ಮುಂದಿನ ಆವೃತ್ತಿಯ ಐಪಿಎಲ್ಗೂ ಮುನ್ನ ಮೆಗಾ ಹರಾಜು ನಡೆಯಲಿದೆ. ಈ ಹರಾಜಿಗೆ ಸಂಬಂಧಿಸಿದಂತೆ ಬಿಸಿಸಿಐ, ನಿನ್ನೆಯಷ್ಟೇ ಧಾರಣ ನಿಯಮಗಳನ್ನು ಪ್ರಕಟಿಸಿತ್ತು. ಅದರಂತೆ ಮುಂಬರುವ ಮೆಗಾ ಹರಾಜಿಗೂ ಮುನ್ನ ಎಲ್ಲಾ ಫ್ರಾಂಚೈಸಿಗಳಿಗೆ ತಂಡದಲ್ಲಿ 5 ಆಟಗಾರರನ್ನು ಉಳಿಸಿಕೊಳ್ಳಲು ಬಿಸಿಸಿಐ ಅವಕಾಶ ಮಾಡಿಕೊಟ್ಟಿದೆ. ಇದಲ್ಲದೆ ಒಬ್ಬ ಆಟಗಾರನನ್ನು ಆರ್ಟಿಎಮ್ ಕಾರ್ಡ್ ಬಳಸಿ ಮತ್ತೆ ತಮ್ಮ ತಂಡಕ್ಕೆ ಸೇರಿಸಿಕೊಳ್ಳುವುದಕ್ಕೂ ಅನುಮತಿ ನೀಡಲಾಗಿದೆ. ಇದೀಗ ಧಾರಣ ಪಟ್ಟಿಯನ್ನು ಎಲ್ಲಾ ಫ್ರಾಂಚೈಸಿಗಳು ಯಾವಾಗ ಆಡಳಿತ ಮಂಡಳಿಗೆ ಸಲ್ಲಿಸಬೇಕು ಎಂಬುದಕ್ಕೆ ಬಿಸಿಸಿಐ ಡೆಡ್ ಲೈನ್ ನಿಗದಿ ಮಾಡಿದೆ. ಅದರಂತೆ ಅಕ್ಟೋಬರ್ 31ರೊಳಗೆ ಎಲ್ಲಾ 10 ಫ್ರಾಂಚೈಸಿಗಳು ತಾವು ಉಳಿಸಿಕೊಂಡಿರುವ ಐದು ಆಟಗಾರರು ಯಾರ್ಯಾರು ಎಂಬ ಪಟ್ಟಿಯನ್ನು ಬಿಸಿಸಿಐಗೆ ಸಲ್ಲಿಸಬೇಕಿದೆ.
ಕ್ರಿಕ್‌ಬಝ್ ವರದಿಯ ಪ್ರಕಾರ, ಬಿಸಿಸಿಐ ಎಲ್ಲಾ 10 ಫ್ರಾಂಚೈಸಿಗಳು ತಮ್ಮ ಉಳಿಸಿಕೊಂಡಿರುವ ಆಟಗಾರರ ಪಟ್ಟಿಯನ್ನು ಮೆಗಾ ಹರಾಜಿನ ಮೊದಲು ಘೋಷಿಸಲು ಅಕ್ಟೋಬರ್ 31, 2024 ಅನ್ನು ಗಡುವು ದಿನವಾಗಿ ನಿಗದಿಪಡಿಸಿದೆ. ಈ ದಿನಾಂಕದಂದು ಸಂಜೆ 5 ಗಂಟೆಯ ಒಳಗೆ ಎಲ್ಲಾ ತಂಡಗಳು ತಾವು ಉಳಿಸಿಕೊಂಡಿರುವ ಐದು ಆಟಗಾರರ ಹೆಸರನ್ನು ಬಹಿರಂಗಪಡಿಸಬೇಕು.
ಐಪಿಎಲ್ 2025 ರ ಮೆಗಾ ಹರಾಜಿಗೆ ಸಂಬಂಧಿಸಿದಂತೆ ಮತ್ತೊಂದು ದೊಡ್ಡ ಸುದ್ದಿ ಹೊರಬಿದ್ದಿದೆ. ಅದರಂತೆ ಅಕ್ಟೋಬರ್ 31 ರ ಮೊದಲು ಯಾವುದೇ ಆಟಗಾರ ಅಂತರಾಷ್ಟ್ರೀಯ ಕ್ರಿಕೆಟ್ಗೆ ಪದಾರ್ಪಣೆ ಮಾಡಿದರೆ, ಅವರನ್ನು ಕ್ಯಾಪ್ಡ್ ಆಟಗಾರ ಎಂದು ಪರಿಗಣಿಸಲಾಗುತ್ತದೆ. ಇತ್ತೀಚೆಗಷ್ಟೇ ಬಾಂಗ್ಲಾದೇಶ ವಿರುದ್ಧದ ಟಿ20 ಸರಣಿಗೆ ಟೀಂ ಇಂಡಿಯಾ ಪ್ರಕಟವಾಗಿದೆ. ಈ ತಂಡದಲ್ಲಿ ಯುವ ಆಟಗಾರರಾದ ಮಯಾಂಕ್ ಯಾದವ್, ಹರ್ಷಿತ್ ರಾಣಾ ಮತ್ತು ನಿತೀಶ್ ಕುಮಾರ್ ಕೂಡ ಸ್ಥಾನ ಪಡೆದಿದ್ದಾರೆ. ಈ ಆಟಗಾರರು ಪ್ರಸ್ತುತ ಅನ್‌ಕ್ಯಾಪ್ಡ್ ಆಟಗಾರರಾಗಿದ್ದು, ಇವರಲ್ಲಿ ಯಾವ ಆಟಗಾರ ಬಾಂಗ್ಲಾದೇಶ ವಿರುದ್ಧದ ಟಿ20 ಸರಣಿಯಲ್ಲಿ ಆಡುವ ಅವಕಾಶ ಪಡೆಯುತ್ತಾರೋ ಅವರು ಕ್ಯಾಪ್ಡ್ ಆಟಗಾರರ ಪಟ್ಟಿಯಲ್ಲಿ ಬರುತ್ತಾರೆ.
ಈ ಬಾರಿಯ ಮೆಗಾ ಹರಾಜಿಗೆ ಆಡಳಿತ ಮಂಡಳಿಯು ಫ್ರಾಂಚೈಸಿಯ ಪರ್ಸ್ ಗಾತ್ರದಲ್ಲೂ ಸಹ ಹೆಚ್ಚಳ ಮಾಡಿದೆ. ಅದರಂತೆ ಮುಂದಿನ ಆವೃತ್ತಿಯಿಂದ ಪ್ರತಿಯೊಂದು ಫ್ರಾಂಚೈಸಿಗಳ ಪರ್ಸ್ ಗಾತ್ರ 100 ಕೋಟಿಯಿಂದ 120 ಕೋಟಿಗೆ ಹೆಚ್ಚಳವಾಗಿದೆ. ಆದಾಗ್ಯೂ, ಉಳಿಸಿಕೊಂಡಿರುವ ಆಟಗಾರರ ಮೊತ್ತವನ್ನು ಈ ಹರಾಜು ಪರ್ಸ್‌ನಿಂದ ಕಡಿತಗೊಳಿಸಲಾಗುತ್ತದೆ. ಈ ರೀತಿಯಾಗಿ, ಫ್ರಾಂಚೈಸಿಯು ಎಲ್ಲಾ 5 ಆಟಗಾರರನ್ನು ಉಳಿಸಿಕೊಂಡರೆ, ಅದರ ಹರಾಜು ಪರ್ಸ್‌ನ 120 ಕೋಟಿ ರೂಪಾಯಿಗಳಿಂದ 75 ಕೋಟಿ ರೂಪಾಯಿಗಳನ್ನು ಕಡಿತಗೊಳಿಸಲಾಗುತ್ತದೆ. ಇನ್ನುಳಿದ 45 ಕೋಟಿ ರೂಗಳಲ್ಲೇ ಉಳಿದ 20 ಆಟಗಾರರನ್ನು ಖರೀದಿಸಬೇಕಾಗುತ್ತದೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 3:06 pm, Sun, 29 September 24