ತನ್ನ ಹುಂಬತನದಿಂದಾಗಿ ಟೀಂ ಇಂಡಿಯಾದಲ್ಲಿ ಸ್ಥಾನ ಕಳೆದುಕೊಂಡಿರುವ ಯುವ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ಇಶಾನ್ ಕಿಶನ್ ಮತ್ತೆ ರಾಷ್ಟ್ರೀಯ ತಂಡವನ್ನು ಸೇರಿಕೊಳ್ಳಲು ಇನ್ನಿಲ್ಲದ ಕಸರತ್ತು ಮಾಡುತ್ತಿದ್ದಾರೆ. ಬಿಸಿಸಿಐ ಆದೇಶದಂತೆ ದೇಶೀ ಕ್ರಿಕೆಟ್ ಆಡದೆ ಬಿಸಿಸಿಐ ಗುತ್ತಿಗೆಯಿಂದ ಹೊರಬಿದ್ದಿದ್ದ ಕಿಶನ್, ಕೆಟ್ಟ ಮೇಲೆ ಬುದ್ದಿ ಬಂತು ಎಂಬಂತೆ ಇದೀಗ ದೇಶೀ ಕ್ರಿಕೆಟ್ನತ್ತ ಮುಖಮಾಡಿದ್ದಾರೆ. ಅದರಂತೆ ಕಿಶನ್ ಇನ್ನೇನು ಆರಂಭವಾಗಲಿರುವ ದುಲೀಪ್ ಟ್ರೋಪಿಯಲ್ಲಿ ಆಡಬೇಕಿದೆ. ಆದರೆ ಅದಕ್ಕೂ ಮುನ್ನ ತಮಿಳುನಾಡಿನಲ್ಲಿ ನಡೆಯುತ್ತಿರುವ ಬುಚ್ಚಿ ಬಾಬು ಟೂರ್ನಿಯಲ್ಲಿ ಜಾರ್ಖಂಡ್ ತಂಡದ ಪರ ಆಡುತ್ತಿರುವ ಇಶಾನ್ ಕಿಶನ್ ಸಿಡಿಲಬ್ಬರದ ಶತಕ ಸಿಡಿಸಿ ಟೀಕಾಕಾರರಿಗೆ ಉತ್ತರ ನೀಡಿದ್ದಾರೆ.
ಈ ಟೂರ್ನಿಯಲ್ಲಿ ಜಾರ್ಖಂಡ್ ತಂಡದ ಪರ ಆಡುತ್ತಿರುವುದಲ್ಲದೆ ಕಿಶನ್ ಈ ತಂಡದ ನಾಯಕತ್ವವನ್ನೂ ವಹಿಸಿಕೊಂಡಿದ್ದಾರೆ. ಅದರಂತೆ ಇಂದು ನಡೆಯುತ್ತಿರುವ ಮಧ್ಯಪ್ರದೇಶ ವಿರುದ್ಧದ ಪಂದ್ಯದಲ್ಲಿ ಕಿಶನ್ ಸ್ಫೋಟಕ ಶತಕ ಸಿಡಿಸಿದ್ದಾರೆ. ತಮಿಳುನಾಡಿನಲ್ಲಿ ನಡೆಯುತ್ತಿರುವ ಈ ಟೂರ್ನಿಯ ಮೊದಲ ಪಂದ್ಯದಲ್ಲಿಯೇ ಇಶಾನ್ 106 ಎಸೆತಗಳಲ್ಲಿ 114 ರನ್ ಬಾರಿಸಿದರು. ಅವರ ಈ ಸ್ಫೋಟಕ ಇನ್ನಿಂಗ್ಸ್ನಲ್ಲಿ 10 ಸಿಕ್ಸರ್‌ಗಳು ಸೇರಿದ್ದವು.
Ishan Kishan hits back to back sixes to reach 86 ball century in Buchi Babu tournament. 🤯
– Welcome back, Kishan…!!! ⭐pic.twitter.com/a7Nw1hgs7H
— Mufaddal Vohra (@mufaddal_vohra) August 16, 2024
ಈ ಪಂದ್ಯದಲ್ಲಿ ಆರನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಬಂದ ಇಶಾನ್, ಆರಂಭದಿಂದಲೇ ಹೊಡಿಬಡಿ ಆಟಕ್ಕೆ ಮುಂದಾದರು. ಇಶಾನ್ ಸ್ಫೋಟಕ ಬ್ಯಾಟಿಂಗ್ಗೆ ಮಧ್ಯಪ್ರದೇಶದ ಬೌಲರ್ಗಳಾದ ರಾಮ್‌ವೀರ್ ಗುರ್ಜರ್, ಅಧೀರ್ ಪ್ರತಾಪ್ ಸಿಂಗ್ ಮತ್ತು ಆಕಾಶ್ ರಾಜಾವತ್ ಹೈರಾಣಾಗಿ ಹೋದರು. ಈ ಮೂವರು ಬೌಲರ್‌ಗಳ ವಿರುದ್ಧ ಇಶಾನ್ ಬರೋಬ್ಬರಿ 8 ಸಿಕ್ಸರ್‌ಗಳನ್ನು ಬಾರಿಸಿದರು. ಇಶಾನ್ ಅವರ ಶತಕದ ಶೇಕಡಾ 71 ರಷ್ಟು ರನ್‌ಗಳು ಕೇವಲ ಸಿಕ್ಸರ್ ಮತ್ತು ಬೌಂಡರಿಗಳಿಂದಲೇ ಬಂದವು
ಇಶಾನ್ ಕಿಶನ್ ಕಳೆದ ವರ್ಷ ಡಿಸೆಂಬರ್‌ನಿಂದ ಟೀಂ ಇಂಡಿಯಾದಿಂದ ಹೊರಗುಳಿದಿದ್ದಾರೆ. ಅವರು ದಕ್ಷಿಣ ಆಫ್ರಿಕಾ ಪ್ರವಾಸವನ್ನು ಮಧ್ಯದಲ್ಲಿ ಬಿಟ್ಟು ತವರಿಗೆ ಹಿಂದಿರುಗಿದ್ದರು. ಇದಾದ ನಂತರ, ಐಪಿಎಲ್‌ಗೂ ಮುನ್ನ ಅವರು ಎನ್‌ಸಿಎ ಬದಲಿಗೆ ಹಾರ್ದಿಕ್ ಪಾಂಡ್ಯ ಅವರೊಂದಿಗೆ ವಡೋದರಾದಲ್ಲಿ ತರಬೇತಿ ಪಡೆದ ಕಾರಣ ವಿವಾದಕ್ಕೆ ಒಳಗಾಗಿದ್ದರು. ಇದಾದ ಬಳಿಕ ಐಪಿಎಲ್‌ನಲ್ಲಿ ಮಿಶ್ರ ಪ್ರದರ್ಶನ ನೀಡಿದ ಇಶಾನ್ಗೆ ಟಿ20 ವಿಶ್ವಕಪ್ ತಂಡದಲ್ಲಿ ಅವಕಾಶ ಸಿಕ್ಕಿರಲಿಲ್ಲ. ಅಲ್ಲದೆ ಇಶಾನ್ ದೇಶೀಯ ಕ್ರಿಕೆಟ್ ಆಡಿದರೆ ಮಾತ್ರ ಟೀಂ ಇಂಡಿಯಾಗೆ ಮರಳಲು ಸಾಧ್ಯವಾಗುತ್ತದೆ ಎಂದು ಬಿಸಿಸಿಐ ಸೂಚನೆ ನೀಡಿತ್ತು. ಇದೀಗ ಇಶಾನ್ ಬುಚ್ಚಿ ಬಾಬು ಟೂರ್ನಿಯಲ್ಲಿ ಆಡಲು ನಿರ್ಧರಿಸಿದ್ದು, ಜಾರ್ಖಂಡ್ ತಂಡವನ್ನು ನಾಯಕನಾಗಿ ಮುನ್ನಡೆಸುತ್ತಿದ್ದಾರೆ. ಅಲ್ಲದೆ ಮೊದಲ ಪಂದ್ಯದಲ್ಲೇ ಅದ್ಭುತ ಶತಕ ಬಾರಿಸುವ ಮೂಲಕ ಪುನರಾಗಮನದ ಹಾದಿಯಲ್ಲಿ ಒಂದು ಹೆಜ್ಜೆ ಮುಂದಿಟ್ಟಿದ್ದಾರೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ