ಸಿಕ್ಸರ್‌ಗಳ ಮಳೆಗರೆಯುವ ವೈಭವ್ ವಿರುದ್ಧ ಮೇಡನ್ ಓವರ್ ಎಸೆದ ಬೌಲರ್ ಯಾರು ಗೊತ್ತಾ?

Vaibhav Sooryavanshi IPL 2026: 2026ರ ಐಪಿಎಲ್‌ನಲ್ಲಿ ವೈಭವ್ ಸೂರ್ಯವಂಶಿ ಬಿರುಗಾಳಿಯಂತೆ ಅಬ್ಬರಿಸಿ ರಾಜಸ್ಥಾನ್ ರಾಯಲ್ಸ್ ತಂಡವನ್ನು ಕ್ವಾಲಿಫೈಯರ್ 2 ಹಂತಕ್ಕೆ ತಲುಪಿಸಿದ್ದಾರೆ. ಅವರ ಸ್ಫೋಟಕ ಬ್ಯಾಟಿಂಗ್ ಎದುರಾಳಿ ಬೌಲರ್‌ಗಳಿಗೆ ಸವಾಲಾಗಿದೆ. ಆದರೆ, ಲಕ್ನೋ ವಿರುದ್ಧದ ಪಂದ್ಯದಲ್ಲಿ ಮೊಹ್ಸಿನ್ ಖಾನ್ ವೈಭವ್‌ಗೆ ಒಂದೇ ಒಂದು ರನ್ ನೀಡದೆ ಮೇಡನ್ ಓವರ್ ಬೌಲ್ ಮಾಡಿ, ವಿಕೆಟ್ ಪಡೆದು ಗಮನ ಸೆಳೆದಿದ್ದರು. ಈ ಆವೃತ್ತಿಯಲ್ಲಿ ವೈಭವ್ ಎದುರು ಈ ಸಾಧನೆ ಮಾಡಿದ ಏಕೈಕ ಬೌಲರ್ ಇವರು.

ಸಿಕ್ಸರ್‌ಗಳ ಮಳೆಗರೆಯುವ ವೈಭವ್ ವಿರುದ್ಧ ಮೇಡನ್ ಓವರ್ ಎಸೆದ ಬೌಲರ್ ಯಾರು ಗೊತ್ತಾ?
Vaibhav Sooryavanshi
Image Credit source: PTI

Updated on: May 29, 2026 | 4:02 PM

2026 ರ ಐಪಿಎಲ್‌ನಲ್ಲಿ (IPL 2026) ವೈಭವ್ ಸೂರ್ಯವಂಶಿ (Vaibhav Sooryavanshi) ಎಂಬ ಬಿರುಗಾಳಿಯನ್ನು ಕಟ್ಟಿಹಾಕುವುದೇ ಎದುರಾಳಿ ತಂಡದ ಬೌಲರ್​ಗಳ ದೊಡ್ಡ ಸವಾಲಾಗಿದೆ. ಪಂದ್ಯದಿಂದ ಪಂದ್ಯಕ್ಕೆ ಉಗ್ರರೂಪಿಯಾಗುತ್ತಿರುವ ವೈಭವ್ ಏಕಾಂಗಿಯಾಗಿ ನಿಂತು ತಂಡಕ್ಕೆ ಗೆಲುವು ತಂದುಕೊಡುತ್ತಿದ್ದಾರೆ. ಇದರ ಪರಿಣಾಮವಾಗಿಯೇ ರಾಜಸ್ಥಾನ್ ರಾಯಲ್ಸ್ ತಂಡ ಇಂದು ಕ್ವಾಲಿಫೈಯರ್ 2 ಆಡಲು ಸಿದ್ಧವಾಗಿದೆ. ಗುಜರಾತ್ ವಿರುದ್ಧದ ಇಂದಿನ ಪಂದ್ಯದಲ್ಲಿ ರಾಜಸ್ಥಾನ್ ಗೆದ್ದರೆ ನೇರವಾಗಿ ಫೈನಲ್​ ಆಡಲಿದೆ. ಅದು ಸಾಧ್ಯವಾಗಬೇಕಾದರೆ ವೈಭವ್ ಸೂರ್ಯವಂಶಿ ಮತ್ತೊಮ್ಮೆ ಸ್ಫೋಟಕ ಇನ್ನಿಂಗ್ಸ್ ಆಡಬೇಕಾಗುತ್ತದೆ. ಆದರೆ ಅದಕ್ಕೂ ಮುನ್ನ ಮೊದಲ ಎಸೆತದಿಂದಲೇ ಸಿಕ್ಸರ್​ಗಳ ಮಳೆ ಸುರಿಸಲು ನೋಡುವ ವೈಭವ್​ಗೆ ಒಂದು ಓವರ್​ನಲ್ಲಿ ಒಂದೇ ಒಂದು ಸಿಕ್ಸರ್ ಇರಲಿ, ಒಂದೇ ಒಂದು ರನ್ ಕೂಡ ನೀಡದ ಬೌಲರ್​ ಬಗ್ಗೆ ತಿಳಿಯೋಣ.

11 ಎಸೆತಗಳಲ್ಲಿ 8 ರನ್ ಬಾರಿಸಿದ್ದ ವೈಭವ್

ವಾಸ್ತವವಾಗಿ ಏಪ್ರಿಲ್ 22 ರಂದು ನಡೆದಿದ್ದ ರಾಜಸ್ಥಾನ್ ರಾಯಲ್ಸ್ ಹಾಗೂ ಲಕ್ನೋ ಸೂಪರ್ ಜೈಂಟ್ಸ್ ನಡುವೆ 32ನೇ ಲೀಗ್ ಪಂದ್ಯ ನಡೆದಿತ್ತು. ಅಂದಿನ ಪಂದ್ಯದಲ್ಲಿ ರಾಜಸ್ಥಾನ್ ಗೆಲುವು ಸಾಧಿಸಿತ್ತಾದರೂ, ವೈಭವ್ ಸೂರ್ಯವಂಶಿಗೆ ಒಂದಂಕಿ ದಾಟಲು ಸಾಧ್ಯವಾಗಿರಲಿಲ್ಲ. ಆ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್‌ ಮಾಡಿದ್ದ ರಾಜಸ್ಥಾನ್​ಗೆ ಕೇವಲ 159 ರನ್ ಕಲೆಹಾಕಲಷ್ಟೇ ಸಾಧ್ಯವಾಯಿತು. ಆ ಪಂದ್ಯದಲ್ಲೂ ಆರಂಭಿಕನಾಗಿ ಆಡಿದ್ದ ವೈಭವ್ 11 ಎಸೆತಗಳನ್ನು ಎದುರಿಸಿ ಕೇವಲ 8 ರನ್ ಬಾರಿಸಿ ಔಟಾಗಿದ್ದರು. ವೈಭವ್ ಅವರ ಈ ರನ್ ಬರಕ್ಕೆ ಕಾರಣವಾಗಿದ್ದ ಲಕ್ನೋ ತಂಡದ ವೇಗಿ ಮೊಹ್ಸಿನ್ ಖಾನ್.

ಮೇಡನ್ ಓವರ್ ಎಸೆದಿದ್ದ ಮೊಹ್ಸಿನ್

ರಾಜಸ್ಥಾನ್ ಇನ್ನಿಂಗ್ಸ್​ನ 4ನೇ ಓವರ್ ಬೌಲ್ ಮಾಡುವ ಜವಾಬ್ದಾರಿ ಮೊಹ್ಸಿನ್ ಖಾನ್​ಗೆ ನೀಡಲಾಯಿತು. ಆ ಓವರ್​ನಲ್ಲಿ ಸ್ಟ್ರೈಕ್​ನಲ್ಲಿ ಇದ್ದದ್ದು ವೈಭವ್ ಸೂರ್ಯವಂಶಿ. ಆ ಹೊತ್ತಿಗೆ ವೈಭವ್ 5 ಎಸೆತಗಳನ್ನು ಎದುರಿಸಿ 8 ರನ್ ಬಾರಿಸಿದ್ದರು. ಇದರಲ್ಲಿ 2 ಬೌಂಡರಿಗಳು ಸೇರಿದ್ದವು. ಹೀಗಾಗಿ ರನ್ ಗಳಿಸಬೇಕಾದ ಒತ್ತಡ ವೈಭವ್ ಮೇಲಿತ್ತು. ಆದರೆ ಇದಕ್ಕೆ ಮೊಹ್ಸಿನ್ ಖಾನ್ ಅವಕಾಶ ಮಾಡಿಕೊಡಲಿಲ್ಲ.

IPL 2026: 30 ಕೋಟಿಗೆ ಹರಾಜಾಗ್ತಾರೆ ವೈಭವ್ ಸೂರ್ಯವಂಶಿ; ಭವಿಷ್ಯ ನುಡಿದ ಸೆಹ್ವಾಗ್

ಮೊಹ್ಸಿನ್ ಖಾನ್ ಎಸೆತದ 4ನೇ ಓವರ್​ನಲ್ಲಿ ವೈಭವ್​ಗೆ ಒಂದೇ ಒಂದು ರನ್ ಬಾರಿಸಲು ಸಾಧ್ಯವಾಗಲಿಲ್ಲ. ಈ ಓವರ್​ನ 6 ಎಸೆತಗಳನ್ನು ವೈಭವ್ ಎದುರಿಸಿದರು. ಇದರಲ್ಲಿ ಮೊದಲ ಐದು ಎಸೆತಗಳಲ್ಲಿ ವೈಭವ್ ದೊಡ್ಡ ಹೊಡೆತಕ್ಕೆ ಕೈ ಹಾಕಿದರಾದರೂ ಅದರಲ್ಲಿ ಯಶಸ್ವಿಯಾಗಲಿಲ್ಲ. ಹೀಗಾಗಿ ಕೊನೆಯ ಎಸೆತದಲ್ಲಿ ಸಿಕ್ಸರ್ ಬಾರಿಸಲು ಯತ್ನಿಸಿದ ವೈಭವ್ ಕವರ್ಸ್​ ದಿಕ್ಕಿನಲ್ಲಿ ದಿಗ್ವೇಶ್ ರಾಠಿಗೆ ಕ್ಯಾಚಿತ್ತು ನಿರ್ಗಮಿಸಿದರು. ಅಂದರೆ ಮೊಹ್ಸಿನ್ ಖಾನ್ ಮೇಡನ್ ಓವರ್ ಬೌಲ್ ಮಾಡುವುದರ ಜೊತೆಗೆ ವೈಭವ್ ಅವರ ವಿಕೆಟ್ ಕೂಡ ಉರುಳಿಸಿದರು. ಈ ಮೂಲಕ ಈ ಬಾರಿಯ ಐಪಿಎಲ್‌ನಲ್ಲಿ ವೈಭವ್ ಸೂರ್ಯವಂಶಿ ಎದುರು ಮೇಡನ್ ಓವರ್ ಬೌಲ್ ಮಾಡಿ ವಿಕೆಟ್ ಉರುಳಿಸಿದ ಏಕೈಕ ವೇಗಿ ಎಂಬ ದಾಖಲೆ ಮೊಹ್ಸಿನ್ ಖಾನ್ ಹೆಸರಿನಲ್ಲಿದೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 3:58 pm, Fri, 29 May 26

pruthvi Shankar

ಹುಟ್ಟೂರು ಹಾಸನದ ಕೊಣನೂರು ಸಮೀಪದ ಲಕ್ಷ್ಮೀಪುರ, ಕಳೆದ 8 ವರ್ಷಗಳಿಂದ ಪತ್ರಿಕಾರಂಗದಲ್ಲಿ ನೆಲೆ. ಟಿವಿ9 ಕನ್ನಡದಲ್ಲೇ ವೃತ್ತಿ ಜೀವನ ಆರಂಭಿಸಿದ ನಾನು, ಮೊದಲ 3 ವರ್ಷ ವಿಡಿಯೋ ಎಡಿಟರ್ ಆಗಿ ಕೆಲಸ ಮಾಡಿದ ಬಳಿಕ ನನ್ನ ಆಸಕ್ತಿಯ ವಿಷಯವಾದ ಕ್ರೀಡೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ನನ್ನ ವೃತ್ತಿ ಬದುಕಿನ ಎರಡನೇ ಇನ್ನಿಂಗ್ಸ್ ಆರಂಭಿಸಿದ್ದೇನೆ.

Read More
Follow Us