ಇಂಗ್ಲೆಂಡ್ನಲ್ಲಿ ಹೊಸ ಇತಿಹಾಸ ನಿರ್ಮಿಸಿದ ಟೀಮ್ ಇಂಡಿಯಾ
England Women vs India Women: ಇಂಗ್ಲೆಂಡ್ ವಿರುದ್ಧದ 5 ಪಂದ್ಯಗಳ ಟಿ20 ಸರಣಿಯ ಮೊದಲ ಮ್ಯಾಚ್ನಲ್ಲಿ ಭಾರತ ತಂಡ 97 ರನ್ಗಳ ಭರ್ಜರಿ ಜಯ ಸಾಧಿಸಿತ್ತು. ಇನ್ನು ದ್ವಿತೀಯ ಪಂದ್ಯದಲ್ಲಿ ಇಂಗ್ಲೆಂಡ್ ತಂಡವನ್ನು 24 ರನ್ಗಳಿಂದ ಸೋಲಿಸಿತ್ತು. ಮೂರನೇ ಪಂದ್ಯದಲ್ಲಿ ಆಂಗ್ಲ ಪಡೆ 5 ರನ್ಗಳ ರೋಚಕ ಜಯ ಸಾಧಿಸಿದ್ದರು. ಇದೀಗ ನಾಲ್ಕನೇ ಮ್ಯಾಚ್ನಲ್ಲಿ 6 ವಿಕೆಟ್‌ಗಳ ಗೆಲುವು ದಾಖಲಿಸಿ ಟೀಮ್ ಇಂಡಿಯಾ ಸರಣಿ ವಶಪಡಿಸಿಕೊಂಡಿದೆ.

ಇಂಗ್ಲೆಂಡ್ ಮಹಿಳಾ ತಂಡದ ವಿರುದ್ಧದ 4ನೇ ಟಿ20 ಪಂದ್ಯದಲ್ಲಿ ಭಾರತ ಮಹಿಳಾ ತಂಡ ಭರ್ಜರಿ ಜಯ ಸಾಧಿಸಿದೆ. ಈ ಗೆಲುವಿನೊಂದಿಗೆ ಟೀಮ್ ಇಂಡಿಯಾ 3-1 ಅಂತರದಿಂದ ಸರಣಿ ವಶಪಡಿಸಿಕೊಂಡಿದೆ. ವಿಶೇಷ ಎಂದರೆ ಇದು ಇಂಗ್ಲೆಂಡ್ ವಿರುದ್ಧದ ಭಾರತೀಯ ಮಹಿಳಾ ತಂಡದ ಮೊದಲ ಟಿ20 ಸರಣಿ ಗೆಲುವು. ಈ ಮೂಲಕ ಐತಿಹಾಸಿಕ ಸಾಧನೆ ಮಾಡುವಲ್ಲಿ ಟೀಮ್ ಇಂಡಿಯಾ ಯಶಸ್ವಿಯಾಗಿದೆ.
ಮ್ಯಾಂಚೆಸ್ಟರ್‌ನ ಓಲ್ಡ್ ಟ್ರಾಫೋರ್ಡ್ ಮೈದಾನದಲ್ಲಿ ನಡೆದ ಈ ಪಂದ್ಯದಲ್ಲಿ ಟಾಸ್ ಗೆದ್ದು ಇಂಗ್ಲೆಂಡ್ ಬ್ಯಾಟಿಂಗ್ ಆಯ್ದುಕೊಂಡಿದ್ದರು. ಅದರಂತೆ ಮೊದಲು ಬ್ಯಾಟ್ ಮಾಡಿದ ಉತ್ತಮ ಆರಂಭ ಪಡೆದಿರಲಿಲ್ಲ.
ಸೋಫಿಯಾ ಡಂಕ್ಲಿ 22 ರನ್ ಬಾರಿಸಿದರೆ, ವ್ಯಾಟ್ ಹಾಡ್ಜ್ 5 ರನ್ಗಳಿಸಿ ನಿರ್ಗಮಿಸಿದ್ದರು. ಆ ಬಳಿಕ ಬಂದ ಅಲೀಸ್ ಕಾಪ್ಸಿ 18 ರನ್ ಗಳಿಸಿ ವಿಕೆಟ್ ಒಪ್ಪಿಸಿದರು. ಇನ್ನು ನಾಯಕಿ ಬ್ಯೂಮಾಂಟ್ 20 ರನ್ ಗಳ ಕೊಡುಗೆ ನೀಡಿದರೆ, ಸ್ಕೋಲ್ಫೀಲ್ಡ್ 16 ರನ್ ಗಳಿಸಿದರು.
ಈ ಮೂಲಕ ಇಂಗ್ಲೆಂಡ್ ತಂಡವು 20 ಓವರ್‌ಗಳಲ್ಲಿ 7 ವಿಕೆಟ್ ಕಳೆದುಕೊಂಡು 126 ರನ್ ಕಲೆಹಾಕಿತು. ಟೀಮ್ ಇಂಡಿಯಾ ಪರ ಉತ್ತಮ ದಾಳಿ ಸಂಘಟಿಸಿದ ರಾಧಾ ಯಾದವ್ 4 ಓವರ್‌ಗಳಲ್ಲಿ 15 ರನ್ ನೀಡಿ 2 ವಿಕೆಟ್ ಪಡೆದರೆ, ಶ್ರೀ ಚರಣಿ 4 ಓವರ್‌ಗಳಲ್ಲಿ 30 ರನ್ ನೀಡಿ 2 ವಿಕೆಟ್ ಪಡೆದರು.
ಇನ್ನು 127 ರನ್ ಗಳ ಸುಲಭ ಗುರಿ ಬೆನ್ನತ್ತಿದ ಟೀಮ್ ಇಂಡಿಯಾಗೆ ಸ್ಮೃತಿ ಮಂಧಾನ ಹಾಗೂ ಶಫಾಲಿ ವರ್ಮಾ ಸ್ಫೋಟಕ ಆರಂಭ ಒದಗಿಸಿದ್ದರು. ಮೊದಲ ಓವರ್‌ನಿಂದಲೇ ಆಕ್ರಮಣಕಾರಿ ಆಟಕ್ಕೆ ಒತ್ತು ನೀಡಿದ ಈ ಜೋಡಿ ಪವರ್ ಪ್ಲೇನಲ್ಲಿ 53 ರನ್ ಕಲೆಹಾಕಿದರು.
ಇದರ ಬೆನ್ನಲ್ಲೇ 19 ಎಸೆತಗಳಲ್ಲಿ 6 ಫೋರ್ ಗಳೊಂದಿಗೆ 31 ರನ್ ಬಾರಿಸಿದ್ದ ಶಫಾಲಿ ವರ್ಮಾ ಔಟಾದರು. ಈ ಹಂತದಲ್ಲಿ ಆಗಮಿಸಿದ ಜೆಮಿಮಾ ರೊಡ್ರಿಗಸ್ 24 ರನ್ ಗಳಿಸಿದರು. ಮತ್ತೊಂದೆಡೆ ಸ್ಮೃತಿ ಮಂಧಾನ 31 ರನ್ ಗಳಿಸಿ ನಿರ್ಗಮಿಸಿದರು. ಈ ವೇಳೆ ಕಣಕ್ಕಿಳಿದ ನಾಯಕಿ ಹರ್ಮನ್ ಪ್ರೀತ್ ಕೌರ್ 26 ರನ್ ಗಳನ್ನು ಕಲೆಹಾಕಿದರು.
ಈ ಮೂಲಕ ಟೀಮ್ ಇಂಡಿಯಾ 17 ಓವರ್‌ಗಳಲ್ಲಿ 4 ವಿಕೆಟ್ ಕಳೆದುಕೊಂಡು 127 ರನ್ ಬಾರಿಸಿ 6 ವಿಕೆಟ್‌ಗಳ ಭರ್ಜರಿ ಜಯ ತನ್ನದಾಗಿಸಿಕೊಂಡಿತು. ಈ ಜಯದೊಂದಿಗೆ ಟೀಮ್ ಇಂಡಿಯಾ ಇದೇ ಮೊದಲ ಬಾರಿಗೆ ಇಂಗ್ಲೆಂಡ್ ವಿರುದ್ಧ ಟಿ20 ಸರಣಿ ಗೆಲ್ಲುವಲ್ಲಿ ಯಶಸ್ವಿಯಾಗಿದೆ.
ಇಂಗ್ಲೆಂಡ್ ಪ್ಲೇಯಿಂಗ್ 11: ಸೋಫಿಯಾ ಡಂಕ್ಲಿ , ಡೇನಿಯಲ್ ವ್ಯಾಟ್-ಹಾಡ್ಜ್ , ಆಲಿಸ್ ಕ್ಯಾಪ್ಸೆ , ಟ್ಯಾಮಿ ಬ್ಯೂಮಾಂಟ್ (ನಾಯಕಿ) , ಆಮಿ ಜೋನ್ಸ್ (ವಿಕೆಟ್ ಕೀಪರ್) , ಪೈಜ್ ಸ್ಕೋಲ್ಫೀ್ಲ್ಡ್ , ಸೋಫಿ ಎಕ್ಲೆಸ್ಟೋನ್ , ಇಸ್ಸಿ ವಾಂಗ್ , ಷಾರ್ಲೆಟ್ ಡೀನ್ , ಲಾರೆನ್ ಫೈಲರ್ , ಲಾರೆನ್ ಬೆಲ್.
ಇದನ್ನೂ ಓದಿ: IPL 2026: RCB ತಂಡದಿಂದ ಪ್ರಮುಖ ಆಟಗಾರನಿಗೆ ಗೇಟ್ ಪಾಸ್ ಸಾಧ್ಯತೆ
ಭಾರತ ಪ್ಲೇಯಿಂಗ್ 11: ಸ್ಮೃತಿ ಮಂಧಾನ , ಶಫಾಲಿ ವರ್ಮಾ , ಜೆಮಿಮಾ ರೊಡ್ರಿಗಸ್ , ಹರ್ಮನ್ಪ್ರೀತ್ ಕೌರ್ (ನಾಯಕಿ) , ರಿಚಾ ಘೋಷ್ (ವಿಕೆಟ್ ಕೀಪರ್) , ಅಮನ್ಜೋತ್ ಕೌರ್ , ದೀಪ್ತಿ ಶರ್ಮಾ , ರಾಧಾ ಯಾದವ್ , ಅರುಂಧತಿ ರೆಡ್ಡಿ , ಸ್ನೇಹ ರಾಣಾ , ಶ್ರೀ ಚರಣಿ.
