- Kannada News Photo gallery Cricket photos Big Bash League to bring in some new rules for Next Season
ಒಂದೇ ಎಸೆತದಲ್ಲಿ ಇಬ್ಬರು ಔಟ್… ಹೊಸ ನಿಯಮ ಪರಿಚಯಿಸಲಿರುವ ಆಸ್ಟ್ರೇಲಿಯಾ
ಆಸ್ಟ್ರೇಲಿಯಾ ಕ್ರಿಕೆಟ್ ಬೋರ್ಡ್ ಮುಂಬರುವ ಬಿಗ್ ಬ್ಯಾಷ್ ಲೀಗ್ನಲ್ಲಿ 4 ಹೊಸ ನಿಯಮಗಳನ್ನು ಪರಿಚಯಿಸಲು ಮುಂದಾಗಿದೆ. ಈ ನಾಲ್ಕು ನಿಯಮಗಳ ಬಗ್ಗೆ ಈಗಾಗಲೇ ಚರ್ಚಿಸಲಾಗಿದ್ದು, ಹೀಗಾಗಿ ಬಿಬಿಎಲ್-15 ರಲ್ಲಿ ಈ ನಿಯಮಗಳು ಜಾರಿಗೊಳ್ಳುವ ಸಾಧ್ಯತೆ ಹೆಚ್ಚಿದೆ. ಈ ಮೂಲಕ ಬಿಗ್ ಬ್ಯಾಷ್ ಲೀಗ್ ಅನ್ನು ಮತ್ತಷ್ಟು ರೋಚಕಗೊಳಿಸಲು ಆಸ್ಟ್ರೇಲಿಯಾ ಕ್ರಿಕೆಟ್ ಮಂಡಳಿ ಪ್ಲ್ಯಾನ್ ರೂಪಿಸುತ್ತಿದೆ.
Updated on:Jan 25, 2025 | 10:16 AM

ಒಂದೇ ಎಸೆತದಲ್ಲಿ ಇಬ್ಬರು ಔಟ್... ಇದು ಹೇಗೆ ಸಾಧ್ಯ ಎಂಬ ಪ್ರಶ್ನೆ ಮೂಡುವುದು ಸಹಜ. ಆದರೆ ಇಂತಹದೊಂದು ನಿಯಮವನ್ನು ಪರಿಚಯಿಸಲು ಕ್ರಿಕೆಟ್ ಆಸ್ಟ್ರೇಲಿಯಾ ಮುಂದಾಗಿದೆ. ಅದು ಸಹ ವರ್ಣರಂಜಿತ ಕ್ರಿಕೆಟ್ ಟೂರ್ನಿ ಬಿಗ್ ಬ್ಯಾಷ್ ಲೀಗ್ನಲ್ಲಿ ಎಂಬುದು ವಿಶೇಷ.

ಬಿಗ್ ಬ್ಯಾಷ್ ಲೀಗ್ನ 15ನೇ ಸೀಸನ್ನಲ್ಲಿ ಕ್ರಿಕೆಟ್ ಆಸ್ಟ್ರೇಲಿಯಾ ಒಟ್ಟು 4 ಹೊಸ ನಿಯಮಗಳನ್ನು ಪರಿಚಯಿಸಲು ಚರ್ಚೆ ನಡೆಸಿದೆ. ಈ ನಿಯಮಗಳಲ್ಲಿ ಎಲ್ಲರ ಗಮನ ಸೆಳೆದಿರುವುದು ಒಂದೇ ಎಸೆತದಲ್ಲಿ ಇಬ್ಬರು ಔಟ್. ಬಿಗ್ ಬ್ಯಾಷ್ ಲೀಗ್ 2025-26 ರಲ್ಲಿ ಕಂಡು ಬರಲಿರುವ ಹೊಸ ನಿಯಮಗಳ ಸಂಕ್ಷಿಪ್ತ ವಿವರ ಈ ಕೆಳಗಿನಂತಿದೆ...

ಡಿಸೈನೆಟೆಡ್ ಹಿಟ್ಟರ್: ಮುಂಬರುವ ಬಿಗ್ ಬ್ಯಾಷ್ ಲೀಗ್ನಲ್ಲಿ ಡಿಸೈನೆಟೆಡ್ ಹಿಟ್ಟರ್ ನಿಯಮ ಜಾರಿಗೆ ಬರುವ ಸಾಧ್ಯತೆಯಿದೆ. ಈ ನಿಯಮದ ಪ್ರಕಾರ, ಓರ್ವ ಆಟಗಾರನನ್ನು ಕೇವಲ ಬ್ಯಾಟರ್ ಆಗಿ ಕಣಕ್ಕಿಳಿಸಬಹುದು. ಆತ ಫೀಲ್ಡಿಂಗ್ ಅಥವಾ ಬೌಲಿಂಗ್ ಮಾಡಬೇಕೆಂದಿಲ್ಲ. ಬೌಲಿಂಗ್ ಬಳಿಕ ಆಡುವ ಬಳಗದಿಂದ ಓರ್ವನನ್ನು ಕೈ ಬಿಟ್ಟು ಬ್ಯಾಟರ್ ಒಬ್ಬರನ್ನು ಕಣಕ್ಕಿಳಿಸಬಹುದು.

ಡಬಲ್ ಪ್ಲೇ ಔಟ್: ಈ ನಿಯಮದ ಪ್ರಕಾರ, ಒಂದೇ ಎಸೆತದಲ್ಲಿ ಇಬ್ಬರು ಬ್ಯಾಟ್ಸ್ಮನ್ಗಳನ್ನು ಔಟ್ ಮಾಡಬಹುದು. ಇಲ್ಲಿ ಒಬ್ಬ ಬ್ಯಾಟರ್ ಕ್ಯಾಚ್ ನೀಡಿದರೆ, ಕ್ಯಾಚ್ ಹಿಡಿದ ಬಳಿಕ ಮತ್ತೊಂದು ತುದಿಯಲ್ಲಿ ಓಡುವ ಮತ್ತೋರ್ವ ಬ್ಯಾಟರ್ ಅನ್ನು ರನೌಟ್ ಮಾಡುವ ಅವಕಾಶ ಇರಲಿದೆ. ಅಥವಾ ಬೌಲ್ಡ್ ಬೆನ್ನಲ್ಲೇ ನಾನ್ ಸ್ಟ್ರೈಕರ್ನಲ್ಲಿರುವ ಬ್ಯಾಟರ್ ಅನ್ನು ರನೌಟ್ ಮಾಡಬಹುದು. ಈ ಮೂಲಕ ಒಂದೇ ಎಸೆತದಲ್ಲಿ ಸ್ಟ್ರೈಕರ್ ಹಾಗೂ ನಾನ್ ಸ್ಟ್ರೈಕರ್ ಅನ್ನು ಔಟ್ ಮಾಡುವ ನಿಯಮವನ್ನು ಪರಿಚಯಿಸಲು ಕ್ರಿಕೆಟ್ ಆಸ್ಟ್ರೇಲಿಯಾ ಮುಂದಾಗಿದೆ.

ಮೇಡನ್ ಓವರ್: ಒಬ್ಬ ಬೌಲರ್ ಮೇಡನ್ ಓವರ್ ಎಸೆಯಲು ಸಾಧ್ಯವಾದರೆ, ಆ ಬೌಲರ್ಗೆ ಹೆಚ್ಚುವರಿ 1 ಓವರ್ ನೀಡಲಾಗುತ್ತದೆ. ಸಾಮಾನ್ಯವಾಗಿ ಟಿ20 ಕ್ರಿಕೆಟ್ನಲ್ಲಿ ಒಬ್ಬ ಬೌಲರ್ಗೆ 4 ಓವರ್ ಇರುತ್ತದೆ. ಈ ಹೊಸ ನಿಯಮದ ಪ್ರಕಾರ, ಮೇಡನ್ ಓವರ್ ಎಸೆದ ಬೌಲರ್ ಒಟ್ಟು 5 ಓವರ್ಗಳನ್ನು ಬೌಲಿಂಗ್ ಮಾಡಬಹುದು.

ಬ್ಯಾಕ್ ಟು ಬ್ಯಾಕ್ ಓವರ್ಗಳು: ಬಿಬಿಎಲ್-15 ರಲ್ಲಿ ಬ್ಯಾಕ್ ಟು ಬ್ಯಾಕ್ ಓವರ್ಗಳನ್ನು ಎಸೆಯಲು ಅವಕಾಶ ನೀಡುವ ಬಗ್ಗೆ ಚಿಂತಿಸಲಾಗಿದೆ. ಅಂದರೆ ಒಬ್ಬ ಬೌಲರ್ ಒಂದು ಓವರ್ ಮುಗಿಸಿದ ಬಳಿಕ 2ನೇ ಓವರ್ ಎಸೆಯಬಹುದು. ಅದರಂತೆ ಸತತ 12 ಎಸೆತಗಳನ್ನು ಎಸೆಯಲು ಅವಕಾಶ ನೀಡಲಾಗುತ್ತದೆ. ಹೀಗೆ ಬ್ಯಾಕ್ ಟು ಬ್ಯಾಕ್ ಓವರ್ ಬೌಲಿಂಗ್ ಮಾಡಿಸುವ ಆಯ್ಕೆ ತಂಡದ ನಾಯಕನ ಬಿಟ್ಟದ್ದು. ನಾಯಕ ಬಯಸಿದರೆ, ಒಬ್ಬ ಬೌಲರ್ನಿಂದ ಒಂದೇ ಸಲ 12 ಎಸೆತಗಳನ್ನು ಬೌಲಿಂಗ್ ಮಾಡಿಸಬಹುದು.
Published On - 9:58 am, Sat, 25 January 25
























