ವಿರಾಟ್ ಕೊಹ್ಲಿ ಅಲ್ಲ… ಸಾರ್ವಕಾಲಿಕ ಶ್ರೇಷ್ಠ ಆಟಗಾರರನ್ನು ಹೆಸರಿಸಿದ ಸ್ಟೀವ್ ಸ್ಮಿತ್
ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ 664 ಪಂದ್ಯಗಳಲ್ಲಿ ಕಣಕ್ಕಿಳಿದಿರುವ ಸಚಿನ್ ತೆಂಡೂಲ್ಕರ್ 100 ಶತಕಗಳೊಂದಿಗೆ ಒಟ್ಟು 34357 ರನ್ ಕಲೆಹಾಕಿದ್ದಾರೆ. ಈ ಮೂಲಕ ಇಂಟರ್ನ್ಯಾಷನಲ್ ಕ್ರಿಕೆಟ್ನಲ್ಲಿ ಅತ್ಯಧಿಕ ರನ್ ಕಲೆಹಾಕಿದ ಬ್ಯಾಟರ್ ಎನಿಸಿಕೊಂಡಿದ್ದಾರೆ. ಇನ್ನು ಸೌತ್ ಆಫ್ರಿಕಾದ ಆಲ್‌ರೌಂಡರ್ ಜಾಕ್ಸ್ ಕಾಲಿಸ್ ಒಟ್ಟು 25,534 ರನ್ ಗಳಿಸಿದ್ದಾರೆ.

ಕ್ರಿಕೆಟ್ ಇತಿಹಾಸದ ಸರ್ವಶ್ರೇಷ್ಠ ಆಟಗಾರ ಯಾರು ಎಂಬುದು ಆಗಾಗ್ಗೆ ಚರ್ಚೆಯಾಗುತ್ತಿರುತ್ತದೆ. ಕೆಲವರು ಆಸ್ಟ್ರೇಲಿಯಾದ ದಂತಕಥೆ ಡಾನ್ ಬ್ರಾಡ್ಮನ್ ಹೆಸರನ್ನು ಹೇಳಿದರೆ, ಮತ್ತೆ ವೆಸ್ಟ್ ಇಂಡೀಸ್ ದಿಗ್ಗಜ ವಿವಿಯನ್ ರಿಚರ್ಡ್ಸ್ ಹೆಸರು ಹೇಳುತ್ತಾರೆ. ಇನ್ನೂ ಕೆಲವರು ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್ ಅವರ ಹೆಸರನ್ನು ಪ್ರಸ್ತಾಪಿಸುತ್ತಾರೆ. ಈ ಚರ್ಚೆಗಳ ನಡುವೆ ವಿರಾಟ್ ಕೊಹ್ಲಿಯ ಹೆಸರು ಕೂಡ ಆಗಾಗ್ಗೆ ಕೇಳಿ ಬರುತ್ತಿರುತ್ತವೆ. ಇದೀಗ ಆಸ್ಟ್ರೇಲಿಯಾದ ಸ್ಟೀವ್ ಸ್ಮಿತ್ ಕ್ರಿಕೆಟ್ ಅಂಗಳದ ಸಾರ್ವಕಾಲಿಕ ಶ್ರೇಷ್ಠ ಆಟಗಾರರು ಯಾರೆಂಬುದನ್ನು ತಿಳಿಸಿದ್ದಾರೆ.
ಸ್ಟೀವ್ ಸ್ಮಿತ್ ಪ್ರಕಾರ, ಕ್ರಿಕೆಟ್ ಇತಿಹಾಸದ ಶ್ರೇಷ್ಠ ಆಟಗಾರೆಂದರೆ ಸೌತ್ ಆಫ್ರಿಕಾ ಜಾಕ್ಸ್ ಕಾಲಿಸ್ ಹಾಗೂ ಭಾರತದ ಸಚಿನ್ ತೆಂಡೂಲ್ಕರ್. ಬಿಬಿಸಿ ಸ್ಪೋರ್ಟ್ಸ್ ವೇಲ್ಸ್ ಜೊತೆಗಿನ ಚಿಟ್ ಚಾಟ್ನಲ್ಲಿ ಕಾಣಿಸಿಕೊಂಡ ಸ್ಮಿತ್ಗೆ ಸಾರ್ವಕಾಲಿಕ ಶ್ರೇಷ್ಠ ಬ್ಯಾಟ್ಸ್‌ಮನ್ ಯಾರು? ಎಂಬ ಪ್ರಶ್ನೆಯನ್ನು ಮುಂದಿಡಲಾಗಿತ್ತು.
ಈ ಪ್ರಶ್ನೆಗೆ ಸ್ಮಿತ್ ಕಡೆಯಿಂದ ಬಂದ ಉತ್ತರ ಜಾಕ್ಸ್ ಕಾಲಿಸ್. ಕ್ಷಣಾರ್ಧದಲ್ಲೇ ಕ್ಷಮಿಸಿ ಎಂದ ಸ್ಮಿತ್, ಕಾಲಿಸ್ ಸಾರ್ವಕಾಲಿಕ ಶ್ರೇಷ್ಠ ಕ್ರಿಕೆಟಿಗ ಎಂದು ಭಾವಿಸುತ್ತೇನೆ. ಸಾರ್ವಕಾಲಿಕ ಶ್ರೇಷ್ಠ ಬ್ಯಾಟ್ಸ್‌ಮನ್ ಬಹುಶಃ ಸಚಿನ್ ತೆಂಡೂಲ್ಕರ್ ಆಗಿರಬಹುದು ಎಂದರು.
ಈ ಮೂಲಕ ಸಾರ್ವಕಾಲಿಕ ಶ್ರೇಷ್ಠ ಕ್ರಿಕೆಟರ್ ಜಾಕ್ಸ್ ಕಾಲಿಸ್ ಹಾಗೂ ಸಾರ್ವಕಾಲಿಕ ಶ್ರೇಷ್ಠ ಬ್ಯಾಟರ್ ಸಚಿನ್ ತೆಂಡೂಲ್ಕರ್ ಎಂಬ ಅಭಿಪ್ರಾಯವನ್ನು ಮುಂದಿಟ್ಟರು. ಇಲ್ಲಿ ಜಾಕ್ಸ್ ಕಾಲಿಸ್ ಅವರನ್ನು ಶ್ರೇಷ್ಠ ಕ್ರಿಕೆಟಿಗ ಎಂದೇಳು ಮುಖ್ಯ ಕಾರಣ ಅವರ ಆಲ್‌ರೌಂಡರ್ ಪ್ರದರ್ಶನ.
1995 ರಿಂದ 2014 ರವರೆಗೆ ಸೌತ್ ಆಫ್ರಿಕಾ ಪರ 19 ವರ್ಷಗಳ ಕಾಲ ಕಣಕ್ಕಿಳಿದಿದ್ದ ಜಾಕ್ಸ್ ಕಾಲಿಸ್ ಒಟ್ಟು 519 ಪಂದ್ಯಗಳನ್ನು ಆಡಿದ್ದಾರೆ. ಈ ವೇಳೆ ಅವರು ಬರೋಬ್ಬರಿ 577 ವಿಕೆಟ್‌ಗಳನ್ನು ಕಬಳಿಸಿದ್ದಾರೆ. ಇದರ ಜೊತೆಗೆ 25,534 ರನ್‌ಗಳನ್ನು ಗಳಿಸಿದ್ದಾರೆ. ದಕ್ಷಿಣ ಆಫ್ರಿಕಾದ ಮಾಜಿ ಆಲ್‌ರೌಂಡರ್ ಟೆಸ್ಟ್ ಮತ್ತು ಏಕದಿನ ಎರಡೂ ಸ್ವರೂಪಗಳಲ್ಲಿ 10,000 ಕ್ಕೂ ಹೆಚ್ಚು ರನ್‌ಗಳನ್ನು ಗಳಿಸಿದ್ದಾರೆ ಮತ್ತು ಎರಡರಲ್ಲೂ 250 ಕ್ಕೂ ಹೆಚ್ಚು ವಿಕೆಟ್‌ಗಳನ್ನು ಪಡೆದಿದ್ದಾರೆ.
ಇದನ್ನೂ ಓದಿ: IPL 2026: ಇಬ್ಬರ ಡೀಲ್… ಸಂಜು ಸ್ಯಾಮ್ಸನ್ ಮೇಲೆ KKR ಕಣ್ಣು
ಹಾಗೆಯೇ ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ 664 ಪಂದ್ಯಗಳಲ್ಲಿ ಕಣಕ್ಕಿಳಿದಿರುವ ಸಚಿನ್ ತೆಂಡೂಲ್ಕರ್ 100 ಶತಕಗಳೊಂದಿಗೆ ಒಟ್ಟು 34357 ರನ್ ಕಲೆಹಾಕಿದ್ದಾರೆ. ಈ ಮೂಲಕ ಇಂಟರ್ನ್ಯಾಷನಲ್ ಕ್ರಿಕೆಟ್ನಲ್ಲಿ ಅತ್ಯಧಿಕ ರನ್ ಕಲೆಹಾಕಿದ ಬ್ಯಾಟರ್ ಎನಿಸಿಕೊಂಡಿದ್ದಾರೆ. ಹೀಗಾಗಿ ಸ್ಟೀವ್ ಸ್ಮಿತ್ ಸಚಿನ್ ತೆಂಡೂಲ್ಕರ್ ಅವರನ್ನು ಸಾರ್ವಕಾಲಿಕ ಶ್ರೇಷ್ಠ ಬ್ಯಾಟ್ಸ್‌ಮನ್ ಎಂದು ಹೆಸರಿಸಿದ್ದಾರೆ.
Published On - 2:22 pm, Sat, 16 August 25
