
ಐಪಿಎಲ್ 2026 (IPL 2026) ರ 68 ನೇ ಪಂದ್ಯದಲ್ಲಿ, ಲಕ್ನೋ ಸೂಪರ್ ಜೈಂಟ್ಸ್ ತಂಡವು ಲಕ್ನೋದ ಏಕಾನಾ ಕ್ರಿಕೆಟ್ ಕ್ರೀಡಾಂಗಣದಲ್ಲಿ ಪಂಜಾಬ್ ಕಿಂಗ್ಸ್ (LSG vs PBKS) ತಂಡವನ್ನು ಎದುರಿಸಿತ್ತು. ಪ್ಲೇಆಫ್ ದೃಷ್ಟಿಯಿಂದ ಈ ಪಂದ್ಯ ಪಂಜಾಬ್ ಕಿಂಗ್ಸ್ಗೆ ಬಹುಮುಖ್ಯವಾಗಿತ್ತು. ಅದರಂತೆ ಗೆಲ್ಲಲೇಬೇಕಾದ ಪಂದ್ಯದಲ್ಲಿ ಲಕ್ನೋ ತಂಡವನ್ನು ಮಣಿಸಿದ ಪಂಜಾಬ್ ತಂಡ ತನ್ನ ಪ್ಲೇಆಫ್ ಆಸೆಯನ್ನು ಜೀವಂತವಾಗಿರಿಸಿಕೊಂಡಿದೆ. ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಲಕ್ನೋ ತಂಡ 197 ರನ್ ಕಲೆಹಾಕಿತು. ಈ ಗುರಿ ಬೆನ್ನಟ್ಟಿದ ಪಂಜಾಬ್ ತಂಡ ನಾಯಕ ಶ್ರೇಯಸ್ ಅಯ್ಯರ್ ಅವರ ಅಬ್ಬರದ ಬ್ಯಾಟಿಂಗ್ನಿಂದ ಸುಲಭವಾಗಿ ಜಯ ಸಾಧಿಸಿತು.
ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಲಕ್ನೋ ಸೂಪರ್ ಜೈಂಟ್ಸ್ ತಂಡಕ್ಕೆ ಉತ್ತಮ ಆರಂಭ ಸಿಗಲಿಲ್ಲ. ಯುವ ಆರಂಭಿಕ ಬ್ಯಾಟರ್ ಕುಲಕರ್ಣಿ ಸೊನ್ನೆಗೆ ವಿಕೆಟ್ ಒಪ್ಪಿಸಿದರು. ಆ ಬಳಿಕ ಜೊತೆಯಾದ ಆಯುಷ್ ಬಡೋನಿ ಮತ್ತು ಜೋಶ್ ಇಂಗ್ಲಿಸ್ ಆಕ್ರಮಣಕಾರಿಯಾಗಿ ಆಡಿದರು. ಜೋಶ್ ಇಂಗ್ಲಿಸ್ 44 ಎಸೆತಗಳಲ್ಲಿ ಒಂಬತ್ತು ಬೌಂಡರಿ ಮತ್ತು ಎರಡು ಸಿಕ್ಸರ್‌ಗಳನ್ನು ಒಳಗೊಂಡಂತೆ 77 ರನ್ ಬಾರಿಸಿದರೆ, ಆಯುಷ್ ಬಡೋನಿ ಕೇವಲ 18 ಎಸೆತಗಳಲ್ಲಿ 238.88 ಸ್ಟ್ರೈಕ್ ರೇಟ್‌ನಲ್ಲಿ 43 ರನ್ ಗಳಿಸಿ ಐದು ಬೌಂಡರಿ ಮತ್ತು ಮೂರು ಅಮೋಘ ಸಿಕ್ಸರ್‌ಗಳನ್ನು ಒಳಗೊಂಡಂತೆ ಅಬ್ಬರದ ಇನ್ನಿಂಗ್ಸ್ ಆಡಿದರು. ನಂತರ ಅಬ್ದುಲ್ ಸಮದ್ ಅಜೇಯ 37 ರನ್ ಗಳಿಸಿದರೆ, ರಿಷಭ್ ಪಂತ್ 26 ರನ್ ಗಳಿಸುವ ಮೂಲಕ ತಂಡವನ್ನು 196 ರನ್‌ಗಳಿಗೆ ಕೊಂಡೊಯ್ಯುವಲ್ಲಿ ಪ್ರಮುಖ ಪಾತ್ರವಹಿಸಿದರು.
LSG vs PBKS IPL 2026 Highlights: ಸತತ 6 ಸೋಲುಗಳ ನಂತರ ಗೆದ್ದ ಪಂಜಾಬ್
ಬೃಹತ್ ಗುರಿಯನ್ನು ಬೆನ್ನಟ್ಟಿದ ಪಂಜಾಬ್ಗೂ ಇನ್ನಿಂಗ್ಸ್ನ ಮೊದಲ ಎಸೆತದಲ್ಲೇ ಆಘಾತ ಎದುರಾಯಿತು. ಆರಂಭಿಕ ಪ್ರಿಯಾಂಶ್ ಆರ್ಯ ಮೊದಲ ಎಸೆತದಲ್ಲೇ ಔಟಾದರು. ಕೊನೊಲಿ ಕೂಡ ಹೆಚ್ಚು ಹೊತ್ತು ಮೈದಾನದಲ್ಲಿ ನಿಲ್ಲಲಿಲ್ಲ. ಹೀಗಾಗಿ ಪಂಜಾಬ್ ಕೇವಲ 22 ರನ್‌ಗಳಿಗೆ ಎರಡು ವಿಕೆಟ್‌ಗಳನ್ನು ಕಳೆದುಕೊಂಡಿತ್ತು. ಆದರೆ ಆ ಬಳಿಕ ಜೊತೆಯಾದ ಶ್ರೇಯಸ್ ಅಯ್ಯರ್ ಮತ್ತು ಪ್ರಭ್ಸಿಮ್ರಾನ್ ಸಿಂಗ್ ಅದ್ಭುತ ಬ್ಯಾಟಿಂಗ್ ನಡೆಸಿ ತಂಡವನ್ನು ಗೆಲುವಿನ ಹಳಿಗೆ ತಂದರು. ಪ್ರಭ್ಸಿಮ್ರಾನ್ ಸಿಂಗ್ 39 ಎಸೆತಗಳಲ್ಲಿ 69 ರನ್ ಗಳಿಸಿದರೆ, ಶ್ರೇಯಸ್ ಅಯ್ಯರ್ 51 ಎಸೆತಗಳಲ್ಲಿ 101 ರನ್ ಗಳಿಸಿ ಅಜೇಯರಾಗಿ ಉಳಿದರು. ಇವರಿಬ್ಬರ ಆಟದಿಂದಾಗಿ ಪಂಜಾಬ್ ಕೇವಲ 18 ಓವರ್‌ಗಳಲ್ಲಿ ಗುರಿ ತಲುಪಿತು.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 11:08 pm, Sat, 23 May 26