T20 World Cup 2026: ಹೀಗಾದ್ರೆ ಟಿ20 ವಿಶ್ವಕಪ್​ಗೆ ಇಟಲಿ ತಂಡದ ಎಂಟ್ರಿ ಖಚಿತ..!

T20 World Cup 2026: ಭಾರತ ಮತ್ತು ಶ್ರೀಲಂಕಾ ಜಂಟಿಯಾಗಿ ಆಯೋಜಿಸಲಿರುವ 2026ರ ಟಿ20 ವಿಶ್ವಕಪ್​ಗಾಗಿ ಅರ್ಹತಾ ಸುತ್ತಿನ ಪಂದ್ಯಗಳು ನಡೆಯುತ್ತಿದೆ. ಯೂರೋಪ್​ ತಂಡಗಳ ನಡುವಣ ಅರ್ಹತಾ ಸುತ್ತಿನಲ್ಲಿ ಬಲಿಷ್ಠ ಸ್ಕಾಟ್ಲೆಂಡ್ ತಂಡಕ್ಕೆ ಸೋಲುಣಿಸಿ ಇಟಲಿ ಮುಂಬರುವ ಟಿ20 ವಿಶ್ವಕಪ್​ನಲ್ಲಿ ಸ್ಥಾನ ಪಡೆಯುವ ಸನಿಹಕ್ಕೆ ಬಂದು ನಿಂತಿದೆ.

T20 World Cup 2026: ಹೀಗಾದ್ರೆ ಟಿ20 ವಿಶ್ವಕಪ್​ಗೆ ಇಟಲಿ ತಂಡದ ಎಂಟ್ರಿ ಖಚಿತ..!
Italy

Updated on: Jul 10, 2025 | 8:18 AM

T20 World Cup 2026: ಟಿ20 ವಿಶ್ವಕಪ್​ನ ಅರ್ಹತಾ ಸುತ್ತಿನಲ್ಲಿ ಸ್ಕಾಟ್ಲೆಂಡ್ ವಿರುದ್ಧ ಇಟಲಿ ತಂಡ ರೋಚಕ ಜಯ ಸಾಧಿಸಿದೆ. ನೆದರ್​ಲೆಂಡ್ಸ್​ನ ಸ್ಪೋರ್ಟ್‌ಪಾರ್ಕ್ ವೆಸ್ಟ್‌ವ್ಲಿಯೆಟ್ ಮೈದಾನದಲ್ಲಿ ನಡೆದ ಯುರೋಪ್ ಕ್ವಾಲಿಫೈಯರ್​ನ 7ನೇ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಇಟಲಿ ತಂಡವು 20 ಓವರ್​ಗಳಲ್ಲಿ 6 ವಿಕೆಟ್ ಕಳೆದುಕೊಂಡು 167 ರನ್ ಕಲೆಹಾಕಿತು.

ಈ 168 ರನ್​ಗಳ ಸ್ಪರ್ಧಾತ್ಮಕ ಗುರಿ ಪಡೆದ ಸ್ಕಾಟ್ಲೆಂಡ್ ತಂಡವು 20 ಓವರ್​ಗಳಲ್ಲಿ 155 ರನ್​ಗಳಿಸಲಷ್ಟೇ ಶಕ್ತರಾದರು. ಈ ಮೂಲಕ ಇಟಲಿ ತಂಡ 12 ರನ್​ಗಳ ರೋಚಕ ಜಯ ಸಾಧಿಸಿದೆ. ಈ ಗೆಲುವಿನೊಂದಿಗೆ ಇಟಲಿ ತಂಡವು ಟಿ20 ವಿಶ್ವಕಪ್​ ಅರ್ಹತಾ ಸುತ್ತಿನ (ಯುರೋಪ್ ಕ್ವಾಲಿಫೈಯರ್)​  ಅಂಕ ಪಟ್ಟಿಯಲ್ಲಿ ಅಗ್ರಸ್ಥಾನ ಅಲಂಕರಿಸಿದೆ.

ಇದಾಗ್ಯೂ ಇಟಲಿ ತಂಡವು ಅಧಿಕೃತವಾಗಿ ಟಿ20 ವಿಶ್ವಕಪ್ 2026 ಕ್ಕೆ ಅರ್ಹತೆ ಪಡೆದಿಲ್ಲ. ಈ ಅರ್ಹತೆ ಖಚಿತವಾಗಬೇಕಿದ್ದರೆ, ಮುಂದಿನ ಪಂದ್ಯಗಳ ಫಲಿತಾಂಶಗಳನ್ನು ಎದುರು ನೋಡಬೇಕು. ಏಕೆಂದರೆ ಎಲ್ಲಾ ತಂಡಗಳಿಗೂ ಇನ್ನೂ ಒಂದು ಮ್ಯಾಚ್​ಗಳು ಬಾಕಿಯಿದ್ದು, ಈ ಪಂದ್ಯಗಳ ಫಲಿತಾಂಶದೊಂದಿಗೆ ಇಟಲಿ ತಂಡ ಟಿ20 ವಿಶ್ವಕಪ್ ಭವಿಷ್ಯ ನಿರ್ಧಾರವಾಗಲಿದೆ.

ಇಲ್ಲಿ ಇಟಲಿ ತಂಡವು ತನ್ನ ಮುಂದಿನ ಪಂದ್ಯದಲ್ಲಿ ನೆದರ್​ಲೆಂಡ್ಸ್ ತಂಡವನ್ನು ಎದುರಿಸಲಿದೆ. ಈ ಮ್ಯಾಚ್​ನಲ್ಲಿ ಇಟಲಿ ಜಯ ಸಾಧಿಸಿದರೆ ನೇರವಾಗಿ ಟಿ20 ವಿಶ್ವಕಪ್​ಗೆ ಅರ್ಹತೆ ಪಡೆಯಲಿದೆ. ಒಂದು ವೇಳೆ ಸೋತರೂ ಕೂಡ ನೆಟ್​ ರನ್ ರೇಟ್ ಮೂಲಕ ಅಂಕ ಪಟ್ಟಿಯಲ್ಲಿ ದ್ವಿತೀಯ ಸ್ಥಾನ ಅಲಂಕರಿಸಿ ಅರ್ಹತೆ ಗಿಟ್ಟಿಸಿಕೊಳ್ಳಬಹುದು.

ಆದರೆ ನೆದರ್​ಲೆಂಡ್ಸ್ ವಿರುದ್ಧ ಇಟಲಿ ಪಡೆ ಹೀನಾಯವಾಗಿ ಸೋತರೆ ಅಂಕ ಪಟ್ಟಿಯಲ್ಲಿ ಮೂರನೇ ಸ್ಥಾನಕ್ಕೆ ಕುಸಿಯಲಿದೆ. ಇದರಿಂದ ಜೆರ್ಸಿ ಹಾಗೂ ಸ್ಕಾಟ್ಲೆಂಡ್ ತಂಡಗಳಿಗೆ ಅಂಕ ಪಟ್ಟಿಯಲ್ಲಿ ಮೇಲೇರಲು ಅವಕಾಶ ದೊರೆಯಲಿದೆ. ಹೀಗಾಗಿ ನೆದರ್​ಲೆಂಡ್ಸ್ ವಿರುದ್ಧ ಗೆಲ್ಲಲು ಸಾಧ್ಯವಾಗದೇ ಇದ್ದರೂ ಇಟಲಿ ತಂಡ ಹೀನಾಯ ಸೋಲನ್ನು ತಪ್ಪಿಸಿಕೊಳ್ಳುವುದು ಅನಿವಾರ್ಯ.

ಇಟಲಿ ತಂಡದ ಕ್ವಾಲಿಫೈ ಲೆಕ್ಕಾಚಾರ ಹೀಗಿದೆ:

  • ನೆದರ್​ಲೆಂಡ್ಸ್ ವಿರುದ್ಧ ಗೆದ್ದರೆ 7 ಅಂಕಗಳೊಂದಿಗೆ ಇಟಲಿ ಟಿ20 ವಿಶ್ವಕಪ್​ಗೆ ನೇರವಾಗಿ ಅರ್ಹತೆ ಪಡೆಯಲಿದೆ.
  • ನೆದರ್​ಲೆಂಡ್ಸ್ ವಿರುದ್ಧ 20-30 ರನ್​ಗಳಿಂದ ಸೋತರೂ ನೆಟ್​ ರನ್ ರೇಟ್ ಮೂಲಕ ಅಂಕ ಪಟ್ಟಿಯಲ್ಲಿ ದ್ವಿತೀಯ ಸ್ಥಾನ ಪಡೆದು ಟಿ20 ವಿಶ್ವಕಪ್​ಗೆ ಅರ್ಹತೆ ಪಡೆಯಬಹುದು.
  • ಇಟಲಿ ವಿರುದ್ಧ ನೆದರ್​ಲೆಂಡ್ಸ್ ಗೆದ್ದರೆ, ಜೆರ್ಸಿ ಅಥವಾ ಸ್ಕಾಟ್ಲೆಂಡ್ ತಂಡಗಳು ಮುಂದಿನ  ಪಂದ್ಯದಲ್ಲಿ ಭರ್ಜರಿ ಗೆಲುವು ದಾಖಲಿಸಬಾರದು. ಹೀಗಾದರೂ ಕೂಡ ಅಂಕ ಪಟ್ಟಿಯಲ್ಲಿ ದ್ವಿತೀಯ ಸ್ಥಾನ ಪಡೆದು ಇಟಲಿ ಟಿ20 ವಿಶ್ವಕಪ್​ಗೆ ಅರ್ಹತೆ ಪಡೆಯಬಹುದು.

ಯೂರೋಪ್ ಕ್ವಾಲಿಫೈಯರ್​ನ ಮುಂದಿನ ಪಂದ್ಯಗಳ ವೇಳಾಪಟ್ಟಿ:

  • ಜುಲೈ 11, ಜೆರ್ಸಿ vs ಸ್ಕಾಟ್ಲೆಂಡ್
  • ಜುಲೈ 11, ಇಟಲಿ vs ನೆದರ್​ಲೆಂಡ್ಸ್​.

ಇಲ್ಲಿ ಕೊನೆಯ ಪಂದ್ಯದಲ್ಲಿ ಇಟಲಿ ಹಾಗೂ ನೆದರ್​ಲೆಂಡ್ಸ್ ತಂಡಗಳು ಮುಖಾಮುಖಿಯಾಗಲಿದೆ. ಇದು ಇಟಲಿ ತಂಡದ ಪಾಲಿಗೆ ಪ್ಲಸ್ ಪಾಯಿಂಟ್. ಏಕೆಂದರೆ ನೆದರ್​ಲೆಂಡ್ಸ್ ವಿರುದ್ಧ ಗೆಲ್ಲಲು ಸಾಧ್ಯವಾಗದೇ ಇದ್ದರೆ, ನೆಟ್ ರನ್ ರೇಟ್ ಉಳಿಸಿಕೊಳ್ಳಲು ಹೀನಾಯ ಸೋಲನ್ನು ತಪ್ಪಿಸಿಕೊಳ್ಳಲು ಬೇಕಾದ ಗುರಿಯ ಸ್ಪಷ್ಟತೆ ಇಟಲಿ ತಂಡಕ್ಕೆ ಸಿಗಲಿದೆ. ಈ ಮೂಲಕ ಅಂಕ ಪಟ್ಟಿಯಲ್ಲಿ ದ್ವಿತೀಯ ಸ್ಥಾನವನ್ನು ಖಚಿತಪಡಿಸಿಕೊಳ್ಳಬಹುದು.

ಯೂರೋಪ್ ಕ್ವಾಲಿಫೈಯರ್​ ಅಂಕ ಪಟ್ಟಿ:

ಸದ್ಯ ಅಂಕ ಪಟ್ಟಿಯಲ್ಲಿ ಇಟಲಿ ತಂಡ ಅಗ್ರಸ್ಥಾನ ಅಲಂಕರಿಸಿದೆ. ಜೆರ್ಸಿ ವಿರುದ್ಧ ಪಂದ್ಯವು ಮಳೆಯಿಂದಾಗಿ ರದ್ದಾದ ಕಾರಣ ಇಟಲಿ ತಂಡಕ್ಕೆ ಒಂದು ಅಂಕ ಲಭಿಸಿದೆ. ಅಲ್ಲದೆ ಇನ್ನುಳಿದ 2 ಮ್ಯಾಚ್​ಗಳಲ್ಲಿ ಗೆಲುವು ದಾಖಲಿಸುವ ಮೂಲಕ ಒಟ್ಟು 5 ಪಾಯಿಂಟ್ಸ್​ಗಳನ್ನು ಪಡೆದುಕೊಂಡಿದೆ. ಇಲ್ಲಿ ಗಮನಿಸಬೇಕಾದ ಮುಖ್ಯ ಅಂಶವೆಂದರೆ ಇಟಲಿ ತಂಡದ ನೆಟ್​ ರೇಟ್​. 2 ಗೆಲುವು ದಾಖಲಿಸಿದರೂ ಇಟಲಿ +1.722 ನೆಟ್​ ರನ್​ ರೇಟ್ ಹೊಂದಿದೆ. ಹೀಗಾಗಿ ಮುಂದಿನ ಪಂದ್ಯದಲ್ಲಿ ಈ ನೆಟ್ ರನ್ ರೇಟ್​ ಕುಂಠಿತವಾಗದಂತೆ ನೋಡಿಕೊಳ್ಳುವುದು ಇಟಲಿ ಪಾಲಿಗೆ ಅನಿವಾರ್ಯ.

ಮತ್ತೊಂದೆಡೆ ಆಡಿರುವ 3 ಪಂದ್ಯಗಳಲ್ಲಿ 2 ಜಯ ಹಾಗೂ 1 ಸೋಲಿನೊಂದಿಗೆ ನೆದರ್​ಲೆಂಡ್ಸ್ ತಂಡವು ದ್ವಿತೀಯ ಸ್ಥಾನದಲ್ಲಿದೆ. ಒಟ್ಟು 4 ಅಂಕಗಳನ್ನು ಹೊಂದಿರುವ ನೆದರ್​ಲೆಂಡ್ಸ್ +1.200 ನೆಟ್​ ರನ್ ರೇಟ್ ಪಡೆದುಕೊಂಡಿದೆ.

ಇನ್ನು ಮೂರನೇ ಸ್ಥಾನದಲ್ಲಿ 3 ಪಂದ್ಯಗಳಲ್ಲಿ ಒಂದು ಜಯ ಸಾಧಿಸಿರುವ ಜೆರ್ಸಿ ತಂಡವಿದ್ದು, 3 ಅಂಕಗಳೊಂದಿಗೆ ಒಟ್ಟು +0.430 ನೆಟ್ ರನ್ ರೇಟ್ ಪಡೆದುಕೊಂಡಿದೆ.

ಇದನ್ನೂ ಓದಿ: IPL 2026: RCB ತಂಡದಿಂದ ಪ್ರಮುಖ ಆಟಗಾರನಿಗೆ ಗೇಟ್ ಪಾಸ್ ಸಾಧ್ಯತೆ

ಹಾಗೆಯೇ ನಾಲ್ಕನೇ ಸ್ಥಾನದಲ್ಲಿ ಸ್ಕಾಟ್ಲೆಂಡ್ ತಂಡ ಕಾಣಿಸಿಕೊಂಡಿದೆ. ಆಡಿರುವ ಮೂರು ಮ್ಯಾಚ್​ನಲ್ಲಿ ಎರಡರಲ್ಲಿ ಸೋತಿರುವ ಸ್ಕಾಟ್ಲೆಂಡ್ ತಂಡವು  -0.150 ನೆಟ್​ ರನ್ ರೇಟ್ ಹೊಂದಿದ್ದು, ತನ್ನ ಮುಂದಿನ ಪಂದ್ಯದಲ್ಲಿ ಅಮೋಘ ಗೆಲುವು ದಾಖಲಿಸಿದರೆ ಮಾತ್ರ ಟಿ20 ವಿಶ್ವಕಪ್​ಗೆ ಅರ್ಹತೆ ಪಡೆಯಬಹುದು. ಅದು ಕೂಡ ಇಟಲಿ ತಂಡದ ಫಲಿತಾಂಶವನ್ನು ಅವಲಂಭಿಸಿ.

ಅಂದರೆ ನೆದರ್​ಲೆಂಡ್ಸ್ ವಿರುದ್ಧ ಇಟಲಿ ಹೀನಾಯವಾಗಿ ಸೋತು, ಸ್ಕಾಟ್ಲೆಂಡ್ ತಂಡವು ಜೆರ್ಸಿ ವಿರುದ್ಧ ಅಮೋಘ ಗೆಲುವು ದಾಖಲಿಸಿ ನೆಟ್ ರನ್ ರೇಟ್​ನಲ್ಲಿ ಇಟಲಿ ತಂಡವನ್ನು ಹಿಂದಿಕ್ಕಿದರೆ ಮಾತ್ರ ಟಿ20 ವಿಶ್ವಕಪ್​ಗೆ ಅರ್ಹತೆ ಪಡೆಯಲಿದೆ.