
ಐಪಿಎಲ್ 2025 (IPL 2025) ರಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ಮತ್ತು ಪಂಜಾಬ್ ಕಿಂಗ್ಸ್ (KKR vs PBKS) ನಡುವಿನ ಪಂದ್ಯವು ಯಾವುದೇ ಫಲಿತಾಂಶವಿಲ್ಲದೆ ಅಂತ್ಯಗೊಂಡಿದೆ. ಏಪ್ರಿಲ್ 26 ರ ಶನಿವಾರ ಕೋಲ್ಕತ್ತಾದ ಈಡನ್ ಗಾರ್ಡನ್ಸ್‌ನಲ್ಲಿ ನಡೆದ ಈ ಪಂದ್ಯದಲ್ಲಿ, ಪಂಜಾಬ್ ಕಿಂಗ್ಸ್ ಅದ್ಭುತ ಬ್ಯಾಟಿಂಗ್ ಮಾಡಿ ಆತಿಥೇಯ ನೈಟ್ ರೈಡರ್ಸ್ ಮುಂದೆ ದೊಡ್ಡ ಸ್ಕೋರ್ ಕಲೆಹಾಕಿತು. ಆದರೆ ಕೋಲ್ಕತ್ತಾದ ಇನ್ನಿಂಗ್ಸ್ ಆರಂಭವಾದ ತಕ್ಷಣ ಮಳೆ ಸುರಿಯಲಾರಂಭಿಸಿತು. ಸುಮಾರು ಒಂದೂವರೆ ಗಂಟೆಗಳ ಕಾಲ ಕಾದ ನಂತರ, ಅಂಪೈರ್‌ಗಳು ಅಂತಿಮವಾಗಿ ಪಂದ್ಯವನ್ನು ರದ್ದುಗೊಳಿಸಲು ನಿರ್ಧರಿಸಿದರು. ಈ ಸೀಸನ್‌ನಲ್ಲಿ ಪಂದ್ಯವೊಂದು ರದ್ದಾಗಿರುವುದು ಇದೇ ಮೊದಲು.
ಈಡನ್ ಗಾರ್ಡನ್ಸ್ ಕ್ರೀಡಾಂಗಣದಲ್ಲಿ ನಡೆದ ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಪಂಜಾಬ್ ಕಿಂಗ್ಸ್ಗೆ ಮೊದಲ ಸೀಸನ್ ಆಡುತ್ತಿರುವ ಪ್ರಿಯಾಂಶ್ ಆರ್ಯ (69 ರನ್) ಮತ್ತೊಮ್ಮೆ ಸ್ಫೋಟಕ ಬ್ಯಾಟಿಂಗ್ ನಡೆಸಿ ತಂಡಕ್ಕೆ ಉತ್ತಮ ಆರಂಭ ಒದಗಿಸಿಕೊಟ್ಟರು. ಪ್ರಿಯಾಂಶ್ ಮತ್ತು ಪ್ರಭ್ಸಿಮ್ರಾನ್ ಪವರ್‌ಪ್ಲೇನಲ್ಲಿ ತಂಡಕ್ಕೆ ಅರ್ಧಶತಕದ ಜೊತೆಯಾಟವನ್ನು ನೀಡಿದರು. ಪ್ರಿಯಾಂಶ್ ಕೇವಲ 27 ಎಸೆತಗಳಲ್ಲಿ ಅರ್ಧಶತಕ ಗಳಿಸಿ, ಈ ಸೀಸನ್‌ನಲ್ಲಿ ಎರಡನೇ ಬಾರಿಗೆ 50 ರನ್‌ಗಳ ಗಡಿ ದಾಟಿದರು.
ಮತ್ತೊಂದೆಡೆ, ಪ್ರಭ್ಸಿಮ್ರನ್ ಸಿಂಗ್ ಕೂಡ ಅದ್ಭುತ ಅರ್ಧಶತಕ ಗಳಿಸಿದರು. ಪ್ರಿಯಾಂಶ್ ಔಟಾದಾಗ 11.5 ಓವರ್‌ಗಳಲ್ಲಿ ಇಬ್ಬರ ನಡುವೆ 120 ರನ್‌ಗಳ ಪಾಲುದಾರಿಕೆ ಇತ್ತು. ಇದಾದ ನಂತರ ಪ್ರಭ್ಸಿಮ್ರನ್ ಸ್ಫೋಟಕ ಬ್ಯಾಟಿಂಗ್ ನಡೆಸಿ 83 ರನ್‌ಗಳ ಅದ್ಭುತ ಇನ್ನಿಂಗ್ಸ್ ಆಡಿದರು. ಈ ಇಬ್ಬರ ಬ್ಯಾಟಿಂಗ್ ಆಧಾರದ ಮೇಲೆ ಪಂಜಾಬ್ 20 ಓವರ್‌ಗಳಲ್ಲಿ 201 ರನ್ ಗಳಿಸಿತು.
IPL 2025: ಸೇಡು ತೀರಿಸಿಕೊಳ್ಳುವ ತವಕದಲ್ಲಿ ಆರ್ಸಿಬಿ; ಡೆಲ್ಲಿ ಗದ್ದುಗೆ ಏರುತ್ತಾ ರಜತ್ ಪಡೆ?
ಇದಕ್ಕೆ ಉತ್ತರವಾಗಿ, ಕೋಲ್ಕತ್ತಾದ ಇನ್ನಿಂಗ್ಸ್‌ನ ಮೊದಲ ಓವರ್ ಮುಗಿದ ಕೂಡಲೇ ಇದ್ದಕ್ಕಿದ್ದಂತೆ ಮಳೆ ಸುರಿಯಲು ಪ್ರಾರಂಭಿಸಿತು. ಒಮ್ಮೆ ಪ್ರಾರಂಭವಾದ ಮಳೆ ನಿಲ್ಲಲಿಲ್ಲ. ಕೊನೆಗೆ, ರಾತ್ರಿ 11 ಗಂಟೆ ಸುಮಾರಿಗೆ, ಅಂಪೈರ್‌ಗಳು ಪಂದ್ಯವನ್ನು ರದ್ದುಗೊಳಿಸಲು ನಿರ್ಧರಿಸಿದರು. ಇದರರ್ಥ ಎರಡೂ ತಂಡಗಳು ಅಂಕಗಳನ್ನು ಹಂಚಿಕೊಳ್ಳಬೇಕಾಯಿತು.
ಇದರ ಲಾಭವನ್ನು ಪಂಜಾಬ್ ಕಿಂಗ್ಸ್ ಪಡೆದುಕೊಂಡಿದ್ದು ತಂಡವು 11 ಅಂಕಗಳೊಂದಿಗೆ ಐದನೇ ಸ್ಥಾನದಿಂದ ನಾಲ್ಕನೇ ಸ್ಥಾನಕ್ಕೆ ಏರಿತು. ಆದರೆ ಕೋಲ್ಕತ್ತಾ 7 ಅಂಕಗಳೊಂದಿಗೆ ಇನ್ನೂ 7 ನೇ ಸ್ಥಾನದಲ್ಲೇ ಉಳಿಯಿತು. ಪ್ಲೇಆಫ್ ರೇಸ್‌ನಲ್ಲಿ ಈಗಾಗಲೇ ಹಿಂದುಳಿದಿರುವ ಹಾಲಿ ಚಾಂಪಿಯನ್ ಕೆಕೆಆರ್, ಇನ್ನು ಮುಂದೆ ಯಾವುದೇ ಬೆಲೆ ತೆತ್ತಾದರೂ ಉಳಿದ ಎಲ್ಲಾ 5 ಪಂದ್ಯಗಳನ್ನು ಗೆಲ್ಲಲೇಬೇಕಾಗುತ್ತದೆ, ಆ ನಂತರವೇ ತಂಡವು ಪ್ಲೇಆಫ್ ತಲುಪಲು ಸಾಧ್ಯವಾಗುತ್ತದೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 11:37 pm, Sat, 26 April 25