- Kannada News Photo gallery Cricket photos Noman Ali Becomes First Pakistani Spinner To Take Hat-Trick In Test
ಮೂರು ಎಸೆತಗಳಲ್ಲಿ ದಾಖಲೆ ನಿರ್ಮಿಸಿದ ಪಾಕಿಸ್ತಾನ್ ಸ್ಪಿನ್ನರ್
Noman Ali Hat-Trick: ಟೆಸ್ಟ್ ಕ್ರಿಕೆಟ್ನಲ್ಲಿ ಹ್ಯಾಟ್ರಿಕ್ ವಿಕೆಟ್ ಕಬಳಿಸಿದ ವಿಶೇಷ ಸಾಧಕರ ಪಟ್ಟಿಗೆ ಪಾಕಿಸ್ತಾನ್ ಸ್ಪಿನ್ನರ್ ನೊಮಾನ್ ಅಲಿ ಕೂಡ ಸೇರ್ಪಡೆಯಾಗಿದ್ದಾರೆ. ಅಲ್ಲದೆ ಈ ಸಾಧನೆ ಮಾಡಿದ ಪಾಕಿಸ್ತಾನದ ಮೊದಲ ಸ್ಪಿನ್ನರ್ ಎಂಬ ಹೆಗ್ಗಳಿಕೆಗೂ ಪಾತ್ರರಾಗಿದ್ದಾರೆ. ವೆಸ್ಟ್ ಇಂಡೀಸ್ ವಿರುದ್ಧದ ದ್ವಿತೀಯ ಟೆಸ್ಟ್ನ ಮೊದಲ ದಿನದಾಟದಲ್ಲಿ ಹ್ಯಾಟ್ರಿಕ್ ವಿಕೆಟ್ ಕಬಳಿಸಿ ನೊಮಾನ್ ಅಲಿ ಈ ವಿಶೇಷ ದಾಖಲೆ ಬರೆದಿದ್ದಾರೆ.
Updated on:Jan 25, 2025 | 12:17 PM

ಮುಲ್ತಾನ್ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯುತ್ತಿರುವ ವೆಸ್ಟ್ ಇಂಡೀಸ್ ವಿರುದ್ಧದ 2ನೇ ಟೆಸ್ಟ್ ಪಂದ್ಯದ ಮೂಲಕ ಪಾಕಿಸ್ತಾನ್ ಸ್ಪಿನ್ನರ್ ನೊಮಾನ್ ಅಲಿ ದಾಖಲೆ ನಿರ್ಮಿಸಿದ್ದಾರೆ. ಅದು ಸಹ ಹ್ಯಾಟ್ರಿಕ್ ವಿಕೆಟ್ ಕಬಳಿಸುವ ಮೂಲಕ ಎಂಬುದು ವಿಶೇಷ. ಇದರೊಂದಿಗೆ ಈ ಸಾಧನೆ ಮಾಡಿದ ಪಾಕಿಸ್ತಾನದ ಮೊದಲ ಸ್ಪಿನ್ನರ್ ಎನಿಸಿಕೊಂಡಿದ್ದಾರೆ.

ಈ ಪಂದ್ಯದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡಿದ್ದ ವೆಸ್ಟ್ ಇಂಡೀಸ್ ತಂಡವು ನಿರೀಕ್ಷಿತ ಬ್ಯಾಟಿಂಗ್ ಪ್ರದರ್ಶಿಸಲಿಲ್ಲ. ಆರಂಭಿಕರಾದ ಕ್ರೇಗ್ ಬ್ರಾಥ್‌ವೈಟ್ (9), ಮೈಕೈಲ್ ಲೂಯಿಸ್ (4) ಬಂದ ವೇಗದಲ್ಲೇ ಹಿಂತಿರುಗಿದರೆ, ಆ ಬಳಿಕ ಬಂದ ಅಮೀರ್ ಜಾಂಗೂ ಶೂನ್ಯಕ್ಕೆ ವಿಕೆಟ್ ಒಪ್ಪಿಸಿದರು.

ಇದರ ಬಳಿಕ ಬಂದ ಜಸ್ಟಿನ್ ಗ್ರೀವ್ಸ್ (1), ಟೆವಿನ್ ಇಮ್ಲಾಚ್ (0) ಹಾಗೂ ಕೆವಿನ್ ಸಿಂಕ್ಲೇರ್ (0) ಅವರುಗಳ ವಿಕೆಟ್ ಕಬಳಿಸುವ ಮೂಲಕ ನೊಮಾನ್ ಅಲಿ ಚೊಚ್ಚಲ ಹ್ಯಾಟ್ರಿಕ್ ಸಾಧನೆ ಮಾಡಿದರು. ಈ ಮೂಲಕ ಪಾಕಿಸ್ತಾನ್ ಪರ ಟೆಸ್ಟ್ನಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ಮೊದಲ ಸ್ಪಿನ್ನರ್ ಎನಿಸಿಕೊಂಡರು.

ಅಲ್ಲದೆ ಪಾಕ್ ಪರ ಟೆಸ್ಟ್ನಲ್ಲಿ ಹ್ಯಾಟ್ರಿಕ್ ವಿಕೆಟ್ ಕಬಳಿಸಿದ 5ನೇ ಬೌಲರ್ ಎಂಬ ದಾಖಲೆಯನ್ನು ಸಹ ತಮ್ಮದಾಗಿಸಿಕೊಂಡರು. ಇದಕ್ಕೂ ಮುನ್ನ ವಾಸಿಂ ಅಕ್ರಮ್ (1999), ಅಬ್ದುಲ್ ರಝಾಕ್ (2000), ಮೊಹಮ್ಮದ್ ಸಮಿ (2002), ನಸೀಮ್ ಶಾ (2020) ಈ ಸಾಧನೆ ಮಾಡಿದ್ದರು. ಇದೀಗ ಈ ಸಾಧಕರ ಪಟ್ಟಿಗೆ ಸ್ಪಿನ್ನರ್ ಆಗಿ ನೊಮಾನ್ ಅಲಿ ಎಂಟ್ರಿ ಕೊಟ್ಟಿದ್ದಾರೆ.

ಇನ್ನು ನೊಮಾನ್ ಅಲಿ ಅವರ ಈ ಹ್ಯಾಟ್ರಿಕ್ ವಿಕೆಟ್ನಿಂದಾಗಿ ದಿಢೀರ್ ಕುಸಿತಕ್ಕೊಳಗಾದ ವೆಸ್ಟ್ ಇಂಡೀಸ್ ತಂಡವು 30 ಓವರ್ಗಳ ಮುಕ್ತಾಯದ ವೇಳೆಗೆ 9 ವಿಕೆಟ್ ಕಳೆದುಕೊಂಡು 100 ರನ್ ಕಲೆಹಾಕಿದೆ. ಇತ್ತ 12 ಓವರ್ಗಳನ್ನು ಎಸೆದಿರುವ ನೊಮಾನ್ ಅಲಿ 30 ರನ್ ನೀಡಿ 5 ವಿಕೆಟ್ ಕಬಳಿಸಿದ್ದಾರೆ.
Published On - 12:17 pm, Sat, 25 January 25



















