IND vs ENG: ಡ್ಯೂಕ್ಸ್ ಬಾಲ್ ವಿವಾದ; ಮತ್ತೊಮ್ಮೆ ಮೌನ ಮುರಿದ ಕಂಪನಿ ಮಾಲೀಕ ಹೇಳಿದ್ದೇನು?
Dukes Ball Controversy: ಭಾರತ ಮತ್ತು ಇಂಗ್ಲೆಂಡ್ ನಡುವಿನ ಟೆಸ್ಟ್ ಸರಣಿಯಲ್ಲಿ ಬಳಸಲಾಗುತ್ತಿರುವ ಡ್ಯೂಕ್ಸ್ ಬಾಲ್‌ನ ಗುಣಮಟ್ಟದ ಬಗ್ಗೆ ತೀವ್ರ ಚರ್ಚೆಗಳು ನಡೆಯುತ್ತಿವೆ. ಭಾರತ ಮತ್ತು ಇಂಗ್ಲೆಂಡ್ ತಂಡಗಳ ಆಟಗಾರರು ಚೆಂಡು ಬೇಗನೆ ಮೃದುವಾಗುತ್ತಿದೆ ಮತ್ತು ಆಕಾರ ಕಳೆದುಕೊಳ್ಳುತ್ತಿದೆ ಎಂದು ದೂರಿದ್ದಾರೆ. ಇದೀಗ ಡ್ಯೂಕ್ಸ್ ಬಾಲ್ ತಯಾರಕರು ತನಿಖೆ ನಡೆಸುವುದಾಗಿ ಘೋಷಿಸಿದ್ದಾರೆ.

ಭಾರತ ಮತ್ತು ಇಂಗ್ಲೆಂಡ್ (India vs England) ನಡುವಿನ ಟೆಸ್ಟ್ ಸರಣಿ ಉಭಯ ತಂಡಗಳ ಪ್ರದರ್ಶನದಿಂದ ಚರ್ಚೆಯಾದ್ದಕ್ಕಿಂತ ಹೆಚ್ಚಾಗಿ ಸರಣಿಯಲ್ಲಿ ಬಳಸಲಾಗುತ್ತಿರುವ ಚೆಂಡಿನ ಬಗ್ಗೆಯೇ ಸಾಕಷ್ಟು ಚರ್ಚೆಯಾಗುತ್ತಿದೆ. ಸರಣಿ ಪ್ರತಿ ಪಂದ್ಯದಲ್ಲೂ ಚೆಂಡಿನ ಬಗ್ಗೆ ಉಭಯ ತಂಡಗಳ ಆಟಗಾರರು ಪದೇ ಪದೇ ಅಸಮಾಧನಗೊಳ್ಳುತ್ತಿರುವುದನ್ನು ನಾವು ಸಾಕಷ್ಟು ಭಾರಿ ನೋಡಿದ್ದೇವೆ. ವಾಸ್ತವವಾಗಿ ಈ ಸರಣಿಯಲ್ಲಿ ಡ್ಯೂಕ್ಸ್ ಬಾಲ್ಗಳನ್ನು (Dukes ball) ಬಳಸಲಾಗುತ್ತಿದೆ. ಆದರೆ ಈ ಚೆಂಡು ಬಹುಬೇಗನೇ ತನ್ನ ಆಕಾರವನ್ನು ಕಳೆದುಕೊಳ್ಳುತ್ತದೆ ಎಂಬ ಆರೋಪದ ಜೊತೆಗೆ ಬೇಗನೇ ಮೃದುವಾಗುತ್ತಿದೆ ಎಂಬ ಗಂಭೀರ ಆರೋಪವನ್ನು ಸಹ ಹೊರಿಸಲಾಗುತ್ತಿದೆ.
ಈ ಬಗ್ಗೆ ಈ ಮೊದಲು ಹೇಳಿಕೆ ನೀಡಿದ್ದ ತಯಾರಿಕ ಕಂಪನಿಯ ಮಾಲೀಕ ದೀಪಕ್ ಜಜೋಡಿಯಾ, ಬ್ಯಾಟ್ಸ್ಮನ್ಗಳನ್ನು ಮತ್ತು ಅವರು ಬಳಸುವ ಬ್ಯಾಟ್ಗಳು ನೇರ ಕಾರಣ ಎಂದಿದ್ದರು. ಇದೀಗ ಈ ಚೆಂಡಿನ ಬಗ್ಗೆ ಕ್ರಿಕೆಟ್ ಲೋಕದಲ್ಲಿ ಸಾಕಷ್ಟು ಚರ್ಚೆಗಳು ನಡೆಯುತ್ತಿರುವುದನ್ನು ಗಮನಿಸಿರುವ ಕಂಪನಿಯು ಈಗ ತನಿಖೆಯ ಬಗ್ಗೆ ಮಾತನಾಡಿದೆ.
ಡ್ಯೂಕ್ಸ್ ಬಾಲ್ಗಳ ಬಗ್ಗೆ ದೂರು
ಲಾರ್ಡ್ಸ್‌ನಲ್ಲಿ ನಡೆದ ಭಾರತ ಮತ್ತು ಇಂಗ್ಲೆಂಡ್ ನಡುವಿನ ಟೆಸ್ಟ್ ಸರಣಿಯ ಮೂರನೇ ಪಂದ್ಯವು ಎಷ್ಟೋ ರೋಮಾಂಚಕಾರಿಯಾಗಿತ್ತೋ ಅಷ್ಟೇ ವಿವಾದಾತ್ಮಕವಾಗಿತ್ತು. ಇದಕ್ಕೆ ಒಂದು ದೊಡ್ಡ ಕಾರಣವೆಂದರೆ ಸರಣಿಯಲ್ಲಿ ಬಳಸಲಾಗುತ್ತಿರುವ ಡ್ಯೂಕ್ಸ್ ಚೆಂಡುಗಳು. ಈ ಚೆಂಡುಗಳ ಬಗ್ಗೆ ಭಾರತ ತಂಡದ ನಾಯಕ ಶುಭ್ಮನ್ ಗಿಲ್ ಬಹಳಷ್ಟು ದೂರು ನೀಡಿದ್ದರು. ವಿಶೇಷವಾಗಿ ಟೆಸ್ಟ್ ಪಂದ್ಯದ ಎರಡನೇ ದಿನದಂದು ಹೊಸ ಚೆಂಡಿನ ಆಕಾರವು ಕೇವಲ 10 ಓವರ್‌ಗಳಲ್ಲಿ ಬದಲಾಯಿತು. ಇದರಿಂದ ಭಾರತ ತಂಡವು ಚೆಂಡನ್ನು ಬದಲಾಯಿಸಬೇಕಾಯಿತು. ಬದಲಾದ ಚೆಂಡನ್ನು ಸಹ ಮುಂದಿನ 8-9 ಓವರ್‌ಗಳಲ್ಲಿ ಬದಲಾಯಿಸಬೇಕಾಯಿತು.
ಚೆಂಡುಗಳನ್ನು ಪರೀಕ್ಷಿಸಲಾಗುವುದು
ಡ್ಯೂಕ್ಸ್ ಚೆಂಡಿನ ಬಗ್ಗೆ ಭಾರತ ಮಾತ್ರವಲ್ಲದೆ ಇಂಗ್ಲೆಂಡ್‌ನ ಮಾಜಿ ವೇಗಿ ಸ್ಟುವರ್ಟ್ ಬ್ರಾಡ್ ಕೂಡ ಪ್ರಶ್ನೆಗಳನ್ನು ಎತ್ತಿದ್ದಾರೆ. ಹೀಗಾಗಿ ಈ ವಿಷಯದ ಗಂಭೀರತೆಯನ್ನು ಕೊನೆಗೂ ಮನಗಂಡಿರುವ ಬ್ರಿಟಿಷ್ ಬಾಲ್ ಕಂಪನಿ ಲಿಮಿಟೆಡ್‌ನ ಮಾಲೀಕ ದೀಪಕ್ ಜಜೋಡಿಯಾ ಅವರು ‘ನಾವು ಈ ಚೆಂಡುಗಳನ್ನು ಪರೀಕ್ಷಿಸಿ, ಆ ನಂತರ ಚರ್ಮದ ಮಾರಾಟಗಾರರೊಂದಿಗೆ ಮಾತನಾಡುತ್ತೇವೆ, ಎಲ್ಲಾ ರೀತಿಯ ಕಚ್ಚಾ ವಸ್ತುಗಳ ಬಗ್ಗೆಯೂ ತನಿಖೆ ನಡೆಸುತ್ತೇವೆ. ಪರಿಶೀಲನೆಯ ನಂತರ, ಬದಲಾವಣೆ ಅಗತ್ಯವೆಂದು ಭಾವಿಸಿದರೆ, ಅದನ್ನು ಸಹ ಮಾಡಲಾಗುವುದು ಎಂದಿದ್ದಾರೆ ಎಂದು ವರದಿಯಾಗಿದೆ.
IND vs ENG: ಜಡೇಜಾರನ್ನು ಟೀಕಿಸಿದವರಿಗೆ ಸರಿಯಾದ ಉತ್ತರ ನೀಡಿದ ಗೌತಮ್ ಗಂಭೀರ್
ಸರಣಿ ಆರಂಭದಿಂದಲೂ ಇದೇ ಸಮಸ್ಯೆ
ಕಳೆದ 150 ವರ್ಷಗಳಿಂದ ಇಂಗ್ಲೆಂಡ್‌ನಲ್ಲಿ ಡ್ಯೂಕ್ಸ್ ಚೆಂಡುಗಳನ್ನು ತಯಾರಿಸಿ ಬಳಸಲಾಗುತ್ತಿದೆ. ಅದರ ಹೊಲಿಗೆ ಮತ್ತು ಗಾಢ ಬಣ್ಣದಿಂದಾಗಿ, ಈ ಚೆಂಡು ದೀರ್ಘಕಾಲದವರೆಗೆ ಸರಿಯಾದ ಆಕಾರದಲ್ಲಿ ಉಳಿಯುವ ಮೂಲಕ ಬೌಲರ್‌ಗಳಿಗೆ ಸಹಾಯಕವಾಗಿದೆ. ಆದರೆ ಕಳೆದ 4-5 ವರ್ಷಗಳಿಂದ ಈ ಚೆಂಡಿನ ಗುಣಮಟ್ಟ ಕುಸಿಯಲಾರಂಭಿಸಿದೆ. ಲಾರ್ಡ್ಸ್‌ನಲ್ಲಿ ಮಾತ್ರವಲ್ಲದೆ, ಅದಕ್ಕೂ ಮೊದಲು ಆಡಿದ ಎರಡೂ ಟೆಸ್ಟ್ ಪಂದ್ಯಗಳಲ್ಲಿ, 30-40 ಓವರ್‌ಗಳಲ್ಲಿ ಚೆಂಡು ಮೃದುವಾಗುತ್ತಿದೆ ಎಂದು ಉಭಯ ತಂಡಗಳ ಆಟಗಾರರು ದೂರು ನೀಡಿದ್ದರು.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
