ಪಾಕ್ ನೆಲದಲ್ಲಿ ವಿಶ್ವ ದಾಖಲೆಯ ಹ್ಯಾಟ್ರಿಕ್; ಅದು ನನ್ನ ಸವಿ ನೆನಪುಗಳ ಭಾಗವಾಗಿಲ್ಲ ಎಂದ ಪಠಾಣ್

Irfan Pathan's Karachi Hat-trick: 2006ರ ಕರಾಚಿಯಲ್ಲಿ ನಡೆದ ಭಾರತ-ಪಾಕಿಸ್ತಾನ ಟೆಸ್ಟ್ ಪಂದ್ಯದಲ್ಲಿ ಇರ್ಫಾನ್ ಪಠಾಣ್ ಮೊದಲ ಓವರ್‌ನಲ್ಲಿಯೇ ಹ್ಯಾಟ್ರಿಕ್ ಸಾಧನೆ ಮಾಡಿದರು. ಇದು ಟೆಸ್ಟ್ ಕ್ರಿಕೆಟ್‌ನಲ್ಲಿ ಅಪೂರ್ವ ಸಾಧನೆಯಾಗಿದ್ದು, ಪಾಕಿಸ್ತಾನದಲ್ಲಿ ಹ್ಯಾಟ್ರಿಕ್ ಪಡೆದ ಮೊದಲ ಭಾರತೀಯ ಎಂಬ ಹೆಗ್ಗಳಿಕೆಗೆ ಇರ್ಫಾಣ್ ಪಾತ್ರರಾದರು. ಆದರೂ ಭಾರತ ಆ ಪಂದ್ಯ ಮತ್ತು ಸರಣಿಯನ್ನು ಸೋತಿದ್ದರಿಂದ ಅದು ನನ್ನ ಸವಿ ನೆನಪುಗಳ ಭಾಗವಾಗಿಲ್ಲ ಎಂದ ಪಠಾಣ್ ಬೇಸರ ವ್ಯಕ್ತಪಡಿಸಿದ್ದಾರೆ.

ಪಾಕ್ ನೆಲದಲ್ಲಿ ವಿಶ್ವ ದಾಖಲೆಯ ಹ್ಯಾಟ್ರಿಕ್; ಅದು ನನ್ನ ಸವಿ ನೆನಪುಗಳ ಭಾಗವಾಗಿಲ್ಲ ಎಂದ ಪಠಾಣ್
Irfan Pathan

Updated on: Aug 16, 2025 | 5:46 PM

2006 ರಲ್ಲಿ ಭಾರತ ಮತ್ತು ಪಾಕಿಸ್ತಾನ (India vs Pakistan) ನಡುವೆ ನಡೆದ ಕರಾಚಿ ಟೆಸ್ಟ್ ಪಂದ್ಯದಲ್ಲಿ, ಟೀಂ ಇಂಡಿಯಾದ ಮಾಜಿ ಆಲ್ ರೌಂಡರ್ ಇರ್ಫಾನ್ ಪಠಾಣ್ (Irfan Pathan) ಇತಿಹಾಸ ಸೃಷ್ಟಿಸಿದ್ದರು. ಈ ಪಂದ್ಯದ ಮೊದಲ ಓವರ್​ನಲ್ಲಿಯೇ ಹ್ಯಾಟ್ರಿಕ್ ವಿಕೆಟ್ ಪಡೆಯುವ ಮೂಲಕ ಅವರು ತಮ್ಮ ಹೆಸರಿನಲ್ಲಿ ಅನೇಕ ದಾಖಲೆಗಳನ್ನು ನಿರ್ಮಿಸಿದರು. ಆದರೆ ಈ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ ಸೋಲನ್ನು ಎದುರಿಸಬೇಕಾಗಿ ಬಂತು. ಇದರೊಂದಿಗೆ, ತಂಡವು ಸರಣಿಯನ್ನು ಸಹ ಕಳೆದುಕೊಂಡಿತು. ಇದೀಗ ಹ್ಯಾಟ್ರಿಕ್ ವಿಕೆಟ್ ಉರುಳಿಸಿದ ಆ ಐತಿಹಾಸಿಕ ಕ್ಷಣವನ್ನು ನೆನಪಿಸಿಕೊಂಡಿರುವ ಇರ್ಫಾನ್ ಪಠಾಣ್, ನಾನು ಏನು ಬಯಸಿದ್ದೆನೋ ಅದು ನಿಖರವಾಗಿ ಹಾಗೆಯೇ ಆಯಿತು ಎಂದಿದ್ದಾರೆ.

ಮೊದಲ ಓವರ್‌ನಲ್ಲೇ ಹ್ಯಾಟ್ರಿಕ್ ವಿಕೆಟ್

ಪಾಕಿಸ್ತಾನ ಮತ್ತು ಭಾರತ ನಡುವಿನ ಮೂರು ಟೆಸ್ಟ್ ಪಂದ್ಯಗಳ ಸರಣಿಯ ಮೂರನೇ ಮತ್ತು ಕೊನೆಯ ಟೆಸ್ಟ್ ಪಂದ್ಯವು ಜನವರಿ 29, 2006 ರಂದು ಕರಾಚಿಯಲ್ಲಿ ಪ್ರಾರಂಭವಾಯಿತು. ಮೊದಲು ಬ್ಯಾಟಿಂಗ್ ಆರಂಭಿಸಿದ ಪಾಕಿಸ್ತಾನಕ್ಕೆ ಮೊದಲ ಓವರ್‌ನಲ್ಲೇ ಇರ್ಫಾನ್ ಪಠಾಣ್ ದೊಡ್ಡ ಹೊಡೆತ ನೀಡಿದರು. ಮೊದಲ ಓವರ್‌ನ ನಾಲ್ಕನೇ, ಐದನೇ ಮತ್ತು ಆರನೇ ಎಸೆತಗಳಲ್ಲಿ ಸಲ್ಮಾನ್ ಬಟ್, ಯೂನಿಸ್ ಖಾನ್ ಮತ್ತು ಮೊಹಮ್ಮದ್ ಯೂಸುಫ್ ಅವರನ್ನು ಪೆವಿಲಿಯನ್‌ಗೆ ಕಳುಹಿಸಿದರು.

ಇದರೊಂದಿಗೆ, ಇರ್ಫಾನ್ ಪಠಾಣ್ ಪಾಕಿಸ್ತಾನದಲ್ಲಿ ಹ್ಯಾಟ್ರಿಕ್ ಪಡೆದ ಮೊದಲ ಭಾರತೀಯ ಎಂಬ ಇತಿಹಾಸ ನಿರ್ಮಿಸಿದರು. ಇದಲ್ಲದೆ, ಟೆಸ್ಟ್ ಕ್ರಿಕೆಟ್‌ನ ಮೊದಲ ಓವರ್‌ನಲ್ಲಿಯೇ ಹ್ಯಾಟ್ರಿಕ್ ಪಡೆದ ವಿಶ್ವದ ಮೊದಲ ಬೌಲರ್ ಎಂಬ ಹೆಗ್ಗಳಿಕೆಗೆ ಇರ್ಫಾನ್ ಪಾತ್ರರಾದರು.

ಚೆಂಡು ನಾನು ಅಂದುಕೊಂಡ ಜಾಗದಲ್ಲಿ ಬಿತ್ತು

ಸಂದರ್ಶನವೊಂದರಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ಬಗ್ಗೆ ಮಾತನಾಡಿರುವ ಇರ್ಫಾನ್ ಪಠಾಣ್, ‘ನಾನು ಸಲ್ಮಾನ್ ಬಟ್ ಮತ್ತು ಯೂನಿಸ್ ಖಾನ್ ಅವರನ್ನು ಸತತ ಎರಡು ಎಸೆತಗಳಲ್ಲಿ ಔಟ್ ಮಾಡಿದ ಬಳಿಕ ಮತ್ತೆ ರನ್-ಅಪ್‌ಗೆ ಹಿಂತಿರುಗುವಾಗ, ನಾನು ಮೊಹಮ್ಮದ್ ಯೂಸುಫ್ ಅವರನ್ನು ಎಲ್ಬಿಡಬ್ಲ್ಯೂ ಮಾಡಲು ಪ್ರಯತ್ನಿಸಬೇಕು ಎಂದು ಯೋಚಿಸಲು ಪ್ರಾರಂಭಿಸಿದೆ. ‘ನಾನು ಯಾವ ರೀತಿಯ ಚೆಂಡನ್ನು ಬೌಲ್ ಮಾಡಬೇಕು ಎಂದುಕೊಂಡಿದ್ದೇನೊ ಅದೇ ರೀತಿ ಚೆಂಡು ನಾನು ಬಯಸಿದ ಜಾಗದಲ್ಲಿ ನಿಖರವಾಗಿ ಬಿದ್ದು ಅದೇ ರೀತಿಯಲ್ಲಿ ಸ್ವಿಂಗ್ ಆಗಿ ಮೊಹಮ್ಮದ್ ಯೂಸುಫ್ ಅವರ ಕಾಲಿಗೆ ಬಡಿಯಿತು, ಯೂಸುಫ್‌ಗೆ ನನ್ನ ಚೆಂಡನ್ನು ಅರ್ಥಮಾಡಿಕೊಳ್ಳಲು ಸಾಧ್ಯವಾಗಲಿಲ್ಲ’ ಎಂದಿದ್ದಾರೆ.

ಬಿಸಿಸಿಐ ಒಳ ರಾಜಕೀಯಕ್ಕೆ ಬಲಿಯಾದ್ರ ರೋಹಿತ್- ಕೊಹ್ಲಿ? ಮಾಜಿ ವೇಗಿಯ ಗಂಭೀರ ಆರೋಪ

ಹ್ಯಾಟ್ರಿಕ್ ವಿಕೆಟ್ ಪಡೆದ ನಂತರ ನಾನು ತುಂಬಾ ಸಂತೋಷಪಟ್ಟೆ, ಆದರೆ ಈ ಟೆಸ್ಟ್ ಪಂದ್ಯದಲ್ಲಿ ನಾವು 341 ರನ್‌ಗಳಿಂದ ಸೋಲನ್ನು ಎದುರಿಸಬೇಕಾದಾಗ ನನ್ನ ಸಂತೋಷ ಮಾಯವಾಯಿತು. ಇದರ ನಂತರ, ಮೊದಲ ಎರಡು ಪಂದ್ಯಗಳು ಡ್ರಾ ಆಗಿದ್ದರಿಂದ ನಾವು ಸರಣಿಯನ್ನು ಕಳೆದುಕೊಂಡೆವು ಎಂದು ಇರ್ಫಾನ್ ಪಠಾಣ್ ಬೇಸರದ ಮಾತುಗಳನ್ನಾಡಿದ್ದಾರೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 5:44 pm, Sat, 16 August 25