
ಇಂಡಿಯನ್ ಪ್ರೀಮಿಯರ್ ಲೀಗ್ ಸೀಸನ್-18 ಆರಂಭಕ್ಕೂ ಮುನ್ನವೇ ಹಾಲಿ ಚಾಂಪಿಯನ್ ಕೊಲ್ಕತ್ತಾ ನೈಟ್ ರೈಡರ್ಸ್ ತಂಡದ ವೇಗಿ ಉಮ್ರಾನ್ ಮಲಿಕ್ ಹೊರಬಿದ್ದಿದ್ದಾರೆ. 2024 ರಲ್ಲಿ ಗಾಯಗೊಂಡಿದ್ದ ಉಮ್ರಾನ್ ಇನ್ನೂ ಸಹ ಸಂಪೂರ್ಣವಾಗಿ ಚೇತರಿಸಿಕೊಂಡಿಲ್ಲ. ಹೀಗಾಗಿ ಅವರು ಐಪಿಎಲ್ನಿಂದ ಹಿಂದೆ ಸರಿದಿದ್ದಾರೆ.
ಇದರ ಬೆನ್ನಲ್ಲೇ ಕೊಲ್ಕತ್ತಾ ನೈಟ್ ರೈಡರ್ಸ್ ತಂಡವು ಯುವ ಎಡಗೈ ವೇಗಿ ಚೇತನ್ ಸಕರಿಯಾ ಅವರನ್ನು ಬದಲಿಯಾಗಿ ಆಯ್ಕೆ ಮಾಡಿಕೊಂಡಿದೆ. ವಿಶೇಷ ಎಂದರೆ ಈ ಬಾರಿಯ ಐಪಿಎಲ್ ಮೆಗಾ ಹರಾಜಿನಲ್ಲಿ 75 ಲಕ್ಷ ರೂ. ಮೂಲ ಬೆಲೆಯೊಂದಿಗೆ ಕಾಣಿಸಿಕೊಂಡಿದ್ದ ಚೇತನ್ ಅವರನ್ನು ಯಾವುದೇ ಫ್ರಾಂಚೈಸಿ ಖರೀದಿಸಿರಲಿಲ್ಲ.
ಇದಾಗ್ಯೂ ಕೆಕೆಆರ್ ತಂಡವು ಅವರನ್ನು ನೆಟ್ ಬೌಲರ್ ಆಗಿ ಆಯ್ಕೆ ಮಾಡಿಕೊಂಡಿತ್ತು. ಅದರಂತೆ ಕೊಲ್ಕತ್ತಾ ನೈಟ್ ರೈಡರ್ಸ್ ತಂಡದ ನೆಟ್ ಬೌಲರ್ ಆಗಿ ಕಾಣಿಸಿಕೊಂಡಿದ್ದ ಚೇತನ್ ಸಕರಿಯಾಗೆ ಇದೀಗ ಅದೃಷ್ಟ ಖುಲಾಯಿಸಿದೆ.
ಉಮ್ರಾನ್ ಮಲಿಕ್ ಹೊರಗುಳಿಯುತ್ತಿದ್ದಂತೆ ಕೊಲ್ಕತ್ತಾ ನೈಟ್ ರೈಡರ್ಸ್ ಫ್ರಾಂಚೈಸಿ 75 ಲಕ್ಷ ರೂ.ಗೆ ಚೇತನ್ ಸಕರಿಯಾ ಅವರನ್ನು ತಂಡಕ್ಕೆ ಆಯ್ಕೆ ಮಾಡಿಕೊಂಡಿದ್ದಾರೆ. ಅದರಂತೆ ಈ ಬಾರಿ ಚೇತನ್ ಸಕರಿಯಾ ಕೆಕೆಆರ್ ಪರ ಕಣಕ್ಕಿಳಿಯಲಿದ್ದಾರೆ.
ಇದಕ್ಕೂ ಮುನ್ನ ಅವರು ರಾಜಸ್ಥಾನ್ ರಾಯಲ್ಸ್ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ಪರ ಕಣಕ್ಕಿಳಿದಿದ್ದರು. ಈ ವೇಳೆ 19 ಪಂದ್ಯಗಳಲ್ಲಿ ಬೌಲಿಂಗ್ ಮಾಡಿದ್ದ ಚೇತನ್ ಸಕರಿಯಾ 426 ಎಸೆತಗಳಲ್ಲಿ 599 ರನ್ ನೀಡಿ 20 ವಿಕೆಟ್ ಕಬಳಿಸಿದ್ದರು.
ಆದರೆ 2021ರ ಬಳಿಕ ಅವರಿಗೆ ಐಪಿಎಲ್ ಪಂದ್ಯವಾಡಲು ಚಾನ್ಸ್ ಸಿಕ್ಕಿರಲಿಲ್ಲ. ಇದೀಗ ನೆಟ್ ಬೌಲರ್ ಆಗಿ ಕೆಕೆಆರ್ ತಂಡದಲ್ಲಿ ಕಾಣಿಸಿಕೊಂಡಿದ್ದ ಚೇತನ್ ಸಕರಿಯಾಗೆ ಕೊನೆಗೂ ಅದೃಷ್ಟ ಕೈ ಹಿಡಿದಿದೆ.
ಇದನ್ನೂ ಓದಿ: IPL 2025: 8 ಆಟಗಾರರು ಎಂಟ್ರಿ: RCB ಅಭಿಮಾನಿಗಳಿಗೆ ಗುಡ್ ನ್ಯೂಸ್
Published On - 10:59 am, Mon, 17 March 25