ಗೌತಮ್ ಗಂಭೀರ್ಗೆ ಬಿಗ್ ಶಾಕ್: ಬಲಗೈ ಬಂಟರಿಗೆ ಗೇಟ್ ಪಾಸ್
Team India: ಗೌತಮ್ ಗಂಭೀರ್ ಸಾರಥ್ಯದಲ್ಲಿ ಟೀಮ್ ಇಂಡಿಯಾ ಸೀಮಿತ ಓವರ್ಗಳ ಪಂದ್ಯಗಳಲ್ಲಿ ಉತ್ತಮ ಪ್ರದರ್ಶನ ನೀಡಿದರೂ, ಟೆಸ್ಟ್ ಕ್ರಿಕೆಟ್ನಲ್ಲಿ ತಂಡದ ಪ್ರದರ್ಶನ ಅಷ್ಟಕಷ್ಟೇ. ಇದಕ್ಕೆ ಸಾಕ್ಷಿ ನ್ಯೂಝಿಲೆಂಡ್ ಹಾಗೂ ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಸರಣಿಗಳಲ್ಲಿನ ಸೋಲು. ಈ ಸೋಲುಗಳನ್ನು ಗಂಭೀರವಾಗಿ ಪರಿಗಣಿಸಿರುವ ಬಿಸಿಸಿಐ ಇದೀಗ ಭಾರತ ತಂಡ ಸಿಬ್ಬಂದಿ ವರ್ಗದಲ್ಲಿ ಕೆಲ ಬದಲಾವಣೆ ಮಾಡಲು ಮುಂದಾಗಿದೆ.

ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಗೂ ಮುನ್ನ ಭಾರತ ತಂಡದ ಸಿಬ್ಬಂದಿ ವರ್ಗದಲ್ಲಿ ಮೇಜರ್ ಸರ್ಜರಿ ಮಾಡಲು ಬಿಸಿಸಿಐ (BCCI) ಮುಂದಾಗಿದೆ. ಅದರ ಮೊದಲ ಹೆಜ್ಜೆಯಾಗಿ ಟೀಮ್ ಇಂಡಿಯಾದ (Team India) ಬ್ಯಾಟಿಂಗ್ ಕೋಚ್ ಅಭಿಷೇಕ್ ನಾಯರ್ (Abhishek Nayar) ಅವರನ್ನು ವಜಾಗೊಳಿಸಲು ಭಾರತೀಯ ಕ್ರಿಕೆಟ್ ಮಂಡಳಿ ನಿರ್ಧರಿಸಿದೆ ಎಂದು ವರದಿಯಾಗಿದೆ.
ಆಸ್ಟ್ರೇಲಿಯಾದಲ್ಲಿ ನಡೆದ ಬಾರ್ಡರ್-ಗವಾಸ್ಕರ್ ಟ್ರೋಫಿಯಲ್ಲಿನ ಕಳಪೆ ಪ್ರದರ್ಶನ ಮತ್ತು ಡ್ರೆಸ್ಸಿಂಗ್ ಕೊಠಡಿಯಿಂದ ಸೋರಿಕೆಯಾದ ವಿಷಯಗಳನ್ನು ಗಮನದಲ್ಲಿಟ್ಟುಕೊಂಡು ಬಿಸಿಸಿಐ ಈ ಕಠಿಣ ಕ್ರಮ ಕೈಗೊಂಡಿದೆ ತಿಳಿದು ಬಂದಿದೆ.
ಮತ್ತಿಬ್ಬರಿಗೂ ಗೇಟ್ ಪಾಸ್:
ಅಭಿಷೇಕ್ ನಾಯರ್ ಜೊತೆಗೆ, ಫೀಲ್ಡಿಂಗ್ ಕೋಚ್ ಟಿ ದಿಲೀಪ್ ಹಾಗೂ ಸ್ಟ್ರೆಂತ್ ಮತ್ತು ಕಂಡೀಷನಿಂಗ್ ಕೋಚ್ ಸೋಹಮ್ ದೇಸಾಯಿ ಅವರನ್ನು ತಂಡದಿಂದ ಬಿಡುಗಡೆ ಮಾಡಲು ನಿರ್ಧರಿಸಲಾಗಿದೆ. ಈ ಇಬ್ಬರೂ ರಾಹುಲ್ ದ್ರಾವಿಡ್ ಅವರು ಕೋಚ್ ಆಗಿದ್ದ ವೇಳೆ ಸಿಬ್ಬಂದಿ ವರ್ಗಕ್ಕೆ ನೇಮಕವಾಗಿದ್ದರು. ಇದೀಗ ಮೂರು ವರ್ಷಗಳ ಬಳಿಕ ಇಬ್ಬರನ್ನು ವಜಾಗೊಳಿಸಲು ಬಿಸಿಸಿಐ ಮುಂದಾಗಿದೆ.
ಬದಲಿಯಾಗಿ ಬರುವವರು ಯಾರು?
ಟೀಮ್ ಇಂಡಿಯಾದ ಬ್ಯಾಟಿಂಗ್ ಕೋಚ್ ಆಗಿ ಅಭಿಷೇಕ್ ನಾಯರ್ ಕಳೆದ 8 ತಿಂಗಳಿಂದ ಕಾರ್ಯ ನಿರ್ವಹಿಸುತ್ತಿದ್ದಾರೆ. ಇದೀಗ ಅವರನ್ನು ಕೈ ಬಿಡಲು ಮುಂದಾಗಿದ್ದು, ಅವರ ಸ್ಥಾನದಲ್ಲಿ ಸೀತಾಂಶು ಕೊಟಕ್ ಬ್ಯಾಟಿಂಗ್ ಕೋಚ್ ಆಗಿ ಕಾಣಿಸಿಕೊಳ್ಳಲಿದ್ದಾರೆ ಎಂದು ವರದಿಯಾಗಿದೆ.
ಇನ್ನು ಫೀಲ್ಡಿಂಗ್ ಕೋಚ್ ಟಿ ದಿಲೀಪ್ ಅವರ ಸ್ಥಾನಕ್ಕೆ ಯಾರನ್ನೂ ಸಹ ಆಯ್ಕೆ ಮಾಡುವ ಸಾಧ್ಯತೆಯಿಲ್ಲ. ಬದಲಾಗಿ ಸಹಾಯಕ ಕೋಚ್ ಆಗಿರುವ ರಯಾನ್ ಟೆನ್ ಡೋಸ್ಚೇಟ್ ಅವರಿಗೆ ಫೀಲ್ಡಿಂಗ್ ಕೋಚ್ ಜವಾಬ್ದಾರಿಯನ್ನು ವಹಿಸಲಾಗುತ್ತದೆ ಎಂದು ತಿಳಿದು ಬಂದಿದೆ.
ಸ್ಟ್ರೆಂತ್ ಮತ್ತು ಕಂಡೀಷನಿಂಗ್ ಕೋಚ್ ಸೋಹಮ್ ದೇಸಾಯಿ ಅವರ ಬದಲಿಗೆ ಆಡ್ರಿಯನ್ ಲೆ ರೂಕ್ಸ್ ಅವರ ಹೆಸರು ಕೇಳಿ ಬಂದಿದೆ. ರೂಕ್ಸ್ ಐಪಿಎಲ್ನಲ್ಲಿ ಪಂಜಾಬ್ ಕಿಂಗ್ಸ್ ಜೊತೆ ಕಾರ್ಯ ನಿರ್ವಹಿಸುತ್ತಿದ್ದಾರೆ. ಇದಕ್ಕೂ ಮೊದಲು ಅವರು ಕೋಲ್ಕತ್ತಾ ನೈಟ್ ರೈಡರ್ಸ್ ಜೊತೆಯೂ ಸಹ ಕೆಲಸ ಮಾಡಿದ್ದಾರೆ. ಹೀಗಾಗಿ ಆಡ್ರಿಯನ್ ಲೆ ರೂಕ್ಸ್ ಟೀಮ್ ಇಂಡಿಯಾದ ಸ್ಟ್ರೆಂತ್ ಮತ್ತು ಕಂಡೀಷನಿಂಗ್ ಕೋಚ್ ಆಗಿ ಕಾಣಿಸಿಕೊಳ್ಳುವ ಸಾಧ್ಯತೆಯಿದೆ.
ಇನ್ನು ಟೀಮ್ ಇಂಡಿಯಾದ ಸಹಾಯಕ ಸಿಬ್ಬಂದಿ ವರ್ಗಗಳಲ್ಲಿ ರಾಘವೇಂದ್ರ, ದಯಾನಂದ ಗರಣಿ, ಕಮಲೇಶ್ ಜೈನ್, ಮಸಾಜ್ ಶೀಟ್ ಅರುಣ್ ಕಾನಡೆ, ಚೇತನ್ ಕುಮಾರ್, ರಾಜೀವ್ ಕುಮಾರ್, ತಂಡದ ಕಾರ್ಯಾಚರಣೆ ವ್ಯವಸ್ಥಾಪಕ ಸುಮಿತ್ ಮಲ್ಲಾಪುರ್ಕರ್, ಭದ್ರತಾ ವ್ಯವಸ್ಥಾಪಕ ಮತ್ತು ಇತರರು ಮೂಂದುವರೆಯುವ ಸಾಧ್ಯತೆಯಿದೆ.
ಕೇಂದ್ರ ಒಪ್ಪಂದಕ್ಕೂ ಮುನ್ನ ಬದಲಾವಣೆ:
ಐಪಿಎಲ್ 2025 ರ ಉದ್ಘಾಟನಾ ಸಮಾರಂಭದಂದು ಬಿಸಿಸಿಐ ಅಪೆಕ್ಸ್ ಕಮಿಟಿ ಸಭೆ ನಡೆದಿದೆ. ಈ ವೇಳೆ ಟೀಮ್ ಇಂಡಿಯಾ ಆಟಗಾರರ ಕೇಂದ್ರೀಯ ಒಪ್ಪಂದದ ಕುರಿತು ಆಳವಾದ ಚರ್ಚೆ ನಡೆದಿದೆ. ಈ ಸಭೆಯ ಎರಡು ದಿನಗಳ ನಂತರ, ಭಾರತೀಯ ಮಹಿಳಾ ಕ್ರಿಕೆಟ್ ಆಟಗಾರ್ತಿಯರರ ಒಪ್ಪಂದಗಳನ್ನು ಘೋಷಿಸಲಾಯಿತು. ಇದಾಗ್ಯೂ ಇನ್ನೂ ಸಹ ಪುರುಷರ ತಂಡಗಳ ಕೇಂದ್ರ ಒಪ್ಪಂದವನ್ನು ಪ್ರಕಟಿಸಲಾಗಿಲ್ಲ.
ಇದನ್ನೂ ಓದಿ: IPL 2025: ಡೆಲ್ಲಿ ಕ್ಯಾಪಿಟಲ್ಸ್ ಪ್ಲೇಆಫ್ಗೇರಲು ಮೂರೇ ಮೂರು ಹೆಜ್ಜೆ ದೂರ
ಇದಕ್ಕೆ ಮುಖ್ಯ ಕಾರಣ ಸಿಬ್ಬಂದಿ ವರ್ಗಗಳಲ್ಲಿ ಬದಲಾವಣೆಗೆ ಮುಂದಾಗಿರುವುದು ಎಂದು ತಿಳಿದು ಬಂದಿದೆ. ಇದೀಗ ಟೀಮ್ ಇಂಡಿಯಾದ ಸಿಬ್ಬಂದಿ ವರ್ಗಕ್ಕೆ ಮೇಜರ್ ಸರ್ಜರಿ ಮಾಡಲು ರೂಪುರೇಷೆಗಳು ಸಿದ್ಧವಾಗಿದ್ದು, ಹೀಗಾಗಿ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಗೂ ಮುನ್ನ ಟೀಮ್ ಇಂಡಿಯಾ ಆಟಗಾರರ ಕೇಂದ್ರ ಒಪ್ಪಂದದ ಪಟ್ಟಿ ಬಿಡುಗಡೆಯಾಗುವ ಸಾಧ್ಯತೆಯಿದೆ.