
ಐಪಿಎಲ್ 2025 (IPL 2025) ರ ಫೈನಲ್‌ಗೆ ಇನ್ನೇನು ಕೆಲವೇ ಗಂಟೆಗಳು ಬಾಕಿ ಉಳಿದಿವೆ. ಈ ಫೈನಲ್ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಪಂಜಾಬ್ ಕಿಂಗ್ಸ್ (RCB vs PBKS) ಮುಖಾಮುಖಿಯಾಗಲಿವೆ. ಜೂನ್ 3 ರಂದು ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಪ್ರಶಸ್ತಿ ಪಂದ್ಯ ನಡೆಯಲಿದೆ. ಆರ್‌ಸಿಬಿ ತಂಡ ಆರಂಭದಿಂದಲೂ ಉತ್ತಮ ಫಾರ್ಮ್‌ನಲ್ಲಿದ್ದು, 19 ಅಂಕಗಳೊಂದಿಗೆ ಪಾಯಿಂಟ್ಸ್ ಪಟ್ಟಿಯಲ್ಲಿ ಎರಡನೇ ಸ್ಥಾನ ಗಳಿಸಿದೆ. ಬ್ಯಾಟಿಂಗ್ ಹಾಗೂ ಬೌಲಿಂಗ್ ಎರಡೂ ವಿಭಾಗವೂ ಅತ್ಯಂತ ಬಲಿಷ್ಠವಾಗಿ ಕಾಣುತ್ತಿದೆ. ಆದಾಗ್ಯೂ ಫೈನಲ್ ಪಂದ್ಯಕ್ಕೆ ಗೇಮ್ ಫಿನಿಶರ್ ಟಿಮ್ ಡೇವಿಡ್ (Tim David) ಲಭ್ಯರಿರುತ್ತಾರೋ, ಇಲ್ಲವೋ ಎಂಬುದೇ ಅಭಿಮಾನಿಗಳ ಚಿಂತೆಯನ್ನು ಹೆಚ್ಚಿಸಿದೆ.
ತಂಡದ ಸ್ಫೋಟಕ ಆಲ್‌ರೌಂಡರ್ ಟಿಮ್ ಡೇವಿಡ್ ಅವರ ಇಂಜುರಿ ಆರ್‌ಸಿಬಿಗೆ ಕಳವಳಕಾರಿ ವಿಷಯವಾಗಿದೆ. ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧದ ಲೀಗ್ ಪಂದ್ಯದಲ್ಲಿ ಗಾಯಗೊಂಡಿದ್ದ ಡೇವಿಡ್, ಅಂದಿನಿಂದ ಪ್ಲೇಯಿಂಗ್ 11ನಲ್ಲಿ ಕಾಣಿಸಿಕೊಂಡಿಲ್ಲ. ಆದಾಗ್ಯೂ ಫೈನಲ್ ಪಂದ್ಯಕ್ಕೆ ಅವರು ಲಭ್ಯವಾಗುವ ನಿರೀಕ್ಷೆಯಲ್ಲಿ ಅಭಿಮಾನಿಗಳಿದ್ದಾರೆ. ಡೇವಿಡ್ ಲಭ್ಯತೆಯ ಬಗ್ಗೆ ಮಾಹಿತಿ ನೀಡಿದ ನಾಯಕ ರಜತ್ ಪಾಟಿದರ್, ಡೇವಿಡ್ ವೈದ್ಯಕೀಯ ಸಿಬ್ಬಂದಿಯ ಮೇಲ್ವಿಚಾರಣೆಯಲ್ಲಿದ್ದಾರೆ. ಪಂದ್ಯ ಆರಂಕ್ಕೂ ಮುನ್ನ ಅಧಿಕಾರಿಗಳು ಡೇವಿಡ್ ಲಭ್ಯತೆಯ ಬಗ್ಗೆ ನಮಗೆ ಮಾಹಿತಿ ನೀಡಲಿದ್ದಾರೆ. ಅಲ್ಲಿಯವರೆಗೂ ಏನನ್ನೂ ಹೇಳಲು ಸಾಧ್ಯವಿಲ್ಲ ಎಂದಿದ್ದಾರೆ. ಒಂದು ವೇಳೆ ಟಿಮ್ ಡೇವಿಡ್ ಫಿಟ್ ಆಗದಿದ್ದರೆ ಲಿಯಾಮ್ ಲಿವಿಂಗ್‌ಸ್ಟೋನ್ ಆಡುವ ಹನ್ನೊಂದರ ಬಳಗದಲ್ಲಿ ಮುಂದುವರೆಯಲಿದ್ದಾರೆ. ಉಳಿದಂತೆ ತಂಡದಲ್ಲಿ ಯಾವುದೇ ಬದಲಾವಣೆಗಳಾಗುವ ಸಾಧ್ಯತೆಗಳಿಲ್ಲ.
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ವಿರಾಟ್ ಕೊಹ್ಲಿ, ಜೋಶ್ ಹೇಜಲ್‌ವುಡ್, ಭುವನೇಶ್ವರ್ ಕುಮಾರ್ ಮತ್ತು ಕೆಲವು ಆಯ್ದ ಆಟಗಾರರಿಂದ ಹೆಚ್ಚಿನ ನಿರೀಕ್ಷೆಗಳನ್ನು ಹೊಂದಿದೆ. ವಿರಾಟ್ ಈ ಸೀಸನ್‌ನಲ್ಲಿ ಹೆಚ್ಚು ರನ್ ಗಳಿಸಿದವರಾಗಿದ್ದರೆ, ಜೋಶ್ ಹೇಜಲ್‌ವುಡ್ ಇದುವರೆಗೆ 21 ವಿಕೆಟ್‌ಗಳನ್ನು ಕಬಳಿಸಿದ್ದಾರೆ. ಭುವನೇಶ್ವರ್ ತಮ್ಮ ಐಪಿಎಲ್ ವೃತ್ತಿಜೀವನದಲ್ಲಿ ಪಂಜಾಬ್ ಕಿಂಗ್ಸ್ ವಿರುದ್ಧ ಅತಿ ಹೆಚ್ಚು ವಿಕೆಟ್ ಪಡೆದಿದ್ದಾರೆ. ಅವರು ಪಂಜಾಬ್ ವಿರುದ್ಧ ಇದುವರೆಗೆ 32 ವಿಕೆಟ್‌ಗಳನ್ನು ಕಬಳಿಸಿದ್ದಾರೆ. ಹೀಗಾಗಿ ಈ ಮೂವರ ಪ್ರದರ್ಶನ ತಂಡಕ್ಕೆ ನಿರ್ಣಾಯಕವಾಗಲಿದೆ.
IPL 2025: ಫೈನಲ್ ಪಂದ್ಯಕ್ಕೂ ಮಳೆ ಕಾಟ ತಪ್ಪಿದ್ದಲ್ಲ..! ಮೋದಿ ಪಿಚ್ ಯಾರಿಗೆ ಹೆಚ್ಚು ಸಹಕಾರಿ?
ಆರ್‌ಸಿಬಿ ಸಂಭಾವ್ಯ ಪ್ಲೇಯಿಂಗ್ XI: ವಿರಾಟ್ ಕೊಹ್ಲಿ , ಫಿಲಿಪ್ ಸಾಲ್ಟ್, ರಜತ್ ಪಾಟಿದಾರ್ (ನಾಯಕ), ಜಿತೇಶ್ ಶರ್ಮಾ, ಲಿಯಾಮ್ ಲಿವಿಂಗ್‌ಸ್ಟೋನ್/ ಟಿಮ್ ಡೇವಿಡ್, ರೊಮಾರಿಯೋ ಶೆಫರ್ಡ್, ಕೃನಾಲ್ ಪಾಂಡ್ಯ, ಭುವನೇಶ್ವರ್ ಕುಮಾರ್, ಯಶ್ ದಯಾಲ್, ಜೋಶ್ ಹೇಜಲ್‌ವುಡ್, ಸುಯಶ್ ಶರ್ಮಾ.
ಇಂಪ್ಯಾಕ್ಟ್ ಪ್ಲೇಯರ್; ಮಯಾಂಕ್ ಅಗರ್ವಾಲ್
ಪಂಜಾಬ್ ಕಿಂಗ್ಸ್ ಸಂಭಾವ್ಯ ಪ್ಲೇಯಿಂಗ್ XI: ಪ್ರಿಯಾಂಶ್ ಆರ್ಯ, ಜೋಶ್ ಇಂಗ್ಲಿಸ್ (ವಿಕೆಟ್ ಕೀಪರ್), ಶ್ರೇಯಸ್ ಅಯ್ಯರ್ (ನಾಯಕ), ನೆಹಾಲ್ ವಧೇರಾ, ಮಾರ್ಕಸ್ ಸ್ಟೊಯಿನಿಸ್, ಶಶಾಂಕ್ ಸಿಂಗ್, ಅಜ್ಮತುಲ್ಲಾ ಓಮರ್ಜಾಯ್, ಕೈಲ್ ಜೇಮಿಸನ್, ವಿಜಯ್‌ಕುಮಾರ್ ವೈಶಾಕ್, ಅರ್ಷ್‌ದೀಪ್ ಸಿಂಗ್, ಯುಜ್ವೇಂದ್ರ ಚಾಹಲ್.
ಇಂಪ್ಯಾಕ್ಟ್ ಪ್ಲೇಯರ್; ಪ್ರಭ್ಸಿಮ್ರಾನ್ ಸಿಂಗ್
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ