IPL 2025: ಮತ್ತೊಂದು ಗೆಲ್ಲುವ ಪಂದ್ಯ ಕೈಚೆಲ್ಲಿದ ರಾಜಸ್ಥಾನ್; ಆರ್ಸಿಬಿಗೆ ಹೆಚ್ಚಿದ ಸಂಕಷ್ಟ
Punjab Kings Defeat Rajasthan Royals by 10 Runs: ಪಂಜಾಬ್ ಕಿಂಗ್ಸ್ ತಂಡವು ರಾಜಸ್ಥಾನ್ ರಾಯಲ್ಸ್ ವಿರುದ್ಧ ರೋಮಾಂಚಕ ಪಂದ್ಯದಲ್ಲಿ 10 ರನ್‌ಗಳ ಅಂತರದಿಂದ ಗೆಲುವು ಸಾಧಿಸಿದೆ. ಮೊದಲು ಬ್ಯಾಟ್ ಮಾಡಿದ ಪಂಜಾಬ್ 219 ರನ್‌ಗಳನ್ನು ಗಳಿಸಿತು. ಗುರಿ ಬೆನ್ನಟ್ಟಿದ ರಾಜಸ್ಥಾನ್ ತಂಡ ಯಶಸ್ವಿ ಜೈಸ್ವಾಲ್ ಮತ್ತು ವೈಭವ್ ಅವರ ಆರಂಭಿಕ ಭರ್ಜರಿ ಬ್ಯಾಟಿಂಗ್ ಹೊರತಾಗಿ, ಹರ್ಪ್ರೀತ್ ಬ್ರಾರ್ ಅವರ ಅದ್ಭುತ ಬೌಲಿಂಗ್ ಮುಂದೆ ಮಂಕಾಗಿ 209 ರನ್‌ಗಳಿಗೆ ಸೀಮಿತವಾಯಿತು.

ಅರ್ಧಕ್ಕೆ ನಿಂತಿದ್ದ ಐಪಿಎಲ್ (IPL 2025) ವಾರದ ಬಳಿಕ ಆರಂಭವಾದರೂ ರಾಜಸ್ಥಾನ್ ರಾಯಲ್ಸ್ (RR) ತಂಡದ ಪ್ರದರ್ಶನ ಮಾತ್ರ ಬದಲಾಗಲಿಲ್ಲ. ಮತ್ತದೇ ಕಳಪೆ ಆಟ ಮುಂದುವರೆಸಿದ ಸಂಜು ಪಡೆ ಮತ್ತೊಂದು ಗೆಲ್ಲುವ ಪಂದ್ಯವನ್ನು ಕೈಚೆಲ್ಲಿತು. ಹೀಗಾಗಿ ಕೊನೆಯವರೆಗೂ ಗೆಲುವಿಗಾಗಿ ಹೋರಾಡಿದ ಪಂಜಾಬ್ ಕಿಂಗ್ಸ್ (PBKS), ರಾಜಸ್ಥಾನ ರಾಯಲ್ಸ್ ತಂಡವನ್ನು ರೋಮಾಂಚಕ ಪಂದ್ಯದಲ್ಲಿ 10 ರನ್‌ಗಳಿಂದ ಸೋಲಿಸಿತು. ಜೈಪುರದಲ್ಲಿ ನಡೆದ ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಪಂಜಾಬ್ ಕಿಂಗ್ಸ್ 219 ರನ್‌ಗಳ ಬೃಹತ್ ಸ್ಕೋರ್ ಗಳಿಸಿತು. ಈ ಗುರಿ ಬೆನ್ನಟ್ಟಿದ ರಾಜಸ್ಥಾನ ಸ್ಫೋಟಕ ಆರಂಭ ಕಂಡಿತ್ತಾದರೂ, ಹರ್‌ಪ್ರೀತ್ ಬ್ರಾರ್ ಅವರ ಸ್ಪಿನ್ ಮ್ಯಾಜಿಕ್‌ಗೆ ಸಿಲುಕಿ ಕೇವಲ 209 ರನ್ ಕಲೆಹಾಕಲಷ್ಟೇ ಶಕ್ತವಾಯಿತು. ಈ ಗೆಲುವಿನೊಂದಿಗೆ ಪಂಜಾಬ್ ಕಿಂಗ್ಸ್ ಪ್ಲೇಆಫ್‌ಗೆ ಇನ್ನಷ್ಟು ಹತ್ತಿರವಾಗಿದೆ.
ಪಂಜಾಬ್ಗೆ ಆರಂಭಿಕ ಆಘಾತ
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಪಂಜಾಬ್ ತಂಡ 34 ರನ್‌ಗಳಿಗೆ ಮೂರು ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು. ಆದಾಗ್ಯೂ, ನೆಹಾಲ್ ವಧೇರಾ ಇನ್ನಿಂಗ್ಸ್ ಜವಾಬ್ದಾರಿಯನ್ನು ವಹಿಸಿಕೊಂಡು 25 ಎಸೆತಗಳಲ್ಲಿ ಅರ್ಧಶತಕ ಗಳಿಸಿದರು. ಅವರು ಔಟಾದ ನಂತರ, ಶಶಾಂಕ್ ಸಿಂಗ್ ಆಕ್ರಮಣಕಾರಿಯಾಗಿ ಬ್ಯಾಟಿಂಗ್ ಮಾಡಿ ತಂಡವನ್ನು 200 ರನ್‌ಗಳ ಗಡಿ ದಾಟಿಸಿದರು.
ವಧೇರಾ ನಾಲ್ಕನೇ ವಿಕೆಟ್‌ಗೆ ನಾಯಕ ಶ್ರೇಯಸ್ ಅಯ್ಯರ್ ಅವರೊಂದಿಗೆ 67 ರನ್‌ಗಳ ಪಾಲುದಾರಿಕೆಯನ್ನು ಹಂಚಿಕೊಂಡರು. ಈ ವೇಳೆ ವಧೇರಾ 37 ಎಸೆತಗಳಲ್ಲಿ ಐದು ಬೌಂಡರಿ ಮತ್ತು ಐದು ಸಿಕ್ಸರ್‌ಗಳ ಸಹಾಯದಿಂದ 70 ರನ್ ಗಳಿಸಿ ಔಟಾದರು. ಆದಾಗ್ಯೂ, ಕೊನೆಯ ಓವರ್‌ಗಳಲ್ಲಿ, ಶಶಾಂಕ್, ಅಜ್ಮತುಲ್ಲಾ ಒಮರ್‌ಜೈ ಅವರೊಂದಿಗೆ ಆರನೇ ವಿಕೆಟ್‌ಗೆ 24 ಎಸೆತಗಳಲ್ಲಿ 60 ರನ್‌ಗಳನ್ನು ಸೇರಿಸಿ ಪಂಜಾಬ್ ತಂಡವನ್ನು ಉತ್ತಮ ಸ್ಥಿತಿಗೆ ತಂದರು.
ಶಶಾಂಕ್ ಅರ್ಧಶತಕ
ಪಂಜಾಬ್ ಪರ ಶಶಾಂಕ್ 30 ಎಸೆತಗಳಲ್ಲಿ ಐದು ಬೌಂಡರಿ ಮತ್ತು ಮೂರು ಸಿಕ್ಸರ್‌ಗಳೊಂದಿಗೆ ಅಜೇಯ 59 ರನ್ ಗಳಿಸಿದರೆ, ಒಮರ್‌ಜೈ ಒಂಬತ್ತು ಎಸೆತಗಳಲ್ಲಿ ಮೂರು ಬೌಂಡರಿ ಮತ್ತು ಒಂದು ಸಿಕ್ಸರ್‌ನೊಂದಿಗೆ 21 ರನ್ ಗಳಿಸಿ ಅಜೇಯರಾಗುಳಿದರು. ಇವರಲ್ಲದೆ, ಶ್ರೇಯಸ್ ಅಯ್ಯರ್ 25 ಎಸೆತಗಳಲ್ಲಿ 5 ಬೌಂಡರಿಗಳೊಂದಿಗೆ 30 ರನ್ ಗಳಿಸಿದರೆ, ಪ್ರಭ್ಸಿಮ್ರಾನ್ ಸಿಂಗ್ 10 ಎಸೆತಗಳಲ್ಲಿ 3 ಬೌಂಡರಿ ಮತ್ತು ಒಂದು ಸಿಕ್ಸರ್ ಸಹಾಯದಿಂದ 21 ರನ್ ಗಳಿಸಿದರು. ಪ್ರಿಯಾಂಶ್ ಆರ್ಯ 9 ರನ್ ಗಳಿಸಿದರೆ, ಮಿಚೆಲ್ ಓವನ್ ಖಾತೆ ತೆರೆಯದೆ ಔಟಾದರು. ರಾಜಸ್ಥಾನ ಪರ ತುಷಾರ್ ದೇಶಪಾಂಡೆ ಎರಡು ವಿಕೆಟ್ ಪಡೆದರೆ, ಕ್ವೇನಾ ಎಂಫಕಾ, ರಿಯಾನ್ ಪರಾಗ್ ಮತ್ತು ಆಕಾಶ್ ಮಧ್ವಾಲ್ ತಲಾ ಒಂದು ವಿಕೆಟ್ ಪಡೆದರು.
ಜೈಸ್ವಾಲ್- ವೈಭವ್ ಸೂಪರ್ ಬ್ಯಾಟಿಂಗ್
ಈ ಗುರಿ ಬೆನ್ನಟ್ಟಿದ ರಾಜಸ್ಥಾನಕ್ಕೆ ಯಶಸ್ವಿ ಮತ್ತು ವೈಭವ್ ಸೂರ್ಯವಂಶಿ ಉತ್ತಮ ಆರಂಭವನ್ನು ನೀಡಿದರು. ಕೇವಲ 4.5 ಓವರ್‌ಗಳಲ್ಲಿ ಮೊದಲ ವಿಕೆಟ್‌ಗೆ 76 ರನ್ ಸೇರಿಸಿದರು. 15 ಎಸೆತಗಳಲ್ಲಿ ನಾಲ್ಕು ಬೌಂಡರಿ ಮತ್ತು ನಾಲ್ಕು ಸಿಕ್ಸರ್‌ಗಳ ಸಹಾಯದಿಂದ 40 ರನ್ ಗಳಿಸಿ ವೈಭವ್ ಔಟಾದರು. ಇದಾದ ನಂತರವೂ ಅಬ್ಬರದ ಬ್ಯಾಟಿಂಗ್ ಮುಂದುವರೆಸಿದ ಜೈಸ್ವಾಲ್ 24 ಎಸೆತಗಳಲ್ಲಿ ತಮ್ಮ ಅರ್ಧಶತಕವನ್ನು ಪೂರೈಸಿದರು. ಆದಾಗ್ಯೂ, ಅವರು ಅರ್ಧಶತಕ ಗಳಿಸಿದ ಕೂಡಲೇ ವಿಕೆಟ್ ಕಳೆದುಕೊಂಡರು.
ಕೈಕೊಟ್ಟ ಮಧ್ಯಮ ಕ್ರಮಾಂಕ
ಈ ಇಬ್ಬರು ಬ್ಯಾಟ್ಸ್‌ಮನ್‌ಗಳ ವಿಕೆಟ್ ಪತನದ ನಂತರ ರಾಜಸ್ಥಾನ ಲಯ ಕಳೆದುಕೊಂಡಿದಲ್ಲದೆ ನಿಯಮಿತ ಅಂತರದಲ್ಲಿ ವಿಕೆಟ್‌ಗಳನ್ನು ಕಳೆದುಕೊಂಡಿತು. ನಾಯಕ ಸಂಜು ಸ್ಯಾಮ್ಸನ್ 20 ರನ್ ಗಳಿಸಿ ಔಟಾದರೆ, ರಿಯಾನ್ ಪರಾಗ್ 13 ರನ್ ಗಳಿಸಿ ಔಟಾದರು. ಕೊನೆಯಲ್ಲಿ ಏಕಾಂಗಿ ಹೋರಾಟ ನೀಡಿದ ಧ್ರುವ್ ಜುರೆಲ್ ಅರ್ಧಶತಕ ಬಾರಿಸಿದರಾದರೂ, ಮಧ್ಯಮ ಓವರ್‌ಗಳಲ್ಲಿ ನಿಧಾನಗತಿಯ ಬ್ಯಾಟಿಂಗ್ ರಾಜಸ್ಥಾನ್ ಸೋಲಿಗೆ ಕಾರಣವಾಯಿತು. ರಾಜಸ್ಥಾನಕ್ಕೆ ಕೊನೆಯ ಓವರ್‌ನಲ್ಲಿ 22 ರನ್‌ಗಳು ಬೇಕಾಗಿದ್ದವು ಆದರೆ ಮಾರ್ಕೊ ಯಾನ್ಸನ್, ಜುರೆಲ್ ಅವರನ್ನು ಔಟ್ ಮಾಡಿ ರಾಜಸ್ಥಾನ್ ಸೋಲನು ಖಚಿತಪಡಿಸಿದರು. ಜುರೇಲ್ ಅಂತಿಮವಾಗಿ 31 ಎಸೆತಗಳಲ್ಲಿ ಮೂರು ಬೌಂಡರಿ ಮತ್ತು ನಾಲ್ಕು ಸಿಕ್ಸರ್‌ಗಳ ಸಹಾಯದಿಂದ 53 ರನ್ ಗಳಿಸಿದರು. ಪಂಜಾಬ್ ಪರ ಹರ್‌ಪ್ರೀತ್ ಬ್ರಾರ್ ಮೂರು ವಿಕೆಟ್ ಪಡೆದರೆ, ಯಾನ್ಸೆನ್ ಮತ್ತು ಅಜ್ಮತುಲ್ಲಾ ಒಮರ್‌ಜೈ ತಲಾ ಎರಡು ವಿಕೆಟ್ ಪಡೆದರು.
IPL 2025: ಒಂದೇ ಒಂದು ರನ್ ಓಡದೆ 40 ರನ್ ಚಚ್ಚಿದ ವೈಭವ್; ವಿಡಿಯೋ
ಆರ್ಸಿಬಿಗೆ ಸಂಕಷ್ಟ
ಈ ಗೆಲುವಿನೊಂದಿಗೆ ಪಂಜಾಬ್ ಆಡಿರುವ 12 ಪಂದ್ಯಗಳಲ್ಲಿ 8 ಪಂದ್ಯಗಳನ್ನು ಗೆದ್ದು 17 ಅಂಕಗಳೊಂದಿಗೆ ಎರಡನೇ ಸ್ಥಾನಕ್ಕೇರಿದೆ. ಆರ್ಸಿಬಿ ಕೂಡ 17 ಅಂಕಗಳನ್ನು ಹೊಂದಿದೆಯಾದರೂ ಅದರ ನೆಟ್ ರನ್ರೇಟ್ ಪಂಜಾಬ್ಗಿಂತ ಹೆಚ್ಚಿದೆ. ಹೀಗಾಗಿ ಆರ್ಸಿಬಿ ಮೊದಲ ಸ್ಥಾನದಲ್ಲಿದೆ. ಇಂದಿನ ಪಂದ್ಯದಲ್ಲಿ ಪಂಜಾಬ್ ಗೆದ್ದಿರುವುದು ಆರ್ಸಿಬಿಗೆ ದೊಡ್ಡ ತಲೆನೋವಾಗಿದೆ. ಹೀಗಾಗಿ ಆರ್ಸಿಬಿ ಉಳಿದಿರುವ ಎರಡು ಪಂದ್ಯಗಳನ್ನು ಗೆದ್ದರೆ ಮಾತ್ರ ಅದಕ್ಕೆ ಪ್ಲೇಆಫ್ ಟಿಕೆಟ್ ಖಚಿತವಾಗಲಿದೆ. ಇಲ್ಲದಿದ್ದರೆ ಉಳಿದ ತಂಡಗಳ ಫಲಿತಾಂಶದ ಮೇಲೆ ಅವಲಂಬಿತವಾಗಬೇಕಾಗುತ್ತದೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 7:40 pm, Sun, 18 May 25
