T20 World Cup 2024: ಟಿ20 ವಿಶ್ವಕಪ್ನ 9ನೇ ಆವೃತ್ತಿಯಲ್ಲಿ ಭಾರತ ತಂಡವು ಚಾಂಪಿಯನ್ ಪಟ್ಟ ಅಲಂಕರಿಸಿದೆ. ಬಾರ್ಬಡೋಸ್ನ ಕೆನ್ಸಿಂಗ್ಟನ್ ಓವಲ್ ಮೈದಾನದಲ್ಲಿ ನಡೆದ ರಣರೋಚಕ ಪಂದ್ಯದಲ್ಲಿ ಸೌತ್ ಆಫ್ರಿಕಾ ತಂಡವನ್ನು ಮಣಿಸಿ ಟೀಮ್ ಇಂಡಿಯಾ ವಿಶ್ವಕಪ್ ಎತ್ತಿ ಹಿಡಿದಿದೆ. ಈ ಪಂದ್ಯದ ಗೆಲುವಿನ ರೂವಾರಿಗಳೆಂದರೆ ವಿರಾಟ್ ಕೊಹ್ಲಿ ಮತ್ತು ಜಸ್ಪ್ರೀತ್ ಬುಮ್ರಾ. 76 ರನ್ಗಳ ಕೊಡುಗೆಯೊಂದಿಗೆ ಕಿಂಗ್ ಕೊಹ್ಲಿ ಟೀಮ್ ಇಂಡಿಯಾ 176 ರನ್ ಪೇರಿಸಲು ನೆರವಾದರೆ, ಈ ಗುರಿಯನ್ನು ಬೆನ್ನತ್ತದಂತೆ ತಡೆಯುವಲ್ಲಿ ಜಸ್ಪ್ರೀತ್ ಬುಮ್ರಾ ಯಶಸ್ವಿಯಾದರು. ಅದರಲ್ಲೂ ಕೊನೆಯ 5 ಓವರ್ಗಳಲ್ಲಿ ಬುಮ್ರಾ ಎಸೆದ 2 ಓವರ್ಗಳು ಭಾರತದ ಗೆಲುವಿನಲ್ಲಿ ನಿರ್ಣಾಯಕ ಪಾತ್ರವಹಿಸಿತು.
ಏಕೆಂದರೆ 15 ಓವರ್ಗಳಲ್ಲಿ ಸೌತ್ ಆಫ್ರಿಕಾ ತಂಡವು 147 ರನ್ ಬಾರಿಸಿ ಗೆಲುವಿನತ್ತ ಮುಖ ಮಾಡಿತ್ತು. ಅಲ್ಲದೆ ಕೊನೆಯ 30 ಎಸೆತಗಳಲ್ಲಿ ಬೇಕಿದದ್ದು ಕೇವಲ 30 ರನ್ಗಳು ಮಾತ್ರ. ಈ ಹಂತದಲ್ಲಿ ದಾಳಿಗಿಳಿದ ಬುಮ್ರಾ ಸೌತ್ ಆಫ್ರಿಕಾ ಬ್ಯಾಟರ್ಗಳ ಮೇಲೆ ಒತ್ತಡ ಹೇರುವಲ್ಲಿ ಯಶಸ್ವಿಯಾದರು.
16ನೇ ಓವರ್ನಲ್ಲಿ ಜಸ್ಪ್ರೀತ್ ಬುಮ್ರಾ ನೀಡಿದ್ದು ಕೇವಲ 4 ರನ್ಗಳು ಮಾತ್ರ. ಇದರಿಂದ ಒತ್ತಡಕ್ಕೆ ಸಿಲುಕಿದ ಹೆನ್ರಿಕ್ ಕ್ಲಾಸೆನ್ 17ನೇ ಓವರ್ನ ಮೊದಲ ಎಸೆತದಲ್ಲಿ ಹಾರ್ದಿಕ್ ಪಾಂಡ್ಯಗೆ ವಿಕೆಟ್ ಒಪ್ಪಿಸಿದರು. ಅಲ್ಲದೆ ಈ ಓವರ್ನಲ್ಲಿ ಪಾಂಡ್ಯ ನೀಡಿದ್ದು ಕೇವಲ 4 ರನ್ಗಳು ಮಾತ್ರ.
ಇದಾದ ಬಳಿಕ 18ನೇ ಓವರ್ನಲ್ಲಿ ಬಿಗಿ ದಾಳಿ ಸಂಘಟಿಸಿದ ಜಸ್ಪ್ರೀತ್ ಬುಮ್ರಾ ಮಾರ್ಕೊ ಯಾನ್ಸೆನ್ ಅವರನ್ನು ಕ್ಲೀನ್ ಬೌಲ್ಡ್ ಮಾಡಿದರು. ಈ ಓವರ್ನಲ್ಲಿ ಬುಮ್ರಾ ನೀಡಿದ್ದು ಕೇವಲ 2 ರನ್ಗಳು ಮಾತ್ರ.
ಅಂದರೆ ಸೌತ್ ಆಫ್ರಿಕಾ ಪಾಲಿಗೆ ನಿರ್ಣಾಯಕವಾಗಿದ್ದ ಕೊನೆಯ ಎರಡು ಓವರ್ಗಳಲ್ಲಿ ಜಸ್ಪ್ರೀತ್ ಬುಮ್ರಾ ಕೇವಲ 6 ರನ್ಗಳನ್ನು ಮಾತ್ರ ನೀಡಿದ್ದರು. ಪರಿಣಾಮ ಸೌತ್ ಆಫ್ರಿಕಾ ತಂಡದ ಗುರಿ ಅಂತಿಮ 2 ಓವರ್ಗಳಲ್ಲಿ 20 ರನ್ಗಳಿಗೆ ಬಂದು ನಿಂತಿತು.
ಈ ಹಂತದಲ್ಲಿ 19ನೇ ಓವರ್ ಎಸೆದ ಅರ್ಷದೀಪ್ ಸಿಂಗ್ 4 ರನ್ ಮಾತ್ರ ನೀಡಿದರು. ಅದರಂತೆ ಕೊನೆಯ ಓವರ್ನಲ್ಲಿ 16 ರನ್ ಗುರಿ ಪಡೆದ ಸೌತ್ ಆಫ್ರಿಕಾ ತಂಡಕ್ಕೆ ಡೇವಿಡ್ ಮಿಲ್ಲರ್ ಗೆಲುವಿನ ಭರವಸೆ ಮೂಡಿಸಿದ್ದರು.
ಆದರೆ ಹಾರ್ದಿಕ್ ಪಾಂಡ್ಯ ಎಸೆದ 20ನೇ ಓವರ್ನ ಮೊದಲ ಎಸೆತದಲ್ಲಿ ಬೌಂಡರಿ ಲೈನ್ನಲ್ಲಿ ಸೂರ್ಯಕುಮಾರ್ ಯಾದವ್ ಹಿಡಿದ ಅದ್ಭುತ ಕ್ಯಾಚ್ನಿಂದಾಗಿ ಡೇವಿಡ್ ಮಿಲ್ಲರ್ ಇನಿಂಗ್ಸ್ ಅಂತ್ಯಗೊಂಡಿತು. ಅಲ್ಲದೆ ಕೊನೆಯ ಓವರ್ನಲ್ಲಿ ಕೇವಲ 8 ರನ್ ನೀಡಿ ಪಾಂಡ್ಯ ಭಾರತ ತಂಡಕ್ಕೆ 7 ರನ್ಗಳ ರೋಚಕ ಜಯ ತಂದು ಕೊಟ್ಟರು.
ಇದನ್ನೂ ಓದಿ: Virat Kohli – Rohit Sharma: T20I ಕ್ರಿಕೆಟ್ಗೆ ವಿರಾಟ್ ಕೊಹ್ಲಿ – ರೋಹಿತ್ ಶರ್ಮಾ ವಿದಾಯ
ಇಲ್ಲಿ ಅಂತಿಮ ಓವರ್ಗಳಲ್ಲಿ ಟೀಮ್ ಇಂಡಿಯಾ ಬೌಲರ್ಗಳು ಸಾಂಘಿಕ ಪ್ರದರ್ಶನ ನೀಡಿದ್ದು ಗೆಲುವಿಗೆ ಪ್ರಮುಖ ಕಾರಣವಾಯಿತು. ಅದರಲ್ಲೂ 4 ಓವರ್ಗಳಲ್ಲಿ ಕೇವಲ 18 ರನ್ ನೀಡಿ 2 ವಿಕೆಟ್ ಕಬಳಿಸಿದ ಜಸ್ಪ್ರೀತ್ ಬುಮ್ರಾ ಇಡೀ ಪಂದ್ಯದ ಚಿತ್ರಣ ಬದಲಿಸಿ ಗೆಲುವಿನ ರೂವಾರಿ ಎನಿಸಿಕೊಂಡರು.