ಟಿ20 ವಿಶ್ವಕಪ್ ಗೆದ್ದ ಬೆನ್ನಲ್ಲೇ ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ (Rohit Sharma) ಹಾಗೂ ವಿರಾಟ್ ಕೊಹ್ಲಿ (Virat Kohli) ಟಿ20 ಅಂತಾರಾಷ್ಟ್ಟ್ರೀಯ ಕ್ರಿಕೆಟ್ಗೆ ವಿದಾಯ ಹೇಳಿದ್ದಾರೆ. ಇದರೊಂದಿಗೆ ಭಾರತದ ಇಬ್ಬರು ದಿಗ್ಗಜರ ಟಿ20ಐ ಕೆರಿಯರ್ ಅಂತ್ಯವಾದಂತಾಗಿದೆ.
ಟಿ20 ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಆಕರ್ಷಕ ಅರ್ಧಶತಕ ಬಾರಿಸಿದ ವಿರಾಟ್ ಕೊಹ್ಲಿ ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದಿದ್ದರು. ಈ ಪ್ರಶಸ್ತಿ ಸ್ವೀಕರಿಸಿದ ಬಳಿಕ ಮಾತನಾಡಿದ ಕಿಂಗ್ ಕೊಹ್ಲಿ ಇದುವೇ ನನ್ನ ಕೊನೆಯ ಟಿ20 ವಿಶ್ವಕಪ್ ಟೂರ್ನಿ. ಈ ಗೆಲುವಿನೊಂದಿಗೆ ಟಿ20 ಅಂತಾರಾಷ್ಟ್ರೀಯ ಕೆರಿಯರ್ ಅಂತ್ಯಗೊಳಿಸಲು ಬಯಸಿದ್ದೇನೆ ಎಂದು ತಿಳಿಸಿದರು.
ಇನ್ನು ವಿಶ್ವಕಪ್ ಬಳಿಕ ಸುದ್ದಿಗೋಷ್ಠಿಯಲ್ಲಿ ಕಾಣಿಸಿಕೊಂಡ ರೋಹಿತ್ ಶರ್ಮಾ, ನಾನು ಟಿ20 ಪಂದ್ಯದೊಂದಿಗೆ ಭಾರತದ ಪರ ವೃತ್ತಿಜೀವನ ಆರಂಭಿಸಿದ್ದೆ. ಇದೀಗ ಟಿ20 ಅಂತಾರಾಷ್ಟ್ರೀಯ ಕೆರಿಯರ್ಗೆ ವಿದಾಯ ಹೇಳಲು ಇದಕ್ಕಿಂತ ಉತ್ತಮ ಸಮಯವಿಲ್ಲ. ಹೀಗಾಗಿ ಈ ಸ್ವರೂಪದ ಕ್ರಿಕೆಟ್ಗೆ ವಿದಾಯ ಹೇಳುತ್ತಿರುವುದಾಗಿ ರೋಹಿತ್ ಶರ್ಮಾ ತಿಳಿಸಿದ್ದಾರೆ.
ಟೀಮ್ ಇಂಡಿಯಾ ಪರ 125 ಟಿ20 ಪಂದ್ಯಗಳಲ್ಲಿ ಕಣಕ್ಕಿಳಿದಿರುವ ವಿರಾಟ್ ಕೊಹ್ಲಿ ಒಟ್ಟು 117 ಇನಿಂಗ್ಸ್ ಆಡಿದ್ದಾರೆ. ಈ ವೇಳೆ 3056 ಎಸೆತಗಳನ್ನು ಎದುರಿಸಿ 4188 ರನ್ ಕಲೆಹಾಕಿದ್ದಾರೆ. ಇದರ ನಡುವೆ 38 ಅರ್ಧಶತಕ ಹಾಗೂ 1 ಭರ್ಜರಿ ಶತಕ ಸಿಡಿಸಿದ್ದಾರೆ.
ರೋಹಿತ್ ಶರ್ಮಾ ಟೀಮ್ ಇಂಡಿಯಾ ಪರ ಒಟ್ಟು 159 ಟಿ20 ಪಂದ್ಯಗಳನ್ನಾಡಿದ್ದು, ಈ ವೇಳೆ 151 ಇನಿಂಗ್ಸ್ಗಳಲ್ಲಿ ಬ್ಯಾಟ್ ಬೀಸಿದ್ದಾರೆ. ಇದರ ನಡುವೆ 3003 ಎಸೆತಗಳನ್ನು ಎದುರಿಸಿದ್ದ ಹಿಟ್ಮ್ಯಾನ್ 4231 ರನ್ ಕಲೆಹಾಕಿದ್ದಾರೆ. ಹಾಗೆಯೇ 5 ಭರ್ಜರಿ ಶತಕ ಹಾಗೂ 32 ಅರ್ಧಶತಕಗಳನ್ನು ಸಿಡಿಸಿದ್ದಾರೆ.
ಇದೀಗ ವಿಶ್ವಕಪ್ ಗೆಲುವಿನೊಂದಿಗೆ ಇಬ್ಬರು ದಿಗ್ಗಜರು ಜೊತೆಯಾಗಿ ಟಿ20 ಅಂತಾರಾಷ್ಟ್ರೀಯ ಕೆರಿಯರ್ ಅಂತ್ಯಗೊಳಿಸಿದ್ದಾರೆ. ಹೀಗಾಗಿ ಮುಂಬರುವ ದಿನಗಳಲ್ಲಿ ಭಾರತ ಟಿ20 ತಂಡದಲ್ಲಿ ರೋಹಿತ್ ಶರ್ಮಾ (Rohit Sharma) ಹಾಗೂ ವಿರಾಟ್ ಕೊಹ್ಲಿ (Virat Kohli) ಕಾಣಿಸಿಕೊಳ್ಳುವುದಿಲ್ಲ.
Published On - 6:51 am, Sun, 30 June 24