ಕೊಹ್ಲಿ ತಂಡದ ವಿರುದ್ಧ ಭಾರತದಲ್ಲಿ ಫುಟ್ಬಾಲ್ ಪಂದ್ಯವನ್ನಾಡಲಿದ್ದಾರೆ ಕ್ರಿಸ್ಟಿಯಾನೊ ರೊನಾಲ್ಡೊ
Cristiano Ronaldo India: AFC ಏಷ್ಯನ್ ಚಾಂಪಿಯನ್ಸ್ ಲೀಗ್-2 ರಲ್ಲಿ FC ಗೋವಾ ಮತ್ತು ಕ್ರಿಸ್ಟಿಯಾನೊ ರೊನಾಲ್ಡೊ ಅವರ ಅಲ್ ನಾಸರ್ ಒಂದೇ ಗುಂಪಿನಲ್ಲಿ ಸ್ಥಾನ ಪಡೆದಿವೆ. ಇದರಿಂದ ರೊನಾಲ್ಡೊ ಭಾರತಕ್ಕೆ ಬರುವ ಸಾಧ್ಯತೆ ಹೆಚ್ಚಾಗಿದೆ. ವಿರಾಟ್ ಕೊಹ್ಲಿ FC ಗೋವಾ ತಂಡದ ಸಹ-ಮಾಲೀಕರಾಗಿದ್ದಾರೆ. ಪಂದ್ಯದ ವೇಳಾಪಟ್ಟಿ ಇನ್ನೂ ಘೋಷಣೆಯಾಗಿಲ್ಲವಾದರೂ, ರೊನಾಲ್ಡೊ ಅವರ ಭಾರತ ಭೇಟಿಯು ಫುಟ್ಬಾಲ್ ಅಭಿಮಾನಿಗಳಲ್ಲಿ ಭಾರಿ ನಿರೀಕ್ಷೆಯನ್ನು ಹುಟ್ಟುಹಾಕಿದೆ.

ಫುಟ್ಬಾಲ್ ದಿಗ್ಗಜ ಲಿಯೋನೆಲ್ ಮೆಸ್ಸಿ (Lionel Messi) ಭಾರತಕ್ಕೆ ಬರುತ್ತಿರುವುದು ಇಲ್ಲಿನ ಫುಟ್ಬಾಲ್ ಅಭಿಮಾನಿಗಳಿಗೆ ಹಬ್ಬದ ಸಂಭ್ರಮವನ್ನುಂಟು ಮಾಡಿದೆ. ಮಾಹಿತಿಯಂತೆ ಮೆಸ್ಸಿ ಇದೇ ಡಿಸೆಂಬರ್ ತಿಂಗಳಲ್ಲಿ ಭಾರತಕ್ಕೆ ಭೇಟಿ ನೀಡಲಿದ್ದಾರೆ. ಈ ನಡುವೆ ಫುಟ್ಬಾಲ್ ಅಭಿಮಾನಿಗಳಿಗೆ ಮತ್ತೊಂದು ಸಂತಸದ ಸುದ್ದಿ ಸಿಕ್ಕಿದ್ದು, ಮತ್ತೊಬ್ಬ ಫುಟ್ಬಾಲ್ ಲೆಜೆಂಡ್ ಕ್ರಿಸ್ಟಿಯಾನೊ ರೊನಾಲ್ಡೊ (Cristiano Ronaldo) ಕೂಡ ಭಾರತಕ್ಕೆ ಬರಲಿದ್ದಾರೆ ಎಂಬ ಸುದ್ದಿ ಹರಿದಾಡಲಾರಂಭಿಸಿದೆ. ಇದು ಮಾತ್ರವಲ್ಲದೆ ವಿರಾಟ್ ಕೊಹ್ಲಿ (Virat Kohli) ಒಡೆತನದ ತಂಡದ ವಿರುದ್ಧ ರೊನಾಲ್ಡೊ ಪಂದ್ಯವನ್ನು ಸಹ ಆಡಲಿದ್ದಾರೆ.
ಆಗಸ್ಟ್ 15 ರ ಶುಕ್ರವಾರದಂದು AFC ಏಷ್ಯನ್ ಚಾಂಪಿಯನ್ಸ್ ಲೀಗ್ -2 ರ ನಾಲ್ಕು ಗುಂಪುಗಳಿಗೆ ತಂಡಗಳನ್ನು ಘೋಷಿಸಿದೆ. ಇಂಡಿಯನ್ ಸೂಪರ್ ಲೀಗ್‌ನಲ್ಲಿ ಆಡುವ FC ಗೋವಾ ಕೂಡ ಈ ಪಂದ್ಯಾವಳಿಯಲ್ಲಿ ಭಾರತದಿಂದ ಭಾಗವಹಿಸುತ್ತಿದೆ. ಅಚ್ಚರಿಯ ಸಂಗತಿಯೆಂದರೆ ಪೋರ್ಚುಗೀಸ್ ಸೂಪರ್‌ಸ್ಟಾರ್ ರೊನಾಲ್ಡೊ ಪ್ರತಿನಿಧಿಸುವ ಅಲ್ ನಾಸರ್ ತಂಡ ಮತ್ತು FC ಗೋವಾ ತಂಡ ಒಂದೇ ಗುಂಪಿನಲ್ಲಿ ಸ್ಥಾನ ಪಡೆದಿವೆ.
ಮಲೇಷ್ಯಾದ ರಾಜಧಾನಿ ಕೌಲಾಲಂಪುರದಲ್ಲಿ ಎಎಫ್‌ಸಿ ಚಾಂಪಿಯನ್ಸ್ ಲೀಗ್ ಮತ್ತು ಚಾಂಪಿಯನ್ಸ್ ಲೀಗ್-2 ರ ಡ್ರಾಗಳು ನಡೆದಿದ್ದು, ಇದರಲ್ಲಿ ಸೌದಿ ಅರೇಬಿಯಾದ ಕ್ಲಬ್‌ಗಳಾದ ಅಲ್ ನಾಸರ್ ಮತ್ತು ಎಫ್‌ಸಿ ಗೋವಾ ತಂಡಗಳು ಗ್ರೂಪ್ ಡಿಯಲ್ಲಿ ಸ್ಥಾನ ಪಡೆದಿವೆ. ಸೌದಿ ಪ್ರೊ ಲೀಗ್‌ನಲ್ಲಿ ಆಡುವ ಅಲ್ ನಾಸರ್ ಮತ್ತು ಐಎಸ್‌ಎಲ್‌ನ ಭಾಗವಾಗಿರುವ ಎಫ್‌ಸಿ ಗೋವಾ ಜೊತೆಗೆ, ಇರಾಕ್‌ನ ಅಲ್ ಜರ್ವಾ ಮತ್ತು ತಜಕಿಸ್ತಾನದ ಇಸ್ತಿಕ್ಲೋಲ್ ದುಶಾನ್ಬೆ ಕೂಡ ಈ ಗುಂಪಿನಲ್ಲಿ ಸ್ಥಾನ ಪಡೆದಿವೆ.
ಗೋವಾದಲ್ಲಿ ರೊನಾಲ್ಡೊ
ಈ ಪಂದ್ಯಾವಳಿಯ ಸ್ವರೂಪದ ಪ್ರಕಾರ, ಗುಂಪಿನಲ್ಲಿರುವ ಪ್ರತಿಯೊಂದು ತಂಡವು ಇತರ ಎಲ್ಲಾ ತಂಡಗಳೊಂದಿಗೆ ತಲಾ 2 ಪಂದ್ಯಗಳನ್ನು ಆಡುತ್ತವೆ. ಅದರಲ್ಲಿ ಒಂದು ಪಂದ್ಯವನ್ನು ಅವರ ತವರು ಮೈದಾನದಲ್ಲಿ ಮತ್ತು ಇನ್ನೊಂದು ಪಂದ್ಯವನ್ನು ಎದುರಾಳಿ ತಂಡದ ತವರು ಮೈದಾನದಲ್ಲಿ ಆಡಲಾಗುತ್ತದೆ. ಈ ರೀತಿಯಾಗಿ, ಎಫ್‌ಸಿ ಗೋವಾ ಮತ್ತು ಅಲ್ ನಾಸರ್ ನಡುವಿನ ಒಂದು ಪಂದ್ಯ ಸೌದಿ ಅರೇಬಿಯಾದಲ್ಲಿ ನಡೆಯಲಿದ್ದು, ಇನ್ನೊಂದು ಪಂದ್ಯ ಗೋವಾದಲ್ಲಿ ನಡೆಯಲಿದೆ. ಇದರರ್ಥ ರೊನಾಲ್ಡೊ ಪ್ರತಿನಿಧಿಸುವ ತಂಡ ಭಾರತಕ್ಕೆ ಬರಬೇಕಾಗುತ್ತದೆ.
ಮೋದಿ ಅವರನ್ನು ಭೇಟಿ ಮಾಡಲಿರುವ ಮೆಸ್ಸಿ; ಭಾರತ ಪ್ರವಾಸದ ಪೂರ್ಣ ವಿವರ ಇಲ್ಲಿದೆ
ಕೊಹ್ಲಿ ಎಫ್‌ಸಿ ಗೋವಾ ತಂಡದ ಮಾಲೀಕ
ಟೀಂ ಇಂಡಿಯಾದ ಸೂಪರ್‌ಸ್ಟಾರ್ ವಿರಾಟ್ ಕೊಹ್ಲಿ ಎಫ್‌ಸಿ ಗೋವಾ ತಂಡದ ಸಹ-ಮಾಲೀಕರಾಗಿದ್ದಾರೆ. ಪ್ರಸ್ತುತ ಈ ಪಂದ್ಯಾವಳಿಯ ವೇಳಾಪಟ್ಟಿಯನ್ನು ಇನ್ನೂ ಘೋಷಿಸಲಾಗಿಲ್ಲ. ಆದಾಗ್ಯೂ, ರೊನಾಲ್ಡೊ ಭಾರತದಲ್ಲಿ ನಡೆಯಲಿರುವ ಪಂದ್ಯದಲ್ಲಿ ಭಾಗವಹಿಸಲು ಬರುತ್ತಾರೋ ಅಥವಾ ಅವರು ತಮ್ಮ ತವರು ಪಂದ್ಯದಲ್ಲಿ ಮಾತ್ರ ಆಡುತ್ತಾರೋ ಎಂಬ ಪ್ರಶ್ನೆ ಅಭಿಮಾನಿಗಳ ಮನಸ್ಸಿನಲ್ಲಿ ಇನ್ನೂ ಉಳಿದಿದೆ. ಈ ಬಗ್ಗೆ ಸ್ಪಷ್ಟ ನಿರ್ಧಾರ ಇನ್ನಷ್ಟೇ ಹೊರಬೀಳಬೇಕಿದೆ. ಆದಾಗ್ಯೂ ಭಾರತೀಯ ಅಭಿಮಾನಿಗಳು ಮಾತ್ರ ರೊನಾಲ್ಡೋ ಭಾರತಕ್ಕೆ ಬರುತ್ತಾರೆ ಎಂಬ ಭರವಸೆಯಿಂದ ಕಾಯುತ್ತಿದ್ದಾರೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
