
IPL 2026: ಐಪಿಎಲ್ ಅಂಗಳದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಮತ್ತು ಚೆನ್ನೈ ಸೂಪರ್ ಕಿಂಗ್ಸ್ (CSK) ನಡುವಿನ ಹಣಾಹಣಿ ಅಂದರೆ ಅದು ಬರೀ ಪಂದ್ಯವಲ್ಲ, ಅದೊಂದು ಎಮೋಷನ್. ಈ ಬಾರಿಯ ‘ಸೌತ್ ಡರ್ಬಿ’ ಪಂದ್ಯವು ಬ್ಯಾಟ್-ಬಾಲ್ ಕಾಳಗವನ್ನು ಮೀರಿ ದೊಡ್ಡ ವಿವಾದಕ್ಕೆ ಕಾರಣವಾಗಿದೆ. ಬೆಂಗಳೂರಿನ ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದ ವೇಳೆ ಆತಿಥೇಯ ತಂಡದ ಡಿಜೆ ವರ್ತನೆಯ ವಿರುದ್ಧ ಸಿಎಸ್‌ಕೆ ಮ್ಯಾನೇಜ್‌ಮೆಂಟ್ ಬಿಸಿಸಿಐಗೆ (BCCI) ಅಧಿಕೃತ ದೂರು ನೀಡಿದೆ.
ಏಪ್ರಿಲ್ 5 ರಂದು ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆದ ಆರ್‌ಸಿಬಿ ವಿರುದ್ಧ ಪಂದ್ಯದ ವೇಳೆ ಸಿಎಸ್‌ಕೆ ಆಟಗಾರರು ಔಟಾದಾಗ ಮತ್ತು ಕ್ರೀಡಾಂಗಣದಲ್ಲಿ ಪ್ರೇಕ್ಷಕರನ್ನು ರಂಜಿಸುವ ನೆಪದಲ್ಲಿ ಡಿಜೆ, ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ “ದೋಸೆ, ಇಡ್ಲಿ, ಸಾಂಬಾರ್, ಚಟ್ನಿ…” ಎಂಬ ಹಾಡನ್ನು ಪದೇ ಪದೇ ಪ್ಲೇ ಮಾಡಿದ್ದಾರೆ. ಈ ಹಾಡನ್ನು ಸಾಮಾನ್ಯವಾಗಿ ದಕ್ಷಿಣ ಭಾರತೀಯರನ್ನು, ವಿಶೇಷವಾಗಿ ತಮಿಳು ಜನರನ್ನು ಅಣಕಿಸಲು ಮೀಮ್‌ಗಳಲ್ಲಿ ಬಳಸಲಾಗುತ್ತದೆ. ಇದು ಸಿಎಸ್‌ಕೆ ಆಟಗಾರರು ಮತ್ತು ಮ್ಯಾನೇಜ್‌ಮೆಂಟ್‌ನ ಕೆಂಗಣ್ಣಿಗೆ ಗುರಿಯಾಗಿದೆ.
ಚೆನ್ನೈ ಸೂಪರ್ ಕಿಂಗ್ಸ್‌ನ ಮ್ಯಾನೇಜಿಂಗ್ ಡೈರೆಕ್ಟರ್ ಕಾಶಿ ವಿಶ್ವನಾಥನ್ ಈ ಕುರಿತು ಅಸಮಾಧಾನ ವ್ಯಕ್ತಪಡಿಸಿದ್ದು, ಅವರ ದೂರಿನಲ್ಲಿರುವ ಮುಖ್ಯ ಅಂಶಗಳು ಈ ಕೆಳಗಿನಂತಿವೆ…
ಈ ವಿವಾದಕ್ಕೆ 2025ರ ಐಪಿಎಲ್ ಸೀಸನ್‌ನ ನಂಟೂ ಇದೆ. ಕಳೆದ ವರ್ಷ ಆರ್‌ಸಿಬಿ ಆಟಗಾರ ಜಿತೇಶ್ ಶರ್ಮಾ ಈ ಹಾಡನ್ನು ಹಾಡಿರುವ ವಿಡಿಯೋ ವೈರಲ್ ಆಗಿತ್ತು. ಅಷ್ಟೇ ಅಲ್ಲದೆ, ಚನ್ನೈನ ಚೆಪಾಕ್ ಕ್ರೀಡಾಂಗಣದಲ್ಲಿ ಪಂದ್ಯ ನಡೆದಾಗ ಅಲ್ಲಿನ ಡಿಜೆ ಕೂಡ ಇದಕ್ಕೆ ತಿರುಗೇಟು ನೀಡಲು ಪ್ರಯತ್ನಿಸಿದ್ದರು. ಆಗ ಸಿಎಸ್‌ಕೆ ಮ್ಯಾನೇಜ್‌ಮೆಂಟ್ ಮಧ್ಯಪ್ರವೇಶಿಸಿ ಇದನ್ನು ತಡೆದಿತ್ತು. ಈಗ ಬೆಂಗಳೂರಿನಲ್ಲಿ ಅದೇ ರೀತಿಯ ಘಟನೆ ಮರುಕಳಿಸಿರುವುದು ಸಂಘರ್ಷಕ್ಕೆ ಕಾರಣವಾಗಿದೆ.
ಐಪಿಎಲ್ ಆಡಳಿತ ಮಂಡಳಿಯು ಈ ದೂರನ್ನು ಗಂಭೀರವಾಗಿ ಪರಿಗಣಿಸಿದೆ. ಕ್ರೀಡಾಂಗಣಗಳಲ್ಲಿ ಮನರಂಜನೆಯ ಹೆಸರಿನಲ್ಲಿ ವರ್ಣಭೇದ ಅಥವಾ ಪ್ರಾದೇಶಿಕ ನಿಂದನೆಯಂತಹ ಅಂಶಗಳು ನುಸುಳದಂತೆ ನೋಡಿಕೊಳ್ಳಲು ಹೊಸ ಮಾರ್ಗಸೂಚಿಗಳನ್ನು ಹೊರಡಿಸುವ ಸಾಧ್ಯತೆಯಿದೆ.
ಇದನ್ನೂ ಓದಿ: ಒಂದೇ ಒಂದು ವಿಕೆಟ್ ಪಡೆದ ಹೇಝಲ್ವುಡ್ಗೆ ಪಂದ್ಯ ಶ್ರೇಷ್ಠ ಪ್ರಶಸ್ತಿ! ಕಾರಣವೇನು?
ಒಟ್ಟಾರೆಯಾಗಿ, ಐಪಿಎಲ್ ಅಂಗಳದಲ್ಲಿ ತಂಡಗಳ ನಡುವಿನ ಪೈಪೋಟಿ ಆರೋಗ್ಯಕರವಾಗಿದ್ದಷ್ಟು ಕ್ರಿಕೆಟ್‌ಗೆ ಚಂದ. ತವರು ತಂಡವನ್ನು ಬೆಂಬಲಿಸುವುದು ಡಿಜೆಗಳ ಕರ್ತವ್ಯವಾದರೂ, ಅದು ಎದುರಾಳಿ ತಂಡದ ಗೌರವಕ್ಕೆ ಧಕ್ಕೆ ತರುವಂತಿರಬಾರದು ಎಂಬುದು ಕ್ರಿಕೆಟ್ ಅಭಿಮಾನಿಗಳ ಆಶಯ. ಈಗ ಬಿಸಿಸಿಐ ಈ ದೂರನ್ನು ಹೇಗೆ ನಿಭಾಯಿಸಲಿದೆ ಮತ್ತು ಮುಂಬರುವ ಪಂದ್ಯಗಳಲ್ಲಿ ಇಂತಹ ಘಟನೆಗಳು ಮರುಕಳಿಸದಂತೆ ಯಾವ ಕ್ರಮ ಕೈಗೊಳ್ಳಲಿದೆ ಎಂಬುದನ್ನು ಕಾದು ನೋಡಬೇಕಿದೆ.