Virat Kohli: ವಿರಾಟ್ ಕೊಹ್ಲಿ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಅರ್ಹರಾಗಿರಲಿಲ್ಲ: ಸಂಜಯ್ ಮಂಜ್ರೇಕರ್
T20 World Cup 2024: ಟಿ20 ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಟೀಮ್ ಇಂಡಿಯಾ ಪರ ವಿರಾಟ್ ಕೊಹ್ಲಿ 59 ಎಸೆತಗಳಲ್ಲಿ 2 ಸಿಕ್ಸ್ ಹಾಗೂ 6 ಫೋರ್ಗಳೊಂದಿಗೆ 76 ರನ್ ಬಾರಿಸಿದ್ದರು. ಈ ಅರ್ಧಶತಕದ ನೆರವಿನಿಂದ ಭಾರತ ತಂಡವು 176 ರನ್ ಕಲೆಹಾಕಿತು. ಈ ಗುರಿಯನ್ನು ಬೆನ್ನತ್ತಿದ ಸೌತ್ ಆಫ್ರಿಕಾ ತಂಡವು 169 ರನ್ಗಳಿಸಲಷ್ಟೇ ಶಕ್ತರಾದರು. ಈ ಮೂಲಕ ಟೀಮ್ ಇಂಡಿಯಾ 7 ರನ್ಗಳ ರೋಚಕ ಜಯ ಸಾಧಿಸಿ ವಿಶ್ವ ಚಾಂಪಿಯನ್ ಪಟ್ಟಕ್ಕೇರಿದೆ.
ಟಿ20 ವಿಶ್ವಕಪ್ ಫೈನಲ್ ಪಂದ್ಯದಲ್ಲಿ ವಿರಾಟ್ ಕೊಹ್ಲಿ (Virat Kohli) ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಅರ್ಹರಾಗಿರಲಿಲ್ಲ ಎಂದು ಟೀಮ್ ಇಂಡಿಯಾದ ಮಾಜಿ ಆಟಗಾರ ಸಂಜಯ್ ಮಂಜ್ರೇಕರ್ ಅಭಿಪ್ರಾಯಪಟ್ಟಿದ್ದಾರೆ. ಅಂತಿಮ ಪಂದ್ಯದಲ್ಲಿ ಟೀಮ್ ಇಂಡಿಯಾ ಪರ ವಿರಾಟ್ ಕೊಹ್ಲಿ 59 ಎಸೆತಗಳಲ್ಲಿ 2 ಸಿಕ್ಸ್ ಹಾಗೂ 6 ಫೋರ್ಗಳೊಂದಿಗೆ 76 ರನ್ ಬಾರಿಸಿದ್ದರು. ಈ ಇನಿಂಗ್ಸ್ನ ಹೊರತಾಗಿಯೂ ಫೈನಲ್ ಪಂದ್ಯದಲ್ಲಿ ಬೌಲರ್ಗೆ ಪಂದ್ಯ ಶ್ರೇಷ್ಠ ಪ್ರಶಸ್ತಿ ನೀಡಬೇಕಿತ್ತು ಎಂದು ಸಂಜಯ್ ಮಂಜ್ರೇಕರ್ ಹೇಳಿದ್ದಾರೆ.
ನನ್ನ ಪ್ರಕಾರ, ಅಂತಿಮ ಪಂದ್ಯದಲ್ಲಿ ಕೊಹ್ಲಿ ಪ್ಲೇಯರ್ ಆಫ್ ದಿ ಮ್ಯಾಚ್ ಅವಾರ್ಡ್ಗೆ ಅರ್ಹರಾಗಿರಲಿಲ್ಲ. ಇದಾಗ್ಯೂ ಅವರಿಗೆ ಪಂದ್ಯ ಶ್ರೇಷ್ಠ ಪ್ರಶಸ್ತಿ ನೀಡಲಾಯಿತು. ಆದರೆ ಈ ಪಂದ್ಯದಲ್ಲಿ ಬೌಲರ್ಗಳು ಉತ್ತಮ ಪ್ರದರ್ಶನ ನೀಡಿದ್ದರು. ಹೀಗಾಗಿ ಈ ಪ್ರಶಸ್ತಿ ಬೌಲರ್ಗೆ ಸಲ್ಲಬೇಕಿತ್ತು ಎಂದು ಮಂಜ್ರೇಕರ್ ಹೇಳಿದ್ದಾರೆ.
ಫೈನಲ್ ಪಂದ್ಯದಲ್ಲಿ ಭಾರತ ತಂಡವು ಸೋಲಿನತ್ತ ಮುಖಾಮುಖ ಮಾಡಿತ್ತು. ಇದಾಗ್ಯೂ ಭಾರತೀಯ ಬೌಲರ್ಗಳು ಅಂತಿಮ ಹಂತದಲ್ಲಿ ಅದ್ಭುತ ಪ್ರದರ್ಶನ ನೀಡಿದ್ದರು. ಅಲ್ಲದೆ ಸೋಲಿನ ದವಡೆಯಿಂದ ಭಾರತ ತಂಡಕ್ಕೆ ಗೆಲುವು ತಂದುಕೊಟ್ಟರು. ಇಲ್ಲಿ ವಿರಾಟ್ ಕೊಹ್ಲಿಯ ಇನಿಂಗ್ಸ್ಗಿಂತ, ಭಾರತೀಯ ಬೌಲರ್ಗಳ ಪ್ರದರ್ಶನ ಮೇಲ್ಮಟ್ಟದಲ್ಲಿದೆ. ಹೀಗಾಗಿ ಬೌಲರ್ಗಳು ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಅರ್ಹರಾಗಿದ್ದರು ಎಂದು ಸಂಜಯ್ ಮಂಜ್ರೇಕರ್ ಅಭಿಪ್ರಾಯಪಟ್ಟಿದ್ದಾರೆ.
ಹಾರ್ದಿಕ್ ಪಾಂಡ್ಯ ಎರಡನೇ ಇನ್ನಿಂಗ್ಸ್‌ನಲ್ಲಿ ಮೂರು ನಿರ್ಣಾಯಕ ವಿಕೆಟ್‌ಗಳನ್ನು ಪಡೆದಿದ್ದರು. ಹಾಗೆಯೇ ಜಸ್ಪ್ರೀತ್ ಬುಮ್ರಾ ಮತ್ತು ಅರ್ಷದೀಪ್ ಸಿಂಗ್ ತಲಾ ಎರಡು ವಿಕೆಟ್ ಕಬಳಿಸಿದ್ದರು. ಹೀಗಾಗಿ ಇವರಲ್ಲಿ ಒಬ್ಬರು ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಅರ್ಹರಾಗಿದ್ದರು ಎಂದು ಮಂಜ್ರೇಕರ್ ಹೇಳಿದ್ದಾರೆ.
ಇದೀಗ ಸಂಜಯ್ ಸಂಜ್ರೇಕರ್ ಅವರ ಈ ಹೇಳಿಕೆಯು ಸೋಷಿಯಲ್ ಮೀಡಿಯಾದಲ್ಲಿ ಹೊಸ ಚರ್ಚೆಯನ್ನು ಹುಟ್ಟುಹಾಕಿದೆ. ಏಕೆಂದರೆ ಫೈನಲ್ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಅತ್ಯುತ್ತಮ ಇನಿಂಗ್ಸ್ ಆಡಿದ್ದರಿಂದ ಟೀಮ್ ಇಂಡಿಯಾ ಸ್ಪರ್ಧಾತ್ಮಕ ಮೊತ್ತ ಪೇರಿಸುವಂತಾಯಿತು ಎಂದು ಅನೇಕರು ಪ್ರತಿಕ್ರಿಯಿಸಿದ್ದಾರೆ.
ಟೀಮ್ ಇಂಡಿಯಾ 34 ರನ್ಗಳಿಗೆ 3 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದ್ದ ವೇಳೆ ವಿರಾಟ್ ಕೊಹ್ಲಿ ಇಡೀ ತಂಡದ ಜವಾಬ್ದಾರಿಯನ್ನು ಹೆಗಲೇರಿಸಿಕೊಂಡಿದ್ದರು. ಅಲ್ಲದೆ ಕ್ರೀಸ್ ಕಚ್ಚಿ ನಿಲ್ಲುವ ಮೂಲಕ ಉಳಿದವರು ಉತ್ತಮವಾಗಿ ಬ್ಯಾಟ್ ಬೀಸಲು ಸಾಥ್ ನೀಡಿದ್ದರು.
ಇದನ್ನೂ ಓದಿ: IPL 2025: RCB ತಂಡಕ್ಕೆ ವಿರಾಟ್ ಕೊಹ್ಲಿ ಕ್ಯಾಪ್ಟನ್..?
ಅಲ್ಲದೆ 59 ಎಸೆತಗಳಲ್ಲಿ 76 ರನ್ ಸಿಡಿಸುವ ಮೂಲಕ ಟೀಮ್ ಇಂಡಿಯಾ 20 ಓವರ್ಗಳಲ್ಲಿ 176 ರನ್ಗಳಿಸುವಲ್ಲಿ ಪ್ರಮುಖ ಪಾತ್ರವಹಿಸಿದ್ದರು. ಇದಾಗ್ಯೂ ವಿರಾಟ್ ಕೊಹ್ಲಿ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಅರ್ಹರಲ್ಲ ಎನ್ನುವುವುದು ಎಷ್ಟು ಸರಿ ಎಂದು ಅನೇಕರು ಸಂಜಯ್ ಮಂಜ್ರೇಕರ್ ಅವರನ್ನು ಪ್ರಶ್ನಿಸಿದ್ದಾರೆ.
Published On - 10:07 am, Wed, 3 July 24