ಗೌತಮ್ ಗಂಭೀರ್ ಅವರಿಗೆ ಕೊಲೆ ಬೆದರಿಕೆಯೊಡ್ಡಿದ್ದ ಯುವಕ ಅರೆಸ್ಟ್..!
Team India Coach Gautam Gambhir: ಟೀಮ್ ಇಂಡಿಯಾ ಕೋಚ್ ಗೌತಮ್ ಗಂಭೀರ್ ಬುಧವಾರ ಪಹಲ್ಗಾಮ್ ದಾಳಿಯಲ್ಲಿ ಮೃತಪಟ್ಟವರಿಗೆ ಸಂತಾಪ ಸೂಚಿಸಿ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಾಕಿಕೊಂಡಿದ್ದರು. ಈ ಪೋಸ್ಟ್ ಬೆನ್ನಲ್ಲೇ ಗಂಭೀರ್‌ಗೆ ಐಸಿಸ್ ಕಾಶ್ಮೀರ ಇಮೇಲ್ ಐಡಿಯಿಂದ ಜೀವ ಬೆದರಿಕೆಯೊಡ್ಡಲಾಗಿತ್ತು.

ಟೀಮ್ ಇಂಡಿಯಾ (Team India) ಮುಖ್ಯ ಕೋಚ್ ಗೌತಮ್ ಗಂಭೀರ್ (Gautam Gambhir) ಅವರಿಗೆ ಕೊಲೆ ಬೆದರಿಕೆಯೊಡ್ಡಿದ್ದ ಯುವಕನನ್ನು ದೆಹಲಿ ಪೊಲೀಸರು ಬಂಧಿಸಿದ್ದಾರೆ. ಪಹಲ್ಗಾಮ್ನಲ್ಲಿ ಉಗ್ರರ ದಾಳಿ ಬೆನ್ನಲ್ಲೇ ಗಂಭೀರ್ ಅವರಿಗೆ “ಐಸಿಸ್ ಕಾಶ್ಮೀರ” ಹೆಸರಿನಲ್ಲಿ ಜೀವ ಬೆದರಿಕೆಯ ಇಮೇಲ್‌ಗಳು ಬಂದಿದ್ದವು. ಈ ಇಮೇಲ್ನಲ್ಲಿ ನಿಮ್ಮನ್ನು ಕೊಲ್ಲುವುದಾಗಿ ತಿಳಿಸಲಾಗಿತ್ತು. ಈ ಬಗ್ಗೆ ಗೌತಮ್ ಗಂಭೀರ್ ದೆಹಲಿಯ ರಾಜೇಂದ್ರ ನಗರ ಠಾಣೆಯಲ್ಲಿ ಗಂಭೀರ್ ದೂರು ನೀಡಿದ್ದರು. ಇದೀಗ ಈ ಪ್ರಕರಣ ಭೇದಿಸಿರುವ ದೆಹಲಿ ಪೊಲೀಸರು ಗುಜರಾತ್ ಮೂಲದ ಇಂಜಿನಿಯರಿಂಗ್ ವಿದ್ಯಾರ್ಥಿ ಜಿಗ್ನೇಶ್ ಸಿಂಗ್ ಪರ್ಮಾರ್ನನ್ನು ಬಂಧಿಸಲಾಗಿದೆ.
ಪಹಲ್ಗಾಮ್ ದಾಳಿ ಬೆನ್ನಲ್ಲೇ ಬೆದರಿಕೆ:
ಜಮ್ಮು ಕಾಶ್ಮೀರದ ಪಹಲ್ಗಾಮ್ ದಾಳಿಯಲ್ಲಿ ಮೃತಪಟ್ಟವರಿಗೆ ಸಂತಾಪ ಸೂಚಿಸಿ ಗೌತಮ್ ಗಂಭೀರ್ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಾಕಿದ್ದರು. ಮೃತರ ಕುಟುಂಬಗಳಿಗಾಗಿ ಪ್ರಾರ್ಥಿಸುತ್ತೇನೆ. ಇದಕ್ಕೆ ಕಾರಣರಾದವರು ಬೆಲೆ ತೆರಬೇಕಾಗುತ್ತದೆ. ಇದಕ್ಕೆ ಪ್ರತೀಕಾರವಾಗಿ ಭಾರತ ತಿರುಗೇಟು ನೀಡಲಿದೆ ಎಂದು ಬರೆದುಕೊಂಡಿದ್ದರು. ಇದರ ಬೆನ್ನಲ್ಲೇ “ಐಸಿಸ್ ಕಾಶ್ಮೀರ” ಹೆಸರಿನ ಮೇಲ್ ಐಡಿಯಿಂದ ಗೌತಮ್ ಗಂಭೀರ್‌ಗೆ ಕೊಲೆ ಬೆದರಿಕೆಯೊಡ್ಡಲಾಗಿತ್ತು.
ಏಪ್ರಿಲ್ 22 ರಂದು ಗಂಭೀರ್‌ಗೆ ಎರಡು ಬೆದರಿಕೆ ಇಮೇಲ್‌ಗಳು ಬಂದಿದ್ದವು. ಒಂದು ಇಮೇಲ್ ಮಧ್ಯಾಹ್ನ ಮತ್ತು ಇನ್ನೊಂದು ಸಂಜೆ ಬಂದಿತ್ತು. ಎರಡೂ ಸಂದೇಶಗಳಲ್ಲೂ ಐ ಕಿಲ್ಲ್ ಯು ಎಂದು ಬರೆಯಲಾಗಿತ್ತು. ಈ ಬೆದರಿಕೆ ಬೆನ್ನಲ್ಲೇ ಎಚ್ಚೆತ್ತುಕೊಂಡ ಗೌತಮ್ ಗಂಭೀರ್ ದೆಹಲಿಯ ರಾಜೇಂದ್ರ ನಗರ ಠಾಣೆಯಲ್ಲಿ ದೂರು ಸಲ್ಲಿಸಿದ್ದರು.
ಇಂಜಿನಿಯರಿಂಗ್ ವಿದ್ಯಾರ್ಥಿ ಬಂಧನ:
ಟೀಮ್ ಇಂಡಿಯಾದ ಮುಖ್ಯ ಕೋಚ್ ಮತ್ತು ಮಾಜಿ ಬಿಜೆಪಿ ಸಂಸದ ಗಂಭೀರ್ ಅವರಿಗೆ ಬಂದ ಈ ಭಯಾನಕ ಬೆದರಿಕೆಯ ಬೆನ್ನಲ್ಲೇ ದೆಹಲಿ ಪೊಲೀಸರು ಕ್ಷಿಪ್ರ ಕ್ರಮ ಕೈಗೊಂಡರು. ಅಲ್ಲದೆ ಈ ಇ ಮೇಲ್ನ ಜಾಡು ಹಿಡಿದು ಹೊರಟ ಪೊಲೀಸರಿಗೆ ಆರೋಪಿಯು ಗುಜರಾತ್ನಲ್ಲಿರುವುದು ಗೊತ್ತಾಗಿದೆ. ಅದರಂತೆ ಏಪ್ರಿಲ್ 26 ರ ಶನಿವಾರ, ಕೇಂದ್ರ ಜಿಲ್ಲಾ ಪೊಲೀಸರು ಗುಜರಾತ್‌ನಿಂದ ಇಂಜಿನಿಯರಿಂಗ್ ವಿದ್ಯಾರ್ಥಿ ಜಿಗ್ನೇಶ್ ಸಿಂಗ್ ಪರ್ಮಾರ್ನನ್ನು ಬಂಧಿಸಿದ್ದಾರೆ.
ಇದನ್ನೂ ಓದಿ: IPL 2025: ಅಣ್ಣಾ ಬಿಟ್ ಬಿಡಣ್ಣ… RCB ತಂಡದಲ್ಲಿ ಎಲ್ಲವೂ ಸರಿಯಿಲ್ವಾ?
ಮಾನಸಿಕ ಅಸ್ವಸ್ಥ?
21 ವರ್ಷದ ಜಿಗ್ನೇಶ್ ಸಿಂಗ್ ಪರ್ಮಾರ್ ಬಂಧನವಾಗುತ್ತಿದ್ದಂತೆ, ಆತ ಮಾನಸಿಕ ಅಸ್ವಸ್ಥ ಎಂದು ಕುಟುಂಬಸ್ಥರು ಹೇಳಿಕೊಂಡಿದ್ದಾರೆ. ಇದಾಗ್ಯೂ ಮಾನಸಿಕ ಅಸ್ವಸ್ಥ ಇಮೇಲ್ ಬಳಸಿ, ಗೌತಮ್ ಗಂಭೀರ್ ಅವರನ್ನೇ ಏಕೆ ಟಾರ್ಗೆಟ್ ಮಾಡಿದ್ದು ಎಂಬ ಆಯಾಮದಲ್ಲಿ ದೆಹಲಿ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.
Published On - 7:59 am, Sun, 27 April 25




