IPL 2025: ಸೌತ್​​ನತ್ತ ಮುಖ ಮಾಡಿದ ಡೆಲ್ಲಿ ಕ್ಯಾಪಿಟಲ್ಸ್

IPL 2025: ಐಪಿಎಲ್​ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡದ ತವರು ಮೈದಾನ ದೆಹಲಿಯ ಅರುಣ್ ಜೇಟ್ಲಿ ಸ್ಟೇಡಿಯಂ. ಆದರೆ ಈ ಬಾರಿ ಡೆಲ್ಲಿ ಪಡೆ 2ನೇ ತವರು ಮೈದಾನವನ್ನು ಘೋಷಿಸಿದೆ. ಅದರಂತೆ ದೆಹಲಿಯಲ್ಲಿ 5 ಮ್ಯಾಚ್​ಗಳನ್ನು ಆಡಲಿರುವ ಡೆಲ್ಲಿ ಕ್ಯಾಪಿಟಲ್ಸ್ ವಿಶಾಖಪಟ್ಟಣದಲ್ಲಿ ಮತ್ತೆರಡು ಪಂದ್ಯಗಳಲ್ಲಿ ಕಣಕ್ಕಿಳಿಯಲಿದೆ. ಈ ಮೂಲಕ ದಕ್ಷಿಣ ಭಾರತದಲ್ಲಿ ಪಂದ್ಯ ಗೆಲ್ಲಲು ಡೆಲ್ಲಿ ಕ್ಯಾಪಿಟಲ್ಸ್ ಪ್ಲ್ಯಾನ್ ರೂಪಿಸಿದೆ.

IPL 2025: ಸೌತ್​​ನತ್ತ ಮುಖ ಮಾಡಿದ ಡೆಲ್ಲಿ ಕ್ಯಾಪಿಟಲ್ಸ್
Delhi Capitals

Updated on: Feb 18, 2025 | 10:54 AM

ಇಂಡಿಯನ್ ಪ್ರೀಮಿಯರ್ ಲೀಗ್​ ಸೀಸನ್-18ರ ವೇಳಾಪಟ್ಟಿ ಪ್ರಕಟವಾಗಿದೆ. ಮಾರ್ಚ್ 22 ರಿಂದ ಶುರುವಾಗಲಿರುವ ಈ ಬಾರಿಯ ಟೂರ್ನಿಯು ಒಟ್ಟು 13 ಸ್ಟೇಡಿಯಂಗಳಲ್ಲಿ ನಡೆಯಲಿದೆ. ಇಲ್ಲಿ 10 ತಂಡಗಳಿಗೆ 10 ಹೋಮ್ ಗ್ರೌಂಡ್ ಅಲ್ಲವೇ ಎಂಬ ಪ್ರಶ್ನೆ ಮೂಡುವುದು ಸಹಜ. ಆದರೆ ಈ ಬಾರಿ ಮೂರು ತಂಡಗಳು 2 ಹೋಮ್​ ಗ್ರೌಂಡ್​ ಅನ್ನು ಘೋಷಿಸಿದೆ.

ಅದರಲ್ಲೂ ಡೆಲ್ಲಿ ಕ್ಯಾಪಿಟಲ್ಸ್ ತಂಡವು ದಕ್ಷಿಣ ಭಾರತದ ವಿಶಾಖಪಟ್ಟಣದಲ್ಲಿನ ವೈಎಸ್​ಆರ್​ ಸ್ಟೇಡಿಯಂ ಅನ್ನು 2ನೇ ಆಯ್ಕೆಯಾಗಿ ಆಯ್ದುಕೊಂಡಿರುವುದು ವಿಶೇಷ. ಅಂದರೆ ಕಳೆದ ಬಾರಿಯಂತೆ ಈ ಬಾರಿ ಕೂಡ ಸನ್​ರೈಸರ್ಸ್ ಹೈದರಾಬಾದ್ ವಿರುದ್ಧ ಡೆಲ್ಲಿ ಕ್ಯಾಪಿಟಲ್ಸ್ ವೈಎಸ್​ಆರ್​ ಸ್ಟೇಡಿಯಂನಲ್ಲಿ ಕಣಕ್ಕಿಳಿಯಲಿದೆ.

ಸೌತ್​ನತ್ತ ಮುಖ ಮಾಡಿದ ಡೆಲ್ಲಿ ಕ್ಯಾಪಿಟಲ್ಸ್:

IPL 2024 ರಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡವು ಆಂಧ್ರಪ್ರದೇಶದ ವಿಶಾಖಪಟ್ಟಣದ ವೈಎಸ್​ಆರ್​ ಸ್ಟೇಡಿಯಂನಲ್ಲಿ ಒಂದು ಪಂದ್ಯವಾಡಿತ್ತು. ಇದಕ್ಕೆ ಮುಖ್ಯ ಕಾರಣ ಕಳೆದ ಬಾರಿ ವುಮೆನ್ಸ್ ಪ್ರೀಮಿಯರ್ ಲೀಗ್​ನ ನಾಕೌಟ್ ಪಂದ್ಯಗಳನ್ನು ದೆಹಲಿಯ ಅರುಣ್ ಜೇಟ್ಲಿ ಸ್ಟೇಡಿಯಂನಲ್ಲಿ ಆಯೋಜನೆಗೊಂಡಿರುವುದು.

ಅಂದರೆ WPL ಮತ್ತು IPL ಪಂದ್ಯಗಳು ಜೊತೆಯಾಗಿ ನಡೆದಿದ್ದರಿಂದ ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕೆ ತನ್ನ ಒಂದು ಪಂದ್ಯವನ್ನು ವಿಶಾಖಪಟ್ಟಣದಲ್ಲಿ ಆಡಬೇಕಾದ ಅನಿವಾರ್ಯತೆ ಎದುರಾಗಿತ್ತು. ಆದರೆ ಈ ಬಾರಿ ಡೆಲ್ಲಿ ಕ್ಯಾಪಿಟಲ್ಸ್ ತಂಡವು ವೈಎಸ್​ಆರ್​ ಸ್ಟೇಡಿಯಂ ಅನ್ನು 2ನೇ ತವರು ಮೈದಾನವಾಗಿ ಆಯ್ಕೆ ಮಾಡಿಕೊಂಡಿದ್ದು, ವಿಶಾಖಪಟ್ಟಣದಲ್ಲಿ 2 ಪಂದ್ಯಗಳನ್ನಾಡಲು ನಿರ್ಧರಿಸಿದೆ.

ಅದರಂತೆ ವೈಎಸ್​ಆರ್​ ಸ್ಟೇಡಿಯಂನಲ್ಲಿ ಮಾರ್ಚ್ 24 ರಂದು ನಡೆಯಲಿರುವ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಹಾಗೂ ಲಕ್ನೋ ಸೂಪರ್ ಜೈಂಟ್ಸ್ ತಂಡಗಳು ಮುಖಾಮುಖಿಯಾಗಲಿದೆ. ಇನ್ನು ಇದೇ ಮೈದಾನದಲ್ಲಿ ಮಾರ್ಚ್ 30 ರಂದು ನಡೆಯಲಿರುವ ಪಂದ್ಯದಲ್ಲಿ ಡೆಲ್ಲಿ ಪಡೆ ಸನ್​ರೈಸರ್ಸ್ ಹೈದರಾಬಾದ್ ತಂಡವನ್ನು ಎದುರಿಸಲಿದೆ.

ಡೆಲ್ಲಿ ಕ್ಯಾಪಿಟಲ್ಸ್ ಅಲ್ಲದೆ, ರಾಜಸ್ಥಾನ್ ರಾಯಲ್ಸ್ ತಂಡ ಬರ್ಸಪರ ಸ್ಟೇಡಿಯಂ ಮತ್ತು ಸವಾಯಿ ಮಾನ್​ಸಿಂಗ್ ಕ್ರೀಡಾಂಗಣಗಳನ್ನು ತವರು ಮೈದಾನವಾಗಿ ಆಯ್ಕೆ ಮಾಡಿಕೊಂಡಿದೆ. ಮತ್ತೊಂದೆಡೆ ಪಂಜಾಬ್ ಕಿಂಗ್ಸ್ ಮುಲ್ಲನ್​ಪುರ್ ಹಾಗೂ ಧರ್ಮಶಾಲಾದಲ್ಲಿ ಹೋಮ್ ಮ್ಯಾಚ್​ಗಳನ್ನು ನಿರ್ಧರಿಸಿದೆ. ಅದರಂತೆ ಈ ಬಾರಿ ಒಟ್ಟು 13 ಸ್ಡೇಡಿಯಂಗಳಲ್ಲಿ ಐಪಿಎಲ್ ಪಂದ್ಯಗಳು ನಡೆಯಲಿದೆ.

ಇದನ್ನೂ ಓದಿ:  ಚಾಂಪಿಯನ್ಸ್ ಟ್ರೋಫಿಯಲ್ಲಿ ಕಣಕ್ಕಿಳಿಯಲಿರುವ 8 ತಂಡಗಳ ಪಟ್ಟಿ ಇಲ್ಲಿದೆ

ಡೆಲ್ಲಿ ಕ್ಯಾಪಿಟಲ್ಸ್ ತಂಡ: ಅಕ್ಷರ್ ಪಟೇಲ್, ಕುಲ್ದೀಪ್ ಯಾದವ್, ಟ್ರಿಸ್ಟನ್ ಸ್ಟಬ್ಸ್, ಅಭಿಷೇಕ್ ಪೊರೆಲ್, ಮಿಚೆಲ್ ಸ್ಟಾರ್ಕ್, ಕೆಎಲ್ ರಾಹುಲ್, ಹ್ಯಾರಿ ಬ್ರೂಕ್, ಜೇಕ್ ಫ್ರೇಸರ್-ಮೆಕ್‌ಗುರ್ಕ್, ಟಿ.ನಟರಾಜನ್, ಕರುಣ್ ನಾಯರ್, ಸಮೀರ್ ರಿಝ್ವಿ, ಅಶುತೋಷ್ ಶರ್ಮಾ, ಮೋಹಿತ್ ಶರ್ಮಾ, ಫಾಫ್ ಡು ಪ್ಲೆಸಿಸ್, ಮುಖೇಶ್ ಕುಮಾರ್, ದರ್ಶನ್ ನಲ್ಕಂಡೆ, ವಿಪ್ರಜ್ ನಿಗಮ್, ದುಷ್ಮಂತ ಚಮೀರಾ, ಡೊನೊವನ್ ಫೆರೇರಾ, ಅಜಯ್ ಮಂಡಲ್, ಮನ್ವಂತ್ ಕುಮಾರ್, ತ್ರಿಪುರಾಣ ವಿಜಯ್, ಮಾಧವ್ ತಿವಾರಿ.