ಬಿಸಿಸಿಐ ಒಳ ರಾಜಕೀಯಕ್ಕೆ ಬಲಿಯಾದ್ರ ರೋಹಿತ್- ಕೊಹ್ಲಿ? ಮಾಜಿ ವೇಗಿಯ ಗಂಭೀರ ಆರೋಪ
Virat Kohli, Rohit Sharma's Test Retirement: ಭಾರತೀಯ ಕ್ರಿಕೆಟ್‌ನ ದಂತಕಥೆಗಳಾದ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಅವರ ಟೆಸ್ಟ್ ಕ್ರಿಕೆಟ್ ನಿವೃತ್ತಿ ಬಿಸಿಸಿಐನ ಆಂತರಿಕ ರಾಜಕೀಯದಿಂದ ಪ್ರೇರಿತವಾಗಿದೆ ಎಂದು ಮಾಜಿ ಕ್ರಿಕೆಟಿಗ ಕರ್ಸನ್ ಘಾವ್ರಿ ಆರೋಪಿಸಿದ್ದಾರೆ. ಕೊಹ್ಲಿ ಇನ್ನೂ ಕೆಲವು ವರ್ಷಗಳ ಕಾಲ ಆಡಬಹುದಿತ್ತು ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ. ರೋಹಿತ್ ಅವರ ನಿವೃತ್ತಿಯನ್ನೂ ಅವರು ಬಲವಂತದ ನಿರ್ಧಾರ ಎಂದು ಕರೆದಿದ್ದಾರೆ. ಏಕದಿನ ಕ್ರಿಕೆಟ್‌ನಿಂದಲೂ ಇವರು ನಿವೃತ್ತರಾಗುವ ಸಾಧ್ಯತೆಯ ಬಗ್ಗೆಯೂ ಚರ್ಚೆಗಳು ನಡೆಯುತ್ತಿವೆ.

ಭಾರತೀಯ ಕ್ರಿಕೆಟ್‌ನ ಇಬ್ಬರು ದಂತಕಥೆಗಳಾದ ರೋಹಿತ್ ಶರ್ಮಾ (Rohit Sharma) ಮತ್ತು ವಿರಾಟ್ ಕೊಹ್ಲಿ (Virat Kohli) ಇತ್ತೀಚೆಗೆ ಟೆಸ್ಟ್ ಕ್ರಿಕೆಟ್‌ನಿಂದ ನಿವೃತ್ತಿ ಘೋಷಿಸುವ ಮೂಲಕ ಎಲ್ಲರನ್ನೂ ಅಚ್ಚರಿಗೊಳಿಸಿದ್ದರು. ಇಂಗ್ಲೆಂಡ್ ಪ್ರವಾಸಕ್ಕೆ ಸ್ವಲ್ಪ ಮೊದಲು, ಈ ಇಬ್ಬರೂ ಆಟಗಾರರು ತಮ್ಮ ಸೋಶೀಯಲ್ ಮೀಡಿಯಾ ಖಾತೆಯ ಮೂಲಕ ತಮ್ಮ ಟೆಸ್ಟ್ ವೃತ್ತಿಜೀವನಕ್ಕೆ ವಿದಾಯ ಹೇಳಿದ್ದರು. ರೋಹಿತ್ ವಿದಾಯಕ್ಕಿಂತ ಕೊಹ್ಲಿ ನಿವೃತ್ತಿ ಘೋಷಿಸಿದ್ದು ಎಲ್ಲರಲ್ಲೂ ಅಚ್ಚರಿ ಮೂಡಿಸಿತ್ತು. ಏಕೆಂದರೆ ಕೊಹ್ಲಿ ಇನ್ನು ಕೆಲವು ವರ್ಷಗಳ ಕಾಲ ಟೆಸ್ಟ್ನಲ್ಲಿ ಆಡಲಿದ್ದಾರೆ ಎಂಬುದು ಎಲ್ಲ ಅನುಭವಿಗಳ ಅಭಿಪ್ರಾಯವಾಗಿತ್ತು. ಇದೀಗ ಇವರಿಬ್ಬರ ನಿವೃತ್ತಿಯ ಬಗ್ಗೆ ಹೇಳಿಕೆ ನೀಡಿರುವ ಭಾರತದ ಮಾಜಿ ವೇಗಿ ಕರ್ಸನ್ ಘಾವ್ರಿ (Karsan Ghavri) , ‘ಬಿಸಿಸಿಐ ಮತ್ತು ಆಯ್ಕೆದಾರರ ಆಂತರಿಕ ರಾಜಕೀಯದ ಪರಿಣಾಮವಾಗಿ ಇವರಿಬ್ಬರು ನಿವೃತ್ತಿ ಘೋಷಿಸಿದ್ದಾರೆ’ ಎಂದಿದ್ದಾರೆ.
ಕರ್ಸನ್ ಘಾವ್ರಿ ಹೇಳಿದ್ದೇನು?
ವಿರಾಟ್ ಕೊಹ್ಲಿ ಇನ್ನು ಕನಿಷ್ಠ ಎರಡು ವರ್ಷಗಳ ಕಾಲ ಟೆಸ್ಟ್ ಕ್ರಿಕೆಟ್ ಆಡಬಹುದಿತ್ತು ಎಂದು ಅಭಿಪ್ರಾಯ ಪಟ್ಟಿರುವ ಕರ್ಸನ್ ಘಾವ್ರಿ, ಒಬ್ಬ ಅತ್ಯುತ್ತಮ ಕ್ರಿಕೆಟಿಗನಿಗೆ ಬಿಸಿಸಿಐ ವಿದಾಯದ ಪಂದ್ಯವನ್ನಾಡುವ ಅವಕಾಶ ನೀಡದಿರುವುದು ಬೇಸರ ತಂದಿದೆ ಎಂದಿದ್ದಾರೆ. ವಿಕಿ ಲಾಲ್ವಾನಿ ಶೋನಲ್ಲಿ ಕೊಹ್ಲಿ ಅವರ ಹಠಾತ್ ನಿವೃತ್ತಿಯ ಬಗ್ಗೆ ಮಾತನಾಡಿರುವ ಘಾವ್ರಿ, ‘ಇದು ನಿಗೂಢ. ಕೊಹ್ಲಿ ಖಂಡಿತವಾಗಿಯೂ ಭಾರತ ಪರ ಆಡುವುದನ್ನು ಮುಂದುವರಿಸಬೇಕಿತ್ತು, ಬಹುಶಃ ಮುಂದಿನ ಕೆಲವು ವರ್ಷಗಳವರೆಗಾದರೂ ಅವರು ಆಡಬಹುದಿತ್ತು. ಆದರೆ ಯಾರೋ ಅವರನ್ನು ನಿವೃತ್ತಿ ಹೊಂದುವಂತೆ ಒತ್ತಾಯಿಸಿದ್ದಾರೆ ಎಂದು ನಾನು ಭಾವಿಸುತ್ತೇನೆ.
ನನ್ನ ಪ್ರಕಾರ ಈ ಸಮಯದಲ್ಲಿ ರೋಹಿತ್ ಮತ್ತು ಕೊಹ್ಲಿ ಬಿಸಿಸಿಐ ಆಂತರಿಕ ರಾಜಕೀಯಕ್ಕೆ ಬಲಿಯಾಗಿದ್ದಾರೆ ಅನಿಸುತ್ತಿದೆ. ಇದು ಬಿಸಿಸಿಐನ ಆಂತರಿಕ ರಾಜಕೀಯ, ಇದನ್ನು ಅರ್ಥಮಾಡಿಕೊಳ್ಳುವುದು ಕಷ್ಟ. ಹೀಗಾಗಿ ಇವರಿಬ್ಬರು ಸಮಯಕ್ಕಿಂತ ಮೊದಲೇ ನಿವೃತ್ತರಾಗಲು ಬಹುಶಃ ಇವರುಗಳೇ ಕಾರಣಗಳಾಗಿರಬಹುದು ಎಂದು ನಾನು ಭಾವಿಸುತ್ತೇನೆ. ರೋಹಿತ್ ಶರ್ಮಾ ಕೂಡ ಸಮಯಕ್ಕಿಂತ ಮೊದಲೇ ನಿವೃತ್ತರಾದರು. ರೋಹಿತ್ರನ್ನು ಬಲವಂತವಾಗಿ ನಿವೃತ್ತಿ ಘೋಷಿಸುವಂತೆ ಮಾಡಲಾಯಿತು. ಇದು ಒಂದು ರೀತಿಯ ಕ್ಷುಲ್ಲಕ ರಾಜಕೀಯದ ಪ್ರಕರಣ’ ಎಂದಿದ್ದಾರೆ.
ಕೊಹ್ಲಿ ತಂಡದ ವಿರುದ್ಧ ಭಾರತದಲ್ಲಿ ಫುಟ್ಬಾಲ್ ಪಂದ್ಯವನ್ನಾಡಲಿದ್ದಾರೆ ಕ್ರಿಸ್ಟಿಯಾನೊ ರೊನಾಲ್ಡೊ
ಏಕದಿನಕ್ಕೂ ವಿದಾಯ ವದಂತಿ
2024 ರ ಟಿ20 ವಿಶ್ವಕಪ್ ನಂತರ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಟಿ20 ಸ್ವರೂಪದಿಂದ ನಿವೃತ್ತರಾದರು. ಇದೀಗ ಟೆಸ್ಟ್‌ಗೆ ವಿದಾಯ ಹೇಳಿದ್ದಾರೆ. ಹೀಗಾಗಿ ಈ ಇಬ್ಬರೂ ಆಟಗಾರರು ಏಕದಿನ ಪಂದ್ಯಗಳಲ್ಲಿ ಮಾತ್ರ ಭಾಗವಹಿಸುತ್ತಿದ್ದಾರೆ. ಈ ವರ್ಷದ ಅಕ್ಟೋಬರ್‌ನಲ್ಲಿ ಟೀಂ ಇಂಡಿಯಾ ಆಸ್ಟ್ರೇಲಿಯಾ ಪ್ರವಾಸ ಮಾಡಬೇಕಾಗಿದೆ, ಅಲ್ಲಿ ಏಕದಿನ ಸರಣಿ ನಡೆಯಲಿದೆ. ಆದರೆ ಕೆಲವು ವರದಿಗಳ ಪ್ರಕಾರ, ಈ ಪ್ರವಾಸವು ರೋಹಿತ್ ಮತ್ತು ವಿರಾಟ್ ಅವರ ಕೊನೆಯ ಪ್ರವಾಸವಾಗಿರಬಹುದು ಎನ್ನುತ್ತಿವೆ. ಆದಾಗ್ಯೂ, ಈ ವಿಷಯದಲ್ಲಿ ಇನ್ನೂ ಯಾವುದೇ ಅಧಿಕೃತ ಹೇಳಿಕೆ ಬಂದಿಲ್ಲ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
