ಟೀಮ್ ಇಂಡಿಯಾದ 7 ಆಟಗಾರರನ್ನು ಒಳಗೊಂಡ ಮುಂಬೈ ತಂಡಕ್ಕೆ ಜಮ್ಮು ಕಾಶ್ಮೀರ ತಂಡ ಸೋಲುಣಿಸಿದೆ. ಅದು ಕೂಡ 5 ವಿಕೆಟ್ಗಳ ಭರ್ಜರಿ ಜಯದೊಂದಿಗೆ ಎಂಬುದು ವಿಶೇಷ. ಮುಂಬೈನ ಶರದ್ ಪವಾರ್ ಕ್ರಿಕೆಟ್ ಅಕಾಡೆಮಿ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ಟಾಸ್ ಗೆದ್ದ ಮುಂಬೈ ತಂಡದ ನಾಯಕ ಅಜಿಂಕ್ಯ ರಹಾನೆ ಬ್ಯಾಟಿಂಗ್ ಆಯ್ದುಕೊಂಡಿದ್ದರು.
ಆದರೆ ಮುಂಬೈ ತಂಡದ ತೀರ್ಮಾನಕ್ಕೆ ಮೊದಲ ದಿನವೇ ಜಮ್ಮು-ಕಾಶ್ಮೀರ ಬೌಲರ್ಗಳು ತಿರುಗೇಟು ನೀಡಿದ್ದರು. 12 ರನ್ಗಳಿಸುವಷ್ಟರಲ್ಲಿ ಅನುಭವಿ ಆಟಗಾರ ರೋಹಿತ್ ಶರ್ಮಾ (3) ಹಾಗೂ ಯಶಸ್ವಿ ಜೈಸ್ವಾಲ್ (4) ವಿಕೆಟ್ ಕಬಳಿಸಿ ಆರಂಭಿಕ ಆಘಾತ ನೀಡಿದರು.
ಆ ಬಳಿಕ ಬಂದ ಶಿವಂ ದುಬೆ ಸೊನ್ನೆ ಸುತ್ತಿದರೆ, ಅಜಿಂಕ್ಯ ರಹಾನೆ 12 ರನ್ಗಳಿಸಿದರು. ಇನ್ನು ಶ್ರೇಯಸ್ ಅಯ್ಯರ್ 11 ರನ್ಗಳಿಸಲಷ್ಟೇ ಶಕ್ತರಾಗಿದ್ದರು. ಇನ್ನು ಕೆಳ ಕ್ರಮಾಂಕದಲ್ಲಿ ಕಣಕ್ಕಿಳಿದ ಶಾರ್ದೂಲ್ ಠಾಕೂರ್ 51 ರನ್ಗಳ ಕೊಡುಗೆ ನೀಡಿ ತಂಡದ ಮೊತ್ತವನ್ನು 100ರ ಗಡಿದಾಟಿಸಿದರು. ಇದಾಗ್ಯೂ ಮುಂಬೈ ಮೊದಲ ಇನಿಂಗ್ಸ್ನಲ್ಲಿ ಕೇವಲ 120 ರನ್ಗಳಿಗೆ ಆಲೌಟ್ ಆಯಿತು.
ಇದಕ್ಕುತ್ತರವಾಗಿ ಪ್ರಥಮ ಇನಿಂಗ್ಸ್ ಆಡಿದ ಜಮ್ಮು ಕಾಶ್ಮೀರ ಪರ ಶುಭಂ ಖಜುರಿಯಾ (53) ಅರ್ಧಶತಕ ಬಾರಿಸಿದರೆ, ಅಬಿದ್ ಮುಷ್ತಾಕ್ 44 ರನ್ ಸಿಡಿಸಿದರು. ಈ ಮೂಲಕ ಜಮ್ಮು ಕಾಶ್ಮೀರ ಮೊದಲ ಇನಿಂಗ್ಸ್ನಲ್ಲಿ 206 ರನ್ ಕಲೆಹಾಕಿತು.
86 ರನ್ಗಳ ಹಿನ್ನಡೆಯೊಂದಿಗೆ ದ್ವಿತೀಯ ಇನಿಂಗ್ಸ್ ಆರಂಭಿಸಿದ ಮುಂಬೈ ತಂಡಕ್ಕೆ ರೋಹಿತ್ ಶರ್ಮಾ (28) ಹಾಗೂ ಯಶಸ್ವಿ ಜೈಸ್ವಾಲ್ (26) ಉತ್ತಮ ಆರಂಭ ಒದಗಿಸುವ ಸೂಚನೆ ನೀಡಿದ್ದರು. ಆದರೆ ಈ ಹಂತದಲ್ಲಿ ದಾಳಿಗಿಳಿದ ಯುದ್ವೀರ್ ಸಿಂಗ್ ಆರಂಭಿಕರಿಬ್ಬರು ಪೆವಿಲಿಯನ್ಗೆ ಕಳುಹಿಸುವಲ್ಲಿ ಸಫಲರಾದರು.
ಆ ಬಳಿಕ ಬಂದ ಅಜಿಂಕ್ಯ ರಹಾನೆ (16), ಶ್ರೇಯಸ್ ಅಯ್ಯರ್ (17) ಬಂದ ವೇಗದಲ್ಲೇ ಹಿಂತಿರುಗಿದರು. ಇನ್ನು ಶಿವಂ ದುಬೆ ಸೊನ್ನೆ ಸುತ್ತುವ ಮೂಲಕ ನಿರಾಸೆ ಮೂಡಿಸಿದರು. ಈ ಹಂತದಲ್ಲಿ ಕಣಕ್ಕಿಳಿದ ಶಾರ್ದೂಲ್ ಠಾಕೂರ್ ಮುಂಬೈ ತಂಡಕ್ಕೆ ಆಸರೆಯಾಗಿ ನಿಂತರು.
ಜವಾಬ್ದಾರಿಯುತ ಬ್ಯಾಟಿಂಗ್ ಪ್ರದರ್ಶಿಸಿದ ಶಾರ್ದೂಲ್ ಠಾಕೂರ್, ತನುಷ್ ಕೋಟ್ಯಾನ್ (62) ಜೊತೆಗೂಡಿ ಶತಕದ ಜೊತೆಯಾಟವಾಡಿದರು. ಇದರ ನಡುವೆ 135 ಎಸೆತಗಳನ್ನು ಎದುರಿಸಿದ ಶಾರ್ದೂಲ್ 18 ಫೋರ್ಗಳೊಂದಿಗೆ 119 ರನ್ ಬಾರಿಸಿ ವಿಕೆಟ್ ಒಪ್ಪಿಸಿದರು. ಇದರೊಂದಿಗೆ ಮುಂಬೈ ತಂಡದ ದ್ವಿತೀಯ ಇನಿಂಗ್ಸ್ 290 ರನ್ಗಳಿಗೆ ಅಂತ್ಯಗೊಂಡಿತು.
ಮೊದಲ ಇನಿಂಗ್ಸ್ನಲ್ಲಿ 86 ರನ್ಗಳ ಮುನ್ನಡೆಯೊಂದಿಗೆ ದ್ವಿತೀಯ ಇನಿಂಗ್ಸ್ನಲ್ಲಿ 207 ರನ್ಗಳ ಗುರಿ ಪಡೆದ ಜಮ್ಮು ಕಾಶ್ಮೀರ ಪರ ಶುಭಂ ಖಜುರಿಯಾ 45 ರನ್ ಬಾರಿಸಿದರೆ, ವಿವ್ರಾಂತ್ ಶರ್ಮಾ 38 ರನ್ಗಳಿಸಿದರು. ಇನ್ನು ಅಬಿದ್ ಮುಷ್ತಾಕ್ ಅಜೇಯ 32 ರನ್ಗಳಿಸುವ ಮೂಲಕ ಜಮ್ಮು-ಕಾಶ್ಮೀರ ತಂಡವನ್ನು 207 ರನ್ಗಳ ಗುರಿ ಮುಟ್ಟಿಸಿದರು.
ಈ ಮೂಲಕ ಜಮ್ಮು ಕಾಶ್ಮೀರ ತಂಡವು 5 ವಿಕೆಟ್ಗಳ ಜಯ ಸಾಧಿಸಿದೆ. ಇದು 11 ವರ್ಷಗಳ ಬಳಿಕ ದೇಶೀಯ ಅಂಗಳದಲ್ಲಿ ಮುಂಬೈ ವಿರುದ್ಧ ಜಮ್ಮು ಕಾಶ್ಮೀರದ ಮೊದಲ ಗೆಲುವು ಎಂಬುದು ವಿಶೇಷ.
10 ವರ್ಷಗಳ ಬಳಿಕ ರಣಜಿ ಟೂರ್ನಿಗೆ ಮರಳಿರುವ ರೋಹಿತ್ ಶರ್ಮಾ ಬ್ಯಾಟಿಂಗ್ನಲ್ಲಿ ವಿಫಲರಾಗಿದ್ದಾರೆ. ಅಲ್ಲದೆ ಟೀಮ್ ಇಂಡಿಯಾ ನಾಯಕನಿದ್ದ ತಂಡವು ಅನಾನುಭವಿ ಜಮ್ಮು ಕಾಶ್ಮೀರ ವಿರುದ್ಧ ಹೀನಾಯವಾಗಿ ಸೋತಿದೆ.
ಮುಂಬೈ ಪ್ಲೇಯಿಂಗ್ 11: ಯಶಸ್ವಿ ಜೈಸ್ವಾಲ್ , ರೋಹಿತ್ ಶರ್ಮಾ , ಅಜಿಂಕ್ಯ ರಹಾನೆ (ನಾಯಕ) , ಶ್ರೇಯಸ್ ಅಯ್ಯರ್ , ಹಾರ್ದಿಕ್ ತಮೋರ್ ( ವಿಕೆಟ್ ಕೀಪರ್ ) , ಶಿವಂ ದುಬೆ , ಶಾರ್ದೂಲ್ ಠಾಕೂರ್ , ಶಮ್ಸ್ ಮುಲಾನಿ , ತನುಷ್ ಕೋಟ್ಯಾನ್ , ಮೋಹಿತ್ ಅವಸ್ತಿ , ಕರ್ಶ್ ಕೊಠಾರಿ.
ಇದನ್ನೂ ಓದಿ: ಟೀಮ್ ಇಂಡಿಯಾ ಆರ್ಭಟಕ್ಕೆ ಪಾಕಿಸ್ತಾನ್ ತಂಡದ ದಾಖಲೆ ಉಡೀಸ್
ಜಮ್ಮು ಕಾಶ್ಮೀರ ಪ್ಲೇಯಿಂಗ್ 11: ಶುಭಂ ಖಜುರಿಯಾ , ವಿವ್ರಾಂತ್ ಶರ್ಮಾ , ಅಬ್ದುಲ್ ಸಮದ್ , ಪರಾಸ್ ಡೋಗ್ರಾ (ನಾಯಕ) , ಕನ್ಹಯ್ಯಾ ವಾಧವನ್ ( ವಿಕೆಟ್ ಕೀಪರ್) , ಔಕಿಬ್ ನಬಿ ದಾರ್ , ಯಾವರ್ ಹಸನ್ , ಯುಧ್ವೀರ್ ಸಿಂಗ್ ಚರಕ್ , ಅಬಿದ್ ಮುಷ್ತಾಕ್ , ಉಮರ್ ನಝೀರ್ ಮಿರ್ , ವಂಶಜ್ ಶರ್ಮಾ