IND vs SL 1st T20: ಮುಂದುವರಿದ ಭಾರತದ ಗೆಲುವಿನ ಸಂಭ್ರಮ: ಮೊದಲ ಟಿ20ಯಲ್ಲೇ ಶ್ರೀಲಂಕಾಕ್ಕೆ ನಡುಕ

| Updated By: Vinay Bhat

Updated on: Feb 25, 2022 | 7:33 AM

India vs Sri Lanka T20I: ಲಕ್ನೋದ ಭಾರತ ರತ್ನ ಅಟಲ್ ಬಿಹಾರಿ ವಾಜಪೇಯಿ ಸ್ಟೇಡಿಯಂನಲ್ಲಿ ನಡೆದ ಮೊದಲ ಟಿ20 ಪಂದ್ಯದಲ್ಲಿ ಟೀಮ್ ಇಂಡಿಯಾ ಬರೋಬ್ಬರಿ 62 ರನ್​ಗಳ ಅಮೋಘ ಗೆಲುವು ಸಾಧಿಸಿತು. ಇಶಾನ್ ಕಿಶನ್ ಹಾಗೂ ಶ್ರೇಯಸ್ ಅಯ್ಯರ್ ಅವರ ಸ್ಫೋಟಕ ಬ್ಯಾಟಿಂಗ್ ನೆರವಿನಿಂದ ಭಾರತ ದೊಡ್ಡ ಮೊತ್ತ ಕಲೆಹಾಕಿತು.

IND vs SL 1st T20: ಮುಂದುವರಿದ ಭಾರತದ ಗೆಲುವಿನ ಸಂಭ್ರಮ: ಮೊದಲ ಟಿ20ಯಲ್ಲೇ ಶ್ರೀಲಂಕಾಕ್ಕೆ ನಡುಕ
Ishan Kishan and Shreyas Iyer
Follow us on

ಕ್ರಿಕೆಟ್ ಲೋಕದಲ್ಲಿ ಬಲಿಷ್ಠ ತಂಡವಾಗಿ ಹೊರಹೊಮ್ಮುತ್ತಿರುವ ಭಾರತ ತಂಡ ತನ್ನ ಗೆಲುವಿನ ನಾಗಾಲೋಟವನ್ನು ಶ್ರೀಲಂಕಾ (India vs Sri Lanka) ವಿರುದ್ಧದ ಸರಣಿಯಲ್ಲೂ ಮುಂದುವರಿಸಿದೆ. ಲಕ್ನೋದ ಭಾರತ ರತ್ನ ಅಟಲ್ ಬಿಹಾರಿ ವಾಜಪೇಯಿ ಸ್ಟೇಡಿಯಂನಲ್ಲಿ ನಡೆದ ಮೊದಲ ಟಿ20 ಪಂದ್ಯದಲ್ಲಿ ಟೀಮ್ ಇಂಡಿಯಾ ಬರೋಬ್ಬರಿ 62 ರನ್​ಗಳ ಅಮೋಘ ಗೆಲುವು ಸಾಧಿಸಿತು. ಇಶಾನ್ ಕಿಶನ್ (Ishan Kishan) ಹಾಗೂ ಶ್ರೇಯಸ್ ಅಯ್ಯರ್ (Shreyas Iyer) ಅವರ ಸ್ಫೋಟಕ ಬ್ಯಾಟಿಂಗ್ ನೆರವಿನಿಂದ ಭಾರತ ದೊಡ್ಡ ಮೊತ್ತ ಕಲೆಹಾಕಿದರೆ, ಬೌಲರ್​​ಗಳ ಸಂಘಟಿತ ಪ್ರದರ್ಶನದಿಂದ ಲಂಕಾವನ್ನು ಅಲ್ಪಮೊತ್ತಕ್ಕೆ ಕಟ್ಟಿಹಾಕುವಲ್ಲಿ ರೋಹಿತ್ ಪಡೆ ಯಶಸ್ವಿಯಾಯಿತು. ಈ ಮೂಲಕ ಮೂರು ಪಂದ್ಯಗಳ ಟಿ20 ಸರಣಿಯಲ್ಲಿ ಟೀಮ್ ಇಂಡಿಯಾ 1-0 ಮುನ್ನಡೆ ಪಡೆದುಕೊಂಡಿದೆ. ಹೀಗೆ ಗೆಲುವಿನ ಓಟವನ್ನು ಮುಂದುವರಿಸಿರುವ ಭಾರತ ಟಿ20 ವಿಶ್ವಕಪ್​​ಗೆ ಬಲಿಷ್ಠ ತಂಡವನ್ನೇ ಕಟ್ಟುತ್ತಿದೆ. ಪ್ರಮುಖ ಆಟಗಾರರ ಅನುಪಸ್ಥಿತಿ ನಡುವೆಯೂ ಟೀಮ್ ಇಂಡಿಯಾ ಬ್ಯಾಟಿಂಗ್ – ಬೌಲಿಂಗ್​ನಲ್ಲಿ ಅದ್ಭುತ ಪ್ರದರ್ಶನ ತೋರುತ್ತಿದೆ.

ಟಾಸ್ ಸೋತು ಮೊದಲು ಬ್ಯಾಟಿಂಗ್‌ಗೆ ಆಹ್ವಾನಿಸಲ್ಪಟ್ಟ ಭಾರತಕ್ಕೆ ನಾಯಕ ರೋಹಿತ್ ಶರ್ಮಾ ಹಾಗೂ ಇಶಾನ್ ಕಿಶನ್ ಬಿರುಸಿನ ಆರಂಭವೊದಗಿಸಿದರು. ಆರಂಭದಿಂದಲೇ ಲಂಕಾ ಬೌಲರ್‌ಗಳನ್ನು ಮನಬಂದಂತೆ ದಂಡಿಸಿದ ಈ ಜೋಡಿಯು 11.5 ಓವರ್‌ಗಳಲ್ಲೇ 111 ರನ್‌ಗಳ ಜೊತೆಯಾಟ ಕಟ್ಟಿ ಭದ್ರ ಅಡಿಪಾಯ ಹಾಕಿಕೊಟ್ಟರು. 32 ಎಸೆತಗಳನ್ನು ಎದುರಿಸಿದ ರೋಹಿತ್ ಎರಡು ಬೌಂಡರಿ ಹಾಗೂ ಒಂದು ಸಿಕ್ಸರ್ ನೆರವಿನಿಂದ 44 ರನ್ ಗಳಿಸಿದರು. ಇನ್ನೊಂದೆಡೆ ಕಳಪೆ ಫಾರ್ಮ್​ನಿಂದ ಕಂಗೆಟ್ಟಿದ್ದ ಕಿಶನ್ ಲಯ ಕಂಡುಕೊಂಡ 30 ಎಸೆತಗಳಲ್ಲಿ ಅರ್ಧಶತಕ ಸಾಧನೆ ಮಾಡಿದರು. ಫಿಫ್ಟಿ ಬಳಿಕವೂ ಬಿರುಸಿನ ಆಟವನ್ನು ಮುಂದುವರಿಸಿ 56 ಎಸೆತಗಳಲ್ಲಿ 10 ಬೌಂಡರಿ ಹಾಗೂ ಮೂರು ಸಿಕ್ಸರ್ ನೆರವಿನಿಂದ 89 ರನ್ ಗಳಿಸಿದರು.

ಅಂತಿಮ ಹಂತದಲ್ಲಿ ಬ್ಯಾಟ್ ಬೀಸಿದ ಶ್ರೇಯಸ್ ಅಯ್ಯರ್ ಕೇವಲ 25 ಎಸೆತಗಳಲ್ಲಿ ಅರ್ಧಶತಕ ಸಾಧನೆ ಮಾಡಿ ತಮ್ಮ ಸಾಮರ್ಥ್ಯವನ್ನು ಸಾಬೀತು ಮಾಡಿದರು. ಈ ಮೂಲಕ ಭಾರತ ಬೃಹತ್ ಮೊತ್ತ ಪೇರಿಸಲು ನೆರವಾದರು. 28 ಎಸೆತಗಳಲ್ಲಿ 57 ರನ್ ಗಳಿಸಿ ಔಟಾಗದೆ ಉಳಿದ ಶ್ರೇಯಸ್ ಇನ್ನಿಂಗ್ಸ್‌ನಲ್ಲಿ ಐದು ಬೌಂಡರಿ ಹಾಗೂ ಎರಡು ಸಿಕ್ಸರ್‌ಗಳು ಸೇರಿದ್ದವು. ಇನ್ನುಳಿದಂತೆ ರವೀಂದ್ರ ಜಡೇಜ 3 ರನ್ ಗಳಿಸಿ ಅಜೇಯರಾಗಿ ಉಳಿದರು. ಭಾರತ 20 ಓವರ್​ಗಳಲ್ಲಿ 2 ವಿಕೆಟ್ ನಷ್ಟಕ್ಕೆ 199 ರನ್ ಚಚ್ಚಿತು.

ಇತ್ತ ಟಾರ್ಗೆಟ್ ಬೆನ್ನಟ್ಟಿದ ಶ್ರೀಲಂಕಾ ಮೊದಲ ಎಸೆತದಲ್ಲಿಯೇ ವಿಕೆಟ್ ಕಳೆದುಕೊಂಡಿತು. ಹೀಗೆ ಭಾರತೀಯ ಬೌಲರ್‌ಗಳು ಸಂಪೂರ್ಣವಾಗಿ ನಿಯಂತ್ರಣ ಸಾಧಿಸುತ್ತಾ ಸಾಗಿದರು. ಶ್ರೀಲಂಕಾ ಪರವಾಗಿ ಮದ್ಯಮ ಕ್ರಮಾಂಕದ ಆಟಗಾರ ಚರಿತ ಅಸಲಂಕಾ ಹೊರತುಪಡಿಸಿ ಅಗ್ರ ಕ್ರಮಾಂಕದ ಯಾವ ಆಟಗಾರ ಕೂಡ ಉತ್ತಮ ಪ್ರದರ್ಶನ ನೀಡಲು ಸಾಧ್ಯವಾಗಿಲ್ಲ. ಕೆಳ ಕ್ರಮಾಂಕದಲ್ಲಿ ಚಾಮಿಕ ಕರುಣರತ್ನೆ ಹಾಗೂ ದುಷ್ಮಂತ ಚಮೀರ ಸಣ್ಣ ಹೋರಾಟ ನಡೆಸಿದರೂ ಇದು ಲಂಕಾ ಪಾಲಿಗೆ ಪ್ರಯೋಜನಕ್ಕೆ ಬಾರಲಿಲ್ಲ. ಅಂತಿಮವಾಗಿ ಶ್ರೀಲಂಕಾ ನಿಗದಿತ 20 ಓವರ್‌ಗಳಲ್ಲಿ 6 ವಿಕೆಟ್ ಕಳೆದುಕೊಂಡು 137 ರನ್‌ಗಳಿಸಲಷ್ಟೇ ಶಕ್ತವಾಯಿತು. ಭಾರತ ಪರ ಭುವನೇಶ್ವರ್ ಕುಮಾರ್ ಮತ್ತು ವೆಂಕಟೇಶ್ ಅಯ್ಯರ್ ತಲಾ 2 ವಿಕೆಟ್ ಕಿತ್ತರೆ ಯುಜ್ವೇಂದ್ರ ಚಹಲ್ ಮತ್ತು ರವೀಂದ್ರ ಜಡೇಜಾ ತಲಾ 1 ವಿಕೆಟ್ ಪಡೆದರು.

IPL 2022: ಮಾ.26 ರಿಂದ ಐಪಿಎಲ್ ಆರಂಭ! ಪ್ರೇಕ್ಷಕರಿಗೆ ಅವಕಾಶ ಸರ್ಕಾರಕ್ಕೆ ಬಿಟ್ಟಿದ್ದು; ಮಂಡಳಿ ಸಭೆಯಲ್ಲಿ ನಿರ್ಧಾರ

Published On - 7:33 am, Fri, 25 February 22