ಮುಂಬೈ ಇಂಡಿಯನ್ಸ್ ತಂಡದ 17 ವರ್ಷಗಳ ದಾಖಲೆಗೆ ಬ್ರೇಕ್ ಹಾಕಿದ ಪಂಜಾಬ್ ಕಿಂಗ್ಸ್
IPL 2025 MI vs PBKS: ಇಂಡಿಯನ್ ಪ್ರೀಮಿಯರ್ ಲೀಗ್ನ ದ್ವಿತೀಯ ಕ್ವಾಲಿಫೈಯರ್ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಮುಂಬೈ ಇಂಡಿಯನ್ಸ್ ತಂಡವು 20 ಓವರ್ಗಳಲ್ಲಿ 203 ರನ್ ಕಲೆಹಾಕಿತು. ಈ ಕಠಿಣ ಗುರಿಯನ್ನು ಪಂಜಾಬ್ ಕಿಂಗ್ಸ್ ತಂಡವು 19 ಓವರ್ಗಳಲ್ಲಿ ಚೇಸ್ ಮಾಡಿ 5 ವಿಕೆಟ್ಗಳ ಭರ್ಜರಿ ಜಯ ಸಾಧಿಸಿದೆ.

IPL 2025: ಇಂಡಿಯನ್ ಪ್ರೀಮಿಯರ್ ಲೀಗ್ ಇತಿಹಾಸದಲ್ಲಿ 200 ರನ್ಗಳಿಸಿ ಒಮ್ಮೆಯೂ ಸೋಲದ ತಂಡವಾಗಿದ್ದ ಮುಂಬೈ ಇಂಡಿಯನ್ಸ್ (MI) ತಂಡಕ್ಕೆ ಕೊನೆಗೂ ಸೋಲುಣಿಸುವಲ್ಲಿ ಪಂಜಾಬ್ ಕಿಂಗ್ಸ್ (PBKS) ತಂಡ ಯಶಸ್ವಿಯಾಗಿದೆ. ಅದು ಕೂಡ 19 ಓವರ್ಗಳಲ್ಲಿ 203 ರನ್ಗಳನ್ನು ಚೇಸ್ ಮಾಡುವ ಮೂಲಕ ಎಂಬುದು ವಿಶೇಷ. ಅಹಮದಾಬಾದ್ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆದ ಐಪಿಎಲ್ನ ದ್ವಿತೀಯ ಕ್ವಾಲಿಫೈಯರ್ ಪಂದ್ಯದಲ್ಲಿ ಟಾಸ್ ಗೆದ್ದ ಪಂಜಾಬ್ ಕಿಂಗ್ಸ್ ತಂಡ ಬೌಲಿಂಗ್ ಆಯ್ದುಕೊಂಡಿದ್ದರು. ಅದರಂತೆ ಮೊದಲು ಬ್ಯಾಟ್ ಮಾಡಿದ ಮುಂಬೈ ಇಂಡಿಯನ್ಸ್ 20 ಓವರ್ಗಳಲ್ಲಿ 6 ವಿಕೆಟ್ ಕಳೆದುಕೊಂಡು 203 ರನ್ ಕಲೆಹಾಕಿತು.
ಈ ಕಠಿಣ ಗುರಿ ಬೆನ್ನತ್ತಿದ ಪಂಜಾಬ್ ಕಿಂಗ್ಸ್ ಪರ ನಾಯಕ ಶ್ರೇಯಸ್ ಅಯ್ಯರ್ ಸಿಡಿಲಬ್ಬರದ ಬ್ಯಾಟಿಂಗ್ ಪ್ರದರ್ಶಿಸಿದರು. 41 ಎಸೆತಗಳನ್ನು ಎದುರಿಸಿದ ಅಯ್ಯರ್ 8 ಭರ್ಜರಿ ಸಿಕ್ಸ್ ಹಾಗೂ 5 ಫೋರ್ಗಳೊಂದಿಗೆ ಅಜೇಯ 87 ರನ್ ಬಾರಿಸಿದರು. ಈ ಮೂಲಕ ಪಂಜಾಬ್ ಕಿಂಗ್ಸ್ 19 ಓವರ್ಗಳಲ್ಲಿ 207 ರನ್ಗಳಿಸಿ 5 ವಿಕೆಟ್ಗಳ ಜಯ ಸಾಧಿಸಿತು.
ಕೊನೆಗೊಂಡ ನಾಗಾಲೋಟ:
ಪಂಜಾಬ್ ಕಿಂಗ್ಸ್ ತಂಡದ ಈ ಗೆಲುವಿನೊಂದಿಗೆ ಕಳೆದ 17 ಸೀಸನ್ಗಳಿಂದ 200+ ರನ್ ವಿಷಯದಲ್ಲಿ ಸೋಲಿಲ್ಲದ ಸರದಾರರಾಗಿ ಮೆರೆದಿದ್ದ ಮುಂಬೈ ಇಂಡಿಯನ್ಸ ತಂಡದ ಗೆಲುವಿನ ನಾಗಾಲೋಟ ಕೊನೆಗೊಂಡಿದೆ. ಅಂದರೆ ಕಳೆದ 17 ಸೀಸನ್ಗಳಲ್ಲಿ ಮುಂಬೈ ಪಡೆಯು 200 ರನ್ಗಳಿಸಿ ಒಮ್ಮೆಯೂ ಸೋಲನುಭವಿಸಿರಲಿಲ್ಲ.
ಅಲ್ಲದೆ ಈವರೆಗೆ 19 ಬಾರಿ 200+ ಸ್ಕೋರ್ಗಳ ಟಾರ್ಗೆಟ್ ನೀಡಿದ್ದ ಮುಂಬೈ ಇಂಡಿಯನ್ಸ್ ತಂಡವು 18 ಬಾರಿ ಜಯಗಳಿಸಿತ್ತು. ಆದರೆ ಈ ಬಾರಿ ಪಂಜಾಬ್ ಕಿಂಗ್ಸ್ ತಂಡವು ಮುಂಬೈ ಪಡೆಯನ್ನು ಮಕಾಡೆ ಮಲಗಿಸುವಲ್ಲಿ ಯಶಸ್ವಿಯಾಗಿದೆ. ಈ ಮೂಲಕ ಕಳೆದ 17 ವರ್ಷಗಳಿಂದ ಕಾಪಾಡಿಕೊಂಡು ಬಂದಿದ್ದ ವಿಶೇಷ ದಾಖಲೆ ಕೂಡ ಬ್ರೇಕ್ ಆಗಿದೆ.
ಫೈನಲ್ಗೆ ಪಂಜಾಬ್ ಕಿಂಗ್ಸ್:
ಮುಂಬೈ ಇಂಡಿಯನ್ಸ್ ವಿರುದ್ಧದ ಗೆಲುವಿನೊಂದಿಗೆ ಪಂಜಾಬ್ ಕಿಂಗ್ಸ್ ತಂಡವು ಐಪಿಎಲ್ನ ಫೈನಲ್ಗೆ ಪ್ರವೇಶಿಸಿದೆ. ಅದು ಕೂಡ 11 ವರ್ಷಗಳ ಬಳಿಕ ಎಂಬುದು ವಿಶೇ. ಅಂದರೆ ಪಂಜಾಬ್ ಪಡೆ ಕೊನೆಯ ಬಾರಿ ಫೈನಲ್ ಆಡಿದ್ದು 2014 ರಲ್ಲಿ. ಇದೀಗ ದಶಕದ ಬಳಿಕ ಮತ್ತೊಮ್ಮೆ ಅಂತಿಮ ಪಂದ್ಯವಾಡಲು ಪಂಜಾಬ್ ಕಿಂಗ್ಸ್ ಸಜ್ಜಾಗಿದೆ.
ಇದನ್ನೂ ಓದಿ: ಮುಂಬೈ ಇಂಡಿಯನ್ಸ್ ಸೋಲುತ್ತಿದ್ದಂತೆ ನೋವಿನಿಂದ ಕುಗ್ಗಿ ಹೋದ ಹಾರ್ದಿಕ್ ಪಾಂಡ್ಯ
ಅದರಂತೆ ಜೂನ್ 3 ರಂದು ಅಹಮದಾಬಾದ್ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆಯಲಿರುವ ಫೈನಲ್ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಪಂಜಾಬ್ ಕಿಂಗ್ಸ್ ತಂಡಗಳು ಮುಖಾಮುಖಿಯಾಗಲಿದೆ.
