IPL 2025
IPL 2025: ಇಂಡಿಯನ್ ಪ್ರೀಮಿಯರ್ ಲೀಗ್ ಸೀಸನ್ 18ರ ಸಿದ್ಧತೆಗಳು ಶುರುವಾಗಿದೆ. ಇದರ ಮೊದಲ ಹೆಜ್ಜೆ ಎಂಬಂತೆ ಇದೀಗ ಆಟಗಾರರ ರಿಟೈನ್ ಪ್ರಕ್ರಿಯೆಯ ಚರ್ಚೆಗಳು ಆರಂಭವಾಗಿದೆ. ಅಂದರೆ ಈ ಬಾರಿ ಮೆಗಾ ಹರಾಜು ನಡೆಯಲಿದ್ದು, ಇದಕ್ಕೂ ಮುನ್ನ ತಂಡದಲ್ಲಿ ಕೆಲ ಆಟಗಾರರನ್ನು ಮಾತ್ರ ಉಳಿಸಿಕೊಳ್ಳಲು ಅವಕಾಶ ಇರಲಿದೆ. ಇನ್ನುಳಿದ ಆಟಗಾರರನ್ನು ಹರಾಜಿಗಾಗಿ ಬಿಡುಗಡೆ ಮಾಡಬೇಕಾಗುತ್ತದೆ.
ಆದರೆ ಮೆಗಾ ಹರಾಜಿಗೂ ಮುನ್ನ ಕೆಲ ಫ್ರಾಂಚೈಸಿಗಳು ಬಿಸಿಸಿಐ ಮುಂದೆ ಹೊಸ ಡಿಮ್ಯಾಂಡ್ಗಳನ್ನು ಮುಂದಿಟ್ಟಿದ್ದಾರೆ. ಅಂದರೆ ಐಪಿಎಲ್ ರಿಟೆನ್ಷನ್ಗಾಗಿ ನಿಯಮಗಳಲ್ಲಿ ಬದಲಾಣೆ ಮಾಡುವಂತೆ ಫ್ರಾಂಚೈಸಿಗಳು ಕೋರಿಕೊಂಡಿದೆ. ಇಲ್ಲಿ ಪ್ರತಿ ಫ್ರಾಂಚೈಸಿಗಳು ವಿಭಿನ್ನ ಬೇಡಿಕೆಯನ್ನು ಮುಂದಿಟ್ಟಿರುವುದರಿಂದ ಇದೀಗ ಬಿಸಿಸಿಐ ಸಂಕಷ್ಟಕ್ಕೆ ಸಿಲುಕಿದೆ.
ಐಪಿಎಲ್ ಫ್ರಾಂಚೈಸಿಗಳ ಬೇಡಿಕೆ ಏನು?
- ಒಂದು ಫ್ರಾಂಚೈಸಿಯು ತಂಡದಲ್ಲಿ 8 ಆಟಗಾರರನ್ನು ಉಳಿಸಿಕೊಳ್ಳಲು ಅವಕಾಶ ನೀಡಬೇಕೆಂಬ ಮನವಿ ಮಾಡಿದೆ.
- ಕೆಲ ತಂಡಗಳು 5 ರಿಂದ 7 ಆಟಗಾರರನ್ನು ರಿಟೈನ್ ಮಾಡಿಕೊಳ್ಳುವ ಆಯ್ಕೆ ನೀಡಬೇಕೆಂದು ತಿಳಿಸಿದೆ.
- RTM ಕಾರ್ಡ್ ಬಳಕೆಗೂ ಅವಕಾಶ ನೀಡುವಂತೆ ಕೆಲ ಫ್ರಾಂಚೈಸಿಗಳು ಆಗ್ರಹಿಸಿದೆ.
- ಇನ್ನೂ ಕೆಲ ತಂಡಗಳು ಯಾವುದೇ ರಿಟೈನ್ ಬೇಡ, ಪ್ರತಿ ತಂಡಗಳು ಎಲ್ಲ ಆಟಗಾರರನ್ನು ಹರಾಜಿಗೆ ಬಿಡುಗಡೆ ಮಾಡಬೇಕಾದ ನಿಯಮ ಜಾರಿಗೆ ತರುವಂತೆ ಸೂಚಿಸಿದೆ.
- ಇನ್ನು ಹರಾಜು ಮೊತ್ತವನ್ನು 100 ಕೋಟಿಯಿಂದ 120 ಕೋಟಿಗೆ ಹೆಚ್ಚಿಸಬೇಕೆಂದು ಕೂಡ ತಿಳಿಸಲಾಗಿದೆ.
ಅಂದರೆ ಇಲ್ಲಿ ಐಪಿಎಲ್ ಫ್ರಾಂಚೈಸಿಗಳು ವಿಭಿನ್ನ ಬೇಡಿಕೆಯೊಂದಿಗೆ ಐಪಿಎಲ್ ಮೆಗಾ ಹರಾಜು ನಿಯಮವನ್ನು ಬದಲಿಸುವಂತೆ ಕೋರಿದೆ. ಇದರಲ್ಲಿ ಯಾವುದೇ ನಿಯಮವನ್ನು ಜಾರಿಗೆ ಬಂದರೂ ಕೆಲ ಫ್ರಾಂಚೈಸಿಗಳ ಕಡೆಯಿಂದ ವಿರೋಧ ವ್ಯಕ್ತವಾಗಲಿದೆ. ಹೀಗಾಗಿಯೇ ಬಿಸಿಸಿಐ ಫ್ರಾಂಚೈಸಿ ಮಾಲೀಕರ ಜೊತೆ ಉನ್ನತ ಮಟ್ಟದ ಸಭೆ ನಡೆಸಲು ನಿರ್ಧರಿಸಿದೆ.
ಹಳೆಯ ಮೆಗಾ ಹರಾಜು ನಿಯಮಗಳೇನು?
- ಐಪಿಎಲ್ 2022ರ ಮೆಗಾ ಹರಾಜು ನಿಯಮದ ಪ್ರಕಾರ, ಒಂದು ತಂಡವು ನಾಲ್ವರನ್ನು ಉಳಿಸಿಕೊಳ್ಳಬಹುದು. ಇಲ್ಲಿ ಒಂದು ತಂಡವು ನಾಲ್ವರನ್ನು ಉಳಿಸಿಕೊಳ್ಳಲು ಬಯಸಿದರೆ 42 ಕೋಟಿ ರೂ. ವ್ಯಯಿಸಬೇಕಾಗುತ್ತದೆ.
- ಒಂದು ವೇಳೆ ಮೂವರನ್ನು ಮಾತ್ರ ಉಳಿಸುವುದಾದರೆ 33 ಕೋಟಿ ರೂ. ನೀಡಬೇಕಾಗುತ್ತದೆ. ಇನ್ನು ಇಬ್ಬರು ಆಟಗಾರರನ್ನು ಉಳಿಸಿಕೊಂಡರೆ 24 ಕೋಟಿ. ರೂ ನೀಡಬೇಕು.
- ಒಬ್ಬ ಆಟಗಾರನನ್ನು ಮಾತ್ರ ಉಳಿಸಿಕೊಂಡರೆ 14 ಕೋಟಿ. ರೂ ನೀಡಬೇಕಾಗುತ್ತದೆ. ಇದಾಗ್ಯೂ ರಾಷ್ಟ್ರೀಯ ತಂಡದಲ್ಲಿ ಆಡದ ಆಟಗಾರನನ್ನು ಉಳಿಸಿಕೊಂಡರೆ 4 ಕೋಟಿ ರೂ. ನೀಡಬೇಕು ಎಂದು ಷರತ್ತು ವಿಧಿಸಲಾಗಿತ್ತು.
- ಈ ನಾಲ್ವರು ಆಟಗಾರರನ್ನು ಉಳಿಸಿಕೊಳ್ಳಲು 2 ಸೂತ್ರಗಳನ್ನು ಬಳಸಲಾಗಿತ್ತು. ಅದರಂತೆ ಇಬ್ಬರು ಭಾರತೀಯ ಆಟಗಾರರನ್ನು ಹಾಗೂ ಇಬ್ಬರು ವಿದೇಶಿ ಆಟಗಾರರನ್ನು ಉಳಿಸಿಕೊಳ್ಳಲು ಅವಕಾಶ ನೀಡಲಾಗಿತ್ತು. ಹಾಗೆಯೇ ಮೂವರು ಭಾರತೀಯ ಆಟಗಾರರನ್ನು ಒಬ್ಬ ವಿದೇಶಿ ಆಟಗಾರರನ್ನು ಉಳಿಸಿಕೊಳ್ಳಬಹುದಿತ್ತು.
- 2018ರ ಮೆಗಾ ಹರಾಜಿನಲ್ಲಿ 3+2 ಸೂತ್ರ ಪರಿಚಯಿಸಲಾಗಿತ್ತು. ಅದರಂತೆ ಮೂವರನ್ನು ಉಳಿಸಿಕೊಂಡು ಇಬ್ಬರು ಆಟಗಾರರ ಮೇಲೆ ಆರ್ಟಿಎಂ ಕಾರ್ಡ್ ಆಯ್ಕೆಯನ್ನು ಬಳಸಿಕೊಳ್ಳಲು ಅವಕಾಶ ನೀಡಲಾಗಿತ್ತು. ಅಂದರೆ ಆರ್ಟಿಎಂ ಮೂಲಕ ಉಳಿಸಿಕೊಂಡ ಆಟಗಾರರನ್ನು ಹರಾಜಿಗೆ ಬಿಡುಗಡೆ ಮಾಡಿ, ಅವರನ್ನು ಬೇರೊಂದು ತಂಡ ಹೆಚ್ಚಿನ ಮೊತ್ತಕ್ಕೆ ಖರೀದಿಸಿದರೆ ಆ ಮೊತ್ತವನ್ನು ನೀಡಿ ತಮ್ಮಲ್ಲೇ ಉಳಿಸಿಕೊಳ್ಳಲು ಅವಕಾಶ ನೀಡಲಾಗಿತ್ತು.
ಇದನ್ನೂ ಓದಿ: IPL 2025: RCB ತಂಡಕ್ಕೆ ವಿರಾಟ್ ಕೊಹ್ಲಿ ಕ್ಯಾಪ್ಟನ್..?
ಇದೀಗ ಐಪಿಎಲ್ 2025ರ ಮೆಗಾ ಹರಾಜಿಗೂ ಮುನ್ನ ಆಟಗಾರರ ರಿಟೈನ್ ಸಂಖ್ಯೆಯನ್ನು ಹೆಚ್ಚಿಸಬೇಕೆಂದು ಕೆಲ ಫ್ರಾಂಚೈಸಿಗಳು ಆಗ್ರಹಿಸಿದೆ. ಇದೇ ವೇಳೆ ರಿಟೈನ್ ಪ್ರಕ್ರಿಯೆಯೇ ಬೇಡ ಎಂದು ಕೆಲ ಫ್ರಾಂಚೈಸಿಗಳು ಡಿಮ್ಯಾಂಡ್ ಮಾಡಿದೆ. ಅಂದರೆ ಇಲ್ಲಿ ಐಪಿಎಲ್ ಫ್ರಾಂಚೈಸಿಗಳ ನಡುವೆಯೇ ಮೆಗಾ ಹರಾಜು ನಿಯಮದ ಕುರಿತು ಒಮ್ಮತವಿಲ್ಲ. ಹೀಗಾಗಿ ಅಂತಿಮವಾಗಿ ಬಿಸಿಸಿಐ ಯಾವ ನಿರ್ಧಾರ ತೆಗೆದುಕೊಳ್ಳಲಿದೆ ಎಂಬುದನ್ನು ಕಾದು ನೋಡಬೇಕಿದೆ.