
ಭಾರತ ಮತ್ತು ಪಾಕಿಸ್ತಾನ ನಡುವಿನ ಉದ್ವಿಗ್ನತೆ ಇದೀಗ ಐಪಿಎಲ್ (IPL 2025) ಮೇಲೂ ಪರಿಣಾಮ ಬೀರಿದೆ. ಕಳೆದೆರಡು ದಿನಗಳಿಂದ ಕೇಳಿಬರುತ್ತಿದ್ದ ಸುದ್ದಿ ಇದೀಗ ನಿಜವಾಗಿದ್ದು, ಧರ್ಮಶಾಲಾದಲ್ಲಿ ( Dharamshala) ನಡೆಯಬೇಕಿದ್ದ ಐಪಿಎಲ್ ಪಂದ್ಯವನ್ನು ಸ್ಥಳಾಂತರಿಸಲಾಗಿದೆ. ವಾಸ್ತವವಾಗಿ ಮೇ 11 ರಂದು ಧರ್ಮಶಾಲಾದಲ್ಲಿ ಮುಂಬೈ ಇಂಡಿಯನ್ಸ್ ಹಾಗೂ ಪಂಜಾಬ್ ಕಿಂಗ್ಸ್ (PBKS vs MI) ನಡುವಿನ ಪಂದ್ಯ ನಡೆಯಬೇಕಿತ್ತು. ಆದರೆ ಇದೀಗ ಈ ಪಂದ್ಯವನ್ನು ಧರ್ಮಶಾಲಾದಿಂದ ಈಗ ಅಹಮದಾಬಾದ್‌ಗೆ ಸ್ಥಳಾಂತರಿಸಲಾಗಿದೆ.
ಧರ್ಮಶಾಲಾದಿಂದ ಪಂದ್ಯವನ್ನು ಸ್ಥಳಾಂತರಿಸುವ ಬಗ್ಗೆ ಗುಜರಾತ್ ಕ್ರಿಕೆಟ್ ಸಂಸ್ಥೆಯ ಕಾರ್ಯದರ್ಶಿ ಅನಿಲ್ ಪಟೇಲ್ ಮಾಹಿತಿ ನೀಡಿದ್ದು, ಮೇ 11 ರಂದು ನಡೆಯಬೇಕಿದ್ದ ಪಂಜಾಬ್ ಕಿಂಗ್ಸ್ ಮತ್ತು ಮುಂಬೈ ಇಂಡಿಯನ್ಸ್ ನಡುವಿನ ಪಂದ್ಯವನ್ನು ಈಗ ಅಹಮದಾಬಾದ್‌ಗೆ ಸ್ಥಳಾಂತರಿಸಲಾಗಿದೆ ಎಂದು ಅವರು ಹೇಳಿದರು. ಆದಾಗ್ಯೂ, ಈ ಪಂದ್ಯವನ್ನು ಮುಂಬೈನ ಬ್ರಬೋರ್ನ್ ಕ್ರೀಡಾಂಗಣಕ್ಕೆ ಸ್ಥಳಾಂತರಿಸಬಹುದು ಎಂಬ ಊಹಾಪೋಹಗಳು ಮೊದಲೇ ಇದ್ದವು. ಆದರೆ ಇದೀಗ ಈ ಪಂದ್ಯವನ್ನು ಗುಜರಾತ್ ಟೈಟಾನ್ಸ್ ತಂಡದ ತವರು ಮೈದಾನವಾದ ಅಹಮದಾಬಾದ್‌ನಲ್ಲಿ ನಡೆಸಲು ತೀರ್ಮಾನಿಸಲಾಗಿದೆ.
ಆಪರೇಷನ್ ಸಿಂಧೂರ ಯಶಸ್ಸಿನ ನಂತರ, ಪಾಕಿಸ್ತಾನದಿಂದ ಪ್ರತಿದಾಳಿಯ ಬೆದರಿಕೆಯನ್ನು ಗಮನದಲ್ಲಿಟ್ಟುಕೊಂಡು, ಕೇಂದ್ರ ಸರ್ಕಾರವು ಮುಂದಿನ ಕೆಲವು ಗಂಟೆಗಳ ಕಾಲ ಗಡಿಗೆ ಹೊಂದಿಕೊಂಡಿರುವ ರಾಜ್ಯಗಳು ಮತ್ತು ನಗರಗಳ ವಿಮಾನ ನಿಲ್ದಾಣಗಳನ್ನು ಮುಚ್ಚಿದೆ. ಈ ವಿಮಾನ ನಿಲ್ದಾಣಗಳಿಂದ ಎಲ್ಲಾ ರೀತಿಯ ನಾಗರಿಕ ವಿಮಾನಗಳನ್ನು ರದ್ದುಗೊಳಿಸಲಾಗಿದೆ. ಧರ್ಮಶಾಲಾ ಅಂತರರಾಷ್ಟ್ರೀಯ ಗಡಿಯಿಂದ ಕೇವಲ 150 ಕಿಲೋಮೀಟರ್ ದೂರದಲ್ಲಿದೆ. ಅಂತಹ ಪರಿಸ್ಥಿತಿಯಲ್ಲಿ, ಅಲ್ಲಿನ ವಿಮಾನ ನಿಲ್ದಾಣವನ್ನು ಸಹ ಮುಚ್ಚಲು ನಿರ್ಧರಿಸಲಾಗಿದೆ. ಇದೇ ಕಾರಣಕ್ಕೆ ಅಲ್ಲಿ ನಡೆಯಬೇಕಿದ್ದ ಮುಂಬೈ ಮತ್ತು ಪಂಜಾಬ್ ನಡುವಿನ ಪಂದ್ಯವನ್ನು ಸ್ಥಳಾಂತರಿಸಲಾಗಿದೆ.
ಪಂಜಾಬ್ ಕಿಂಗ್ಸ್ ಹಾಗೂ ಮುಂಬೈ ಇಂಡಿಯನ್ಸ್ ನಡುವಿನ ಪಂದ್ಯದ ಹೊರತಾಗಿ ಮೇ 8 ರಂದು ಧರ್ಮಶಾಲಾದಲ್ಲಿ ಪಂಜಾಬ್ ಕಿಂಗ್ಸ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ನಡುವೆ ಪಂದ್ಯ ನಡೆಯಲಿದೆ. ಆದರೆ, ಈ ಪಂದ್ಯದ ಮೇಲೆ ಯಾವುದೇ ಪರಿಣಾಮ ಬೀರಿಲ್ಲ. ಈ ಪಂದ್ಯದ ಸ್ಥಳವೂ ಬದಲಾಗಬಹುದು ಎಂಬ ಊಹಾಪೋಹಗಳು ಈ ಹಿಂದೆ ಕೇಳಿಬಂದಿದ್ದವು. ಆದರೆ, ಪಂಜಾಬ್ ಮತ್ತು ಡೆಲ್ಲಿ ನಡುವಿನ ಪಂದ್ಯವನ್ನು ಧರ್ಮಶಾಲಾದಲ್ಲೇ ನಡೆಸಲು ತೀರ್ಮಾನಿಸಲಾಗಿದೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 5:59 pm, Thu, 8 May 25