತಂಡಕ್ಕಾಗಿ ಐಪಿಎಲ್‌ನ ಎಲ್ಲಾ ಸೀಸನ್‌ಗಳನ್ನು ಆಡಿದ್ದಾರೆ. ಆದರೆ ಆರ್‌ಸಿಬಿ ತಂಡ ಒಮ್ಮೆಯೂ ಟ್ರೋಫಿ ಗೆಲ್ಲುವಲ್ಲಿ ಯಶಸ್ವಿಯಾಗಿಲ್ಲ. ತಂಡವು ಮೂರು ಬಾರಿ ಐಪಿಎಲ್ ಫೈನಲ್‌ಗೆ ಪ್ರವೇಶಿಸಿತ್ತಾದರೂ ಪ್ರತಿ ಬಾರಿ ಸೋಲನ್ನು ಎದುರಿಸಬೇಕಾಯಿತು.
ಹೀಗಾಗಿ ಪ್ರತಿ ಬಾರಿ ನಿರಾಸೆ ಅನುಭವಿಸುತ್ತಿರುವ ಅಭಿಮಾನಿಗಳಿಗೆ ವಿರಾಟ್ ಕೊಹ್ಲಿ ಇನ್ಸ್ಟಾಗ್ರಾಮ್ ಪೋಸ್ಟ್ನಲ್ಲಿ ಧನ್ಯವಾದ ತಿಳಿಸುವ ಕೆಲಸ ಮಾಡಿದ್ದಾರೆ. ತಮ್ಮ ಪೋಸ್ಟ್ನಲ್ಲಿ ಆರ್‌ಸಿಬಿ ಆಟಗಾರರ ಫೋಟೋವನ್ನು ಹಂಚಿಕೊಂಡಿರುವ ಕೊಹ್ಲಿ, ‘ಯಾವಾಗಲೂ ನಮ್ಮನ್ನು ಪ್ರೀತಿಸುವಂತೆ ಮತ್ತು ಪ್ರಶಂಸಿಸುವಂತೆ ಮಾಡಿದ್ದಕ್ಕಾಗಿ ಎಲ್ಲಾ ಆರ್‌ಸಿಬಿ ಅಭಿಮಾನಿಗಳಿಗೆ ಮತ್ತೊಮ್ಮೆ ಧನ್ಯವಾದಗಳು’ ಎಂದು ಬರೆದುಕೊಂಡಿದ್ದಾರೆ.
ವಿರಾಟ್ ಕೊಹ್ಲಿ ಐಪಿಎಲ್ 2024 ರಲ್ಲಿ ಇದುವರೆಗೆ ಅತಿ ಹೆಚ್ಚು ರನ್ ಗಳಿಸಿದ ಆಟಗಾರ ಎನಿಸಿಕೊಂಡಿದ್ದಾರೆ. ಈ ಸೀಸನ್ನಲ್ಲಿ ಅವರು ಆಡಿದ 15 ಪಂದ್ಯಗಳ 15 ಇನ್ನಿಂಗ್ಸ್‌ಗಳಲ್ಲಿ 61.75 ಸರಾಸರಿ ಮತ್ತು 154.69 ಸ್ಟ್ರೈಕ್ ರೇಟ್‌ನಲ್ಲಿ 741 ರನ್ ಕಲೆಹಾಕಿದ್ದಾರೆ. ಈ ಸೀಸನ್ನಲ್ಲಿ ವಿರಾಟ್ 5 ಅರ್ಧ ಶತಕ ಹಾಗೂ 1 ಶತಕ ಕೂಡ ಸಿಡಿಸಿದ್ದಾರೆ. ಈ ಸೀಸನ್ನಲ್ಲಿ ಅವರ ಗರಿಷ್ಠ ಸ್ಕೋರ್ ಔಟಾಗದೆ 113 ರನ್ ಆಗಿತ್ತು.
ಇನ್ನು ಈ ಆವೃತ್ತಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪ್ರದರ್ಶನದ ಬಗ್ಗೆ ಹೇಳುವುದಾದರೆ.. ತಂಡವು ಆಡಿದ 14 ಪಂದ್ಯಗಳಲ್ಲಿ 7 ರಲ್ಲಿ ಗೆದ್ದಿದ್ದರೆ, 7ರಲ್ಲಿ ಸೋಲನುಭವಿಸಬೇಕಾಯಿತು. ಹೀಗಾಗಿ 14 ಅಂಕಗಳೊಂದಿಗೆ ತಂಡ ಅಂಕಪಟ್ಟಿಯಲ್ಲಿ ನಾಲ್ಕನೇ ಸ್ಥಾನ ಪಡೆದುಕೊಂಡಿತು. ತಂಡವು ತನ್ನ ಮೊದಲ 8 ಪಂದ್ಯಗಳಲ್ಲಿ 1 ರಲ್ಲಿ ಮಾತ್ರ ಗೆದ್ದಿತ್ತು. ಇದಾದ ನಂತರ ಆರ್‌ಸಿಬಿ ಯಾರೂ ಊಹಿಸದಂತೆ ಪುಟಿದೆದ್ದಿತು. ಒಂದು ಹಂತದಲ್ಲಿ ಪ್ಲೇಆಫ್ ರೇಸ್‌ನಿಂದ ದೂರ ಉಳಿದಿದ್ದ ಆರ್‌ಸಿಬಿ ಅಂತಿಮವಾಗಿ ಕೊನೆಯ 4 ರ ಘಟ್ಟಕ್ಕೆ ಲಗ್ಗೆ ಇಟ್ಟಿತು. ಗುಂಪು ಹಂತದಲ್ಲಿ ಆಡಿದ ಕೊನೆಯ 6 ಪಂದ್ಯಗಳಲ್ಲಿ 6ರಲ್ಲಿ ಗೆಲುವು ಸಾಧಿಸುವಲ್ಲಿ ಆರ್‌ಸಿಬಿ ಯಶಸ್ವಿಯಾಗಿತ್ತು.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ