ಐಪಿಎಲ್ 2025 ರ ಎಲ್ಲಾ 10 ತಂಡಗಳು ತಮ್ಮ ಮೊದಲ ಪಂದ್ಯಗಳನ್ನು ಆಡಿದ್ದು, ಇದೀಗ ಎರಡನೇ ಸುತ್ತನ್ನು ಆರಂಭಿಸಿವೆ. ಮೊದಲ ಸುತ್ತಿನಲ್ಲಿ ಹಲವು ಆಟಗಾರರು ತಾವು ಪಡೆದ ಸಂಭಾವನೆಗೆ ತಕ್ಕಂತ ಪ್ರದರ್ಶನ ನೀಡಿದರೆ, ಇನ್ನು ಕೆಲವರ ಪ್ರದರ್ಶನ ಸಪ್ಪೆಯಾಗಿತ್ತು. ಹೀಗೆ ಐಪಿಎಲ್ ಹರಾಜಿನಲ್ಲಿ ಅತ್ಯಧಿಕ ಮೊತ್ತ ಪಡೆದಿದ್ದ ಟಾಪ್ 10 ಆಟಗಾರರ ಪ್ರದರ್ಶನ ಹೇಗಿತ್ತು ಎಂಬುದರ ರಿಪೋರ್ಟ ಕಾರ್ಡ್ ಇಲ್ಲಿದೆ.
ರಿಷಭ್ ಪಂತ್ ಐಪಿಎಲ್ 2025 ರಲ್ಲಿ ಮಾತ್ರವಲ್ಲದೆ ಈ ಲೀಗ್ ಇತಿಹಾಸದಲ್ಲಿಯೂ ಅತ್ಯಂತ ದುಬಾರಿ ಆಟಗಾರ. ಲಕ್ನೋ ಸೂಪರ್ ಜೈಂಟ್ಸ್ ಅವರನ್ನು 27 ಕೋಟಿ ರೂ.ಗೆ ಬಿಡ್ ಮಾಡುವ ಮೂಲಕ ತಮ್ಮ ತಂಡಕ್ಕೆ ಸೇರಿಸಿಕೊಂಡಿದಲ್ಲದೆ ಅವರನ್ನು ನಾಯಕನನ್ನಾಗಿ ಮಾಡಿದೆ. ಆದರೆ, ಪಂತ್ಗೆ ತಮ್ಮ ಮೊದಲ ಪಂದ್ಯದಲ್ಲಿ ಖಾತೆ ತೆರೆಯಲು ಸಾಧ್ಯವಾಗಲಿಲ್ಲ. ಎರಡನೆಯದಾಗಿ, ಅವರ ತಂಡವು ಮೊದಲ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಸೋಲನ್ನು ಎದುರಿಸಬೇಕಾಯಿತು.
ಶ್ರೇಯಸ್ ಅಯ್ಯರ್ ಐಪಿಎಲ್ ಇತಿಹಾಸದಲ್ಲಿ ಎರಡನೇ ಅತ್ಯಂತ ದುಬಾರಿ ಆಟಗಾರ. ಅವರನ್ನು ಪಂಜಾಬ್ ಕಿಂಗ್ಸ್ 26.75 ಕೋಟಿ ರೂ.ಗೆ ಖರೀದಿಸಿದೆ. ಪಡೆದ ಹಣಕ್ಕೆ ನ್ಯಾಯ ಒದಗಿಸಿದ ಅಯ್ಯರ್, ಪಂಜಾಬ್ ಕಿಂಗ್ಸ್ ಪ 97 ರನ್‌ಗಳ ಅಜೇಯ ಇನ್ನಿಂಗ್ಸ್‌ನೊಂದಿಗೆ ಅದ್ಭುತ ಪ್ರದರ್ಶನ ನೀಡಿದ್ದು ಮಾತ್ರವಲ್ಲದೆ, ಅವರ ನಾಯಕತ್ವದಲ್ಲಿ ತಂಡಕ್ಕೆ ಪಂದ್ಯವನ್ನು ಗೆದ್ದುಕೊಟ್ಟರು.
ಆಲ್‌ರೌಂಡರ್ ವೆಂಕಟೇಶ್ ಅಯ್ಯರ್ ಐಪಿಎಲ್ 2025 ರಲ್ಲಿ ಕೆಕೆಆರ್ ತಂಡದಲ್ಲಿರುವ ಅತ್ಯಂತ ದುಬಾರಿ ಆಟಗಾರ. ಆದರೆ ಮೈದಾನಕ್ಕೆ ಕಾಲಿಟ್ಟ ಮೊದಲ ಪಂದ್ಯದಲ್ಲಿ ವೆಂಕಟೇಶ್ ಅಯ್ಯರ್ ಅವರ ಇನ್ನಿಂಗ್ಸ್ ಕೇವಲ 6 ರನ್‌ಗಳಿಗೆ ಅಂತ್ಯವಾಯಿತು. ಆರ್‌ಸಿಬಿ ವಿರುದ್ಧದ ಪಂದ್ಯದಲ್ಲಿ ವೆಂಕಟೇಶ್ ಬ್ಯಾಟ್ ಸದ್ದು ಮಾಡಲಿಲ್ಲ. ಇದರ ಜೊತೆಗೆ ಕೆಕೆಆರ್ ತಂಡಕ್ಕೂ ಗೆಲುವು ಸಿಗಲಿಲ್ಲ.
ಪಂಜಾಬ್ ಕಿಂಗ್ಸ್ ಖರೀದಿಸಿರುವ ಅತ್ಯಂತ ದುಬಾರಿ ಆಟಗಾರರಲ್ಲಿ ಅರ್ಷದೀಪ್ ಸಿಂಗ್ ಮತ್ತು ಯುಜ್ವೇಂದ್ರ ಚಾಹಲ್ ಸೇರಿದ್ದಾರೆ ಈ ಇಬ್ಬರು ಬೌಲರ್‌ಗಳಿಗೆ ಪಂಜಾಬ್ ಕಿಂಗ್ಸ್ ತಲಾ 18 ಕೋಟಿ ರೂ. ನೀಡಿದೆ. ಐಪಿಎಲ್ 2025 ರ ಮೊದಲ ಪಂದ್ಯದಲ್ಲಿ ಅರ್ಷದೀಪ್ 4 ಓವರ್‌ಗಳಲ್ಲಿ 36 ರನ್‌ಗಳಿಗೆ 2 ವಿಕೆಟ್‌ಗಳನ್ನು ಪಡೆದರು. ಇತ್ತ ಚಹಾಲ್ 3 ಓವರ್‌ಗಳಲ್ಲಿ 34 ರನ್ ನೀಡಿದರಾದರೂ ಒಂದು ವಿಕೆಟ್ ಕೂಡ ಪಡೆಯಲಿಲ್ಲ.
ಇಂಗ್ಲೆಂಡ್ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ಜೋಸ್ ಬಟ್ಲರ್ ಅವರನ್ನು ಗುಜರಾತ್ ಟೈಟಾನ್ಸ್ ತಂಡ 15.75 ಕೋಟಿ ರೂ.ಗೆ ಖರೀದಿಸಿದೆ. ಪಂಜಾಬ್ ಕಿಂಗ್ಸ್ ವಿರುದ್ಧ ಆಡಿದ ಮೊದಲ ಪಂದ್ಯದಲ್ಲಿ ಬಟ್ಲರ್ 33 ಎಸೆತಗಳಲ್ಲಿ 54 ರನ್ ಗಳಿಸಿದ್ದರು. ಆದಾಗ್ಯೂ, ಅವರ ಅರ್ಧಶತಕದ ಹೊರತಾಗಿಯೂ, ತಂಡವು ಸೋಲನ್ನು ಎದುರಿಸಬೇಕಾಯಿತು.
ಕೆಎಲ್ ರಾಹುಲ್ ಹರಾಜಿನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಖರೀದಿಸಿದ ಅತ್ಯಂತ ದುಬಾರಿ ಆಟಗಾರ, ಈ ವಿಕೆಟ್ ಕೀಪರ್ ಬ್ಯಾಟ್ಸ್ಮನ್ಗೆ ಡೆಲ್ಲಿ ಬರೋಬ್ಬರಿ 14 ಕೋಟಿ ನೀಡಿದೆ. ಆದರೆ ಕೌಟುಂಬಿಕ ಕಾರಣದಿಂದಾಗಿ ರಾಹುಲ್ ಮೊದಲ ಪಂದ್ಯಕ್ಕೆ ಲಭ್ಯವಿರಲಿಲ್ಲ.
ಐಪಿಎಲ್ 2025 ರಲ್ಲಿ ಜೋಫ್ರಾ ಆರ್ಚರ್, ಟ್ರೆಂಟ್ ಬೌಲ್ಟ್ ಮತ್ತು ಜೋಶ್ ಹ್ಯಾಜಲ್‌ವುಡ್ 12.50 ಕೋಟಿ ರೂ. ಪಡೆದಿದ್ದಾರೆ. ಆರ್ಚರ್ ಮೊದಲ ಪಂದ್ಯದಲ್ಲೇ ಐಪಿಎಲ್ ಇತಿಹಾಸದಲ್ಲಿ ಅತ್ಯಂತ ದುಬಾರಿ ಸ್ಪೆಲ್ ಎಸೆದ ಬೌಲರ್ ಎಂಬ ಹೆಗ್ಗಳಿಕೆಗೆ ಆರ್ಚರ್ ಪಾತ್ರರಾಗಿದ್ದಾರೆ. ಇತ್ತ ಟ್ರೆಂಟ್ ಬೌಲ್ಟ್ ಕೂಡ ಯಾವುದೇ ವಿಕೆಟ್ ಪಡೆಯದೆ 3 ಓವರ್‌ಗಳಲ್ಲಿ 27 ರನ್‌ಗಳನ್ನು ನೀಡಿದರು. 2025 ರ ಐಪಿಎಲ್ನಲ್ಲಿ ಹ್ಯಾಜಲ್‌ವುಡ್ ತಮ್ಮ ಮೊದಲ ಪಂದ್ಯದಲ್ಲಿ 4 ಓವರ್ ಗಳಲ್ಲಿ 22 ರನ್ ಗಳಿಗೆ 2 ವಿಕೆಟ್ ಕಬಳಿಸಿದರು.