
ಐಪಿಎಲ್ 2025 (IPL 2025) ರ 57 ನೇ ಪಂದ್ಯ ಇಂದು ಕೋಲ್ಕತ್ತಾ ನೈಟ್ ರೈಡರ್ಸ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ (KKR vs CSK) ನಡುವೆ ಈಡನ್ ಗಾರ್ಡನ್ಸ್ ಮೈದಾನದಲ್ಲಿ ನಡೆಯುತ್ತಿದೆ. ಏತನ್ಮಧ್ಯೆ, ಕೋಲ್ಕತ್ತಾದ ಈಡನ್ ಗಾರ್ಡನ್ಸ್ ಕ್ರೀಡಾಂಗಣದ ಮೇಲೆ ಬಾಂಬ್ ಹಾಕುವುದಾಗಿ ಬೆದರಿಕೆಯ ಇಮೇಲ್ ಬಂದಿದೆ. ಉಭಯ ತಂಡಗಳ ನಡುವಿನ ಪಂದ್ಯ ಆರಂಭವಾದ ಕೆಲವು ನಿಮಿಷಗಳ ನಂತರ ಬಂಗಾಳ ಕ್ರಿಕೆಟ್ ಸಂಸ್ಥೆಯ (CAB) ಅಧಿಕೃತ ಇಮೇಲ್ ಐಡಿಗೆ ಅಪರಿಚಿತ ಇಮೇಲ್ ಖಾತೆಯಿಂದ ಬಾಂಬ್ ಬೆದರಿಕೆಯ ಸಂದೇಶ ಬಂದಿದೆ.
ಬಾಂಬ್ ಬೆದರಿಕೆಯ ನಂತರ, ಕೋಲ್ಕತ್ತಾ ಪೊಲೀಸರು ತಕ್ಷಣವೇ ಕಾರ್ಯಪ್ರವೃತ್ತರಾಗಿದ್ದು, ಪೊಲೀಸರು ಮತ್ತು ಭದ್ರತಾ ಸಂಸ್ಥೆಗಳು ಸ್ಥಳದಲ್ಲಿ ಶೋಧನೆ ಆರಂಭಿಸಿವೆ. ಈಡನ್ ಗಾರ್ಡನ್ಸ್ ಕ್ರೀಡಾಂಗಣದಲ್ಲಿ ವ್ಯಾಪಕ ಭದ್ರತಾ ವ್ಯವಸ್ಥೆಗಳನ್ನು ಮಾಡಲಾಗುತ್ತಿದ್ದು, ಇಡೀ ಕ್ರೀಡಾಂಗಣ ಸಂಕೀರ್ಣವನ್ನು ಹೈ ಅಲರ್ಟ್‌ನಲ್ಲಿ ಇರಿಸಲಾಗಿದೆ. ಪಂದ್ಯದ ವೇಳೆ ಈ ಬೆದರಿಕೆ ಕರೆ ಬಂದ ನಂತರ ಪ್ರೇಕ್ಷಕರು ಮತ್ತು ಸಂಘಟಕರಲ್ಲಿ ಭಯಭೀತತೆ ಉಂಟಾಗಿದೆ. ಆದಾಗ್ಯೂ, ಪಂದ್ಯ ಪ್ರಸ್ತುತ ನಡೆಯುತ್ತಿದ್ದು, ಪರಿಸ್ಥಿತಿಯನ್ನು ಮೇಲ್ವಿಚಾರಣೆ ಮಾಡಲಾಗುತ್ತಿದೆ.
ಅದೇ ಸಮಯದಲ್ಲಿ, ಬಾಂಬ್ ನಿಷ್ಕ್ರಿಯ ದಳಗಳು ಮತ್ತು ಗುಪ್ತಚರ ತಂಡಗಳನ್ನು ಸಹ ಕ್ರೀಡಾಂಗಣದಲ್ಲಿ ನಿಯೋಜಿಸಲಾಗಿದೆ. ಬಂಗಾಳ ಕ್ರಿಕೆಟ್ ಸಂಸ್ಥೆಯ ಇಮೇಲ್‌ಗೆ ಬಂದಿರುವ ಇಮೇಲ್ ಪೊಲೀಸರಿಗೆ ಕಳವಳಕಾರಿ ವಿಷಯವಾಗಿದೆ. ಮೇಲ್ ಕಳುಹಿಸಿದವರನ್ನು ಇನ್ನೂ ಗುರುತಿಸಲಾಗಿಲ್ಲ. ಈ ಮೇಲ್ ಸೈಬರ್ ತಂತ್ರದ ಭಾಗವೇ ಅಥವಾ ಹುಸಿ ಬೆದರಿಕೆಯ ತಂತ್ರವೇ ಎಂಬುದರ ಬಗ್ಗೆಯೂ ಭದ್ರತಾ ಸಂಸ್ಥೆಗಳು ತನಿಖೆ ನಡೆಸುತ್ತಿವೆ.
IPL 2025: ಆಪರೇಷನ್ ಸಿಂಧೂರ್; ಧರ್ಮಶಾಲಾದಲ್ಲಿ ನಡೆಯಬೇಕಿದ್ದ ಪಂದ್ಯಗಳ ಸ್ಥಳಾಂತರ
ಇನ್ನು ಪಂದ್ಯದ ಬಗ್ಗೆ ಹೇಳುವುದಾದರೆ… ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಕೆಕೆಆರ್ ತಂಡ ನಾಯಕ ಅಜಿಂಕ್ಯ ರಹಾನೆ ಅವರ 48 ರನ್‌ಗಳ ಅತ್ಯಧಿಕ ಸ್ಕೋರ್ ನೆರವಿನಿಂದ ಚೆನ್ನೈ ಸೂಪರ್ ಕಿಂಗ್ಸ್‌ಗೆ 180 ರನ್‌ಗಳ ಗುರಿ ನೀಡಿದೆ. ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ದುಕೊಂಡ ಹಾಲಿ ಚಾಂಪಿಯನ್ ತಂಡ 20 ಓವರ್‌ಗಳಲ್ಲಿ ಆರು ವಿಕೆಟ್ ನಷ್ಟಕ್ಕೆ 179 ರನ್ ಗಳಿಸಿತು. ಸಿಎಸ್‌ಕೆ ಪರ ನೂರ್ ಅಹ್ಮದ್ ನಾಲ್ಕು ವಿಕೆಟ್ ಪಡೆದರೆ, ಅನ್ಶುಲ್ ಕಾಂಬೋಜ್ ಮತ್ತು ರವೀಂದ್ರ ಜಡೇಜಾ ತಲಾ ಒಂದು ವಿಕೆಟ್ ಪಡೆದರು.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ