IPL 2025: ಆರ್ಸಿಬಿ ಸೇರ್ತಾರಾ ಕೆಎಲ್ ರಾಹುಲ್? ಶಾಕಿಂಗ್ ಹೇಳಿಕೆ ನೀಡಿದ ಕನ್ನಡಿಗ ಗೌತಮ್
IPL 2025: ಕಳೆದ ಕೆಲ ತಿಂಗಳುಗಳಿಂದ ಕನ್ನಡಿಗ ಕೆಎಲ್ ರಾಹುಲ್ ಮತ್ತೆ ಆರ್ಸಿಬಿ ಜೆರ್ಸಿಯಲ್ಲಿ ಕಾಣಿಸಿಕೊಳ್ಳುವ ಸಾಧ್ಯತೆಯಿದೆ ಎಂದು ಸುದ್ದಿಯೊಂದು ಹರಿದಾಡುತ್ತಿದ್ದು, ಅದರ ಕುರಿತಾಗಿ ರಾಹುಲ್ ಅವರ ಸಹ ಆಟಗಾರ ಕೃಷ್ಣಪ್ಪ ಗೌತಮ್ ಎಕ್ಸ್‌ಕ್ಲ್ಯೂಸಿವ್ ಮಾಹಿತಿಯೊಂದನ್ನು ನೀಡಿದ್ದಾರೆ.
ನಿನ್ನೆಯಷ್ಟೇ ಬಿಸಿಸಿಐ, ಮುಂಬರುವ ಐಪಿಎಲ್ ಮೆಗಾ ಹರಾಜಿಗೆ ಸಂಬಂಧಿಸಿದಂತೆ ಹೊಸ ನಿಯಮಗಳನ್ನು ಬಿಡುಗಡೆಗೊಳಿಸಿದೆ. ಆ ಪ್ರಕಾರವಾಗಿ ಫ್ರಾಂಚೈಸಿಗಳಿಗೆ ಹರಾಜಿಗೂ ಮುನ್ನ ಐವರು ಆಟಗಾರರನ್ನು ತಂಡದಲ್ಲಿ ಉಳಿಸಿಕೊಳ್ಳಲು ಹಾಗೂ ಹರಾಜಿನಲ್ಲಿ ಒಬ್ಬ ಆಟಗಾರನನ್ನು ರೈಟ್ ಮ್ಯಾಚ್ ಕಾರ್ಡ್ ಬಳಸಿ ಮತ್ತೆ ತನ್ನ ತಂಡಕ್ಕೆ ಸೇರಿಸಿಕೊಳ್ಳಲು ಅನುಮತಿ ನೀಡಿದೆ. ಇದರೊಂದಿಗೆ ಐಪಿಎಲ್ ಮೆಗಾ ಹರಾಜಿನ ಬಗ್ಗೆ ಸಾಕಷ್ಟು ಕುತೂಹಲ ಮೂಡಿದೆ. ಈ ನಡುವೆ ಕ್ರಿಕೆಟ್ ಅಭಿಮಾನಿಗಳಂತೂ ತಮ್ಮ ನೆಚ್ಚಿನ ಆಟಗಾರರನ್ನು ಯಾವ ಫ್ರಾಂಚೈಸಿ ಖರೀದಿಸಬಹುದೆಂದು ಕುತೂಹಲಭರಿತರಾಗಿ ಕಾಯುತ್ತಿದ್ದಾರೆ. ಈ ಎಲ್ಲಾ ಕುತೂಹಲಗಳಿಗೂ ಉತ್ತರ ಸಿಗಬೇಕಾದರೇ ಮುಂದೆ ನಡೆಯುವ ಐಪಿಎಲ್ ಹರಾಜು ಪ್ರಕ್ರಿಯೆವರೆಗೆ ಕಾಯಲೇಬೇಕಿದೆ.
ರಾಹುಲ್ ಬಗ್ಗೆ ಊಹಾಪೋಹಗಳು
ಈ ನಡುವೆ ಕನ್ನಡಿಗರ ನೆಚ್ಚಿನ ತಂಡ ಆರ್ಸಿಬಿ ಯಾವೆಲ್ಲಾ ಪ್ರಸ್ತುತ ಆಟಗಾರರಿಗೆ ಟಾಟಾ ಬೈ ಬೈ ಹೇಳಬಹುದು? ಮೆಗಾ ಹರಾಜಿನಲ್ಲಿ ರೆಡ್ ಆರ್ಮಿಯನ್ನು ಯಾರು ಸೇರಿಕೊಳ್ಳಬಹುದು ಎಂದು ಫ್ಯಾನ್ಸ್ ಯೋಚಿಸುವಂತಾಗಿದೆ. ಅದರಲ್ಲೂ ಕರ್ನಾಟಕದ ಆಟಗಾರರನ್ನು ಆರ್ಸಿಬಿ ತನ್ನ ತೆಕ್ಕೆಗೆ ಸೇರಿಸಿಕೊಳ್ಳುತ್ತೆ ಅಂದ್ರೆ ಕನ್ನಡಿಗರಿಗಂತೂ ಎಲ್ಲಿಲ್ಲದ ಖುಷಿ. ಹೀಗಿರುವಾಗ ಕಳೆದ ಕೆಲ ತಿಂಗಳುಗಳಿಂದ ಕನ್ನಡಿಗ ಕೆಎಲ್ ರಾಹುಲ್ ಮತ್ತೆ ಆರ್ಸಿಬಿ ಜೆರ್ಸಿಯಲ್ಲಿ ಕಾಣಿಸಿಕೊಳ್ಳುವ ಸಾಧ್ಯತೆಯಿದೆ ಎಂದು ಸುದ್ದಿಯೊಂದು ಹರಿದಾಡುತ್ತಿದ್ದು, ಅದರ ಕುರಿತಾಗಿ ರಾಹುಲ್ ಅವರ ಸಹ ಆಟಗಾರ ಕೃಷ್ಣಪ್ಪ ಗೌತಮ್ ಎಕ್ಸ್‌ಕ್ಲ್ಯೂಸಿವ್ ಮಾಹಿತಿಯೊಂದನ್ನು ನೀಡಿದ್ದಾರೆ.
ಲಕ್ನೋ ತಂಡಕ್ಕೆ ರಾಹುಲ್ ಗುಡ್ ಬೈ?
ಲಕ್ನೋ ಸೂಪರ್ ಜೈಂಟ್ಸ್ ತಂಡದ ನಾಯಕನಾಗಿರುವ ಕೆಎಲ್ ರಾಹುಲ್ ತಮ್ಮ ತಂಡವನ್ನು 2022 ಹಾಗೂ 2023ರ ಐಪಿಎಲ್ ಸೀಸನ್‌ಗಳಲ್ಲಿ ಪ್ಲೇ ಆಫ್‌ವರೆಗೆ ಕರೆತಂದಿದ್ದರು. ಅಲ್ಲದೇ, ಸ್ವತಃ ಬ್ಯಾಟಿಂಗ್‌ನಲ್ಲಿ ಅತಿ ಹೆಚ್ಚು ಸ್ಕೋರರ್ ಅನಿಸಿದ್ದರು. ಕಳೆದ ಐಪಿಎಲ್‌ನಲ್ಲಿ ಅಷ್ಟೇನು ಪ್ರದರ್ಶನ ನೀಡದ ರಾಹುಲ್ ಗಾಯದಿಂದ ಹೊರಗುಳಿಯಬೇಕಾಯ್ತು. ಈ ಮಧ್ಯೆ ಪಂದ್ಯವೊಂದರ ಅಂತಿಮ ಹಂತದಲ್ಲಿ ಲಕ್ನೋ ಫ್ರಾಂಚೈಸಿಯ ಮಾಲೀಕ ಸಂಜೀವ್ ಗೋಯೆಂಕ ಸ್ಟೇಡಿಯಂನಲ್ಲಿಯೇ ರಾಹುಲ್‌ನನ್ನು ತರಾಟೆಗೆತ್ತಿಕೊಂಡಿದ್ದು ಎಲ್ಲೆಡೇ ಭಾರಿ ಸುದ್ದಿಯಾಗಿತ್ತು. ಇದರಿಂದಾಗಿ ಕೆಎಲ್ ರಾಹುಲ್, ಲಕ್ನೋ ತಂಡವನ್ನು ತೊರೆಯುತ್ತಾರೆ ಎಂದೆಲ್ಲ ವದಂತಿಗಳು ಹಬ್ಬಲು ಶುರುವಾದವು.
ಇತ್ತ, ಆರ್ಸಿಬಿಯೂ ಮುಂದಿನ ಸೀಸನ್‌ಗಳಿಗೆ ನಾಯಕನ ಹುಡುಕಾಟದಲ್ಲಿದ್ದು, ಕೆಎಲ್ ರಾಹುಲ್‌ನನ್ನು ಹರಾಜಿನಲ್ಲಿ ಆರ್ಸಿಬಿ ಖರೀದಿಸಿದರೆ ಕರುನಾಡ ತಂಡವನ್ನು ಕನ್ನಡಿಗನೊಬ್ಬ ಮುನ್ನಡೆಸಿದಂತಾಗುತ್ತದೆ ಎಂದು ಆರ್ಸಿಬಿ ಅಭಿಮಾನಿಗಳು ಸಂತಸ ವ್ಯಕ್ತಪಡಿಸುತ್ತಿದ್ದಾರೆ. ಅಷ್ಟೇ ಅಲ್ಲದೇ, ದಿನೇಶ್ ಕಾರ್ತಿಕ್‌ನಿಂದ ತೆರವಾಗಿರೋ ವಿಕೆಟ್ ಕೀಪರ್ ಸ್ಥಾನವನ್ನೂ ರಾಹುಲ್ ಸಮರ್ಥವಾಗಿ ನಿಭಾಯಿಸಬಲ್ಲರು ಎಂದರಿತಿರುವ ಆರ್ಸಿಬಿ ಮ್ಯಾನೇಜ್‌ಮೆಂಟ್ ಕೂಡ ಅವರನ್ನು ಸಂಪರ್ಕಿಸಿದೆ ಎಂದು ಸಾಮಾಜಿಕ ಜಾಲತಾಣದಲ್ಲಿ ಸುದ್ದಿ ಹರಡಿವೆ. ರಾಹುಲ್ ಎಲ್‌ಎಸ್‌ಜಿ ತಂಡದಿಂದ ಹೊರಬರುವುದು ಪಕ್ಕಾ ಎಂದು ಹೇಳಲಾಗುತ್ತಿರುವ ಸಂದರ್ಭದಲ್ಲಿಯೇ ಮತ್ತೊಬ್ಬ ಕನ್ನಡಿಗ ಕೆ ಗೌತಮ್ ಈ ಬಗ್ಗೆ ಬಹು ಮುಖ್ಯವಾದ ವಿಷಯವನ್ನು ಹಂಚಿಕೊಂಡಿದ್ದಾರೆ.
ಶಾಕಿಂಗ್ ಹೇಳಿಕೆ ನೀಡಿದ ಗೌತಮ್
ಪ್ರಸ್ತುತ ಲಕ್ನೋ ತಂಡದಲ್ಲಿ ರಾಹುಲ್ ಜೊತೆ ಇರುವಇನ್ನೋರ್ವ ಕನ್ನಡಿಗ ಕೆ ಗೌತಮ್, ರಾಹುಲ್ ಆರ್ಸಿಬಿ ಸೇರುವ ಬಗ್ಗೆ ಇರುವ ವದಂತಿಗಳ ಬಗ್ಗೆ ಜಿಯೋ ಸಿನಿಮಾದಲ್ಲಿ ಮಾತನಾಡಿದ್ದಾರೆ. ಅದರಲ್ಲಿ ಅವರು ‘ಕೆಎಲ್ ರಾಹುಲ್‌ನಿಂದಾಗಿಯೇ ಲಕ್ನೋ ಟೀಂ ಬಿಲ್ಡ್ ಆಗಿದೆ. ಅವರು ಲೀಡರ್ ಮಾತ್ರವಲ್ಲ. ಫೇಸ್ ಆಫ್ ದಿ ಟೀಮ್ ಕೂಡ ಅವರೇ. ಎಲ್‌ಎಸ್‌ಜಿ ಅಂದಾಕ್ಷಣ ತಕ್ಷಣ ತಲೆಗೆ ಹೊಳೆಯುವುದೇ ಅವರು. ಏರು-ಪೇರು ಮೇಲೆ ಕೆಳಗೆ ಎಲ್ಲನೂ ಸಾಮಾನ್ಯ. ಜಸ್ಟ್ ಯಾವೂದೋ ಒಂದು ಘಟನೆ ನಡೆದಿದೆ ಅಂದ ಮಾತ್ರಕ್ಕೆ ರಾಹುಲ್‌ನನ್ನು ಬಿಡ್ತಾರೆ ಅನ್ನೋ ಹಾಗಿಲ್ಲ. ಗಾಸಿಪ್ ನಡೀತಾನೆ ಇರುತ್ತೆ ಏನು ಮಾಡಕ್ಕಾಗಲ್ಲ. ಫ್ರಾಂಚೈಸಿಯಿಂದ ಕೆಎಲ್ ರಾಹುಲ್‌ಗೆ ತುಂಬಾ ವ್ಯಾಲ್ಯೂ ಕೊಡ್ತಾರೆ. ಹೀಗಾಗಿ ಆರ್ಸಿಬಿ ತಂಡಕ್ಕೆ ಬರೋದು ತುಂಬಾ ಕಷ್ಟ ಇದೆ’ ಎಂದು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.
ಗೌತಮ್ ಹೇಳಿದ್ದೇನು? ಈ ಲಿಂಕ್ ಕ್ಲಿಕ್ ಮಾಡಿ
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 6:05 pm, Sun, 29 September 24