AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕ್ರಿಕೆಟ್ ತನ್ನ ಶ್ರೇಷ್ಠ ಆಟಗಾರರಲ್ಲಿ ಒಬ್ಬರನ್ನು ಕಳೆದುಕೊಂಡಿದೆ; ಕೊಹ್ಲಿ ಭಾವುಕ ಪೋಸ್ಟ್

*Garfield Sobers Passes Away: ವೆಸ್ಟ್ ಇಂಡೀಸ್ ಕ್ರಿಕೆಟ್ ಲೆಜೆಂಡ್ ಸರ್ ಗಾರ್ಫೀಲ್ಡ್ ಸೋಬರ್ಸ್ 89 ನೇ ವಯಸ್ಸಿನಲ್ಲಿ ನಿಧನರಾಗಿದ್ದಾರೆ. ಅವರ ಅಗಲಿಕೆಗೆ ಇಡೀ ಕ್ರಿಕೆಟ್ ಲೋಕವೇ ಕಂಬನಿ ಮಿಡಿದಿದೆ. ವಿರಾಟ್ ಕೊಹ್ಲಿ, ಸಚಿನ್ ತೆಂಡೂಲ್ಕರ್ ಸೇರಿದಂತೆ ಭಾರತೀಯ ಕ್ರಿಕೆಟಿಗರು ಭಾವುಕ ಪೋಸ್ಟ್‌ಗಳ ಮೂಲಕ ಸಂತಾಪ ಸೂಚಿಸಿದ್ದಾರೆ. ಸೋಬರ್ಸ್ ಅವರ ಅಸಾಮಾನ್ಯ ಪರಂಪರೆ ಮುಂದಿನ ಪೀಳಿಗೆಗೆ ಸ್ಫೂರ್ತಿ ನೀಡಲಿದೆ.

ಕ್ರಿಕೆಟ್ ತನ್ನ ಶ್ರೇಷ್ಠ ಆಟಗಾರರಲ್ಲಿ ಒಬ್ಬರನ್ನು ಕಳೆದುಕೊಂಡಿದೆ; ಕೊಹ್ಲಿ ಭಾವುಕ ಪೋಸ್ಟ್
Gary Sobers
ಪೃಥ್ವಿಶಂಕರ
|

Updated on: Jul 18, 2026 | 4:58 PM

Share

ವೆಸ್ಟ್ ಇಂಡೀಸ್ ಕ್ರಿಕೆಟ್​ನ ಲೆಜೆಂಡರಿ ಆಲ್‌ರೌಂಡರ್ ಸರ್ ಗಾರ್ಫೀಲ್ಡ್ ಸೋಬರ್ಸ್ (Sir Garfield Sobers) ಜುಲೈ 17 ರಂದು ತಮ್ಮ 89 ನೇ ವಯಸ್ಸಿನಲ್ಲಿ ನಿಧನರಾದರು. ದಶಕಗಳ ಕಾಲ ಕ್ರಿಕೆಟ್ ಲೋಕವನ್ನು ಅಕ್ಷರಶಃ ಆಳಿದ ಈ ವಿಂಡೀಸ್ ದಿಗ್ಗಜನ ಅಗಲಿಕೆಗೆ ಇಡೀ ಕ್ರಿಕೆಟ್ ಜಗತ್ತೇ ಕಂಬನಿ ಮಿಡಿದಿದೆ. ಅದರಲ್ಲೂ ಟೀಂ ಇಂಡಿಯಾದ ಭಾಗಶಃ ಕ್ರಿಕೆಟಿಗರು ಸೋಬರ್ಸ್ ಅವರ ನಿಧನಕ್ಕೆ ಭಾವುಕ ಪೋಸ್ಟ್​ಗಳ ಮೂಲಕ ತಮ್ಮ ಸಂತಾಪ ಸೂಚಿಸಿದ್ದಾರೆ. ಸಚಿನ್ ತೆಂಡೂಲ್ಕರ್, ವೀರೇಂದ್ರ ಸೆಹ್ವಾಗ್ ಹಾಗೂ ವಿರಾಟ್ ಕೊಹ್ಲಿ (Virat Kohli) ಸೇರಿದಂತೆ ಇತರೆ ಕ್ರಿಕೆಟಿಗರು ಸೋಶಿಯಲ್ ಮೀಡಿಯಾದಲ್ಲಿ ಭಾವುಕ ಪೋಸ್ಟ್​ಗಳನ್ನು ಹಂಚಿಕೊಂಡಿದ್ದಾರೆ. ಅದರಲ್ಲಿ ಕೊಹ್ಲಿ ಮಾಡಿರುವ ಪೋಸ್ಟ್ ಸೋಶಿಯಲ್ ಮೀಡಿಯಾದಲ್ಲಿ ಭಾರಿ ವೈರಲ್ ಆಗಿದೆ.

ಸೋಬರ್ಸ್ ಅಗಲಿಕೆಗೆ ಕೊಹ್ಲಿ ಭಾವುಕ ಪೋಸ್ಟ್

‘ಕ್ರಿಕೆಟ್ ತನ್ನ ಶ್ರೇಷ್ಠ ಆಟಗಾರರಲ್ಲಿ ಒಬ್ಬರನ್ನು ಕಳೆದುಕೊಂಡಿದೆ. ಸರ್ ಗಾರ್ಫೀಲ್ಡ್ ಸೋಬರ್ಸ್, ನಿಮ್ಮ ಆತ್ಮಕ್ಕೆ ಶಾಂತಿ ಸಿಗಲಿ. ನಿಮ್ಮ ಪರಂಪರೆ ಮುಂದಿನ ಪೀಳಿಗೆಗೆ ಸ್ಫೂರ್ತಿ ನೀಡುತ್ತಲೇ ಇರುತ್ತದೆ’ ಎಂಬ ಪೋಸ್ಟ್ ಅನ್ನು ವಿರಾಟ್ ಕೊಹ್ಲಿ ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದಾರೆ. ವಿರಾಟ್ ಕೊಹ್ಲಿ ಮತ್ತು ಗ್ಯಾರಿ ಸೋಬರ್ಸ್ ನಡುವೆ ವಿಶೇಷ ಬಾಂಧವ್ಯವಿತ್ತು. 2023 ರಲ್ಲಿ, ಭಾರತ ತಂಡದ ವೆಸ್ಟ್ ಇಂಡೀಸ್ ಪ್ರವಾಸದ ಸಮಯದಲ್ಲಿ, ಗ್ಯಾರಿ ಸೋಬರ್ಸ್ ಅವರ ಮಡದಿಯೊಂದಿಗೆ ಮೈದಾನಕ್ಕೆ ಆಗಮಸಿ ವಿರಾಟ್ ಕೊಹ್ಲಿಯನ್ನು ಭೇಟಿ ಮಾಡಿದ್ದರು. ಅದರ ಫೋಟೋಗಳು ಹಾಗೂ ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದವು.

ಭೂಮಿಯಲ್ಲಿ ನಡೆದಾಡಿದ ಶ್ರೇಷ್ಠ ಕ್ರಿಕೆಟಿಗ

ಕೊಹ್ಲಿ ಮಾತ್ರವಲ್ಲ, ಸಚಿನ್ ತೆಂಡೂಲ್ಕರ್ ಮತ್ತು ಸುನಿಲ್ ಗವಾಸ್ಕರ್ ಅವರಂತಹ ಲೆಜೆಂಡರಿ ಆಟಗಾರರು ಸಹ ಸೋಬರ್ಸ್ ನಿಧನಕ್ಕೆ ತೀವ್ರ ದುಃಖ ವ್ಯಕ್ತಪಡಿಸಿದ್ದಾರೆ. ಇದನ್ನು ಕ್ರಿಕೆಟ್ ಇತಿಹಾಸದಲ್ಲಿ ಅತ್ಯಂತ ದುಃಖಕರ ದಿನ ಎಂದಿರುವ ಗವಾಸ್ಕರ್, ಸೋಬರ್ಸ್ ಭೂಮಿಯಲ್ಲಿ ನಡೆದಾಡಿದ ಶ್ರೇಷ್ಠ ಕ್ರಿಕೆಟಿಗ ಎಂದಿದ್ದಾರೆ. 2003 ರ ವಿಶ್ವಕಪ್‌ನಲ್ಲಿ ಸರ್ ಗ್ಯಾರಿ ಅವರಿಗೆ ಟೂರ್ನಮೆಂಟ್‌ನ ಆಟಗಾರ ಟ್ರೋಫಿಯನ್ನು ನೀಡಿದ ನೆನಪುಗಳನ್ನು ಸಚಿನ್ ತೆಂಡೂಲ್ಕರ್ ನೆನಪಿಸಿಕೊಂಡಿದ್ದು, ‘ಸರ್ ಗಾರ್ಫೀಲ್ಡ್ ಸೋಬರ್ಸ್ ಅವರ ನಿಧನದ ಸುದ್ದಿಯನ್ನು ಒಪ್ಪಿಕೊಳ್ಳುವುದು ನಂಬಲಾಗದಷ್ಟು ಕಷ್ಟಕರವಾಗಿದೆ. ವರ್ಷಗಳಲ್ಲಿ ಅವರೊಂದಿಗೆ ಕಳೆದ ಹಲವು ಕ್ಷಣಗಳನ್ನು ನಾನು ನೆನಪಿಸಿಕೊಳ್ಳುತ್ತೇನೆ. ಸೋಬರ್ಸ್ ನಿಜವಾಗಿಯೂ ಒಬ್ಬನೇ ಒಬ್ಬ. ಅವರನ್ನು ತುಂಬಾ ಮಿಸ್ ಮಾಡಿಕೊಳ್ಳುತ್ತೇನೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ’ ಎಂದು ತಮ್ಮ ಎಕ್ಸ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ.

ಸೋಬರ್ಸ್ ಅವರ ವೃತ್ತಿಜೀವನ

ಸರ್ ಸೋಬರ್ಸ್ ಅವರ ವೃತ್ತಿಜೀವನದ ಬಗ್ಗೆ ಹೇಳುವುದಾದರೆ, ವೆಸ್ಟ್ ಇಂಡೀಸ್ ಪರ 93 ಟೆಸ್ಟ್ ಪಂದ್ಯಗಳನ್ನಾಡಿರುವ ಸೋಬರ್ಸ್ 57.78 ರ ಸರಾಸರಿಯಲ್ಲಿ 8032 ರನ್ ಗಳಿಸಿದ್ದಾರೆ. ಇದರಲ್ಲಿ 26 ಶತಕಗಳು ಮತ್ತು 30 ಅರ್ಧಶತಕಗಳು ಸೇರಿವೆ. ಹಾಗೆಯೇ 109 ಕ್ಯಾಚ್‌ಗಳನ್ನು ಸಹ ಹಿಡಿದಿದ್ದಾರೆ. ಬೌಲಿಂಗ್‌ನಲ್ಲೂ ಮಿಂಚಿರುವ ಅವರು 93 ಟೆಸ್ಟ್‌ಗಳಲ್ಲಿ 34 ಸರಾಸರಿಯಲ್ಲಿ 235 ವಿಕೆಟ್‌ಗಳನ್ನು ಪಡೆದಿದ್ದಾರೆ, ಇದರಲ್ಲಿ ಆರು ಬಾರಿ ಐದು ವಿಕೆಟ್‌ಗಳ ಸಾಧನೆಯೂ ಸೇರಿದೆ. ಒಟ್ಟಾರೆಯಾಗಿ, ಅವರ ಪ್ರಥಮ ದರ್ಜೆ ವೃತ್ತಿಜೀವನದಲ್ಲಿ, ಸೋಬರ್ಸ್ 383 ಪಂದ್ಯಗಳನ್ನು ಆಡಿದ್ದು, 86 ಶತಕಗಳು ಸೇರಿದಂತೆ 54.87 ಸರಾಸರಿಯಲ್ಲಿ 28314 ರನ್‌ಗಳನ್ನು ಗಳಿಸಿದ್ದಾರೆ. ಹಾಗೆಯೇ 36 ಬಾರಿ ಐದು ವಿಕೆಟ್‌ಗಳು ಸೇರಿದಂತೆ 1043 ವಿಕೆಟ್‌ಗಳನ್ನು ಸಹ ಪಡೆದಿದ್ದಾರೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us