James Anderson: 7880 ದಿನ, 991 ವಿಕೆಟ್‌; ಗೆಲುವಿನೊಂದಿಗೆ ವಿದಾಯ ಹೇಳಿದ ಜೇಮ್ಸ್ ಆಂಡರ್ಸನ್

|

Updated on: Jul 12, 2024 | 5:33 PM

ENG vs WI: ಪ್ರತಿಷ್ಠಿತ ಲಾರ್ಡ್ಸ್ ಮೈದಾನದಲ್ಲಿ ನಡೆದ ಇಂಗ್ಲೆಂಡ್ ಹಾಗೂ ವೆಸ್ಟ್ ಇಂಡೀಸ್ ನಡುವಿನ ಮೊದಲ ಟೆಸ್ಟ್ ಪಂದ್ಯ ಕೇವಲ ಮೂರೇ ದಿನಕ್ಕೆ ಅಂತ್ಯಗೊಂಡಿದೆ. ಈ ಪಂದ್ಯದಲ್ಲಿ ಆತಿಥೇಯ ಇಂಗ್ಲೆಂಡ್, ವಿಂಡೀಸ್ ಪಡೆಯನ್ನು ಇನ್ನಿಂಗ್ಸ್ ಹಾಗೂ 114 ರನ್​ಗಳಿಂದ ಮಣಿಸಿದೆ. ಇದರೊಂದಿಗೆ ತಂಡದ ಲೆಜೆಂಡರಿ ಬೌಲರ್ ಜೇಮ್ಸ್ ಆಂಡರ್ಸನ್​ಗೆ ಆಂಗ್ಲ ಪಡೆ ಗೆಲುವಿನ ಬೀಳ್ಕೊಡುಗೆ ನೀಡಿದೆ.

James Anderson: 7880 ದಿನ, 991 ವಿಕೆಟ್‌; ಗೆಲುವಿನೊಂದಿಗೆ ವಿದಾಯ ಹೇಳಿದ ಜೇಮ್ಸ್ ಆಂಡರ್ಸನ್
ಜೇಮ್ಸ್ ಆಂಡರ್ಸನ್ ವಿದಾಯ
Follow us on

ಪ್ರತಿಷ್ಠಿತ ಲಾರ್ಡ್ಸ್ ಮೈದಾನದಲ್ಲಿ ನಡೆದ ಇಂಗ್ಲೆಂಡ್ ಹಾಗೂ ವೆಸ್ಟ್ ಇಂಡೀಸ್ ನಡುವಿನ ಮೊದಲ ಟೆಸ್ಟ್ ಪಂದ್ಯ ಕೇವಲ ಮೂರೇ ದಿನಕ್ಕೆ ಅಂತ್ಯಗೊಂಡಿದೆ. ಈ ಪಂದ್ಯದಲ್ಲಿ ಆತಿಥೇಯ ಇಂಗ್ಲೆಂಡ್, ವಿಂಡೀಸ್ ಪಡೆಯನ್ನು ಇನ್ನಿಂಗ್ಸ್ ಹಾಗೂ 114 ರನ್​ಗಳಿಂದ ಮಣಿಸಿದೆ. ಇದರೊಂದಿಗೆ ತಂಡದ ಲೆಜೆಂಡರಿ ಬೌಲರ್ ಜೇಮ್ಸ್ ಆಂಡರ್ಸನ್​ಗೆ ಆಂಗ್ಲ ಪಡೆ ಗೆಲುವಿನ ಬೀಳ್ಕೊಡುಗೆ ನೀಡಿದೆ. ವಾಸ್ತವವಾಗಿ ವಿಂಡೀಸ್ ವಿರುದ್ಧದ ಮೊದಲ ಟೆಸ್ಟ್​ ಪಂದ್ಯ ತನ್ನ ವೃತ್ತಿಜೀವನದ ಕೊನೆಯ ಪಂದ್ಯ ಎಂದು ಆಂಡರ್ಸನ್ ಈ ಮೊದಲೇ ಹೇಳಿದ್ದರು. ಅದರಂತೆ ಏಕಪಕ್ಷೀಯ ಗೆಲುವು ದಾಖಲಿಸುವ ಮೂಲಕ ಇಂಗ್ಲೆಂಡ್ ತಂಡ ಲೆಜೆಂಡರಿ ಬೌಲರ್​ಗೆ ಅರ್ಹ ವಿದಾಯ ನೀಡಿದೆ.

ಕೊನೆಯ ಪಂದ್ಯದಲ್ಲೂ ವಿಕೆಟ್ ಬೇಟೆ

2002 ರಲ್ಲಿ ತಮ್ಮ ಅಂತರರಾಷ್ಟ್ರೀಯ ವೃತ್ತಿಜೀವನವನ್ನು ಪ್ರಾರಂಭಿಸಿದ ಜೇಮ್ಸ್ ಆಂಡರ್ಸನ್, 2003 ರಲ್ಲಿ ಟೆಸ್ಟ್ ಕ್ರಿಕೆಟ್​ಗೆ ಪದಾರ್ಪಣೆ ಮಾಡಿದರು. ಸುಮಾರು 22 ವರ್ಷಗಳ ಕಾಲ ಅಂತಾರಾಷ್ಟ್ರೀಯ ಕ್ರಿಕೆಟ್ ಆಡಿದ ಜೇಮ್ಸ್ ಆಂಡರ್ಸನ್ ತಮ್ಮ ಹೆಸರಿನಲ್ಲಿ ಅನೇಕ ದೊಡ್ಡ ದಾಖಲೆಗಳನ್ನು ಮಾಡಿದ್ದಾರೆ. ಎಂದಿನಂತೆ ತಮ್ಮ ಕೊನೆಯ ಪಂದ್ಯದಲ್ಲೂ ವಿಕೆಟ್​ಗಳ ಬೇಟೆ ನಡೆಸಿದ್ದ ಆ್ಯಂಡರ್ಸನ್ ಒಟ್ಟು 4 ವಿಕೆಟ್​ಗಳನ್ನು ಉರುಳಿಸಿದರು. ವೆಸ್ಟ್ ಇಂಡೀಸ್ ವಿರುದ್ಧ ಲಾರ್ಡ್ಸ್​ನಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯದ ಮೊದಲ ಇನ್ನಿಂಗ್ಸ್​ನಲ್ಲಿ 1 ವಿಕೆಟ್ ಉರುಳಿಸಿದ್ದ ಆಂಡರ್ಸನ್ ಎರಡನೇ ಇನ್ನಿಂಗ್ಸ್​ನಲ್ಲಿ 3 ವಿಕೆಟ್ ಕಬಳಿಸಿದರು.

ಟೆಸ್ಟ್ ಬಾಸ್ ಜೇಮ್ಸ್

ಜೇಮ್ಸ್ ಆಂಡರ್ಸನ್ ಈಗಾಗಲೇ ಏಕದಿನ ಮತ್ತು ಟಿ20 ಮಾದರಿಗಳಿಂದ ನಿವೃತ್ತಿ ಹೊಂದಿದ್ದರು. ಇದೀಗ ಟೆಸ್ಟ್​ಗೆ ವಿದಾಯ ಹೇಳುವ ಜೊತೆಗೆ ಅಂತರಾಷ್ಟ್ರೀಯ ಕ್ರಿಕೆಟ್​ಗೆ ವಿದಾಯ ಹೇಳಿದ್ದಾರೆ. ಕ್ರಿಕೆಟ್ ಲೋಕದಲ್ಲಿ ತಮ್ಮದೇ ಛಾಪೂ ಮೂಡಿಸಿದ್ದ ಜೇಮ್ಸ್ ಆಂಡರ್ಸನ್, ಟೆಸ್ಟ್ ಮಾದರಿಯಲ್ಲಿ ಯಶಸ್ಸಿನ ಉತ್ತುಂಗ ತಲುಪಿದವರು. ಟೆಸ್ಟ್‌ನಲ್ಲಿ ಒಟ್ಟು 188 ಪಂದ್ಯಗಳನ್ನಾಡಿರುವ ಅವರು ತಮ್ಮ ಹೆಸರಿನಲ್ಲಿ ಒಟ್ಟು 704 ವಿಕೆಟ್‌ಗಳನ್ನು ಪಡೆದಿದ್ದಾರೆ. ಇದರೊಂದಿಗೆ ಟೆಸ್ಟ್‌ನಲ್ಲಿ 700 ವಿಕೆಟ್‌ಗಳನ್ನು ಪಡೆದ ಏಕೈಕ ವೇಗದ ಬೌಲರ್ ಎಂಬ ದಾಖಲೆಯೂ ಜೇಮ್ಸ್ ಆಂಡರ್ಸನ್ ಪಾಲಾಗಿದೆ. ಇದಲ್ಲದೆ ಟೆಸ್ಟ್ ಕ್ರಿಕೆಟ್​ನಲ್ಲಿ ಅವರು 32 ಬಾರಿ ಐದು ವಿಕೆಟ್‌ಗಳನ್ನು ಮತ್ತು ಮೂರು ಬಾರಿ 10 ವಿಕೆಟ್‌ಗಳನ್ನು ಪಡೆದ ಸಾಧನೆ ಮಾಡಿದ್ದಾರೆ.

ಕಳೆದ ಪಂದ್ಯದಲ್ಲೂ ಎರಡು ದಾಖಲೆ

ಜೇಮ್ಸ್ ಆಂಡರ್ಸನ್ ತಮ್ಮ ಟೆಸ್ಟ್ ವೃತ್ತಿಜೀವನದಲ್ಲಿ 40,000 ಕ್ಕೂ ಹೆಚ್ಚು ಎಸೆತಗಳನ್ನು ಬೌಲ್ ಮಾಡಿದ್ದಾರೆ. ತಮ್ಮ ಕೊನೆಯ ಟೆಸ್ಟ್ ಪಂದ್ಯದಲ್ಲಿ 40,000 ಎಸೆತಗಳ ಗಡಿ ದಾಟಿದ ಆಂಡರ್ಸನ್ ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ಈ ಸಾಧನೆ ಮಾಡಿದ ಮೊದಲ ವೇಗದ ಬೌಲರ್ ಎನಿಸಿಕೊಂಡರು. ಇದಲ್ಲದೆ ಒಟ್ಟಾರೆ ತಮ್ಮ ಅಂತರಾಷ್ಟ್ರೀಯ ವೃತ್ತಿಜೀವನದಲ್ಲಿ 50000 ಚೆಂಡುಗಳನ್ನು ಬೌಲ್ ಮಾಡಿದ ವಿಶ್ವದ ಏಕೈಕ ವೇಗದ ಬೌಲರ್ ಎಂಬ ಹೆಗ್ಗಳಿಕೆಗೂ ಪಾತ್ರರಾದರು.

ಸೀಮಿತ ಮಾದರಿಯಲ್ಲಿ ಪ್ರದರ್ಶನ ಹೇಗಿತ್ತು?

ಟೆಸ್ಟ್ ಅಲ್ಲದೆ, ಜೇಮ್ಸ್ ಆಂಡರ್ಸನ್ ಇಂಗ್ಲೆಂಡ್ ಪರ ಏಕದಿನದಲ್ಲೂ ಅದ್ಭುತ ಪ್ರದರ್ಶನ ನೀಡಿದ್ದಾರೆ. ಇಂಗ್ಲೆಂಡ್ ಪರ 194 ಏಕದಿನ ಪಂದ್ಯಗಳನ್ನಾಡಿರುವ ಅವರು 29.22 ಸರಾಸರಿಯಲ್ಲಿ 269 ವಿಕೆಟ್‌ಗಳನ್ನು ಪಡೆದಿದ್ದಾರೆ. ಏಕದಿನದಲ್ಲಿ ಎರಡು ಬಾರಿ ಇನ್ನಿಂಗ್ಸ್‌ನಲ್ಲಿ 5 ವಿಕೆಟ್ ಪಡೆದ ಸಾಧನೆಯನ್ನು ಮಾಡಿದ್ದಾರೆ. ಇದಲ್ಲದೇ ಆಂಡರ್ಸನ್ ಇಂಗ್ಲೆಂಡ್ ಪರ 19 ಟಿ20 ಪಂದ್ಯಗಳನ್ನು ಆಡಿದ್ದು, 7.84 ರ ಎಕಾನಮಿಯಲ್ಲಿ 18 ವಿಕೆಟ್‌ಗಳನ್ನು ಪಡೆದಿದ್ದಾರೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 5:13 pm, Fri, 12 July 24