T20 Blast: 42ನೇ ವಯಸ್ಸಲ್ಲೂ ಬತ್ತದ ಉತ್ಸಾಹ; 3 ವಿಕೆಟ್ ಉರುಳಿಸಿದ ಜೇಮ್ಸ್ ಆಂಡರ್ಸನ್
James Anderson's T20 Blast Heroics: 2024 ರಲ್ಲಿ ಅಂತರರಾಷ್ಟ್ರೀಯ ಕ್ರಿಕೆಟ್ನಿಂದ ನಿವೃತ್ತರಾದ ಜೇಮ್ಸ್ ಆಂಡರ್ಸನ್, ಟಿ20 ಬ್ಲಾಸ್ಟ್ ನಲ್ಲಿ ಲಂಕಾಷೈರ್ ಪರ ಅದ್ಭುತ ಪ್ರದರ್ಶನ ನೀಡಿದ್ದಾರೆ. ಯಾರ್ಕ್ಷೈರ್ ವಿರುದ್ಧದ ಪಂದ್ಯದಲ್ಲಿ ಅವರು ಮೂರು ಪ್ರಮುಖ ವಿಕೆಟ್ ಪಡೆದು ತಮ್ಮ ತಂಡವನ್ನು 21 ರನ್ ಗಳ ಜಯಕ್ಕೆ ಕಾರಣರಾಗಿದ್ದಾರೆ. ಜೋಸ್ ಬಟ್ಲರ್ ಅವರ ಅರ್ಧಶತಕ ಕೂಡ ಈ ಗೆಲುವಿಗೆ ಕಾರಣವಾಯಿತು.

2024 ರಲ್ಲಿ ಅಂತರರಾಷ್ಟ್ರೀಯ ಕ್ರಿಕೆಟ್ಗೆ ನಿವೃತ್ತಿ ಘೋಷಿಸಿದ್ದ ಇಂಗ್ಲೆಂಡ್‌ನ ದಿಗ್ಗಜ ಬೌಲರ್ ಜೇಮ್ಸ್ ಆಂಡರ್ಸನ್ (James Anderson) ಪ್ರಸ್ತುತ ಟಿ20 ಬ್ಲಾಸ್ಟ್‌ನಲ್ಲಿ (T20 Blast) ಆಡುತ್ತಿದ್ದಾರೆ. ಈ ಲೀಗ್ನಲ್ಲಿ ಲಂಕಾಷೈರ್ ತಂಡದ ಪರ ಆಡುತ್ತಿರುವ ಜೇಮ್ಸ್ ಆಂಡರ್ಸನ್ ತಮ್ಮ ಅದ್ಭುತ ಬೌಲಿಂಗ್ ಮೂಲಕ ಎದುರಾಳಿ ತಂಡದ ಮೂವರು ಬ್ಯಾಟ್ಸ್‌ಮನ್‌ಗಳನ್ನು ಪೆವಿಲಿಯನ್‌ಗೆ ಕಳುಹಿಸುವುದರೊಂದಿಗೆ ತಮ್ಮ ತಂಡಕ್ಕೆ 21 ರನ್‌ಗಳ ಅಮೋಘ ಜಯ ತಂದುಕೊಡುವಲ್ಲಿ ಪ್ರಮುಖ ಪಾತ್ರವಹಿಸಿದರು. ಈ ಪಂದ್ಯದಲ್ಲಿ, ಜೇಮ್ಸ್ ಆಂಡರ್ಸನ್ ಜೊತೆಗೆ, ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ಜೋಸ್ ಬಟ್ಲರ್ ಕೂಡ ಸ್ಫೋಟಕ ಅರ್ಧಶತಕ ಸಿಡಿಸಿ ತಂಡದ ಗೆಲುವಿನ ರೂವಾರಿ ಎನಿಸಿಕೊಂಡರು.
ಆಂಡರ್ಸನ್ ಅದ್ಭುತ ಬೌಲಿಂಗ್
ಟಿ20 ಬ್ಲಾಸ್ಟ್‌ನಲ್ಲಿ, ಜೇಮ್ಸ್ ಆಂಡರ್ಸನ್ ಯಾರ್ಕ್‌ಷೈರ್ ವಿರುದ್ಧ ಅದ್ಭುತ ಬೌಲಿಂಗ್ ಮಾಡಿ ಮೂವರು ಆಟಗಾರರನ್ನು ಪೆವಿಲಿಯನ್‌ಗೆ ಕಳುಹಿಸಿದರು. ಲಂಕಾಷೈರ್ ನೀಡಿದ 175 ರನ್‌ಗಳ ಗುರಿಯನ್ನು ಬೆನ್ನಟ್ಟಲು ಬಂದ ಯಾರ್ಕ್‌ಷೈರ್ ತಂಡಕ್ಕೆ ಆಂಡರ್ಸನ್ ಆರಂಭಿಕ ಆಘಾತಗಳನ್ನು ನೀಡಿದರು. ನಾಯಕ ಡೇವಿಡ್ ಮಲನ್ ಮತ್ತು ಆರಂಭಿಕ ಆಟಗಾರ ವಿಲಿಯಂ ಲಕ್ಸ್ಟನ್ ವಿಕೆಟ್ ಉರುಳಿಸುವಲ್ಲಿ ಆಂಡರ್ಸನ್ ಯಶಸ್ವಿಯಾದರು. ಇದರ ನಂತರ, ಅವರು ಅರ್ಧಶತಕ ಬಾರಿಸಿ ಅಪಾಯಕಾರಿಯಾಗಿ ಕಾಣುತ್ತಿದ್ದ ಪಾಕಿಸ್ತಾನದ ಅಬ್ದುಲ್ಲಾ ಶಫೀಕ್ ಅವರನ್ನು ಪೆವಿಲಿಯನ್‌ಗೆ ಕಳುಹಿಸುವ ಮೂಲಕ ಲಂಕಾಷೈರ್ ತಂಡದ ಗೆಲುವನ್ನು ಖಚಿತಪಡಿಸಿದರು.
ಈ ಪಂದ್ಯದಲ್ಲಿ ಆಂಡರ್ಸನ್ 4 ಓವರ್‌ಗಳಲ್ಲಿ 25 ರನ್‌ಗಳಿಗೆ ಮೂವರು ಆಟಗಾರರನ್ನು ಔಟ್ ಮಾಡಿದರು. ಆಂಡರ್ಸನ್ ಹೊರತುಪಡಿಸಿ, ಕ್ರಿಸ್ ಗ್ರೀನ್ ಕೂಡ ಮೂರು ವಿಕೆಟ್ ಪಡೆದರು. ಲ್ಯೂಕ್ ವುಡ್ ಎರಡು ವಿಕೆಟ್ ಪಡೆದರು. ಈ ಮೂವರು ಬೌಲರ್‌ಗಳ ಅತ್ಯುತ್ತಮ ಬೌಲಿಂಗ್‌ನಿಂದಾಗಿ, ಯಾರ್ಕ್‌ಷೈರ್ ತಂಡವು 19.1 ಓವರ್‌ಗಳಲ್ಲಿ 153 ರನ್‌ಗಳಿಗೆ ಆಲೌಟ್ ಆಯಿತು. ಯಾರ್ಕ್‌ಷೈರ್ ಪರ ಅಬ್ದುಲ್ಲಾ ಶಫೀಕ್ 34 ಎಸೆತಗಳಲ್ಲಿ 54 ರನ್ ಬಾರಿಸಿದರಾದರೂ ತಂಡವನ್ನು ಗೆಲುವಿನ ದಡ ಮುಟ್ಟಿಸಲು ಸಾಧ್ಯವಾಗಲಿಲ್ಲ.
IND vs SL: ಆಗಸ್ಟ್‌ನಲ್ಲಿ ಭಾರತ- ಶ್ರೀಲಂಕಾ ನಡುವೆ ಏಕದಿನ, ಟಿ20 ಸರಣಿ
ಜೋಸ್ ಬಟ್ಲರ್ ಅರ್ಧಶತಕ
ಯಾರ್ಕ್‌ಷೈರ್ ವಿರುದ್ಧ ಮೊದಲು ಬ್ಯಾಟಿಂಗ್ ಮಾಡಿದ ಇಡೀ ಲಂಕಾಷೈರ್ ತಂಡವು 19.5 ಓವರ್‌ಗಳಲ್ಲಿ 174 ರನ್ ಕಲೆಹಾಕಿತು. ಇಂಗ್ಲೆಂಡ್‌ನ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ಜೋಸ್ ಬಟ್ಲರ್ ಲಂಕಾಷೈರ್ ಪರ ಅತಿ ಹೆಚ್ಚು ರನ್ ಗಳಿಸಿದರು. ಅವರು 46 ಎಸೆತಗಳಲ್ಲಿ 3 ಸಿಕ್ಸರ್ ಮತ್ತು 4 ಬೌಂಡರಿಗಳ ಸಹಾಯದಿಂದ 77 ರನ್ ಬಾರಿಸಿದರು. ಇವರ ಹೊರತಾಗಿ, ಆರಂಭಿಕ ಫಿಲ್ ಸಾಲ್ಟ್ 29 ಎಸೆತಗಳಲ್ಲಿ 2 ಸಿಕ್ಸರ್ ಮತ್ತು 9 ಬೌಂಡರಿಗಳ ಸಹಾಯದಿಂದ 42 ರನ್ ಸಿಡಿಸಿದರು. ಇತ್ತ ಯಾರ್ಕ್‌ಷೈರ್ ಪರ ಮ್ಯಾಟ್ ಮಿಲ್ನೆಸ್, ಜೋರ್ಡಾನ್ ಥಾಮ್ಸನ್ ಮತ್ತು ಜಾಫರ್ ಚೌಹಾಣ್ ತಲಾ ಎರಡು ವಿಕೆಟ್ ಪಡೆದರು.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
