3+6+2+0+2+5: RCB ಅಭಿಮಾನಿಗಳ 18ರ ಲೆಕ್ಕಾಚಾರ… ಈ ಸಲ ಕಪ್ ನಮ್ದೆ

IPL 2025 PBKS vs RCB: ಇಂಡಿಯನ್ ಪ್ರೀಮಿಯರ್ ಲೀಗ್ ಇತಿಹಾಸದಲ್ಲಿ ಕಪ್ ಗೆಲ್ಲದ ತಂಡಗಳಾಗಿ ಗುರುತಿಸಿಕೊಂಡಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು, ಹಾಗೂ ಪಂಜಾಬ್ ಕಿಂಗ್ಸ್ ಇದೇ ಮೊದಲ ಬಾರಿಗೆ ಫೈನಲ್​ನಲ್ಲಿ ಮುಖಾಮುಖಿಯಾಗುತ್ತಿದೆ. ಹೀಗಾಗಿ ಇಂದಿನ ಪಂದ್ಯದಲ್ಲಿ ಗೆಲ್ಲುವ ತಂಡ 18 ವರ್ಷಗಳ ಟ್ರೋಫಿ ಗೆಲ್ಲುವ ಕಾಯುವಿಕೆಯನ್ನು ಅಂತ್ಯಗೊಳಿಸಲಿದ್ದಾರೆ.

3+6+2+0+2+5: RCB ಅಭಿಮಾನಿಗಳ 18ರ ಲೆಕ್ಕಾಚಾರ... ಈ ಸಲ ಕಪ್ ನಮ್ದೆ
Rcb

Updated on: Jun 03, 2025 | 8:26 AM

IPL 2025: ಇಂಡಿಯನ್ ಪ್ರೀಮಿಯರ್ ಲೀಗ್​ನ ಮಹಾಕದನಕ್ಕೆ ವೇದಿಕೆ ಸಿದ್ಧವಾಗಿದೆ. ಅಹಮದಾಬಾದ್​ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಇಂದು ನಡೆಯಲಿರುವ ಫೈನಲ್ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಹಾಗೂ ಪಂಜಾಬ್ ಕಿಂಗ್ಸ್ (PBKS) ತಂಡಗಳು ಮುಖಾಮುಖಿಯಾಗಲಿದೆ. ವಿಶೇಷ ಎಂದರೆ ಈ ಪಂದ್ಯದಲ್ಲಿ ಗೆಲ್ಲುವ ತಂಡ ಚೊಚ್ಚಲ ಬಾರಿ ಚಾಂಪಿಯನ್ ಪಟ್ಟ ಅಲಂಕರಿಸಲಿದೆ. ಅಂದರೆ ಕಳೆದ 17 ವರ್ಷಗಳಿಂದ ಐಪಿಎಲ್ ಆಡುತ್ತಿರುವ ಉಭಯ ತಂಡಗಳು ಈವರೆಗೆ ಟ್ರೋಫಿ ಮುಡಿಗೇರಿಸಿಕೊಂಡಿಲ್ಲ. ಹೀಗಾಗಿಯೇ ಎರಡೂ ತಂಡಗಳ ಅಭಿಮಾನಿಗಳು ದೀರ್ಘಕಾಲದ ಕಾಯುವಿಕೆಯನ್ನು ಕೊನೆಗೊಳಿಸಲು ಕಾತುರದಿಂದ ಕಾಯುತ್ತಿದ್ದಾರೆ.

ಇದರ ನಡುವೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ಅಭಿಮಾನಿಗಳು ಈ ಸಲ ಕಪ್ ನಮ್ದೆ  ಎನ್ನಲು 18ರ ಲೆಕ್ಕಾಚಾರವನ್ನು ಮುಂದಿಡುತ್ತಿದ್ದಾರೆ. ಈ ಲೆಕ್ಕಾಚಾರವು ಆರ್​ಸಿಬಿ ಪರವಿರುವುದರಿಂದ ರಾಯಲ್ ಪಡೆ ಚಾಂಪಿಯನ್ ಪಟ್ಟ ಅಲಂಕರಿಸಲಿದೆ ಎಂಬ ವಿಶ್ವಾಸವನ್ನು ಸಹ ವ್ಯಕ್ತಪಡಿಸುತ್ತಿದ್ದಾರೆ.

ಅಂದರೆ ಈ ಬಾರಿ ನಡೆಯುತ್ತಿರುವುದು 18ನೇ ಸೀಸನ್​ನ ಐಪಿಎಲ್. ವಿರಾಟ್ ಕೊಹ್ಲಿಯ ಜೆರ್ಸಿ ನಂಬರ್ 18. ಅಲ್ಲದೆ ಕೊಹ್ಲಿ ಆರ್​ಸಿಬಿ ಪರ ಕಣಕ್ಕಿಳಿಯಲಾರಂಭಿಸಿ 18 ವರ್ಷಗಳಾಗಿವೆ. ಅತ್ತ ಆರ್​ಸಿಬಿ ಅಭಿಮಾನಿಗಳ ಕಪ್ ಗೆಲ್ಲುವ ಕಾಯುವಿಕೆ ಕೂಡ 18ನೇ ವರ್ಷಕ್ಕೆ ಕಾಲಿಟ್ಟಿದೆ… ಈ ಎಲ್ಲಾ ಸಂಖ್ಯೆಗಳು 18 ಆಗಿರುವುದರಿಂದ ಈ ಸಲ ಕಪ್ ನಮ್ದೆ ಎನುತ್ತಿದ್ದಾರೆ ಆರ್​ಸಿಬಿ ಅಭಿಮಾನಿಗಳು.

ಇದರ ಜೊತೆಗೆ ಐಪಿಎಲ್ ಫೈನಲ್ ಪಂದ್ಯ ನಡೆಯುತ್ತಿರುವ ದಿನಾಂಕದ ಒಟ್ಟು ಮೊತ್ತ ಕೂಡ 18. ಐಪಿಎಲ್ ಫೈನಲ್ ಪಂದ್ಯ ನಡೆಯುತ್ತಿರುವುದು 3-6-2025 ರಂದು. ಈ ಸಂಖ್ಯೆಯನ್ನು ಕೂಡಿಸಿದರೆ (3+6+2+0+2+5) ಒಟ್ಟು ಮೊತ್ತ 18 ಆಗುತ್ತದೆ.

ಆದರೆ ಈ 18ರ ಲೆಕ್ಕಾಚಾರ ಈ ಹಿಂದೆಯೇ ನಿರ್ಧಾರವಾಗಿದ್ದಲ್ಲ ಎಂಬುದು ಇಲ್ಲಿ ಉಲ್ಲೇಖಾರ್ಹ. ಅಂದರೆ ಇದಕ್ಕೂ ಮುನ್ನ ಐಪಿಎಲ್ ಫೈನಲ್ ಪಂದ್ಯಕ್ಕೆ ಮೇ 25 ಅನ್ನು ನಿಗದಿ ಮಾಡಲಾಗಿತ್ತು. ಆದರೆ ಭಾರತ-ಪಾಕ್ ಯುದ್ಧ ಭೀತಿ ಹಿನ್ನಲೆ ಐಪಿಎಲ್ ಅನ್ನು ಕೆಲ ದಿನಗಳ ಕಾಲ ಸ್ಥಗಿತಗೊಳಿಸಲಾಗಿತ್ತು.

ಇದಾದ ಬಳಿಕ ಮರುನಿಗದಿಯಾದ ಫೈನಲ್ ದಿನಾಂಕ 3-6-2025. ಇದೀಗ ಇದೇ ದಿನಾಂಕದಂದು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಫೈನಲ್ ಆಡಲು ಸಜ್ಜಾಗುತ್ತಿದೆ. ಕಾಕತಾಳೀಯ ಎಂಬಂತೆ ಇದೀಗ ಹೊಸ ದಿನಾಂಕದ ಒಟ್ಟು ಕೂಡಿಸುವಿಕೆ 18 ಆಗಿರುವುದರಿಂದ ಈ ಸಲ ಕಪ್ ನಮ್ದೆ ಎನ್ನುವ ವಿಶ್ವಾಸದಲ್ಲಿದ್ದಾರೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ರಾಯಲ್ ಅಭಿಮಾನಿಗಳು.

ಇದನ್ನೂ ಓದಿ: IPL 2025: ಫೈನಲ್ ಪಂದ್ಯಕ್ಕೂ ಮುನ್ನ RCB ತಂಡಕ್ಕೆ ಬಿಗ್ ಶಾಕ್: ಪ್ರಮುಖ ಆಟಗಾರ ಡೌಟ್

ಒಟ್ಟಿನಲ್ಲಿ ಅಹಮದಾಬಾದ್​ನಲ್ಲಿ ಇಂದು ನಡೆಯಲಿರುವ ಐಪಿಎಲ್​ನ ಫೈನಲ್ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ತಂಡವನ್ನು ಬಗ್ಗು ಬಡಿದು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಚೊಚ್ಚಲ ಬಾರಿ ಐಪಿಎಲ್ ಟ್ರೋಫಿ ಎತ್ತಿ ಹಿಡಿಯಲಿದೆಯಾ ಕಾದು ನೋಡಬೇಕಿದೆ.